ಚೇತನಾ ಎನ್. ಅವರ ಅಭಿಪ್ರಾಯವನ್ನೇ ಅನುಮೋದಿಸಿ ಬರೆದಿದ್ದಾರೆ ಮಧುಸೂದನ್. ಇದು ಚಿತ್ರದ ಬಗೆಗಿನ ಅವರ ಅನಿಸಿಕೆಯೂ ಹೌದು ಹಾಗೂ ಹಿಂದಿನ ಲೇಖನದ ವಿಸ್ತರಣೆಯೂ ಹೌದು. ಓದಿ, ಅಭಿಪ್ರಾಯಿಸಿ. ರಾಜ್ಯ ಪ್ರಶಸ್ತಿ ಆಯ್ಕೆ ಕುರಿತ ಸಂವಾದ ನಾಳೆಯಿಂದ ಮುಂದುವರಿಯಲಿದೆ.

ಸಿನಿಮಾಕ್ಕೆ ಹೋಗಿ ಕುಳಿತಾಗ ನನಗೂ ಹಾಗೆಯೇ ಅನ್ನಿಸಿದ್ದು. ಹತ್ತು ಹಲವು ಸಿನಿಮಾಗಳ ಸಂಘರ್ಷ ಇದರಲ್ಲಿ ನಡೆಯುತ್ತಿದೆಯೇ ಎಂದೆನಿಸಿತು. ಈ ಬ್ಲಾಗ್ ನಲ್ಲಿ ಚೇತನಾ ಎನ್. ಅವರ ಅನಿಸಿಕೆ ಸರಿಯಿದೆ. ಅಣ್ಣಾಬಾಂಡ್ ನ ಮೊದಲ ಸೀನ್ ನನಗೂ “ಸಿಟಿ ಆಫ್ ಗಾಡ್’ ಮೊದಲ ದೃಶ್ಯದ ತದ್ರೂಪು ಎನಿಸಿತು. ನಂತರ ಹಾಲಿವುಡ್‌ನ ಟ್ರೂ ಲೈಸ್ ನ ಲ್ಲಿ ಹತಾಶೆಯಾಗಿ ಬೇಕಾಬಿಟ್ಟಿ ಸಿಕ್ಕಸಿಕ್ಕಕಡೆ ಗುಂಡು ಹಾರಿಸುವ ಆರ್ನಾಲ್ಡ್‌ನ ಹೆಂಡತಿಯಂತೆಯೇ ರಂಗಾಯಣ ರಘುವಿನ ಪಾತ್ರ ಅನಿಸಿದ್ದು. ದುನಿಯಾದಲ್ಲಿ ಕಂಡಿದ್ದ ಸೂರಿಯವರ ಚಿತ್ರಕಥೆಯ ಬಿಗಿ, ನಿರೂಪಣೆಯ ಕೌಶಲ್ಯ ಎಲ್ಲವೂ ನಿಧಾನವಾಗಿ ಕಾಣೆಯಾಗುತ್ತಿದೆ ಎನ್ನಿಸಿದ್ದೂ ನಿಜ. ಯಾಕೆ ಹಾಗಾಗುತ್ತಿದೆಯೋ ಗೊತ್ತಿಲ್ಲ.

ಈ ಚಿತ್ರದಲ್ಲಿ ಸೂರಿಯವರನ್ನು ಬಚಾವ್ ಮಾಡುವುದು ರಂಗಾಯಣ ರಘು, ಯೋಗರಾಜಭಟ್ ಹಾಗೂ ಛಾಯಾಗ್ರಹಣದ ಹೊಣೆ ಹೊತ್ತ ಸತ್ಯ ಹೆಗಡೆ. ಹಾಡುಗಳನ್ನು ಕೇಳಿ, ಅವುಗಳ ದೃಶ್ಯ ವೈಭವವನ್ನು ನೋಡಲು ಹೋದವರಿಗೆ ಮತ್ತೆ ನಿರಾಶೆಯಾಗುತ್ತದೆ. “ತುಂಬಾ ನೋಡಬೇಡಿ’ ಹಾಡಿಗೆ ಇನ್ನಷ್ಟು ಒಳ್ಳೆಯ ದೃಶ್ಯಗಳ ಸಂಯೋಜನೆ ಬೇಕಿತ್ತು ಎಂದು ನನ್ನಂಥ ಸಾಮಾನ್ಯನಿಗೂ ಅನ್ನಿಸುತ್ತದೆ. ಆದರೆ, ಪರದೆಯ ಮೇಲೆ ಯಾವುದೊ ಮೆರವಣಿಗೆಯಲ್ಲಿ ಕುಣಿಯುವ ದೃಶ್ಯಕ್ಕಿಂತ ಹೊರತಾಗಿ ಏನೂ ಅನಿಸದು. ಹಾಗಾಗಿ ಯೋಗರಾಜ ಭಟ್ ರ ಒಪ್ಪಿಕೊಳ್ಳಬಲ್ಲ ಸಾಹಿತ್ಯವೂ ಪ್ರೇಕ್ಷಕರನ್ನು ಮುಟ್ಟುವಲ್ಲಿ ವಿಫಲವಾಗುತ್ತದೆ. ಜಾಕಿ ಚಿತ್ರದ “ಎಕ್ಕ ರಾಜಾ ರಾಣಿ’ ಹಾಡಿಗೂ ಇಂಥದ್ದೇ ಕಷ್ಟ ಒದಗಿಬಂದಿತ್ತು. ನೃತ್ಯ ಸಂಯೋಜನೆ ಹಾಗೂ ಬೀಟ್ಸ್ ಗಳಿಗೂ (ಲಯ) ಹೊಂದಾಣಿಕೆಯೇ ತೋರದು. ಬೋರ್ ಎನಿಸಿದಾಗಲೆಲ್ಲಾ ಸಿನಿಮಾಟೋಗ್ರಫಿ ಮತ್ತು ಬಿಗಿಯಾದ ಸಂಕಲನ ಸಮಾಧಾನ ಪಡಿಸುತ್ತವೆ.

ಸ್ಯಾಂಡಲ್‌ವುಡ್ ಪ್ರತಿಭೆಗಳ ಕಣಜ ಎಂಬ ಅಭಿಪ್ರಾಯ ಇರುವಾಗಲೇ, ಅಲ್ಲಿನ ಪ್ರತಿಭೆಯ ಒಂದು ನಿರಾಶದಾಯಕ ಪ್ರಯತ್ನವಿದೆಂದು ಹೇಳಬಹುದು, ಇದು ವಿಪರ್ಯಾಸವೆಂದರೂ ಸತ್ಯ. ಅಣ್ಣಾಬಾಂಡ್ ಎಂದು ಚಿತ್ರಕ್ಕಿಟ್ಟ ಮಾತ್ರಕ್ಕೇ, “ಬಾಂಡ್ ರವಿ’ ಪಾತ್ರದ ಪುನೀತ್‌ನನ್ನು ಹೊರತುಪಡಿಸಿದರೆ ಉಳಿದ್ಯಾವ ಪಾತ್ರಕ್ಕೂ ಪೋಷಣೆಯೇ ಸಿಕ್ಕಿಲ್ಲ. ಅಣ್ಣಾ ಎಂದು ಹೆಸರಿಡುವ ಮೂಲಕ ನಿರ್ದೇಶಕ ಮತ್ತು ಚಿತ್ರತಂಡ, ಡಾ. ರಾಜ್‌ಕುಮಾರ್‌ರ ಪ್ರಸಿದ್ಧಿಯನ್ನು-ಸೆಂಟಿಮೆಂಟ್ ನ್ನು ಬಳಸಿಕೊಳ್ಳುವ ಮೂಲಕ ತಮ್ಮ ನಿರಾಶದಾಯಕ ಪ್ರಯತ್ನದ ದೋಷವನ್ನು ಮುಚ್ಚಿಕೊಳ್ಳುವ ಪ್ರಯತ್ನ ನಡೆಸಿದ್ದಾರೆಂದರೆ ಸುಳ್ಳಲ್ಲ.

ಇದು, ಶಾಲಾ ಪರೀಕ್ಷೆಯಲ್ಲಿ ಫೇಲಾದ ವಿಜ್ಞಾನಿಯ ಮಗನೊಬ್ಬ ತನ್ನಪ್ಪನ ಪ್ರಭಾವ ಬಳಸಿಕೊಂಡು ಉತ್ತೀರ್ಣನಾಗಲು ನಡೆಸುವ ಪ್ರಯತ್ನದಂತೆಯೇ ಅನಿಸುತ್ತದೆ. ಹಲವು ಅತ್ಯುತ್ತಮ ಉಲ್ಲೇಖಾರ್ಹ ಚಲನಚಿತ್ರಗಳನ್ನು ನೀಡಿದ್ದಲ್ಲದೇ, ಪ್ರಸ್ತುತತೆಯಲ್ಲೂ ಶ್ರೀಮಂತಿಕೆ ಹಾಗೂ ಸೃಜನಶೀಲ ಪ್ರಯತ್ನಗಳಿಗೆ ಹೆಸರಾಗಿದ್ದ ಪೂರ್ಣಿಮಾ ಎಂಟರ್ ಪ್ರೈಸಸ್ ಯಾಕೆ ಇಂತಹ ಸಾಧಾರಣ ಪ್ರಯತ್ನಕ್ಕೆ ಕೈ ಹಾಕಿತೋ ತಿಳಿಯದು.

ಅಣ್ಣಾಬಾಂಡ್ ಚಿತ್ರ ಡಾ.ರಾಜ್‌ಕುಮಾರ್‌ರನ್ನು ಮರಳಿ ತರುವಲ್ಲಿ ನಡೆಸಿದ ಒಂದು ಹತಾಶ ಪ್ರಯತ್ನವೆಂದೇ ತೋರುತ್ತದೆ. ಸ್ಯಾಂಡಲ್ ವುಡ್ ಗುಣಮಟ್ಟದ ಕೊರತೆಯನ್ನು ಎದುರಿಸುತ್ತಿದೆ ಎಂಬುದನ್ನು ಈ ಚಿತ್ರ ಪ್ರಸ್ತಾಪಿಸುತ್ತದೆಯೇ? ಅಣ್ಣಾಬಾಂಡ್ ಚಿತ್ರ ನೋಡಿದವರಿಗೆ ಹೀಗೆ ಅನ್ನಿಸಬಹುದು.

ವಿಶ್ವ ಸಿನಿಮಾಗಳಿಂದ ದೃಶ್ಯಗಳನ್ನು ತಂದರೆ, ಸ್ಫೂರ್ತಿ ಪಡೆದು ಚಿತ್ರಿಸಿದರೆ ಯಾರೂ ಆಕ್ಷೇಪಿಸುವುದಿಲ್ಲ. ಆದರೆ, ಇಂಥ ಹೊತ್ತಿನಲ್ಲಿ ತಮ್ಮ ಸೃಜನಶೀಲತೆಯಿಂದ ಕಥೆಗೆ-ನಿಮ್ಮ ಚಿತ್ರಕ್ಕೆ ಹೊಂದುವಂತೆ ಪುನರ್ ರೂಪಿಸಿದರೆ ನ್ಯಾಯ ಒದಗಿಸಿದಂತೆ. ಹಾಲಿವುಡ್‌ಗಳಲ್ಲಿ ಬಾಂಡ್ ಸಿನಿಮಾಗಳಿಗೆ ಒಂದು ಸಿದ್ಧ ಸೂತ್ರವಿದೆ. ಯಾರೇ ಬಾಂಡ್‌ನ ರೂಪದಲ್ಲಿ ಬಂದರೂ ಆ ಸೂತ್ರಕ್ಕೆ ತಮ್ಮನ್ನು ತಾವು ಒಗ್ಗಿಸಿಕೊಳ್ಳಲೇಬೇಕು. ಡಾ. ರಾಜ್‌ಕುಮಾರ್ ಅವರು ಅಭಿನಯಿಸಿದ ಬಾಂಡ್ ಚಿತ್ರಗಳಲ್ಲೂ ಆ ಸೂತ್ರದ ಚಹರೆ ತೋರಬಲ್ಲದು, ಆದರೆ ಅಣ್ಣಾಬಾಂಡ್ ನಲ್ಲಿಲ್ಲ. ನಮ್ಮ ಸುತ್ತಮುತ್ತಲಿನ ಭಾಷೆಗಳ ಚಿತ್ರರಂಗದಲ್ಲಿ ಒಳ್ಳೆ ಬಜೆಟ್ ಮತ್ತು ಒಳ್ಳೆ ಸಿನಿಮಾಗಳನ್ನು ಮಾಡುತ್ತಿರುವಾಗ ನಮ್ಮಲ್ಲಿ ಏಕೆ ಹೀಗೆ ಎಂಬ ಪ್ರಶ್ನೆ ಅಣ್ಣಾ ಬಾಂಡ್ ನೋಡುವಾಗಲೂ ಕಾಡದೇ ಬಿಡಲಿಲ್ಲ.