UR

ಏಳನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಬಹಳ ಮುಖ್ಯವಾಗಿ ನೆನಪಿಸಿಕೊಳ್ಳುತ್ತಿರುವುದು ಮತ್ತು ಆ ಮೂಲಕ ಈ ಶತಮಾನದಲ್ಲಿ ಅರಿವಿನ ಕ್ಷಿತಿಜವನ್ನು ಹೆಚ್ಚಿಸಿದ ಮಹನೀಯರನ್ನು ಸ್ಮರಿಸಿಕೊಳ್ಳುತ್ತಿರುವುದು ಅತ್ಯಂತ ವಿಶೇಷವಾದುದು.

ಅದರಲ್ಲೂ ಈ ವರ್ಷದಲ್ಲಿ ಸಾಹಿತ್ಯ-ಸಿನಿಮಾ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ ಇಬ್ಬರು ಮಹನೀಯರನ್ನು ಕಳೆದುಕೊಂಡಿದ್ದೇವೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ ಯು ಆರ್ ಅನಂತಮೂರ್ತಿ ಹಾಗೂ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಸಿನಿಛಾಯಾಗ್ರಾಹಕ ವಿ ಕೆ ಮೂರ್ತಿಯವರು ಆ ಮಹನೀಯರು. ಇವರಿಬ್ಬರ ಕೊಡುಗೆ ಅನುಪಮ. ಇವರನ್ನು ಈ ಉತ್ಸವದಲ್ಲಿ ಎದುರುಗೊಳ್ಳುತ್ತಿರುವುದು ಅವರ ಚಿತ್ರಗಳ ಮೂಲಕ ಆ ಕೊಡುಗೆಯ ಮಹತ್ವವನ್ನು ಅರಿಯುವ ಸಲುವಾಗಿ.

ಅನಂತಮೂರ್ತಿಯವರ ಕುರಿತಾದ ಐದು ಚಲನಚಿತ್ರಗಳು ಈ ಉತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿವೆ. ಅವುಗಳೆಂದರೆ, ಅವಸ್ಥೆ, ಘಟಶ್ರಾದ್ಧ, ಮೌನಿ, ಸಂಸ್ಕಾರ ಹಾಗೂ ಯುಆರ್ ಅನಂತಮೂರ್ತಿ : ನಾಟ್ ಎ ಡಾಕ್ಯುಮೆಂಟರಿ, ಬಟ್ ಎ ಹೈಪೋಥೀಸಿಸ್. ವಿವರಗಳಿಗೆ ಷೆಡ್ಯೂಲ್ ನ್ನು ಕ್ಲಿಕ್ ಮಾಡಿ.

ಡಾ. ಯು. ಆರ್ ಅನಂತಮೂರ್ತಿ ತಮ್ಮ ಸಾಹಿತ್ಯ ಕೃತಿಗಳ ಮೂಲಕ ಸಿನಿಮಾದ ಕ್ಷಿತಿಜವನ್ನು ವಿಸ್ತರಿಸಿದವರು. ಒಂದು ಸಾಮಾಜಿಕ ನೆಲೆಯನ್ನು ಶೋಧಿಸುತ್ತಲೇ ಅದರ ಆರೋಗ್ಯವನ್ನು ತಿಳಿಯುವುದು ಹಾಗೂ ವರ್ಧನೆಗೆ ಪ್ರಯತ್ನಿಸುವುದಕ್ಕೆ ಒಂದು ಬಗೆಯ ಚಿಕಿತ್ಸಕ ದೃಷ್ಟಿಕೋನ ತೀರಾ ಅವಶ್ಯ. ಹೀಗೆನ್ನುವುದಕ್ಕಿಂತಲೂ ಚಿಕಿತ್ಸಕ ದೃಷ್ಟಿಕೋನ ಪ್ರಾಥಮಿಕ ಅವಶ್ಯಕತೆ. ಅದು ಯು ಆರ್ ಅನಂತಮೂರ್ತಿಯವರಿಗಿತ್ತು ಎನ್ನುವುದರಲ್ಲಿ ಸಂದೇಹವಿಲ್ಲ.

ಅವರ ಹಲವು ಸಾಹಿತ್ಯ ಕೃತಿ(ಕಾದಂಬರಿ ಮತ್ತು ಕಥೆ)ಗಳು ಸಿನಿಮಾಗಳಾಗಿ ಹೊಸ ರೂಪ ಪಡೆದಿವೆ. ಆ ಏಳರಲ್ಲೂ ಅವರು ಮುಖಾಮುಖಿಯಾಗಿರುವುದು ಸಮಾಜವನ್ನು ಮತ್ತು ಅದರಲ್ಲಿನ ವಿವಿಧ ನೆಲೆಗಳನ್ನು. ತಮ್ಮ ಅನುಭವದೊಂದಿಗೇ ಒರೆ ಹಚ್ಚುತ್ತಲೇ ಸಾಹಿತ್ಯದ ಮೂಲಕ ನಿಜದ ನೆಲೆಯನ್ನು ಹುಡುಕುವ ಅಥವಾ ಅರಿಯುವ ಪ್ರಯತ್ನ ಸ್ಪಷ್ಟವಾಗಿ ಕಾಣಬಲ್ಲದು.

ಯು.ಆರ್ ಅನಂತಮೂರ್ತಿಯವರ ಸಾಹಿತ್ಯ ಕೃತಿ ಸಂಸ್ಕಾರ ಮೊದಲು ಸಿನಿಮಾಕ್ಕೆ ಅಳವಡಿಸಲಾಯಿತು. ಪಟ್ಟಾಭಿರಾಮರೆಡ್ಡಿಯವರು ಇದನ್ನು ನಿರ್ದೇಶಿಸಿದರು. ಒಂದುಬಗೆಯಲ್ಲಿ ಕನ್ನಡ ಸಿನಿಮಾದಲ್ಲಿ ಹೊಸ ಅಲೆಯ ಚಿತ್ರಗಳ ಚಳುವಳಿಯ ಮುಂಚೂಣಿಯಲ್ಲಿ ನಿಂತದ್ದು ಇದೇ ಸಿನಿಮಾ ಎನ್ನಬಹುದು. ರಾಷ್ಟ್ರೀಯ ಅತ್ಯುತ್ತಮ ಪ್ರಶಸ್ತಿ ಪಡೆದ ಈ ಚಿತ್ರದ ಬೆನ್ನಿಗೇ, ಗಿರೀಶ್ ಕಾಸರವಳ್ಳಿಯವರ ನಿರ್ದೇಶನದ ಚೊಚ್ಚಲ ಚಿತ್ರ ಘಟಶ್ರಾದ್ಧ ಸಹ ಅನಂತಮೂರ್ತಿಯವರ ಸಾಹಿತ್ಯವನ್ನು ಆಧರಿಸಿದ್ದೇ. ಅದೂ ಸಹ ರಾಷ್ಟ್ರೀಯ ಪ್ರಶಸ್ತಿ ಗೆದ್ದಿತು. ಭಾರತೀಯ ಶತಮಾನೋತ್ಸವದ ಆಚರಣೆಯ ಸಂದರ್ಭದಲ್ಲಿ ಪ್ಯಾರಿಸ್ ನ ನ್ಯಾಷನಲ್ ಆರ್ಚೀವ್ಸ್ ಅವರು ಈ ಸಿನಿಮಾವನ್ನು ಆಯ್ಕೆ ಮಾಡಿದ್ದರು. ಅಲ್ಲದೇ, ಒಂದು ಖುಷಿಯ ಸಂಗತಿಯೆಂದರೆ ಇತ್ತೀಚೆಗಷ್ಟೇ ಮುಗಿದ ೪೫ ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಭಾಗವಾಗಿ ಈ ಚಿತ್ರವನ್ನು ಪ್ರದರ್ಶಿಸಲಾಗಿತ್ತು. ಅನಂತಮೂರ್ತಿಯವರ ಪತ್ನಿ ಎಸ್ತರ್ ಮತ್ತು ಮಗಳು ಅನುರಾಧಾ ಆ ಸಂದರ್ಭಕ್ಕೆ ಸಾಕ್ಷಿಯಾಗಿದ್ದರು. ಇದೇ ಚಿತ್ರ ಹಿಂದಿಯಲ್ಲಿ ದೀಕ್ಷಾ ಆಗಿ ಬಿಡುಗಡೆಗೊಂಡಿತು.
ಎಂ ಎಸ್ ಸತ್ಯು ನಿರ್ದೇಶನದ ಬರ ಸದ್ದು ಮಾಡಿದ ಮತ್ತೊಂದು ಚಿತ್ರ. ಅನಂತಮೂರ್ತಿಯವರ ಕಾದಂಬರಿ ಆಧರಿಸಿ ರೂಪಿಸಿದ ಈ ಚಿತ್ರ ಬರ ಬಡಿದ ಹಳ್ಳಿಯನ್ನು ಪ್ರಧಾನವಾಗಿಟ್ಟುಕೊಂಡು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸನ್ನಿವೇಶಗಳನ್ನು ಹೇಳುವಂಥದ್ದು. ಈ ಚಿತ್ರ ರಾಷ್ಟ್ರೀಯ ಅತ್ಯುತ್ತಮ ಚಿತ್ರವಾಗಿ ಪ್ರಶಸ್ತಿಗೆ ಆಯ್ಕೆಯಾಯಿತಲ್ಲದೇ, ಸೂಕ ಎಂಬ ಹೆಸರಲ್ಲಿ ಹಿಂದಿಯಲ್ಲೂ ನಿರ್ಮಾಣಗೊಂಡಿತು.

ಕೃಷ್ಣ ಮಾಸಡಿಯವರು ನಿರ್ದೇಶಿಸಿದ ಅವಸ್ಥೆ ಸಮಾಜವಾದಿ ಶಾಂತವೇರಿ ಗೋಪಾಲಗೌಡರ ಕುರಿತಾದದ್ದು. ಅನಂತಮೂರ್ತಿಯವರ ಈ ಕಾದಂಬರಿ ಸಮಾಜವಾದದ ನೆಲೆಯನ್ನು ಕುರಿತಾದದ್ದು. ಬಳಿಕ ಬಿಎಸ್ ಲಿಂಗದೇವರು ಅವರು ನಿರ್ಮಿಸಿದ್ದು ಮೌನಿ. ಇದೂ ಸಹ ಸಾಕಷ್ಟು ಚರ್ಚೆಗೊಳಗಾಯಿತು.

ಇತ್ತೀಚೆಗಷ್ಟೇ 2013 ರಲ್ಲಿ ಪಂಚಾಕ್ಷರಿಯವರು ಅನಂತಮೂರ್ತಿಯವರ ಮತ್ತೊಂದು ಕಥೆ ಪ್ರಕೃತಿಯನ್ನಾಗಿ ನಿರ್ಮಿಸಿದ್ದಾರೆ. ಈ ಬಾರಿಯ ಬೆಂಗಳೂರು ಚಿತ್ರೋತ್ಸವದಲ್ಲಿ ಇದು ಕನ್ನಡ ಸಿನಿಮಾಗಳ ಸ್ಪರ್ಧೆಯಲ್ಲಿದೆ.

ಇದಲ್ಲದೇ ಇವರ ಕುರಿತಾಗಿ ಹಲವರು ಸಾಕ್ಷ್ಯಚಿತ್ರಗಳನ್ನು ರೂಪಿಸಿದ್ದಾರೆ. ಆದರೆ, ಇತ್ತೀಚೆಗಷ್ಟೇ ಫಿಲ್ಮ್ ಡಿವಿಷನ್ ಅವರು ನಿರ್ಮಿಸಿ, ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ ಯುಆರ್ ಅನಂತಮೂರ್ತಿ : ನಾಟ್ ಎ ಡಾಕ್ಯುಮೆಂಟರಿ, ಬಟ್ ಎ ಹೈಪೋಥೀಸಿಸ್ ಅನಂತಮೂರ್ತಿಯವರ ಬಗೆಗಿನ ಕಲ್ಪನೆಯನ್ನು ಕಡೆದಿಟ್ಟು ಕೊಡಬಹುದಾದದ್ದು.
ಹೀಗೇ ಅನಂತಮೂರ್ತಿಯವರು ಸಿನಿಮಾ ಕ್ಷೇತ್ರವನ್ನು ಬರೀ ಪ್ರಭಾವಿಸಿಲ್ಲ, ಸಿನಿಮಾಕರ್ತರನ್ನು ಕಾಡಿದ್ದಾರೆ !