ಚಿತ್ರ ಕಲಾವಿದ ಹಾಗೂ ಸಿನಿಮಾ ನಿರ್ದೇಶಕ ಪ್ರಕಾಶ್ ಬಾಬು ಅವರ ‘ಅತ್ತಿಹಣ್ಣು ಮತ್ತು ಕಣಜ’ ತನ್ನ ನಿರೂಪಣಾ ಶೈಲಿಯಿಂದ ಇತ್ತೀಚೆಗೆ ಚರ್ಚೆಗೀಡಾದ ಚಿತ್ರ. ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ನೆಟ್ ಪ್ಯಾಕ್ ಪ್ರಶಸ್ತಿ ಪಡೆದಿರುವ ಚಿತ್ರದ ಕುರಿತು ಮೈಸೂರಿನ ಸಿನಿಮಾ ವಿಶ್ಲೇಷಕ ವಿ ಎನ್ ಲಕ್ಷ್ಮೀನಾರಾಯಣ ಬರೆದಿರುವುದನ್ನು ಇಲ್ಲಿ ಪ್ರಕಟಿಸಲಾಗಿದೆ. ಅತ್ತಿ ಹಣ್ಣು ಮತ್ತು ಕಣಜ ಮೇಲುನೋಟಕ್ಕೆ ಒಂದು ವಿಲಕ್ಷಣ ಚಿತ್ರವಾಗಿ ಆಸಕ್ತಿ ಹುಟ್ಟಿಸುತ್ತದೆ. ಅಸಂಗತ ಧಾಟಿಯ ನಾಟಕದಂತೆ,  ಕಾವ್ಯದಂತೆ ಆಸ್ವಾದಿಸುತ್ತಾ ಹೋದಹಾಗೆ ಅದು ಪ್ರಜ್ಞಾಪೂರ್ವಕವಾಗಿ ಜೈವಿಕ, ಬೌದ್ಧಿಕ, ತಾತ್ವಿಕ ಮತ್ತು ಆನುಭಾವಿಕ ಚಿಂತನೆಯನ್ನು  ಸಿನಿಮಾ ಭಾಷೆಯಲ್ಲಿ ಅನುಭವವಾಗಿಸಲು ಹವಣಿಸುವ ಗಂಭೀರ ಚಿತ್ರ ಎಂಬುದು ಗೋಚರಿಸತೊಡಗುತ್ತದೆ. 

ವಾಸ್ತವದ ಶುದ್ಧ ಬಣ್ಣ-ಬೆಳಕುಗಳಲ್ಲಿ, ದೃಶ್ಯ ಮತ್ತು ಶಬ್ದ-ಮೌನಗಳ ಹೆಣಿಗೆಯಲ್ಲಿ, ಸಂಗೀತ-ಲಯಗಳ ವಿನ್ಯಾಸಗಳಲ್ಲಿ ಮನುಷ್ಯ ಸಂಬಂಧಗಳನ್ನು ಅವರದೇ ಆದ ಪರಿಸರದಲ್ಲಿ ನಿರುಕಿಸುವ ವಿಶಿಷ್ಟ ಚಿತ್ರ. ಕನ್ನಡದಲ್ಲಿ ಈ ವರೆಗೆ ತೆರೆಕಂಡಿರುವ ಎಲ್ಲ ಚಿತ್ರಗಳ ಮಧ್ಯೆ ವಿಭಿನ್ನವಾಗಿರುವ ಕಥನಶೈಲಿಯನ್ನು ಹೊಂದಿರುವ ಚಿರ್ತವಾದ್ದರಿಂದ ‘ವಿಲಕ್ಷಣ’ ಎನಿಸುವುದು ಸಹಜ. Still 00007

ಅತ್ತಿ ಹಣ್ಣು ಮತ್ತು ಕಣಜ ‘ವಿಲಕ್ಷಣ ಚಿತ್ರ’ ಎನಿಸಲು ಮತ್ತೊಂದು ಕಾರಣವೂ ಇದೆ. ಕನ್ನಡದ ಗಮನಾರ್ಹ ಚಿತ್ರಗಳು ಬಹುತೇಕವಾಗಿ ಸಾಂಪ್ರದಾಯಿಕ ನೇರ ಕಥನಶೈಲಿಯಾದ ಪ್ರಾರಂಭ-ಮಧ್ಯೆ-ಮುಕ್ತಾಯ ಸರಣಿಯ ಅನುಕ್ರಮಣಿಕೆಯನ್ನು  ಅನುಸರಿಸುತ್ತವೆ. ಅಲ್ಲೊಂದು ಇಲ್ಲೊಂದು ಈ ಅನುಕ್ರಮಣಿಕೆಯನ್ನು  ಮುರಿದು ನೇರವಲ್ಲದ ಕಥನಕ್ರಮವನ್ನು ಅನುಸರಿಸಿದ ನಿದರ್ಶನವೂ ಇದೆ.

ಎಲ್ಲಿಂದಲೋ ಪ್ರಾರಂಭಿಸಿ ವೃತ್ತಾಕಾರದ ಕಥನಕ್ರಮದಲ್ಲಿ ಹೊರಟಲ್ಲಿಗೇ ಬಂದು ಮುಟ್ಟುವ ಹಾಲಿವುಡ್ ನ ಜನಪ್ರಿಯ ಕಥನ ಶೈಲಿಯೂ ಕನ್ನಡದ ಚಿತ್ರಗಳಲ್ಲಿ  ಹೇರಳವಾಗಿ ಸಿಗುತ್ತದೆ. ಸಿನಿಮೀಯ ರೂಪಕಗಳಲ್ಲಿ ಅಥವಾ ಪ್ರತಿಮೆಗಳಲ್ಲಿ  ಹಿನ್ನೆಲೆಯನ್ನು ಮುನ್ನೆಲೆಗೆ ಪೂರಕವಾಗುವಂತೆ ಸಂಯೋಜಿಸುವ  ಚಿತ್ರಗಳು ಕನ್ನಡದಲ್ಲಿ ಅತ್ಯಂತ ವಿರಳ. ಅಂಥ ಚಿತ್ರಗಳೂ ಸಹ ಚಿತ್ರದ ಮುನ್ನೆಲೆ- ಹಿನ್ನೆಲೆಗಳನ್ನು ಎಲ್ಲಿಯೂ ಕಲಸದೆ, ಪ್ರಜ್ಞಾಪೂರ್ವಕವಾಗಿ ಬೇರೆ ಬೇರೆಯಾಗಿರಿಸಿ ಕೊಂಡು ಅವುಗಳ ಒಟ್ಟು ಸಂಯೋಜನೆಯಲ್ಲಿ ಚಿತ್ರದ ವಸ್ತುವನ್ನು ಅನುಭವವಾಗಿಸಲು ಯತ್ನಿಸುತ್ತವೆ. ವಸ್ತು ಪ್ರಧಾನ, ಪಾತ್ರಪ್ರಧಾನ, ಸಮಸ್ಯಾಪ್ರಧಾನ  ಮತ್ತು ಮನರಂಜನಾ ಪ್ರಧಾನ ಚಿತ್ರಗಳಂತೂ ಈ ಕುರಿತು ಯಾವ ಸೂಕ್ಷ್ಮತೆಯನ್ನೂ ಹೊಂದಿರುವಂತೆ   ತೋರುವುದಿಲ್ಲ. ಇನ್ನು ಸಾಹಿತ್ಯಕೃತಿಗಳನ್ನು  ಆಧರಿಸಿ ತಯಾರಾಗುವ ಗಂಭೀರ ಚಿತ್ರಗಳೂ ಸಹ ಸಾಹಿತ್ಯಕೃತಿಗಳಿಂದ ಚಿತ್ರದೊಳಕ್ಕೆ ಸಹಜವಾಗಿ ಹರಿದು ಬರುವ ರೂಪಕ-ಪ್ರತಿಮೆಗಳನ್ನು ಸಿನಿಮಾದ ರೂಪಕ-ಪ್ರತಿಮೆಗಳೆಂಬಂತೆ ಬಿಂಬಿಸುವಾಗಲೂ ಮುನ್ನೆಲೆ-ಹಿನ್ನೆಲೆಗಳ ಭಿನ್ನತೆಯನ್ನು ಕಾಯ್ದುಕೊಂಡೇ ದೃಶ್ಯ ಸಾಂಗತ್ಯವನ್ನು  ಸಾಧಿಸುತ್ತವೆ.  ಅತ್ತಿ ಹಣ್ಣು ಮತ್ತು ಕಣಜ ದ ವಿಶೇಷವೆಂದರೆ ಅದರಲ್ಲಿ ಮುನ್ನೆಲೆ-ಹಿನ್ನೆಲೆಗಳು ರೂಪಕ ಮತ್ತು ಪ್ರತಿಮೆಗಳ ಮಟ್ಟದಲ್ಲಿ ಪರಸ್ಪರ ಪೂರಕವಾಗಿರುವುದಷ್ಟೇ ಅಲ್ಲ ತಮ್ಮ ಸ್ಥಾನಗಳನ್ನು ಅದಲು ಬದಲು ಮಾಡಿಕೊಂಡು ದೃಶ್ಯ ಸಾಂಗತ್ಯವನ್ನು ಸಾಧಿಸುತ್ತವೆ. ಒಂದರೊಳಗೊಂದು ಲೀನವಾಗಿ ನಿಜವಾದ ಅರ್ಥದಲ್ಲಿ ಸಮಗ್ರ ಅನುಭವದ ಚಿತ್ರವಾಗುತ್ತದೆ. ಇಂಥ ಐಕ್ಯತೆ ಚಿತ್ರದ ಶೀರ್ಷಿಕೆಯಲ್ಲೇ ಗರ್ಭಸ್ಥವಾಗಿದೆ ಎಂಬುದು ಬಹು ಮಖ್ಯವಾಗಿ ಗಮನಿಸಬೇಕಾದ ಸಂಗತಿ.

Prakash Babu
Prakash Babu

ಪಾತ್ರ ಪ್ರಧಾನ, ವಸ್ತು ಪ್ರಧಾನ, ಸಮಸ್ಯಾ ಪ್ರಧಾನ ಅಥವಾ ಮನರಂಜನಾ ಪ್ರಧಾನ ಚಿತ್ರಗಳಲ್ಲಿ ಘಟನಾವಳಿಗಳು ವಿವಿಧ ವಿನ್ಯಾಸಗಳ ನಾಟಕೀಯತೆಯಲ್ಲಿ ಕತೆಯೊಂದನ್ನು ಸೃಷ್ಟಿಸುತ್ತವೆ. ಚಿಂತನಾ ಪ್ರಧಾನ ಚಿತ್ರಗಳು ವೈಚಾರಿಕ ತುಮುಲದ ನಾಟಕೀಯತೆಯ ಮೂಲಕ ಕತೆಯನ್ನು ಸೃಷ್ಟಿಸುತ್ತವೆ. ಸೌಂದರ್ಯಾತ್ಮಕತೆಗೆ ಒತ್ತುಕೊಡುವ ಕಲಾತ್ಮಕತೆಯ ಚಿತ್ರಗಳು ಅವಕ್ಕೆ  ಪೂರಕವಾಗುವಂಥ ನಾಟಕೀಯತೆಯನ್ನು ಹೆಣೆದು ಕತೆ ಹೇಳುತ್ತವೆ. ಹೇಗೇ ಆದರೂ ಸಿನಿಮಾ ಎಂಬುದೇ ಯಾಚಿತ್ರಗ್ರಹಣ ಮತ್ತು ಸಂಕಲನಕಲೆಯಲ್ಲಿ ಮೈದಾಳುವ  ಸಮಗ್ರ ಭಾಷೆಯ ಕೃತಿಯಾದ್ದರಿಂದ ಅದರ ಯಾವುದೇ   ಒಂದು ಅಂಗಕ್ಕೆ ಒತ್ತು ಬಿದ್ದರೂ ‘ವಿಲಕ್ಷಣತೆ’ ಕಾಣಿಸಿಕೊಂಡು ‘ಕತೆ ಇಲ್ಲದ ಕತೆ’ ಸೃಷ್ಟಿಯಾಗುತ್ತದೆ.  ಎಲ್ಲ ನಿರೂಪಣೆಯೂ ಕಥನಕ್ರಮವೇ ಆದ್ದರಿಂದ ಕತೆ ಇಲ್ಲದ ಚಿತ್ರ ಎಂಬುದು ಇಲ್ಲ. ಛಾಯಾಚಿತ್ರಗ್ರಹಣಕ್ಕೆ ಹೆಚ್ಚು ಒತ್ತು ಬಿದ್ದಿರುವ ಅತ್ತಿ ಹಣ್ಣು ಮತ್ತು ಕಣಜ ಇಂಥ ‘ಕತೆ ಇಲ್ಲದ ಕತೆ’ಯ  ಚಿತ್ರವಾದ್ದರಿಂದ ಅದರ ವಿಲಕ್ಷಣತೆ ಢಾಳಾಗಿ ಕಾಣಿಸುತ್ತದೆ. ನಸುಕಿನ ಮಬ್ಬು ಬೆಳಕಿನಲ್ಲಿ ಇಬ್ಬರು ವ್ಯಕ್ತಿಗಳೊಂದಿಗೆ ಚಲಿಸುವ ಕಾರು ಪ್ರೇಕ್ಷಕರನ್ನು  ಚಿತ್ರದ ನಾಟಕದೊಳಕ್ಕೆ ಕರೆದೊಯ್ಯುತ್ತದೆ. ಪ್ರಾರಂಭದಲ್ಲಿ ಚಲಿಸುವ ಕಾರು ಮುನ್ನೆಲೆಯಾಗಿದ್ದು, ಕರಗುತ್ತಿರುವ ಕತ್ತಲೆ, ಮುಂಜಾವಿನ ಪರಿಸರ, ಆವರಣದ  ಸೂಕ್ಷ್ಮ ಶಬ್ದಗಳು  ಹಿನ್ನೆಲೆಯಾಗುತ್ತವೆ. ಕಾಲಕಳೆದಂತೆ ಹಿನ್ನೆಲೆ ಮುನ್ನೆಲೆಗಳು ಅದಲು ಬದಲಾಗುತ್ತವೆ ಎಂಬುದನ್ನು ಗಮನಿಸಲಾಗದ ಪ್ರೇಕ್ಷಕರಿಗೆ ಸಹನೆಯ ಪರೀಕ್ಷೆ  ಮೊದಲಾಗುತ್ತದೆ. ಇದಕ್ಕೆ ಸಂವೇದನೆಯ ಕೊರತೆ ಕಾರಣವಲ್ಲ, ಸಾಂಪ್ರದಾಯಿಕ ದೃಷ್ಟಿಯ ವೀಕ್ಷಣೆಯರೂಢಿಬಲ ಕಾರಣ.

ಚಿತ್ರದ ಟ್ರೇಲರ್ 

ಕರ್ನಾಟಕ ಸಂಗೀತ ಪದ್ಧತಿಯಲ್ಲಿ ಸಾಹಿತ್ಯ-ಕೃತಿ ಮೂಲದ ಸಂಗೀತವನ್ನು ಕೇಳಿ ರೂಢಿಯಾದ ಶ್ರೋತೃ ಹಿಂದೂಸ್ತಾನೀ ಸಂಗೀತ ಪದ್ಧತಿಯ ರಾಗಸಂಗೀತವನ್ನು ಆಲಿಸುವಾಗ ಬಹುಬೇಗ ‘ ‘ಆಯಿತು ಮುಂದೇನು?’ಎಂಬಂಥ ಆತುರ-ಅಸಹನೆಯನ್ನು ತೋರಿಸಿದಂತೆ ಸಿನಿಮಾದ ಸಾಂಪ್ರದಾಯಿಕ ಗ್ರಹಿಕೆಯ ವೀಕ್ಷಕ ಅತ್ತಿಹಣ್ಣು ಮತ್ತು ಕಣಜ ವನ್ನು ನೋಡುವಾಗ,’ಆಯಿತು, ಮುಂದೆ?’ ಎಂದು ಬಹುಬೇಗ ಕೇಳುವಂತಾಗುತ್ತದೆ.

ಸಂಗೀತದ ರೂಪಕವನ್ನೇ ಬಳಸಿ ಹೇಳಿದರೆ, ಈ ಚಿತ್ರ ದ್ರುಪದ್ ಶೈಲಿಯ ಸ್ವರಶುದ್ಧ ಹಾಡುಗಾರಿಕೆಯ ನಿಧಾನ ಗತಿಗೆ ಹತ್ತಿರವಾಗಿದೆ. ಕಾವ್ಯದಂತೆ, ಚಿತ್ರ ಸಹೃದಯರ ಪೂರ್ವಸಿದ್ಧತೆ ಮತ್ತು ವಿನಯವನ್ನು ಬೇಡುವ ಈ ಚಿತ್ರದ ಸಾವಧಾನ ಗತಿ ನಿರ್ದೇಶಕ ಪ್ರಕಾಶ್ ಬಾಬು, ಗಂಭೀರ ಆಸಕ್ತಿಯ ಚಿತ್ರ ರಸಿಕರ ಸಹೃದಯತೆಯ ಮೇಲಿಟ್ಟ ನಂಬಿಕೆ-ವಿಶ್ವಾಸಗಳಿಂದ ಸಾಧ್ಯವಾಗಿದೆ . ಇದು ಕನ್ನಡದ ಪ್ರೇಕ್ಷಕರಿಗೆ ಮಾತ್ರ ತೋರಿಸಿರುವ ರಿಯಾಯತಿಯೂ ಅಲ್ಲ, ವಿಶೇಷವೂ ಅಲ್ಲ. ಇಂಥ ವಿಶ್ವಾಸ ಎಲ್ಲಾ ಗಂಭೀರ ಚಿತ್ರ  ನಿರ್ದೇಶಕರಿಗೂ ಚಿತ್ರಸಹೃದಯರ ಮೇಲೂ ಇರುವುದು ಸಾಮಾನ್ಯ.

ಚಲಿಸುವ ಕಾರಿನೊಳಗಿನಿಂದ ದೃಶ್ಯೀಕರಿಸುವ ವಿಧಾನದಲ್ಲಿ ಮಾತ್ರವಲ್ಲ, ಮಂದ ಗತಿಯ ಕಥನ ಶೈಲಿಯಲ್ಲಿಯೂ ಪ್ರಕಾಶ್ ಬಾಬು ಅಬ್ಬಾಸ್ ಕಿರೋಸ್ತಮಿಯನ್ನು ನೆನಪಿಗೆ ತಂದುಕೊಳ್ಳುವಂತೆ ಮಾಡುತ್ತಾರೆ. ಆದರೆ ಕಿರೋಸ್ತಮಿಯ ಅನುಭವಜನ್ಯ ಪ್ರೌಢಿಮೆಯನ್ನು ಪ್ರಕಾಶ್ ಬಾಬು ಅವರಲ್ಲಿ ನಾನು ಇಲ್ಲಿ ನಿರೀಕ್ಷಿಸುತ್ತಿಲ್ಲ. ಅದು ನನ್ನ ಹೋಲಿಕೆಯ ಉದ್ದೇಶವೂಅಲ್ಲ. ಚಿತ್ರಕಲಾವಿದರೊಬ್ಬರು ಬಿಂಕಲಾವಿದರಾಗಿ ಚಿತ್ರಿಸುವಾಗ ನೆರಳು-ಬೆಳಕು- ಬಣ್ಣ ಮತ್ತು ಕೋನ ವಿನ್ಯಾಸಗಳಲ್ಲಿ ಸಂಯೋಜಿತವಾಗಿರುವ ಚಿತ್ರಿಕೆಗಳು ಯಾವುದೇ ವಿಕಾರಗಳಿಲ್ಲದೆ ಅನ್ಯಾದೃಶವೆನಿಸುವಂತೆ ಕಾಣಲು ಛಾಯಾಚಿತ್ರಗ್ರಾಹಕರ ಪರಿಣತಿ ಮತ್ತು  ಕೌಶಲದೊಂದಿಗೆ ನಿರ್ದೇಶಕರು ಚಲನಚಿತ್ರದ ದೃಶ್ಯಸಾಧ್ಯತೆಗಳಿಗೆ ಕೊಡುವ ವಿಶೇಷ ಒತ್ತು ಕಾರಣ ಎಂಬುದು ಚಿತ್ರದುದ್ದಕ್ಕೂ ಕಾಣಸಿಗುತ್ತದೆ. ಆದರೆ ಅದೇ ಮಾತನ್ನು  ಒಳಾಂಗಣ ಬೆಳಕಿನ ಸಂಯೋಜನೆ ಕುರಿತಂತೆ ಹೇಳುವ ಹಾಗಿಲ್ಲ. ಹಾಗೆ ನೋಡಿದರೆ, ಚಿತ್ರದ ಅತ್ಯಂತ ದುರ್ಬಲ ಅಂಶ ನಾಟಕೀಕರಣದ ಭಾಗ. ಪ್ರಧಾನ ಪಾತ್ರಧಾರಿಗಳ,  ನಟನಾ ನಡವಳಿಕೆ ಸಾಕಷ್ಟು ಸಂಯಮ ಮತ್ತು ಶಿಸ್ತಿಗೆ ಒಳಪಟ್ಟಿದ್ದರೂ ಗುಣಾತ್ಮಕವಾಗಿ ಅದು ದೃಶ್ಯಸಂಯೋಜನೆಯ ಪ್ರೌಢಿಮೆಗೆ ಸರಿಸಾಟಿಯಾಗಿಲ್ಲ. ವೀಡಿಯೋ ಪರಿಕರ, ಸಿಗರೇಟು, ಟೀಗಳನ್ನು ಬಳಸುವ ಪಾತ್ರಗಳ ಸಹನೆ, ನಿರೀಕ್ಷೆ, ಮತ್ತು ಮೌನದ ಹೊಯ್ದಾಟಗಳ ಮೂಲಕ ಬೋಧೆಯಾಗುವ ಅವರ ಗ್ರಾಮಯಾನದ ಉದ್ದೇಶವನ್ನು ಮಾತಿನ ಮೂಲಕವೂ ಪ್ರಕಟಗೊಳಿಸಲಾಗಿದೆ.  ‘ಎಲ್ಲದಕ್ಕೂ ಅದರದೇ ಆದ ಲಯವಿದೆ, ಅದನ್ನು ಜಾನಪದ ವಾದ್ಯಗಾರನ ಸಂಗೀತದಲ್ಲಿ  ಗುರುತಿಸಿ ಚಿತ್ರೀಕರಿಸುವುದು ಪ್ರಧಾನ ಪಾತ್ರದ  ಉದ್ದೇಶ’ ಎಂಬರ್ಥದ ಮಾತುಗಳು ದೃಶ್ಯಕ್ಕೆ ಪೂರಕವಾಗಿ ಬರದೆ ಹೊರಗಿನಿಂದ ಮಾಡಿದ ಹೇಳಿಕೆಯಾಗಿ ಬರುತ್ತದೆ. ಇದು ಚಿತ್ರದ ಮತ್ತೊಂದು ಕೊರತೆ. VN Lakshminarayana ಆವರಣದ ಶಬ್ದ ವಿನ್ಯಾಸದಲ್ಲಿ  ಸೇರಿರುವ ಹಕ್ಕಿ, ಕೀಟಗಳು, ಜನ, ವಾದ್ಯ, ಹೊಲಿಗೆಯಂತ್ರ, ಗ್ಯಾಸ್ ಲೈಟ್ ಶಬ್ದಗಳು  ಲಯವಿನ್ಯಾಸವನ್ನು ನಿರ್ಮಿಸುತ್ತವೆ. ನೀರು, ಟೀ, ಸಿಗರೇಟು, ಮದ್ಯಸೇವನೆಯ ವ್ಯಕ್ತಿಗಳ ನಡವಳಿಕೆಯ  ವಿನ್ಯಾಸ ಆ ಪರಿಸರದಲ್ಲಿ ಬದುಕುವ  ಜನರ ಏಕತಾನತೆಯ ಬದುಕಿನ ಲಯ-ವಿನ್ಯಾಸವನ್ನು ರಚಿಸುತ್ತವೆ. ಏಕಾಂಗಿಯಾಗಿ ಎಂಬಂತೆ ’ಅಮಟೆ’  (ಆ್ಯಮ್ ಐ ರೈಟ್?) ಆಟವಾಡುವ, ಬೆಳೆದ ಹುಡುಗಿ , ಸರಿಹೊತ್ತಿನಲ್ಲಿ ಹೊಲಿಗೆ ಯಂತ್ರ ಬಳಸಿ ಹೊಲಿಗೆಯಲ್ಲಿ ನಿರತಳಾದ ಗೃಹಿಣಿಯ ಮುಖೇನ ಸೂಚಿತವಾಗುವ ಏಕತಾನತೆಯ ಬದುಕಿನ ಲಯ-ವಿನ್ಯಾಸ ಮತ್ತೊಂದು ಬಗೆಯದು.  ಹೀಗೆ ಎಲ್ಲದರಲ್ಲಿಯೂ ಕಾಣ ಸಿಗುವ ಧ್ವನಿ-ದೃಶ್ಯಗಳ ಲಯ-ವಿನ್ಯಾಸ ಚಿತ್ರದ ವಸ್ತುವನ್ನು ಮಾತಿನ ಹಂಗಿಲ್ಲದೆಯೂ  ಬೆಳಗಿಸುತ್ತವೆ. ಹೀಗಿದ್ದರೂ ಅದನ್ನು ಪಾತ್ರಗಳ  ಬಾಯಿಂದ ಬರುವಂತೆ ಚಿತ್ರಿಸಲಾಗಿದೆ. ಸಿನಿಮಾ ತನಗೆ ಅನನ್ಯವಾದ ರೂಪಕಗಳ ಮತ್ತು ಪ್ರತಿಮೆಗಳ ಬಳಕೆಯಲ್ಲಿ  ಕಾವ್ಯಕ್ಕೆ ಹತ್ತಿರವಾಗಿದೆ. ಅದರ ದೃಶ್ಯ, ನಾಟ್ಯ,  ಧ್ವನಿ, ಶಬ್ದ ಸಂಗೀತ ಮತ್ತು ಚಲನೆಯಲ್ಲಿ ರಂಗಕೃತಿಗೆ ಹತ್ತಿರವಾಗಿದೆ. ಪ್ರಜ್ಞಾಪೂರ್ವಕವಾಗಿ ಗ್ರಾಮಜೀವನವನ್ನು  ಆರಿಸಿಕೊಂಡು ನಲುಗಿದ ಬದುಕನ್ನು ಬದುಕುವ ‘ವಿಲಕ್ಷಣ’ ಕವಿಯೊಬ್ಬ ಪ್ರಧಾನ ಪಾತ್ರದೊಂದಿಗಿನ ಸಂವಾದದಲ್ಲಿ ಕವನವನ್ನು ವಾಚಿಸುವ ದೃಶ್ಯ ಚಿತ್ರದಲ್ಲಿದೆ. ಚಿತ್ರದ ಕೊನೆಯ  ಹೊತ್ತಿಗೆ ಆತ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ರಂಗಕೃತಿಯ ನಾಟಕೀಯತೆ ಮತ್ತು ಕಾವ್ಯದ ಆಪ್ತತೆ ಎರಡನ್ನೂ ಅತ್ತಿಹಣ್ಣು ಮತ್ತು ಕಣಜ ಬೆಸೆಯುತ್ತದೆ.

ಈ ಚಿತ್ರದಲ್ಲಿ, ಗ್ರಾಮಸ್ಥರು, ಟೀ ಅಂಗಡಿ, ಚಿತ್ರ ನಿರ್ಮಾಪಕಿ, ಆಕೆಯ ಸಹಾಯಕ, ಅವರಿಗೂ ಗ್ರಾಮಕ್ಕೂ ಕೊಂಡಿಯಾದ ಹಳ್ಳಿಯ ಶಿಕ್ಷಕ, ಹೊಲಿಗೆಯ ಕಾಯಕದ, ಹೆಂಡತಿ ಮಗಳೊಂದಿಗಿನ ಅವನ ಬಾಂಧವ್ಯ, ಚಿತ್ರೀಕರಣದಲ್ಲಿ ಪಾಲ್ಗೊಳ್ಳಬೇಕಿದ್ದು, ನಿಗದಿತ ಸಮಯಕ್ಕೆ ಸಿಗದೆ, ಹೊಟ್ಟಪಾಡಿಗಾಗಿ ಯಾವುದೋ ಹಳ್ಳಿಯಲ್ಲಿ ಸಂಗೀತ ಕಾಯಕ ನಡೆಸಿರುವ ಅಗೋಚರ ವಾದ್ಯಗಾರ, ಅವನ ಬರುವಿಕೆಗಾಗಿ ಕಾಯುತ್ತಿರುವ ಸಂಶೋಧಕಿ-ಚಿತ್ರನಿರ್ಮಾಪಕಿ ಮತ್ತು ಆಕೆಯ ಸಹಾಯಕ ಹೀಗೆ ಎಲ್ಲರೂ ಯಾವುದೋ ಅಸಂಗತ-ದುರಂತ ನಾಟಕದ ಪಾತ್ರಧಾರಿಗಳಾಗಳಂತೆ ಒಂದೇ ರೀತಿಯ ಸಂತೋಷರಹಿತ ಗಾಂಭೀರ್ಯ-ವಿಷಣ್ಣತೆಗಳ ಮನಸ್ಥಿತಿಯಲ್ಲಿ ಬದುಕುವ ಬದುಕು ಇಡೀ ಚಿತ್ರದ ಪರಿಸರವನ್ನು ಆವರಿಸಿದೆ. ಹಳ್ಳಿಯ ಕವಿಯ ಸಂವೇದನೆ ಮತ್ತು ಬದುಕಿನ ನಡುವಿನ ವೈದೃಶ್ಯ, ಶಿಕ್ಷಕನ ಮಗಳ ದೈಹಿಕ ವಯಸ್ಸು ಮತ್ತು ಅವಳಾಡುವ ಆಟದ ಭಾವನಾ ವಯಸ್ಸಿನ ನಡುವಿನ ವೈದೃಶ್ಯ, ನಿದ್ರಿಸುತ್ತಿರುವ ನಿರ್ಮಾಪಕಿಯೊಡನೆ ಕೂಡಬಯಸಿ ಬೆತ್ತಲೆಯಾಗುವ ಸಹಾಯಕನ ದೈಹಿಕ ಹಸಿವು ಮತ್ತು ಯಾವುದೇ ನೈತಿಕ ತೊಳಲಾಟವಿಲ್ಲದೆಯೂ ನಿರಾಕರಿಸುವ ನಿರ್ಮಾಪಕಿಯ ಬೌದ್ಧಿಕ ತಪ್ತತೆಯ ನಡುವಿನ ವೈದೃಶ್ಯಗಳಲ್ಲಿ ಈ ಅಸಂಗತತೆಯನ್ನು ಗುರುತಿಸಬಹುದು. ಮನುಷ್ಯರ ಆಪ್ತ ಸಂಬಂಧಗಳಲ್ಲಿನ ತುಮುಲ, ಸಂಘರ್ಷ, ಹಸಿವು ಅನ್ವೇಷಣೆಗಳನ್ನು ಅತ್ತಿಹಣ್ಣು ಮತ್ತು ಕಣಜ ಬೌದ್ಧಿಕ ಪ್ರೌಢಿಮೆಯೊಂದಿಗೆ ಚಿತ್ರಿಸುತ್ತದೆ. ಚಿತ್ರದ ಶೀರ್ಷಿಕೆ, ಅತ್ತಿಹಣ್ಣು ಮತ್ತು ಕಣಜ ಜೈವಿಕ ಮತ್ತು ತಾತ್ವಿಕ ಆಯಾಮವನ್ನು ರಚಿಸುವ ಮೂಲಕ ಚಿತ್ರಸಹೃದಯರ ಅನುಭವ ವ್ಯಾಪ್ತಿಯನ್ನು ಹಿಗ್ಗಿಸುತ್ತದೆ. ಕನ್ನಡಿಗರ ಬದುಕಿಗೆ ನಿರ್ದಿಷ್ಟವಾದ ಸಾಂಸ್ಕೃತಿಕ ಸಂದರ್ಭದಲ್ಲಿ ಅತ್ತಿಹಣ್ಣು ಮತ್ತು ಕಣಜ ಎಂಬ ಶೀರ್ಷಿಕೆ ಸೂಚಿಸುವ ಅರ್ಥವ್ಯಾಪ್ತಿ ಒಂದು ಬಗೆಯದಾದರೆ, ಅದನ್ನು ಫಿಗ್ ಅಂಡ್ ದಿ ವ್ಯಾಸ್ಪ್ ಎಂದು ಇಂಗ್ಲಿಷ್ ನಲ್ಲಿ ಬಳಸಿದಾಗ ಸೂಚಿತವಾಗುವ ಅರ್ಥವ್ಯಾಪ್ತಿ ಮತ್ತೊಂದು ಬಗೆಯದು. ಕನ್ನಡದಲ್ಲಿ ಈ ಶೀರ್ಷಿಕೆಯು ಚಿತ್ರದ ಆನುಭಾವಿಕ ನಿಲುವಿನ ಇಂಗಿತವನ್ನು, ಅಲ್ಲಮನ ‘ಎತ್ತಣ ಮಾಮರ, ಎತ್ತಣ ಕೋಗಿಲೆ’ಯ ವೈದೃಶ್ಯ-ಐಕ್ಯತೆಗಳನ್ನು ಧ್ವನಿಸುತ್ತದೆ. ಪ್ರಕೃತಿ ಸೃಜಿಸುವ ಅತ್ತಿ ಹಣ್ಣಿನ ಸುಂದರ ಕವಚದೊಳಗಿನ ಹುಳುಗಳ ಅಸ್ತಿತ್ವದ ಲೌಕಿಕತೆ, ಭ್ರಮರ-ಕೀಟ ನ್ಯಾಯದಂತೆ, ತಾನೇ ಕಟ್ಟುವ ಮಣ್ಣಿನ ಗೂಡಿನೊಳಗೆ ಆಹಾರಕ್ಕಾಗಿ ಹುಳವನ್ನು ಬಂಧಿಸಿಡುವ ಕಣಜ ಮತ್ತು ಹಾಗೆ ಬಂಧಿಸಿಟ್ಟ ಹುಳ ಮೃತ್ಯುವನ್ನು ತರುವ ಕಣಜದ ನಿರಂತರ ಧ್ಯಾನದಲ್ಲಿ ತಾನೇ ಕಣಜವಾಗುವ ಆಧ್ಯಾತ್ಮಿಕತೆ  ಮೊದಲನೆಯ ಬಗೆಯದು. ಎರಡನ್ನೂ ಬೇರ್ಪಡಿಸಲಾಗದ ತಾತ್ವಿಕತೆಯ ಅರ್ಥವ್ಯಾಪ್ತಿ ಬೀಗಹಾಕಿದ ಮನೆಯ ಮುಂದೆ ಕೂರುವ ನಿರ್ಮಾಪಕಿ ಮತ್ತು ಅವಳ ಸಹಾಯಕನ ಕಾಯುವಿಕೆ,  ಆಗ ಕೇಳಿ ಬರುವ ಸುಮಧುರ ವಾದ್ಯ ಸಂಗೀತದ ನಾದ ಇವೆರಡರ ಸಂಯೋಗದಲ್ಲಿ ವಿಸ್ತರಿಸುತ್ತದೆ.

ಇಂಗ್ಲಿಷ್ ನ ಫಿಗ್ ಅಂಡ್ ದಿ ವ್ಯಾಸ್ಪ್ ಅಂಜೂರದ ಹಣ್ಣು ಮತ್ತು ಕಣಜದ ಸಂಬಂಧ ಕುರಿತಂತೆ ಚಿತ್ರದ ಅರ್ಥವ್ಯಾಪ್ತಿಯನ್ನು ಮತ್ತೊಂದು ರೀತಿಯಲ್ಲಿ,ವಿಸ್ತರಿಸುತ್ತದೆ. ಹೊರಗಿನಿಂದ ನೋಡಿದರೆ ಹಣ್ಣಿನಂತೆ ಕಾಣುವ ಅಂಜೂರ ವಾಸ್ತವವಾಗಿ ಕವಚದೊಳಗೆ ಒಟ್ಟಾಗಿರುವ ಹೂಗಳು. ತಮ್ಮೊಳಗೆ ಬೀಜವನ್ನೂ ಹುದುಗಿಸಿ ಕೊಂಡ ಈ ಹೂಗಳೊಳಗೆ ಹೊರಗಿನಿಂದ ಸಣ್ಣ ರಂಧ್ರದ ಮೂಲಕ ಪ್ರವೇಶಿಸುವ ಹೆಣ್ಣು ಕಣಜ, ಹಾಗೆ ಪ್ರವೇಶಿಸುವಾಗ ತನ್ನ ರೆಕ್ಕೆಗಳನ್ನು ಕಳೆದುಕೊಂಡು ಹೂಗಳೊಳಗೆ ಮೊಟ್ಟೆಗಳನ್ನು ಇಡುತ್ತದೆ. ಅಲ್ಲೇ ಮೊಟ್ಟೆಯೊಡೆದು ಹೊರಬರುವ ಗಂಡು-ಹೆಣ್ಣು ಕಣಜಗಳು ಪರಸ್ಪರ ಕೂಡಿದಮೇಲೆ ಗಂಡು ಕಣಜಗಳು ಅಲ್ಲೇ ಸಾಯುತ್ತವೆ. ಗರ್ಭ ಧರಿಸಿದ ಹೆಣ್ಣು ಕಣಜಗಳು ಹೂಗಳ ಪರಾಗಗಳನ್ನು ಹೊತ್ತು ಹೊರಬಂದು ಮೊಟ್ಟೆಗಳನ್ನು ಇಡಲು ಬೇರೆ ಅಂಜೂರಗಳನ್ನು ಹುಡುಕಿಕೊಂಡು ಹೋಗುತ್ತವೆ. ಸತ್ತ ಗಂಡು ಕಣಜಗಳು ಅಂಜೂರದ ಹಣ್ಣಿನ ಭಾಗವಾಗಿ ಹಣ್ಣಿನಲ್ಲೇ ಉಳಿಯುತ್ತವೆ. ಅಂಜೂರ ಮತ್ತು ಕಣಜದ ಜೀವನ ಮತ್ತು ಸಂತಾನಾಭಿವೃದ್ಧಿಯ ಈ ಪರಸ್ಪರತೆ  ಶೀರ್ಷಿಕೆಯ ಮುಖೇನ ಚಿತ್ರದ ಅರ್ಥವ್ಯಾಪ್ತಿಯನ್ನು ಏಕಕಾಲಕ್ಕೆ ಜೈವಿಕವಾಗಿ, ಲೌಕಿಕವಾಗಿ, ತಾತ್ವಿಕವಾಗಿ ಮತ್ತು ಆನುಭಾವಿಕವಾಗಿ ವಿಸ್ತರಿಸುತ್ತದೆ. ಇದು ಚಿತ್ರ ಸಹೃದಯರ ಅನುಭವ ವ್ಯಾಪ್ತಿಯನ್ನು ಹಿಗ್ಗಿಸುತ್ತದೆ. ಹೀಗೆ ಹಿಗ್ಗಿದ ಅನುಭವದ ವ್ಯಾಪ್ತಿ ಏಕಕಾಲಕ್ಕೆ ಚಿತ್ರವೀಕ್ಷಣೆಯ ಪೂರ್ವ ಸಿದ್ಧತೆಯೂ, ಚಿತ್ರದ ಅನುಭವವೂ ಆಗುತ್ತದೆ.

ಅತ್ತಿಹಣ್ಣು ಮತ್ತು ಕಣಜ ಚಿತ್ರದಲ್ಲಿ ಕಾಯಕದ ಸಾಮಾಜಿಕತೆ ಮುನ್ನೆಲೆಯಲ್ಲಿಲ್ಲ. ಶಿಕ್ಷಕನ ಹೆಂಡತಿಯ ಹೊಲಿಗೆಯಂತ್ರದ ಚಾಲನೆ, ಟೀ ಅಂಗಡಿಯ ಮಾಲೀಕನ ವ್ಯಾಪಾರದಲ್ಲಿ, ವಾದ್ಯಗಾರನ ಊರೂರು ಅಲೆತದಲ್ಲಿ ಬದುಕಿನ ಮೂಲ ಸಂಕಷ್ಟವಾದ ಹಸಿವಿದೆ. ಅದಕ್ಕೆ ಸಂಬಂಧಿಸಿದ ಸಂಕಷ್ಟಗಳಿವೆ.ಹೊಟ್ಟೆ ತುಂಬಿಸಲು ಅನಿವಾರ್ಯವಾದ ಕಾಯಕವಿದೆ. ಕವಿ ಮತ್ತು ಚಿತ್ರನಿರ್ಮಾಪಕಿಯ ಅನ್ವೇಷಣೆಗಳಲ್ಲಿ ಹಸಿವಿನ ತುರ್ತು ಕಾಣದಿದ್ದರೂ ಕಾಯಕದ ಅನಿವಾರ್ಯತೆ ಇದೆ.ಸಿಗರೇಟು , ಟೀ ಮತ್ತು ಮದ್ಯಸೇವನೆಯಲ್ಲಿ ಬದುಕಿನ ಮೂಲ ಸಂಕಷ್ಟದಿಂದ ಬಿಡುಗಡೆ ಪಡೆಯುವ ಹುಸಿ ಯತ್ನಗಳಿವೆ. ಈ ಚಿತ್ರವೂ ಸೇರಿದಂತೆ ಕಾಯಕದ ಸಾಮಾಜಿಕತೆ ಕವಿ-ಅನ್ವೇಷಕರ ಮುನ್ನೆಲೆಯ ಕಾಳಜಿಯಲ್ಲ. ಆದರೆ ಬದುಕಿನ ಮೂಲ ಸಂಕಷ್ಟದಲ್ಲಿ ಮುಳುಗಿರುವವರು ಅದರಿಂದ ಬಿಡಿಸಿಕೊಂಡಲ್ಲದೆ ಅನ್ವೇಷಕರಿಗೆ  ಅವರು ಲಭ್ಯರಲ್ಲ. ಹೇಗೆ ಛಾಯಾಚಿತ್ರವಿಲ್ಲದೇ ಚಲನಚಿತ್ರವಿಲ್ಲವೋ, ಭೌತಿಕ ಕಂಪನಗಳಿಲ್ಲದೆ ಶಬ್ದ, ಸಂಗೀತ, ಲಯಗಳು ಸಾಧ್ಯವಿಲ್ಲವೋ, ರಕ್ತ-ಮಾಂಸಗಳಿಲ್ಲದೆ ಆಧ್ಯಾತ್ಮಿಕತೆಯಿಲ್ಲವೋ  ಹಾಗೆಯೇ ಕಾಯಕದ ಸಾಮಾಜಿಕತೆಯಿಲ್ಲದೆ ಜೀವನದ ಅರ್ಥ-ಉದ್ದೇಶ- ಅನುಭಾವಗಳ ಅನ್ವೇಷಣೆಯೂ ಸಾಧ್ಯವಿಲ್ಲ. ಇಂಥ ತಾತ್ವಿಕ ಗ್ರಹಿಕೆಯು ಚಿತ್ರದ  ಚೌಕಟ್ಟಿನಾಚೆಯೇ ಉಳಿದುಬಿಡುತ್ತದೆಯೋ ಎಂಬ ಅನುಮಾನ ಏಳುತ್ತದೆ.

ಹಾಗೆ ನೋಡಿದರೆ  ಹತ್ತಾರು ವೃತ್ತಿಪರರು ಒಟ್ಟಿಗೆ ಸೇರಿ, ಲಕ್ಷಾಂತರ ಬಂಡವಾಳವನ್ನು ಹಾಕಿ, ನೂರಾರು ಕಾರ್ಮಿಕರ ಸಹಾಯದಿಂದ ನಿರ್ಮಾಣವಾಗುವ ಸಿನಿಮಾ ಕಾಯಕದ ಸಾಮಾಜಿಕ ಸಂಬಂಧಗಳಲ್ಲಿ ಪ್ರತಿಭೆ-ಕೌಶಲ –ಶ್ರಮಗಳನ್ನು ಬೆಸೆದು ಸೃಷ್ಟಿಯಾಗುವ ಕಲೆಯ ಅತ್ಯುತ್ತಮ ನಿದರ್ಶನ. ಇಂಥ ಗ್ರಹಿಕೆಯನ್ನು ಹೊರತಾಗಿಸಿ ಮಂಡಿಸುವ ಜೀವನ ದೃಷ್ಟಿ ಎಷ್ಟೇ ಸೂಕ್ಷ್ಮವಾಗಿರಲಿ, ಪ್ರಬುದ್ದವಾಗಿರಲಿ ಸಾಧಾರಣೀಕರಿಸಿದ ವೈಯಕ್ತಿಕತೆಯಾಗಿ ಉಳಿಯುತ್ತದೆ. ಜೀವದ ಅಸ್ತಿತ್ವ ಮತ್ತು ಮುಂದುವರಿಕೆಗಾಗಿ ಒಂದರೊಳಗೊಂದು ಸೇರುವ ಅತ್ತಿಹಣ್ಣು (ಅಥವಾ ಅಂಜೂರ) ಮತ್ತು ಕಣಜದ ಪರಸ್ಪರತೆ ಮನುಷ್ಯರ ಸಾಮಾಜಿಕತೆಯಲ್ಲಿ ಕಾಯಕ ಮತ್ತು ತಾತ್ವಿಕತೆಯ ಪರಸ್ಪರತೆಯನ್ನು ಎತ್ತಿ ಹಿಡಿ ಯುತ್ತವೆ  ಈ ಚಿತ್ರದ ಹೆಗ್ಗಳಿಕೆ ಇಂಥ ಸಂವಾದವನ್ನು ಚಿತ್ರ ಸಹೃದಯರಲ್ಲಿ ಏರ್ಪಡಿಸುತ್ತದೆ ಎಂಬುದೇ ಆಗಿದೆ. ಒಟ್ಟಿನಲ್ಲಿ ಕನ್ನಡ ಸಿನಿಮಾದ ಚರಿತ್ರೆಯಲ್ಲೇ ಮೊತ್ತ ಮೊದಲ ಬಾರಿಗೆ ಸಿನಿಮಾದ ಸಮಗ್ರ ಭಾಷೆಯಲ್ಲಿ ಕಣ್ಣು-ಕಿವಿಗಳ ಸೂಕ್ಷ್ಮ ಸಂವೇದನೆಗೆ ಒತ್ತು ಕೊಟ್ಟು ನಿರ್ಮಿಸಿರುವ ಅಪೂರ್ವ ರೀತಿಯ ಮಹತ್ವಾಕಾಂಕ್ಷೆಯ ಚಿತ್ರ ಅತ್ತಿಹಣ್ಣು ಮತ್ತು ಕಣಜ ಎಂಬುದು ನನ್ನ ಸಂತೋಷ.

ಚಿತ್ರದ ಕುರಿತ ವಿವರ 

Director : M.S.Prakash Babu Story and Screenplay : M.S.Prakash Babu Produced by : NFDC and Bayalu Chitra Producers : Nina Lath Gupta and Bhavani Prakash Executive Producer: Vikramjit Roy Cinematography : H M Ramachandra Halkare Editor : M N Swamy Music : Shrikant Prabhu Sound Designer: Mahavir Sabannavar  

CAST : Bhavani Prakash Ranjit Bhaskaran Manjunath Belakere Achyut Kumar Ravi Phoenix Bhoomika Shruti

Original title : Attihannu mattu Kanaja English title : Fig Fruit and The Wasps Type of film : Feature Color : Colour Running time : 90 min Original Film Language : Kannada Sub-Title: English Country of production : India Date of Production : 2014 Format: DCP Attihannu mattu Kanaja (Fig Fruit and The Wasps) 2014 is his first full-length feature film, it had been selected for the Work in Progress Lab, NFDC Film Bazaar, 2013, International Film Festival of India, Goa. Film Festivals: 16th Mumbai Film Festival 2014, India GOLD Competition section. 7th Bengaluru International Film Festival 2014, Asian Competition section. Awarded NETPAC Jury special mention.