ವಿಶ್ವನಾಥ್ ಅವರು ಚರ್ಚೆಯ ಮತ್ತೊಂದು ನೆಲೆಯನ್ನು ತೆರೆದಿದ್ದಾರೆ. ಇವರು ಪ್ರಸ್ತಾಪಿಸಿರುವ ಸಂಗತಿಯೂ ನಿಜವೇ. ರಾಜ್ಯ ಪ್ರಶಸ್ತಿ ಆಯ್ಕೆ ಸಮಿತಿಗೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಿತ್ರಗಳೇಕೆ ಅಸ್ಪೃಶ್ಯವಾಗಬೇಕು ? ಓದಿ ಅಭಿಪ್ರಾಯಿಸಿ.

ರಾಜ್ಯ ಪ್ರಶಸ್ತಿಯ ಕುರಿತಾದ ಚರ್ಚೆ ಚೆನ್ನಾಗಿ ಮೂಡಿ ಬರುತ್ತಿದೆ. ಬೇರೆ ಬೇರೆ ಕೋನಗಳಲ್ಲಿ ಚರ್ಚಿಸುತ್ತಿರುವುದು ಒಳ್ಳೆಯ ಸಂಗತಿಯೇ. ನಾನೂ ಇಲ್ಲಿ ಪ್ರಸ್ತಾಪಿಸಬೇಕಾದ ಸಂಗತಿ ಕುರಿತು ಇನ್ನೂ ಯಾರೂ ಬರೆದಿಲ್ಲವಾದ್ದರಿಂದ (ಸಿಬಂತಿ ಪದ್ಮನಾಭರು ತಮ್ಮ ಲೇಖನದಲ್ಲಿ ಸಣ್ಣದಾಗಿ ಹೇಳಿದ್ದಾರೆ) ನನ್ನ ಕೆಲವು ವಿಚಾರಗಳನ್ನು ಇಲ್ಲಿಡುತ್ತಿದ್ದೇನೆ.

ನಟ, ನಟಿಯಂಥ ವೈಯಕ್ತಿಕ ಪ್ರಶಸ್ತಿಗಳ ಬಗ್ಗೆ ಚರ್ಚಿಸುವುದು ಅಷ್ಟೊಂದು ಪ್ರಮುಖವಲ್ಲವೆನಿಸುವುದು ನನ್ನ ಲೆಕ್ಕಾಚಾರ. ಆದರೆ ಅತ್ಯುತ್ತಮ ಚಿತ್ರಗಳನ್ನು ಆಯ್ಕೆ ಮಾಡುವಾಗ ಹಾಗಾಗದು. ಈ ಬಾರಿಯ ಪ್ರಶಸ್ತಿಯ ವಿಚಿತ್ರವೆಂದರೆ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಚರ್ಚೆಗೊಳಗಾದ ಒಂದೂ ಚಿತ್ರ ಇಲ್ಲಿ ಆಯ್ಕೆಯಾಗದೇ ಇರುವುದು. ಪುಟ್ಟಕ್ಕನ ಹೈವೇ ಚಿತ್ರದ ಚಿತ್ರಕಥೆಗೆ ಪ್ರಶಸ್ತಿ ಕೊಟ್ಟಿದ್ದಾರಾದರೂ ಬೆಟ್ಟದ ಜೀವ ಸೇರಿದಂತೆ ಹಲವು ಚಿತ್ರಗಳು ಒಳಗೊಳ್ಳದಿರುವುದೇ ವಿಚಿತ್ರವೆನಿಸುತ್ತದೆ. ರಾಷ್ಟ್ರ ಮಟ್ಟದ ಆಯ್ಕೆಯ ಸಂದರ್ಭದಲ್ಲಿ ಅಷ್ಟೇನೋ ಚರ್ಚೆಗೊಳಗಾಗದ ಚಿತ್ರಗಳು ಇಲ್ಲಿ ಆಯ್ಕೆ ಮಟ್ಟವನ್ನು ತಲುಪಿದವು ಎಂಬುದು ಹಲವು ಪ್ರಶ್ನೆಗಳನ್ನು ಉಂಟು ಮಾಡುತ್ತದೆ.

ಹಾಗಾದರೆ ಆಯ್ಕೆ ಸಮಿತಿಯ ಜೂರಿಗಳದ್ದೇ ಸಮಸ್ಯೆಯೋ ಅಥವಾ ಮಾನದಂಡಗಳದ್ದೋ ಅರ್ಥವಾಗದು. “ಬ್ಯಾರಿ’ ಚಲನಚಿತ್ರ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಪ್ರಾದೇಶಿಕ ಚಿತ್ರ ಗಳಿಸಿತು. ಆ ಲೆಕ್ಕದಲ್ಲಿ ನೋಡುವುದಾದರೆ, ಇಲ್ಲಿಯೂ ಚರ್ಚೆಗೊಳಗಾಗಬೇಕಿತ್ತು. ಚರ್ಚೆಗೂ ಒಳಗಾಗಲಿಲ್ಲ ಹಾಗೂ ಪ್ರಶಸ್ತಿಯೂ ಗಳಿಸಲಿಲ್ಲ. ಇದು ಯಾವ ಕಾರಣಕ್ಕೊ ಗೊತ್ತಿಲ್ಲ. ಅದರಲ್ಲಿ ಕೆಲಸ ಮಾಡಿದವರೆಲ್ಲಾ ಮಲಯಾಳಿಗಳೆಂಬುದೂ ತಿರಸ್ಕೃತಗೊಳ್ಳಲು ಕಾರಣವೆಂದು ಹೇಳಲಾಗುತ್ತಿತ್ತು. ಒಂದುವೇಳೆ ಇದು ಹೌದಾದರೆ ತೀರಾ ಅಕ್ಷಮ್ಯವಾದುದು. ತಂತ್ರಜ್ಞರನ್ನು ಕನ್ನಡಿಗರಾದ ನಾವು ಬೆಳೆಸಿದ್ದೇ ಕಡಿಮೆ. ಕಥೆ ನಮ್ಮ ರಾಜ್ಯದೊಳಗಿನ ಒಂದು ಸಮುದಾಯದ್ದು. ಅಷ್ಟೇ ಏಕೆ ? ರಾಜ್ಯ ಸರಕಾರವೇ ಬ್ಯಾರಿ ಸಾಹಿತ್ಯ ಅಕಾಡೆಮಿ ರಚಿಸುವ ಮೂಲಕ ಆ ಭಾಷೆ ಮತ್ತು ಸಮುದಾಯವನ್ನು ಅಧಿಕೃತಗೊಳಿಸಿದೆ. ಹೀಗಿರುವಾಗ ಅದನ್ನೂ ಪ್ರಶಸ್ತಿಗೆ ಏಕೆ ಪರಿಗಣಿಸಬಾರದಿತ್ತು.

ಬ್ಯಾರಿ ಕಥೆಯ ಕುರಿತು ವಿವಾದವಿದೆ ಎಂಬುದೂ ಪ್ರಶಸ್ತಿಯಿಂದ ಹೊರಗಿಡಲು ಕಾರಣವೂ ಅಲ್ಲ. ಆ ವಿವಾದ ಇರುವುದು ಕಥೆಗಾರರಿಗೂ ಮತ್ತು ಚಿತ್ರತಂಡಕ್ಕೂ. ಅದನ್ನು ಅವರು ಬಗೆಹರಿಸಿಕೊಳ್ಳುವರು. ರಾಷ್ಟ್ರೀಯ ಪ್ರಶಸ್ತಿಯನ್ನೇ ತಡೆ ಹಿಡಿಯದಿರುವಾಗ ಇಲ್ಲಿ ಯಾಕೆ ಅದನ್ನು ಪರಿಗಣಿಸಲಿಲ್ಲವೋ ತಿಳಿಯದು. ಒಂದು ಪುಟ್ಟ ಸಮುದಾಯದ ಬದುಕಿನ ಕಥೆಯನ್ನು ಹೇಳಿದ ಚಿತ್ರವನ್ನು ಗುರುತಿಸಬೇಕಾಗಿದ್ದದ್ದು ಆಯ್ಕೆ ಸಮಿತಿಯ ಹೊಣೆಗಾರಿಕೆಯಾಗಿತ್ತು. ಅದಾಗಲಿಲ್ಲವೆಂಬುದೂ ಬೇಸರ ತಂದಿದೆ.

ಸೂಪರ್ ಹಿಟ್ ಚಿತ್ರಗಳನ್ನು ಆಯ್ಕೆ ಮಾಡಬಾರದೆಂದೇನೂ ಅಲ್ಲ. ಆದರೆ ಒಟ್ಟೂ ಕೊಡುವುದಾದರೂ ಏನು ಎಂಬುದನ್ನು ಗಮನಿಸಬೇಕಲ್ಲವೇ? ಅಂಥ ಪ್ರಯತ್ನ ಇತ್ತೀಚೆಗೆ ಕಡಿಮೆಯಾಗುತ್ತಿರುವುದು ವಿಷಾದಕರ ಸಂಗತಿ.