ಕನ್ನಡ ಚಿತ್ರರಂಗದ ಹೊಸ ಅಸಂಬದ್ಧವೆಂದರೆ “ರಿಯಾಲಿಟಿ ಷೋನಲ್ಲಿನ ಸ್ಟಾರ್ ಗಳನ್ನು ನಿಷೇಧಿಸುವುದು”. ಇದೊಂದು ವಿಚಿತ್ರವಾದ ಮತ್ತು ಅತಾರ್ಕಿಕವಾದ ಸಂಗತಿ. ಈ ಕುರಿತು ಮೈಸೂರಿನ ಸಿಟಿ ಟುಡೆ ಪತ್ರಿಕೆಗೆ ಬರೆದ ಅರವಿಂದ ನಾವಡರ ಲೇಖನವನ್ನು ಇಲ್ಲಿ ಪ್ರಕಟಿಸಲಾಗಿದೆ. ಕಲಾವಿದ ಮತ್ತು ಕಲೆಯನ್ನು ನಿಷೇಧಿಸುತ್ತೇವೆ ಎಂದು ಮಾತನಾಡುವುದೇ ಅರೋಗ್ಯಕರ ಮನಸ್ಥಿತಿಯ ಲಕ್ಷಣವಲ್ಲ. ಅದು ಜಮೀನ್ದಾರಿ ಧೋರಣೆ. ಮತ್ತೆ ಗುಲಾಮಿತವನ್ನು ಪ್ರತಿಪಾದಿಸುವವರನ್ನು ಆರೋಗ್ಯಕರ ಸಮಾಜ ಒಪ್ಪದು. 

weekend

ಕನ್ನಡ ಚಿತ್ರರಂಗದಲ್ಲಿ ವಿವಾದಗಳಿಗೆ ಬರವೇನಿಲ್ಲ. ಸದಾ ಯಾವುದಾದರೊಂದು ವಿವಾದ ಚರ್ಚೆಯಲ್ಲಿರಲೇಬೇಕು. ಇಲ್ಲದಿದ್ದರೆ ಚಿತ್ರರಂಗ ಚಲನಶೀಲವಾಗಿದೆಯೇ ಇಲ್ಲವೇ ಎಂಬ ಅನುಮಾನ ಮೂಡಿಸುವುದುಂಟು. ಆದರೆ, ಎಷ್ಟೋ ಬಾರಿ ಅರ್ಥವಿಲ್ಲದ, ಅತಾರ್ಕಿಕವಾದ ವಿವಾದಗಳೇ ಚರ್ಚೆಗೆ ಸಿಲುಕುವುದುಂಟು. ಈಗ ಹೊಸ ವಿವಾದವೆಂದರೆ, ಕಿರುತೆರೆಯಲ್ಲಿ ವಾರಾಂತ್ಯದಲ್ಲಿ ರಿಯಾಲಿಟಿ ಷೋ ನಡೆಸುತ್ತಿರುವ ಚಿತ್ರನಟರ ಚಿತ್ರಗಳನ್ನು ನಿಷೇಧಿಸಬೇಕೆಂಬುದು. ಕೆಲವು ಚಿತ್ರ ನಿರ್ಮಾಪಕರು ಈ ಸಂಬಂಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ನೀಡಿದ್ದಾರೆ. ಎಲ್ಲರ ಕೆಂಗಣ್ಣು ಸುದೀಪ್, ರಮೇಶ್ ಅರವಿಂದ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಮೇಲೆ.

ಈ ನಿಷೇಧಕ್ಕೆ ಚಿತ್ರ ನಿರ್ಮಾಪಕರು ನೀಡುತ್ತಿರುವ ಕಾರಣವೆಂದರೆ, ಈ ಚಿತ್ರನಟರು ವಾರಾಂತ್ಯದಲ್ಲಿ ರಿಯಾಲಿಟಿ ಷೋಗಳು ನಡೆಸಿಕೊಡುವುದರಿಂದ ಕನ್ನಡ ಸಿನಿಮಾಗಳಿಗೆ ಬಾಕ್ಸ್ ಆಫೀಸ್ ಕಲೆಕ್ಷನ್ ಕಡಿಮೆಯಾಗುತ್ತಿದೆಯಂತೆ. ಅದಕ್ಕಾಗಿ ಅವರ ಚಿತ್ರಗಳನ್ನು ನಿಷೇದಿಸಬೇಕು ಎಂಬುದು ಅವರ ಆಗ್ರಹ. ಇದಕ್ಕೆ ಕೆಲವು ನಿರ್ದೇಶಕರೂ ದನಿಗೂಡಿಸಿರುವುದು ವಿಚಿತ್ರವಾದರೂ ಸತ್ಯ.

ಯಾಕೆ ಹೀಗೆ
ಕನ್ನಡ ಚಿತ್ರರಂಗದಲ್ಲಿ ಮಾತ್ರ ಇಂಥ ಅತಾರ್ಕಿಕವಾದ ಮತ್ತು ಅರ್ಥ ರಹಿತವಾದ ಚರ್ಚೆ ನಡೆಯಲು ಸಾಧ್ಯ. ಇದಕ್ಕೆ ಕಾರಣವೇನು ಎಂದು ಶೋಧಿಸುತ್ತ ಹೊರಟರೆ ಸಿಗುವ ಉತ್ತರಗಳು ಹತ್ತು ಹಲವು. ಈ ನಿಷೇದಿಸುವ ಪದ್ಧತಿಯನ್ನು ಚಿತ್ರರಂಗ ಜಪಿಸಿದಷ್ಟು ಇನ್ಯಾವ ರಂಗವೂ ಜಪಿಸಿಲ್ಲ. ಮಾತೆತ್ತಿದರೆ ನಿಷೇಧಿಸುವ ಬಿಡುವ ಆಲೋಚನೆಯೇ ಸರ್ವಾಧಿಕಾರ ಧೋರಣೆಯ ವರ್ತನೆ. ಇದು ಜಮೀನ್ದಾರಿ ಪದ್ಧತಿಯ ಅವಶೇಷ. ಈ ವರ್ತನೆ ಇನ್ನೂ ಯಾಕೆ ಚಿತ್ರರಂಗದಲ್ಲಿ ಬೇರೂರಿದೆ ಎಂದರೆ, ಕಳೆದ ಎರಡು ದಶಕಗಳ ಹಿಂದೆ ಇಂಥ ಸಮಸ್ಯೆ ಇದ್ದದ್ದು ಕಡಿಮೆ ಹಾಗೂ ನಿಷೇಧದ ಚರ್ಚೆ ನಡೆದದ್ದೂ ತೀರಾ ಕಡಿಮೆ.

bigboss

ಆದರೆ ಈಗ ಇಡೀ ಕನ್ನಡ ಚಿತ್ರರಂಗ ಇಂಥ ಜಮೀನ್ದಾರಿ ಧೋರಣೆಯವರ ಕೈ ವಶವಾಗಿದೆ. ರಾಜಕಾರಣಿಗಳು, ಬಡ್ಡಿ ವ್ಯಾಪಾರಿಗಳು, ರಿಯಲ್ ಎಸ್ಟೇಟ್ ಧಣಿಗಳು ಚಿತ್ರರಂಗವನ್ನು ಆಕ್ರಮಿಸಿಕೊಂಡಿರುವ ಸನ್ನಿವೇಶವಿದು. ಕನ್ನಡ ಚಿತ್ರರಂಗದಲ್ಲಿ ಗುಣಮಟ್ಟ ಕಡಿಮೆ ಅಗಿರುವುದಕ್ಕೂ ಇವರ ಆಗಮನವೇ ಕಾರಣವೆಂಬುದೇನೂ ರಹಸ್ಯವಾಗಿ ಉಳಿದಿಲ್ಲ. ಇಂಥ ವರ್ಗದ ಚಿತ್ರ ನಿರ್ಮಾಪಕರಿಗೆ ಚಿತ್ರರಂಗ ಸಮಾಜ ನಿರ್ಮಾಣದ ಒಂದು ಪ್ರಭಾವಶಾಲಿ ಮಾಧ್ಯಮವಾಗಿ ತೋರುವುದಿಲ್ಲ, ಬದಲಾಗಿ ಹಣವನ್ನು ದೋಚುವ ಸಾಧನವಾಗಿ ಮಾತ್ರ ತೋರುತ್ತದೆ. ಅವರ ದೃಷ್ಟಿಕೋನ ಮತ್ತು ದೃಷ್ಟಿ ಎರಡೂ ಒಂದೇ. ಇಲ್ಲಿ ಲಾಭದ ಲೆಕ್ಕಾಚಾರಕ್ಕೂ, ಹಣ ದೋಚುವ ಕ್ರಮಕ್ಕೂ ಬಹಳ ವ್ಯತ್ಯಾಸವಿದೆ. ಯಾವುದೇ ವ್ಯಾಪಾರಸ್ಥ ಲಾಭದ ದೃಷ್ಟಿಯಿಂದಲೇ ತನ್ನ ವ್ಯವಹಾರವನ್ನು ಸಂರಚಿಸಿಕೊಳ್ಳುತ್ತಾನೆ. ಅದು ನ್ಯಾಯೋಚಿತವಾದದ್ದೇ. ಹೂಡಿದ ಹಣ ವಾಪಸು ಪಡೆಯುವುದು ಮತ್ತು ಲಾಭದ ಮೂಲಕ ವ್ಯಾಪಾರವನ್ನು ವಿಸ್ತರಿಸುವುದು ಅವನ ಜಾಯಮಾನ. ಈ ನಿಲುವನ್ನು ತಿರಸ್ಕರಿಸಬೇಕೆಂದೂ ಇಲ್ಲ, ತಪ್ಪು ಎನ್ನಬೇಕೆಂದೂ ಇಲ್ಲ. ಆದರೆ. ಈ ಸ್ವಾಭಾವಿಕ ನಿಲುವಿಗಿಂತ ಈ ಹೊತ್ತಿನಲ್ಲಿ ಕನ್ನಡ ಚಿತ್ರರಂಗದಲ್ಲಿ ಮನೆ ಮಾಡಿರುವುದು ಹಣ ದೋಚುವ ಪ್ರವೃತ್ತಿ. ಇದರಿಂದ ಎಲ್ಲ ಸಮಸ್ಯೆಗಳೂ, ವಿವಾದಗಳೂ ರೂಪುಗೊಳ್ಳುತ್ತಿವೆಯೇ ಹೊರತು ಮತ್ತೇನೂ ಅಲ್ಲ.

ಬಡ್ಡಿ ವ್ಯಾಪಾರ ಎಲ್ಲರಿಗೂ ತಿಳಿದದ್ದೇ. ಸಾಲ ಕೊಡುವಾಗಲೇ, ಮುಂಗಡವಾಗಿಯೇ ಬಡ್ಡಿ ಮುರಿದುಕೊಂಡೇ ಮಿಕ್ಕಿದ್ದನ್ನು ಕೊಡುವ ಪ್ರವೃತ್ತಿ ಇದೆ. ಅದು ಅದರ ಅಭ್ಯಾಸ ಕೂಡ. ಅದೇ ಪ್ರವೃತ್ತಿ ಈಗ ಚಿತ್ರರಂಗದಲ್ಲಿಯೂ ಸಹ. ಈ ಹಿನ್ನೆಲೆಯನ್ನು ಹೊಂದಿರುವ ಚಿತ್ರ ನಿರ್ಮಾಪಕರಿಗೆ ಚಿತ್ರ ಬಿಡುಗಡೆಯಾಗುವ ಮುನ್ನವೇ ಲಾಭ ಬಂದುಬಿಟ್ಟರೆ ಬಹಳ ಖುಷಿಯಾಗುತ್ತದೆ. ಇಲ್ಲವಾದರೂ, ಚಿತ್ರ ಬಿಡುಗಡೆಯಾದ ದಿವಸವೇ ಹೂಡಿದ ಬಂಡವಾಳ, ಲಾಭಾಂಶ ಗಳಿಸಿಬಿಡಬೇಕು. ಇದು ಹೇಗೆ ಸಾಧ್ಯ ಎಂಬುದರ ಬಗ್ಗೆ ಯೋಚಿಸುವ ಗೋಜಿಗೆ ಹೋಗುವುದಿಲ್ಲ. ಆಗ ಎಲ್ಲ ಸಮಸ್ಯೆಗಳೂ ಸೃಷ್ಟಿಯಾಗುತ್ತವೆ. ನಿರ್ಮಾಪಕರಿಗೂ ಸೃಜನಶೀಲತೆ ಇರಬೇಕು. ರಾಜಕಾರಣ ಮನಸ್ಥಿತಿಯ, ಬಡ್ಡಿ ವ್ಯಾಪಾರ, ರಿಯಲ್ ಎಸ್ಟೇಟ್ ಮನಸ್ಥಿತಿಯವರಿಗೆ ತಕ್ಷಣವೇ ಲಾಭ ಗಳಿಸಬೇಕೆಂಬ ಹಪಾಹಪಿ ಇರುತ್ತದೆಯೇ ಹೊರತು ಮತ್ತೇನೂ ಇರದು. ಇನ್ನೂ ತಮಾಷೆಯ ಸಂಗತಿಯೆಂದರೆ ಬಹುತೇಕ ಸಮಯವನ್ನು ಉಳಿದ ವ್ಯವಹಾರಗಳಿಗೆ ಬಳಸಿಕೊಂಡು, ಮೂರು ವರ್ಷಕ್ಕೊಮ್ಮೆ ಸಿನಿಮಾ ಮಾಡುವಂಥ ಕೆಲವು ನಿರ್ಮಾಪಕರೆ ಹೀಗೆಲ್ಲಾ ಬಾಲಿಶವಾಗಿ ಮಾತನಾಡುವುದೇ ಹೊರತು, ಸಿನಿಮಾ ನಿರ್ಮಾಣವನ್ನು ಗಂಭೀರವಾಗಿ ತೆಗೆದುಕೊಂಡವರು ಹೀಗೆಲ್ಲಾ ಮಾತನಾಡುತ್ತಿಲ್ಲವೆನ್ನುವುದನ್ನು ಗಂಭೀರವಾಗಿ ಪರಿಗಣಿಸಬೇಕು.

super minte

ಒಂದು ಉತ್ಪನ್ನ ಮತ್ತು ಒಂದು ಆಸ್ತಿ

ಒಬ್ಬ ಬುದ್ಧಿವಂತ ಚಿತ್ರ ನಿರ್ಮಾಪಕ ತಾನು ನಿರ್ಮಿಸಿದ ಚಿತ್ರವನ್ನು ಒಂದು ಸೃಜನಶೀಲ ಉತ್ಪನ್ನ ಮತ್ತು ಸೃಜನಶೀಲ ಆಸ್ತಿಯನ್ನಾಗಿ ಪರಿಗಣಿಸಿರುತ್ತಾನೆ. ಈ ಅರ್ಥದಲ್ಲಿ ಒಂದು ಚಿತ್ರವನ್ನು ಗಮನಿಸಿದಾಗ ಅದು ಒಂದು ದಿನಕ್ಕೆ ಕೊಳೆತು ನಾರುವಂಥದ್ದಲ್ಲ, ವ್ಯರ್ಥವಾಗುವಂಥದ್ದಲ್ಲ. ಉತ್ತಮ ಗುಣಮಟ್ಟದ ಉತ್ಪನ್ನಕ್ಕೆ ಯಾವಾಗಲೂ ಬೇಡಿಕೆ ಇದ್ದೇ ಇರುತ್ತದೆ. ಯಾಕೆಂದರೆ ಅದು ಆಸ್ತಿ (ಪ್ರಾಪರ್ಟಿ). ಗುಣಮಟ್ಟದ ಹಾಗೂ ಒಳ್ಳೆ ಅಭಿರುಚಿಯ ಚಿತ್ರಗಳು ಸದಾ ಆಸ್ತಿ, ಉಳಿದವು ಲಯಾಬಿಲಿಟಿ. ಉತ್ತಮ ಅಭಿರುಚಿಯಿಲ್ಲದ, ಚಿತ್ರ ಒಲವಿಲ್ಲದ ಹಾಗೂ ಹಣ ದೋಚುವುದಕ್ಕೆಂದೇ ಬರುವ ಚಿತ್ರ ನಿರ್ಮಾಪಕರಿಗೆ ತಾಳ್ಮೆ ಇರುವುದಿಲ್ಲ. ಅವರಿಗೆ ನಾಳೆ ಏನಾದೀತೆಂಬ ಅಭದ್ರತೆ ಸದಾ ಕಾಡುತ್ತಲೇ ಇರುತ್ತದೆ. ಹಾಗಾಗಿ ವರ್ತಮಾನದ ಬೆಂಕಿಯಲ್ಲಿ ಎಷ್ಟು ಸಾಧ್ಯವೋ ಅಷ್ಟುಬೇಳೆ ಬೇಯಿಸಿಕೊಳ್ಳಲು ಹೆಣಗುವುದು ಅವರ ಗುಣಧರ್ಮ. ಈ ಹಿನ್ನೆಲೆಯಲ್ಲಿ ಗುಣಮಟ್ಟ, ಅಭಿರುಚಿ ಎಂದೆಲ್ಲಾ ಯೋಚಿಸವುದು ತೀರಾ ಕಡಿಮೆ. ಹಾಗಾಗಿ ತಮಗೆ ಗೊತ್ತಿಲ್ಲದೇ ಹೆಚ್ಚು ಲಯಾಬಿಲಿಟಿಗಳನ್ನೇ ಸೃಷ್ಟಿಸುತ್ತಾರೆ. ಮಾರುಕಟ್ಟೆಯಲ್ಲಿ ಅದರ ಮೌಲ್ಯ ಕಡಿಮೆಯಾದಾಗ ಇಂಥ ಅತಾರ್ಕಿಕ ವಾದಕ್ಕೆ, ದೋರಣೆಯನ್ನು ವ್ಯಕ್ತಪಡಿಸುತ್ತಾರೆ. ಒಟ್ಟೂ ತಮ್ಮ ಒತ್ತಡ ತಂತ್ರದಿಂದ ಎಲ್ಲರನ್ನೂ ನಿರ್ಬಂಧಿಸಲು ಯತ್ನಿಸುವುದು ಅವರ ಜಾಯಮಾನವೂ ಹೌದು. ಅದಕ್ಕಾಗಿ ಯಾವ ಬಗೆಯ ತಂತ್ರವನ್ನೂ ಮಾಡಬಲ್ಲರು, ಯಾರ ಕಾಲನ್ನೂ ಒತ್ತಲೂ ಸಿದ್ಧರು. ಒಂದು ಮಾತು ಸತ್ಯ. ಆಸ್ತಿಯನ್ನು ನಿರ್ಮಿಸಲು ಬುದ್ಧಿವಂತಿಕೆ, ಸೃಜನಶೀಲತೆ, ತಾಳ್ಮೆ ಹಾಗೂ ವ್ಯವಹಾರ ಜಾಣ್ಮೆ ಇರಬೇಕು. ಲಯಾಬಿಲಿಟಿಗೆ ಅವ್ಯಾವುದೂ ಬೇಡ, ಕೇವಲ ದುಡ್ಡಿದ್ದರೆ ಸಾಕು. ಈಗಲೂ ದುಡ್ಡು ಮಾಡುವಂಥ ಬಂಗಾರದ ಮನುಷ್ಯದಂಥ ಚಿತ್ರಗಳು ಎಂದಿಗೂ ಆಸ್ತಿ.

ಈ ವಿವಾದಕ್ಕೇನು ಕಾರಣ?
ಈಗ ಕೆಲವು ಚಿತ್ರ ನಿರ್ಮಾಪಕರು ನೇರವಾಗಿ ಹೆಸರನ್ನು ಹೆಸರಿಸದಿದ್ದರೂ ಕೆಂಗಣ್ಣು ಬೀರಿರುವುದು ನಟರಾದ ಸುದೀಪ್, ರಮೇಶ್ ಅರವಿಂದ್ ಹಾಗೂ ಗಣೇಶ್ ಅವರ ಮೇಲೆ. ಇವರಲ್ಲಿ ಸುದೀಪ್ ಸುವರ್ಣ ಚಾನೆಲ್ ಗೆ ಬಿಗ್ ಬಾಸ್-೨ ರಿಯಾಲಿಟಿ ಷೋ ನಡೆಸಿಕೊಡುತ್ತಿದ್ದರೆ, ರಮೇಶ್ ಅರವಿಂದ್ ಝೀ ಕನ್ನಡ ಚಾನೆಲ್ ಗೆ ವೀಕೆಂಡ್ ವಿತ್ ರಮೇಶ್ ನಡೆಸಿಕೊಡುತ್ತಿದ್ದರೆ, ಗಣೇಶ್ ಅವರ ಷೋ ಸೂಪರ್ ಮಿನಿಟ್ ಈ ಟಿವಿ ಯಲ್ಲಿ ಆರಂಭವಾಗಿದೆ. ಈ ಮೂರು ಪ್ರೈಮ್ ಟೈಮ್ ಮತ್ತು ವೀಕೆಂಡ್ ಗಳಲ್ಲಿ ನಡೆಯುತ್ತವೆ.
ಇದು ಬಹಳ ವಿಚಿತ್ರ. ಎಲ್ಲವೂ ಮಾರುಕಟ್ಟೆ ಆಧರಿತವಾಗಿ, ಲಾಭದ ದೃಷ್ಟಿಯಿಂದಲೇ ನಡೆಯುತ್ತಿವೆ. ಈಗಿನ ಬಹುತೇಕ ಚಿತ್ರ ನಿರ್‍ಮಾಪಕರೇನೂ ಸಾಮಾಜಿಕ ಹೊಣೆಗಾರಿಕೆಯಿಂದೇನೂ ಚಿತ್ರವನ್ನೇನೂ ನಿರ್ಮಿಸುತ್ತಿಲ್ಲ. ಚಿತ್ರ ನಿರ್ಮಾಣವನ್ನೇನೂ ಸೇವೆಯೆಂದೇನೂ ಪರಿಗಣಿಸಿಲ್ಲ. ಸಿನಿಮಾ ಕ್ಷೇತ್ರವೊಂದು ಕಲೆಯ ಕ್ಷೇತ್ರವೆಂಬ ಅಭಿಪ್ರಾಯವೇ ಈಗಿಲ್ಲ. ಮೊದಲಿಂದಲೂ ಚಿತ್ರ ನಿರ್ಮಾಣ ಹಣದ ಹೂಡಿಕೆಯ ನೆಲೆಯದ್ದಾಗಿದ್ದರೂ ಚಿತ್ರ ನಿರ್ಮಾಪಕರಿಗೆ ಸಾಮಾಜಿಕ ಹೊಣೆಗಾರಿಕೆಯಿತ್ತು. ಅದನ್ನು ಅವರೇ ಸ್ವಯಂ ಆಗಿ ವಿಧಿಸಿಕೊಂಡಿದ್ದರು. ಹಾಗಾಗಿ 1960 ರಿಂದ 2000 ದವರೆಗೂ ಬಂದ ಚಿತ್ರಗಳಲ್ಲಿ ಬರಿದೇ ಲಾಭದ ಲೆಕ್ಕಾಚಾರ ಇರಲಿಲ್ಲ. ಈಗಿನ ಪರಿಸ್ಥಿತಿಯೆ ಬೇರೆ. ಚಿತ್ರದ ಮೂಲಕ ದುಡ್ಡು ಮಾಡಲು ಏನು ಬೇಕಾದರೂ ಮಾಡಲು ನಿರ್ಮಾಪಕರು ಸಿದ್ಧರಿದ್ದಾರೆಂಬ ಸ್ಥಿತಿ ಇದೆ. ಈಗ ವಿವಾದ ಎದ್ದಿರುವುದೂ ಇವರ ಅನ್ನಕ್ಕೆ ಸಮಸ್ಯೆಯಾಗುತ್ತಿದೆ ಎಂದಲ್ಲ, ಇವರ ಲಾಭಕ್ಕೆ ಸಮಸ್ಯೆಯಾಗುತ್ತಿದೆ ಎಂಬುದು. ಮತ್ತೊಬ್ಬರ ಅನ್ನವನ್ನು ಕಸಿದುಕೊಳ್ಳಬಾರದೆಂಬುದು ಸಾಮಾಜಿಕ ಬದ್ಧತೆ ಮತ್ತು ಮಾನವೀಯತೆಯೇ ಹೊರತು ಲಾಭವನ್ನಲ್ಲ. ಲಾಭವನ್ನು ಪಡೆಯುವುದು ಎಲ್ಲರ ಸ್ವಾಭಾವಿಕ ಹಕ್ಕು.

ಈಗ ಈ ಚಿತ್ರ ನಿರ್ಮಾಪಕರು ಬೊಬ್ಬೆ ಹಾಕುತ್ತಿರುವುದರ ಹಿಂದಿನ ಉದ್ದೇಶ ಸ್ಪಷ್ಟ. ಟಿವಿಯವರು ನಮ್ಮ ಲಾಭವನ್ನು ಹೊಡೆದುಕೊಳ್ಳುತ್ತಿದ್ದಾರೆಂಬುದು ಒಂದು ದೃಷ್ಟಿಯಾದರೆ, ಒಬ್ಬ ನಟನೇ ಎಲ್ಲವನ್ನೂ ದೋಚಿಕೊಳ್ಳುತ್ತಿದ್ದಾನೆಂಬ ಎಂಬ ಧೋರಣೆ ಮತ್ತೊಂದು ನೆಲೆಯದ್ದು. ಒಬ್ಬ ಹೆಸರಾಂತ ನಟ ಒಂದು ಎಪಿಸೋಡ್‌ಗೆ 50 ಲಕ್ಷ ಪಡೆದರೆ, ತಿಂಗಳ ನಾಲ್ಕು ಎಪಿಸೋಡ್ ಗೆ ಪಡೆಯುವ ಹಣ 2 ಕೋಟಿ. ಇದು ಈ ಚಿತ್ರ ನಿರ್ಮಾಪಕರ ಕಣ್ಣು ಕುಕ್ಕಿರುವುದು. ಆದರೆ, ಈ ಸಂಭಾವನೆ ಪಡೆಯುವಾಗ ಸಂಬಂಧಪಟ್ಟ ನಟ ತನ್ನ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಪಣಕ್ಕಿಟ್ಟಿರುತ್ತಾನೆ ಎಂದು ಯೋಚಿಸುವುದಿಲ್ಲ. ಒಂದು ಸಿನಿಮಾ ಸಾಮೂಹಿಕ ಪ್ರಯತ್ನವೆನಿಸಿದರೂ, ಒಂದು ರಿಯಾಲಿಟಿ ಷೋ ಒನ್ ಮ್ಯಾನ್ ಷೋ ಎನ್ನಬಹುದೇನೋ. ರಿಯಾಲಿಟಿ ಷೋನಲ್ಲಿ ಕಾನ್ಸೆಪ್ಟ್ ಎಷ್ಟು ಮುಖ್ಯವೋ ಅದನ್ನು ಪ್ರಸ್ತುತ ಪಡಿಸುವವನೂ ಅಷ್ಟೇ ಮುಖ್ಯ. ಅವನ ಮ್ಯಾನರಿಸಂ ನಿಂದ ಹಿಡಿದು ಅಪಿಯರೆನ್ಸ್‌ವರೆಗೂ ಎಲ್ಲವೂ ಲೆಕ್ಕಾಚಾರ ಹಾಕಿಯೇ ನಡೆಯಬೇಕು. ಸದಾ ಬ್ರ್ಯಾಂಡ್ ಎಂಬುದು ಮಾರುಕಟ್ಟೆ ಮೌಲ್ಯವನ್ನು ಹೆಚ್ಚಿಸಬಹುದೇ ಹೊರತು, ಮೌಲ್ಯವನ್ನು ನಿರ್ಧರಿಸುವುದಿಲ್ಲ. ಅದಕ್ಕೆ ಪ್ರತಿಭೆ ಮತ್ತು ಪರಿಶ್ರಮ ಬೇಕೇ ಬೇಕು. ಇದ್ಯಾವುದೂ ಈಗ ಉಯಿಲೆಬ್ಬಿಸಿರುವ ಚಿತ್ರ ನಿರ್ಮಾಪಕರಿಗೆ ಕೇಳಿಸುವುದೂ ಇಲ್ಲ, ಅರ್ಥವಾಗುವುದೂ ಇಲ್ಲ.
ಉಪಗ್ರಹ ವಾಹಿನಿಗಳು ಬಂದಾಗ ತಮಗೆ ಸಿನಿಮಾದಿಂದ ಹೊಡೆತವಿದೆ ಎಂದು ಅರಿತಿದ್ದವು. ಅವುಗಳಿಗೆ ದಿನವಿಡೀ ಟಿವಿ ನೋಡುವ ಮತ್ತು ಅದಕ್ಕೆ ಹೊಂದಿಕೊಳ್ಳುವಂಥ ಅಭ್ಯಾಸವನ್ನು ರೂಡಿಸಬೇಕೆಂಬ ಸವಾಲಿತ್ತು. ಅದಕ್ಕೆ ಮೊದಲು ಇದ್ದ ದೂರದರ್ಶನದಲ್ಲಿ ದಿನಪೂರ್ತಿ ಮನರಂಜನಾ ಕಾರ್ಯಕ್ರಮಗಳು ಬರುತ್ತಿರಲಿಲ್ಲ. ಮನರಂಜನಾ ಉದ್ದೇಶದಿಂದಲೇ ಬಂದ ಉಪಗ್ರಹ ವಾಹಿನಿಗಳಿಗೆ ಜನರನ್ನು ತಮ್ಮೆದುರು ಹಿಡಿದುನಿಲ್ಲಿಸಿಕೊಳ್ಳುವುದ ಅನಿವಾರ್‍ಯವಾಗಿತ್ತು. ಆ ಹಿನ್ನೆಲೆಯಲ್ಲಿ ಭಿನ್ನ ಭಿನ್ನ ಮಾರ್ಗಗಳನ್ನು ಅನುಸರಿಸಿದವು. ಮೆಗಾ ಧಾರಾವಾಹಿಗಳಿಂದ ಆರಂಭವಾಗಿ ಈಗ ರಿಯಾಲಿಟಿ ಷೋಗಳ ಹಂತಕ್ಕೆ ನಿಂತಿದೆ. ಆದರೆ, ಎಂದೂ ಕಿರುತೆರೆ ಬೆಳ್ಳಿತೆರೆಯನ್ನು ಟೀಕಿಸುತ್ತ ಬೆಳೆಯಲಿಲ್ಲ. ಪರ್‍ಯಾಯ ಮಾರ್ಗಗಳನ್ನು ಹುಡುಕಿಕೊಂಡು ಬೆಳೆಯತೊಡಗಿತು. ತನಗೆ ಎಲ್ಲಿ ಸ್ಪೇಸ್ ಇದೆ ಎನಿಸಿತೋ ಅಲ್ಲೆಲ್ಲಾ ಹೊಸ ಶೋಧನೆಗಳನ್ನು ಮಾಡಿತು. ಅಭಿರುಚಿ ಬೆಳೆಸುವುದು ಎಂದೂ ಸವಾಲಲ್ಲ, ಆದರೆ ರೂಢಿಸುವುದು ಒಂದು ಸವಾಲು.

ವಿಚಿತ್ರವೆಂದರೆ ಇದೇ ನಿರ್ಮಾಪಕ ಸಮೂಹ (ಒಟ್ಟೂ ಅರ್ಥದಲ್ಲಿ ನಿರ್ಮಾಪಕರ ಕುರಿತಾದದ್ದು) ಉಪಗ್ರಹ ವಾಹಿನಿಗಳು ಬಂದಾಗ ಅವುಗಳನ್ನು ತೆಗಳಿಕೊಂಡೇ ಅವುಗಳಿಗೆಂದೇ ಸಿನಿಮಾ ನಿರ್ಮಿಸಿದ್ದಿದೆ. ಅದರ ಹಕ್ಕುಗಳಿಂದ ಬರುವ ದುಡ್ಡಿಗಾಗಿ ಸಿನಿಮಾ ನಿರ್ಮಿಸಿ ಮಾರಿದ್ದಿದಿದೆ. ನಂತರ ಉಪಗ್ರಹವಾಹಿನಿಗಳು ಕೆಲವರ ಸಿನಿಮಾಗಳಷ್ಟನ್ನೇ (ಚೂಸಿ) ತೆಗೆದುಕೊಳ್ಳಲು ನಿರ್ಧರಿಸಿದಾಗ ಮತ್ತೆ ಇಂಥ ನಿರ್ಮಾಪಕರು ತೆಗಳತೊಡಗಿದರು, ಕೊನೆಗೆ ಸುಮ್ಮನಾದರು. ಐಪಿಎಲ್ ಕ್ರಿಕೆಟ್ ಪಂದ್ಯಾವಳಿ ಬಂದಾಗಲೂ ಇದೇ ಜನ ಅದಕ್ಕೂ ತೆಗಳತೊಡಗಿದರು. ಅದರಿಂದ ನಮ್ಮ ಥಿಯೇಟರುಗಳಿಗೆ ಜನ ಬರುತ್ತಿಲ್ಲ ಎಂದು ದೂರತೊಡಗಿದರು. ಇದೊಂದು ಬಗೆಯ ಫೋಬಿಯಾ. ರಸ್ತೆ ಮೇಲೆ ಹೋಗುವವರೆಲ್ಲಾ ನನಗೆ ಡಿಕ್ಕಿ ಹೊಡೆಯಲೆಂದೇ ಬರುತ್ತಿದ್ದಾರೆ ಎಂದು ಯೋಚಿಸುವವನ ಸ್ಥಿತಿಯಿದು.

ಅರ್ಥವಿಲ್ಲದ ವಾದ
ಅವರಷ್ಟಕ್ಕೇ ಅವರು ನಡೆಸಿಕೊಡಲಿ, ಯಾಕೆ ಬೇರೆ ನಟರನ್ನು ಕರೆಸಬೇಕು? ಎಂಬುದು ಎಸ್ ವಿ ರಾಜೇಂದ್ರಸಿಂಗ್ ಬಾಬು ಅಂಥವರ ವಾದ. ವಿಚಿತ್ರವೆಂದರೆ ಸಾಮಾನ್ಯವಾಗಿ ರಿಯಾಲಿಟಿ ಷೋಗಳ ಕಾನ್ಸೆಪ್ಟ್ ಗಳೇ ಹಾಗೇ. ಬರಿದೇ ಜನ ಸಾಮಾನ್ಯನ ಎದುರು ಸುತ್ತುವುದಿಲ್ಲ. ಒಂದಿಷ್ಟು ಜನ ಸಾಮಾನ್ಯರು, ಮತ್ತೊಂದಿಷ್ಟು ಸೆಲಬ್ರಿಟಿಗಳು..ಹೀಗೆ ಎಲ್ಲರನ್ನು ಒಳಗೊಂಡೇ ರೂಪಿಸಲಾಗಿರುತ್ತದೆ. ಹಾಗಾಗಿ ಅಲ್ಲಿ ಎರಡೂ ಎಲಿಮೆಂಟ್ಸ್ (ಅಂಶಗಳು) ಮುಖ್ಯ. ಇದರೊಂದಿಗೆ ಹೀಗೇ ಹೇಳುವಂಥ ನಿರ್ದೇಶಕರೂ ಪ್ರತಿ ಚಿತ್ರಕ್ಕೆ ಪಾಪ್ಯುಲರ್ ನಟನನ್ನೇ ಯಾಕೆ ಅರಿಸುತ್ತಾರೆ, ಹೊಸ ನಟನನ್ನು ಪರಿಚಯಿಸುವ ರಿಸ್ಕ್ ಯಾಕೆ ತೆಗೆದುಕೊಳ್ಳುವುದಿಲ್ಲ. ಇದೇ ರಾಜೇಂದ್ರ ಸಿಂಗ್ ಬಾಬು ಅವರ ಬಹುತೇಕ ಚಿತ್ರಗಳಲ್ಲಿ ವಿಷ್ಣುವರ್ಧನ್ ಅವರೇ ನಾಯಕ ನಟರಾಗಿದ್ದರು, ಯಾಕೆ? ಹೊಸದನ್ನು ತೆಗೆದುಕೊಳ್ಳುವುದು ಯಾವಾಗಲೂ ರಿಸ್ಕ್ ಫ್ಯಾಕ್ಟರ್. ಇವರಿಗೆ ಮಾತ್ರ ತಮ್ಮ ಚಿತ್ರಗಳಿಗೆ ಜನರನ್ನು ಚಿತ್ರಮಂದಿರಗಳಿಗ ಸೆಳೆಯುವಂಥ ಚುಂಬಕಶಕ್ತಿಯ ನಟರೇ ಬೇಕು. ಒಬ್ಬ ಜನಪ್ರಿಯ ನಟನ ನೆರಳಿಂದ ದೂರಸರಿಯಲು ಇಚ್ಛಿಸದ ಮತ್ತು ರಿಸ್ಕ್ ತೆಗೆದುಕೊಳ್ಳದ ಮಂದಿ ಹೀಗೆಲ್ಲಾ ಮಾತನಾಡಿದಾಗ ಕ್ಷುಲ್ಲಕವೆನಿಸುದಿಲ್ಲವೇ?

ಅವರಂತೂ ತಣ್ಣಗೆ !
ಈ ಕುರಿತು ರಮೇಶ್ ಅರವಿಂದ್ ಅಂತೂ ತಣ್ಣಗಿದ್ದಾರೆ. ಪ್ರತಿಯೊಬ್ಬನಿಗೂ ತಮ್ಮ ಪ್ರತಿಭೆಯನ್ನು ತೋರಿಸಲು ಅವಕಾಶ ಇದ್ದೇ ಇರುತ್ತದೆ ಎಂಬುದು ನನ್ನ ನಂಬಿಕೆ. ಹಾಗೂ ಎಲ್ಲರೂ ತಮ್ಮ ಪ್ರತಿಭೆಯನ್ನು ಹೊರಹಾಕಲು ಅವಕಾಶವನ್ನು ಹುಡುಕಿಕೊಳ್ಳಬೇಕು. ಅದು ಅವನಲ್ಲೇ ಸೊರಗಿ ಹೋಗಬಾರದು. ಅದಕ್ಕೆ ಪ್ರತಿಯೊಬ್ಬರೂ ಪ್ರೋತ್ಸಾಹ ನೀಡಬೇಕು. ಇಲ್ಲವಾದರೂ ಅಡ್ಡಿ ಹಾಕುವುದು ತರವಲ್ಲ. ಎಲ್ಲರಿಗೂ ಕೆಲಸ ಮಾಡುವ ಹಕ್ಕು ಸಂವಿಧಾನದಲ್ಲಿ ನೀಡಲಾಗಿದೆ. ನನ್ನ ಕೆಲಸ ನನಗೆ ಎಂಬುದು ಅವರ ನಿಚ್ಚಳವಾದ ನಿಲುವು.
ಸುದೀಪರಂತೂ ಈ ಸಂಬಂಧ ನನಗೆ ಯಾವುದೇ ಪತ್ರ ಬಂದಿಲ್ಲ. ನಾನೇಕೆ ತಲೆ ಕೆಡಿಸಿಕೊಳ್ಳಲಿ’ ಎಂಬುದು. ಗಣೇಶರಂತೂ ಚಿತ್ರೀಕರಣದಲ್ಲಿ ಬ್ಯುಸಿ. ಅವರ ಪತ್ನಿ ಶಿಲ್ಪಾ ಅವರೂ ಸುದೀಪರಂತೆ, ಸದ್ಯಕ್ಕೆ ಅದರ ಬಗ್ಗೆ ಮಾತನಾಡಿ ಪ್ರಯೋಜನವಿಲ್ಲ ಎನ್ನುತ್ತಾರೆ.

ಬೇರೆ ಭಾಷೆಗಳಲ್ಲಿ ?
ನಟರು ರಿಯಾಲಿಟಿ ಷೋಗಳಲ್ಲಿ ನಟಿಸುವುದು ಕನ್ನಡಕ್ಕೆ ಸೀಮಿತವಾದುದೇನೂ ಅಲ್ಲ. ಹಿಂದಿಯಲ್ಲಿ ಅಮಿತಾಬ್ ಬಚ್ಚನ್, ಶಾರೂಕ್ ಖಾನ್, ಅಮೀರ್ ಖಾನ್, ತಮಿಳಿನಲ್ಲಿ ಸೂರ್‍ಯ, ಕನ್ನಡದಲ್ಲೂ ಪುನೀತ್ ಸಹ ನಡೆಸಿಕೊಟ್ಟವರೇ. ಆಗ ಮತ್ತು ಅಲ್ಲೆಲ್ಲಾ ವಿರೋಧವಿಲ್ಲದ್ದು ನಮ್ಮಲ್ಲೇಕೆ ಎಂಬುದೇ ಅಚ್ಚರಿ. ಜೊತೆಗೆ ಇಂತಹ ಬಾಲಿಶವಾದ ವಾದ ಮತ್ತು ವಿವಾದಗಳು ಕನ್ನಡ ಚಿತ್ರರಂಗದ ರಾಜಧಾನಿ ಗಾಂಧಿ ನಗರದಲ್ಲೇ ಹುಟ್ಟಬೇಕೇ ಹೊರತು ಬಾಲಿವುಡ್ಡಿನ ಮುಂಬಯಿಯಲ್ಲಲ್ಲ.

ಪ್ರೈಮ್ ಟೈಮ್ ಮತ್ತು ವೀಕೆಂಡ್ ಕಾನ್ಸೆಪ್ಟ್
ಈ ಪ್ರೈಮ್ ಟೈಮ್ ಮತ್ತು ವೀಕೆಂಡ್ ಕಾನ್ಸೆಪ್ಟ್ ಮತ್ತೊಂದು ಗೊಂದಲವನ್ನು ತಂದಿರುವಂಥ ಸಂಗತಿ. ಈ ನಿರ್ಮಾಪಕರೂ ಈಗ ಆಗ್ರಹಿಸುತ್ತಿರುವುದು ಬೇರೆ ದಿನಗಳಲ್ಲಿ ಏನಾದರೂ ಮಾಡಿಕೊಳ್ಳಿ, ಪ್ರೈಮ್ ಟೈಮ್ ಮತ್ತು ವೀಕೆಂಡ್ ಗಳಲ್ಲಿ ಬೇಡ ಎಂಬುದು. ಇದು ಎಷ್ಟು ಕ್ಷುಲ್ಲಕವಾದ ವಾದವೆಂದರೆ, ಭಾನುವಾರ ಊರಿನಲ್ಲಿ ಸಂತೆ ನಡೆಯುವಾಗ ಎಲ್ಲಾ ವ್ಯಾಪಾರಸ್ಥರು ಹೋಗಿ ಟೆಂಟ್ ಹಾಕಿ ವ್ಯಾಪಾರ ಮಾಡುವುದು ರೂಢಿ ಮತ್ತು ಸ್ವಾಭಾವಿಕವಾದ ನಡವಳಿಕೆ. ಯಾರೂ ಯಾರನ್ನೂ ದೂರುವುದಿಲ್ಲ, ತೆಗಳುವುದಿಲ್ಲ. ತಮ್ಮ ತಮ್ಮ ವಸ್ತುಗಳನ್ನು ತಮಗೆ ಸಿಕ್ಕ ಜಾಗದಲ್ಲಿ ಇಟ್ಟು ವ್ಯಾಪಾರ ಮಾಡಿಕೊಂಡು ಬರುತ್ತಾರೆ. ಇದು ಒಬ್ಬ ವ್ಯಾಪಾರಸ್ಥನ ರೀತಿ. ಅದನ್ನು ಬಿಟ್ಟು ಒಬ್ಬ ವ್ಯಾಪಾರಸ್ಥ ಭಾನುವಾರ ಹೋಗುತ್ತಾನೆಂದು, ಉಳಿದವರಿಗೆ ಸೋಮವಾರ ಬರಬೇಕೆಂದು ಷರತ್ತು ವಿಧಿಸುವುದಿಲ್ಲ ಹಾಗೂ ಹಾಗೇನಾದರೂ ಬಂದರೆ ಬಹಿಷ್ಕಾರ ಹಾಕುವಂಥ ಮೂರ್ಖತನವನ್ನಂತೂ ಪ್ರದರ್ಶಿಸುವುದಿಲ್ಲ. ನಮ್ಮ ನಿರ್ಮಾಪಕರ ಕಥೆ ಹೀಗೇ ಆಗಿದೆ. ಹಾಗಾಗಿ ಟಿವಿಯವರೂ ವ್ಯಾಪಾರಕ್ಕೇ ಕುಳಿತಿರುವಾಗ ಅವರೇಕೆ ಸೋಮವಾರ ಬರಬೇಕು?
ರಿಯಾಲಿಟಿ ಷೋಗಳ ಅಸಲಿತನ, ಕಾನ್ಸೆಪ್ಟ್‌ಗಳ ಎರವಲುತನ ಅವೆಲ್ಲವೂ ಬೇರೆಯದ್ದೇ. ಅದರ ಕುರಿತು ಬೇರೆಯೇ ಚರ್ಚೆ ನಡೆಯಬೇಕಿದೆ.