ರಾಜ್ಯ ಪ್ರಶಸ್ತಿ ಆಯ್ಕೆ ಕುರಿತೇ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿರುವ ರಾಘವೇಂದ್ರ, ಮೊದಲ ಮೂರು ಚಿತ್ರಗಳ ಭಿನ್ನತೆ ಬಗ್ಗೆ ಆಯ್ಕೆ ಸಮಿತಿಯವರೇ ತಿಳಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರತಿ ಬಾರಿಯೂ ರಾಜ್ಯ ಪ್ರಶಸ್ತಿ ಪ್ರಕಟವಾದಾಗಲೂ ಆಗುವ ಆಶ್ಚರ್ಯವೆಂದರೆ ಇದು. ಮೊದಲ ಮತ್ತು ಉಳೀದ ಸ್ಥಾನಗಳಿಗೆ ಆಯ್ಕೆಯಾಗುವ ಚಿತ್ರಗಳ ನಡುವೆ ಸಾಮ್ಯತೆ ಇರುವುದಿಲ್ಲ. ಇದು ಹಲವು ಬಾರಿ ಆಗಿದೆ ಎನಿಸುತ್ತದೆ. ಈ ಬಾರಿಯ ಪ್ರಶಸ್ತಿಯ ಪಟ್ಟಿ ನೋಡಿ, ಸೂಪರ್, ಶಬ್ದಮಣಿ, ಭಗವತಿ ಕಾಡು. ಇವುಗಳ ಮಧ್ಯೆ ಯಾವುದಾದರೂ ಬಗೆಯ ಸಾಮ್ಯತೆ ಇದೆಯೇ ?

ಸೂಪರ್ ಅತ್ಯುತ್ತಮ ಚಿತ್ರವೆಂದು ಪರಿಗಣಿಸಿದ್ದರೆ, ಅದರೊಂದಿಗೆ ಸೆಣಸಿದ ಚಿತ್ರಗಳು ಅದೇ ಮಾದರಿಯಲ್ಲಿರಬೇಕಲ್ಲವೇ ? ಸೂಪರ್ ಸಂಪೂರ್ಣ ವಾಣಿಜ್ಯ ನೆಲೆಯ ಚಿತ್ರ. ಉಳಿದ ಎರಡೂ ಕಲಾತ್ಮಕ ಮಾದರಿಗೆ ಒಳಪಟ್ಟವು. ಹಾಗಾದರೆ ಆಯ್ಕೆ ಸಮಿತಿ ಹೇಗೆ ವಿವಿಧ ಸ್ಥಾನಗಳಿಗೆ ವರ್ಗೀಕರಿಸಿತು ? ಎಂಬುದೇ ಅರ್ಥವಾಗುವುದಿಲ್ಲ. ಸೂಪರ್ ನಲ್ಲಿ ಜನಪ್ರಿಯ ಹೀರೋ ಇದ್ದ ಮಾತ್ರಕ್ಕೆ ಪ್ರಥಮ ಸ್ಥಾನ ಗಳಿಸಿದ್ದರೆ, ಉಳಿದವೂ ಜನಪ್ರಿಯ ಹೀರೋಗಳಿರುವ ಚಿತ್ರಗಳೇ ಸೆಣಸಬೇಕಿತ್ತು. ಅದ್ಯಾವುದೂ ಕಾಣುವುದಿಲ್ಲ.

ಸೂಪರ್ ನಲ್ಲಿನ ಹೀರೋ ಅಭಿನಯಕ್ಕೆ ಸಿನಿಮಾ ಆಯ್ಕೆಯಾಗಿಲ್ಲ. ಕಾರಣ, ಅತ್ಯುತ್ತಮ ನಟನ ಪ್ರಶಸ್ತಿ “ಪುನೀತ್’ ಗೆ ಹೋಗಿದೆ. “ಪೃಥ್ವಿ’ ಚಿತ್ರದ ಅಭಿನಯಕ್ಕೆ ಆ ಪ್ರಶಸ್ತಿ ದೊರೆತಿರುವುದು. ಇದೇ ಲೆಕ್ಕವನ್ನು ಇಟ್ಟು ಕೊಂಡು ನೋಡಿದರೆ, ಬಹುಶಃ ಸೂಪರ್ ಗೆ “ಪೃಥ್ವಿ’ ಸೆಣಸು ಕೊಟ್ಟಿರಬೇಕು. ಆಗಲಾದರೂ ಒಂದು ಸಣ್ಣ ಸಾಮ್ಯತೆ ತೋರುತ್ತದೆ. ವಿಚಿತ್ರವೆಂದರೆ, ಅತ್ಯುತ್ತಮ ನಟಿ ಮತ್ತೊಂದು ಚಿತ್ರ “ಸೂಸೈಡ್’ನ ನಟಿ ಕಲ್ಯಾಣಿಯ ಪಾಲಾಗಿದೆ. ಹಾಗಾಗಿಯೇ ಹೇಳಿದ್ದು, ಈ ಮೂರರಲ್ಲೂ ಒಂದು ಸಾಮ್ಯತೆಯೇ ಕಾಣಬರುವುದಿಲ್ಲ.

ಒಂದುವೇಳೆ “ಸೂಪರ್’ಗೆ ಜನಪ್ರಿಯ ಹೀರೋ ಇದ್ದ ಮಾತ್ರಕ್ಕೆ ಪ್ರಶಸ್ತಿಗೆ ಆಯ್ಕೆ ಮಾಡಿದ್ದರೆ, ಉಳಿದ ಎರಡು ಚಿತ್ರಗಳು (ಭಗವತಿ ಕಾಡು, ಶಬ್ದಮಣಿ) ಅದೇ ಕಾರಣಕ್ಕೆ ಮೊದಲ ಸ್ಥಾನಕ್ಕೆ ತಿರಸ್ಕೃತಗೊಂಡಿದ್ದೂ ತಪ್ಪು. ಇವೆಲ್ಲವನ್ನೂ ದೂರವಿಟ್ಟು, ನಾನು ಕೇವಲ ಸಾಮ್ಯತೆ ಹುಡುಕುತ್ತಿರುವುದು ಪ್ರಥಮ ಮೂರು ಚಿತ್ರಗಳಲ್ಲಿ ಮಾತ್ರ. ಕಥೆಯ ಸಂಗತಿಯಲ್ಲಿ ಹೇಳವುದಾದರೆ, ಮೂರೂ ಚಿತ್ರಗಳು ಭಿನ್ನ ನೆಲೆಯವು. ಒಂದು ತೀರಾ ವಿಡಂಬನೆಯ ನೆಲೆಯದ್ದಾದರೆ, ಭಗವತಿ ಕಾಡು ಪರಿಸರಾತ್ಮಕ ಚಿತ್ರ. ಶಬ್ದಮಣಿ ಸೈನಿಕರ ಕುರಿತಾದದ್ದು.

ನಂತರದ ಎರಡೂ ಚಿತ್ರಗಳ ಕಥೆಯ ಎಳೆ ಸಮಾಜದ ಮೇಲೆ ಪರಿಣಾಮ ಬೀರುವಂಥವು. “ಸೂಪರ್’ ಅಕ್ಷರಶಃ ಮನರಂಜನಾತ್ಮಕ ಚಿತ್ರ. ಅದರ ವಿಡಂಬನೆ ನೆಲೆ ಎಲ್ಲೂ ನಮ್ಮನ್ನು ಆಲೋಚನಾಶೀಲವಾಗಿ ತೊಡಗಿಸುವುದು ಕಷ್ಟ. ಅದರ ವಿಡಂಬನೆಯನ್ನು ಗಂಭೀರವಾಗಿ ತೆಗೆದುಕೊಳ್ಳುವ ಬದಲು, ಸಾಮಾನ್ಯ ಜೋಕಿನಂತೆ ನೋಡಿಬಿಡುವ ಅಪಾಯವೇ ಹೆಚ್ಚು. ಹೀಗಿರುವಾಗಲೂ, ಮೂರರ ಮಧ್ಯೆ ಒಂದು ಗಂಭೀರ ವ್ಯತ್ಯಾಸವನ್ನು ಹುಡುಕಿ ಸ್ಥಾನ ವರ್ಗೀಕರಿಸಿದ ಆಯ್ಕೆ ಸಮಿತಿಯವರಿಗೆ ಭೇಷ್ ಎನ್ನಲೇಬೇಕು. ಇದೇ ಗೋಜಲು ?ಗೋಜಲು ಎನಿಸುವುದು. ಆಯ್ಕೆ ಸಮಿತಿಯು ಇಂಥ ಸಂದರ್ಭದಲ್ಲಾದರೂ ತಮ್ಮ ಗಮನಾರ್ಹ ಅಂಶಗಳನ್ನು ಪ್ರಕಟಿಸಬೇಕು. ಆಗ ಮಾತ್ರ ಗೊಂದಲ ಬಗೆಹರಿಯಬಹುದೇನೋ?