l2014111859264

ಸಾಂಗತ್ಯ ವರದಿ

ಪಣಜಿ : ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (IFFI)ತಾಣವನ್ನಾಗಿ (venue) ಗೋವಾವನ್ನು ಘೋಷಿಸಿರುವ ಹಿನ್ನೆಲೆಯಲ್ಲಿ 45 ನೇ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಹೊಸ ಹುರುಪು ಬಂದಿದೆ.

ಈ ಉತ್ಸಾಹವನ್ನು ಇಮ್ಮಡಿಸುವಂತೆ ಈ ಬಾರಿ ಉತ್ಸವದಲ್ಲಿ ಭಾಗವಹಿಸುತ್ತಿರುವ ಪ್ರತಿನಿಧಿಗಳ ನೋಂದಣಿಯಲ್ಲೂ ಏರಿಕೆ ಕಂಡು ಬಂದಿದೆ. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಉತ್ಸವ ನಿರ್ದೇಶಕ ಶಂಕರ್ ಮೋಹನ್ ಪ್ರಕಟಿಸಿದಂತೆ, “ಈಗಾಗಲೇ 12, 700 ಮಂದಿ ಪ್ರತಿನಿಧಿಗಳು ನೊಂದಾಯಿಸಿಕೊಂಡಿದ್ದಾರೆ. ಉತ್ಸವ ಆರಂಭವಾದ ಮೇಲೂ ಭಾರಿ ಸಂಖ್ಯೆಯಲ್ಲಿ ಆಸಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ” ಎಂದರು.

ಇತ್ತೀಚೆಗಷ್ಟೆ ಗೋವಾವನ್ನು ಶಾಶ್ವತ ತಾಣವನ್ನಾಗಿ ಘೋಷಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ವಾರ್ತಾ ಮತ್ತು ಪ್ರಚಾರ ಇಲಾಖೆ ಮತ್ತು ಗೋವಾ ಸರಕಾರದೊಂದಿಗೆ ಒಪ್ಪಂದವೂ ಆಗಿದೆ.

ಸಂಜೆ ಉದ್ಘಾಟನೆ

ಇಂದು (ಗುರುವಾರ) ನ. 20 ರಂದು ಸಂಜೆ ಶ್ಯಾಮಪ್ರಸಾದ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ಉದ್ಘಾಟನಾ ಕಾರ್ಯಕ್ರಮ ಸಂಜೆ 4 ಕ್ಕೆ ನೆರವೇರಲಿದೆ. ಖ್ಯಾತ ನಟ ಻ಅಮಿತಾಬ್ ಬಚ್ಚನ್ ಉದ್ಘಾಟನೆ ನೆರವೇರಿಸವರು. ನಟ ರಜನೀಕಾಂತ್ ಗೆ ಶತಮಾನೋತ್ಸವ ಪ್ರಶಸ್ತಿ ನೀಡಲಾಗುತ್ತಿದೆ. ಇದರೊಂದಿಗೆ ಹಾಂಗ್ ಕಾಂಗ್ ನ ಚಿತ್ರ ನಿರ್ದೇಶಕ ವಾಂಗ್ ಕರ-ವಾಯ್ ಅವರಿಗೆ “ಜೀವಮಾನಸಾಧನೆ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಖ್ಯಾತ ಚಿತ್ರ ನಿರ್ದೇಶಕ ಮೊಹ್ಸಿನ್ ಮಕ್ಮಲ್ಮಫ್, ಜೋನ್ ಸೂಲಿ, ಕ್ರಿಸ್ತೋಫ್ ಜಾನುಸಿ, ಶೇಖರ್ ಕಪೂರ್, ನಟ ಅನುಪಮ್ ಖೇರ್  ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅರುಣ್ ಜೇಟ್ಲಿ, ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್, ರಾಜ್ಯ ಸಚಿವ ರಾಜ್ಯವರ್ಧನ್ ರಾಥೋಡ್, ಗೋವಾದ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರ್ಸೇಕರ್ ಮತ್ತಿತರರು ಪಾಲ್ಗೊಳ್ಳುವರು. ನಂತರ 8 ಗಂಟೆಗೆ ಕಲಾ ಅಕಾಡೆಮಿಯಲ್ಲಿ ಪ್ರಾರಂಭದ ಚಿತ್ರ “ದಿ ಪ್ರಸಿಡೆಂಟ್” ಪ್ರದರ್ಶನಗೊಳ್ಳಲಿದೆ. ಈ ಚಿತ್ರವನ್ನು ಇರಾನಿನ ಮೊಹ್ಸಿನ್ ಮಕ್ಮಲ್ಬಫ್ ನಿರ್ದೇಶಿಸಿದ್ದಾರೆ.

ದಿ ಪ್ರಸಿಡೆಂಟ್

ಒಬ್ಬ ಸರ್ವಾಧಿಕಾರಿ ಕ್ಷಿಪ್ರ ಕ್ರಾಂತಿಯ ಹಿನ್ನೆಲೆಯಲ್ಲಿ ಅಧಿಕಾರ ಕಳೆದುಕೊಂಡು ಊರು ಬಿಟ್ಟು ಹೋಗಲು ಮಾರು ವೇಷದಲ್ಲಿ ಹೆಣಗಾಡುವಾಗ, ತನ್ನ ಪ್ರಜೆಗಳನ್ನು ಮುಖಾಮುಖಿಯಾಗುವ ಸನ್ನಿವೇಶಗಳು ಹಾಗೂ ತನ್ನ ಬಗೆಗಿನ ಜನರ ನಿಜದ ಭಾವನೆಯನ್ನು ಅರ್ಥ ಮಾಡಿಕೊಳ್ಳುವ ಕಥಾವಸ್ತುವಿನ ಸಿನಿಮಾ.