ಗೋವಾ ಚಲನಚಿತ್ರೋತ್ಸವವನ್ನು ಹಿನ್ನೆಲೆಯಾಗಿಟ್ಟುಕೊಂಡು, ಡಿ. 20 ರಿಂದ  ಆರಂಭವಾಗುವ 5 ನೇ ಬೆಂಗಳೂರು ಚಲನಚಿತ್ರೋತ್ಸವದ ಬಗ್ಗೆ ಕೆಲವು ನೋಟಗಳನ್ನು ಹರಿಸಿದ್ದಾರೆ ಅರವಿಂದ ನಾವಡರು. ಬೆಂಗಳೂರು ಮತ್ತೊಂದು ಚಿತ್ರೋತ್ಸವಕ್ಕೆ ಊರು ಸಜ್ಜಾಗುತ್ತಿರುವ ಹಿನ್ನೆಲೆಯಲ್ಲಿ ಒಂದು ಒಳ್ಳೆಯ ಚರ್ಚೆಗೆ ಒಳಗು ಮಾಡಲೆಂದೇ ಈ ಲೇಖನವನ್ನು ಪ್ರಕಟಿಸಲಾಗುತ್ತಿದೆ. ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ.

ಬೆಂಗಳೂರು 5 ನೇ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಸಜ್ಜಾಗಿರುವ ಹೊತ್ತಿದು. ಕರ್ನಾಟಕ ಚಲನಚಿತ್ರ ಅಕಾಡೆಮಿಯ ಎರಡನೇ ಚಿತ್ರೋತ್ಸವ. ಈ ಮೊದಲ ಮೂರು ಚಿತ್ರೋತ್ಸವಗಳು ಸಂಘಟಿತವಾಗಿದ್ದು ಸಿನಿಮಾಸಕ್ತರೇ. ಸುಚಿತ್ರಾ ಫಿಲಂ ಸೊಸೈಟಿಯನ್ನು ಕೇಂದ್ರವಾಗಿಟ್ಟುಕೊಂಡು, ಒಂದಿಷ್ಟು ಚಿತ್ರೋತ್ಸಾಹಿಗಳು ಸೇರಿ ಸಂಘಟಿಸಿದ್ದರು.

ವಿವಿಧ ರೀತಿಯ ಹೊಸ ಪ್ರಯತ್ನಗಳಿಂದಹಿಡಿದು, ಬೆಂಗಳೂರಿನಲ್ಲಿ ಚಿತ್ರೋತ್ಸವದ ಸಂಭ್ರಮ ಶುರುವಾಗಿದ್ದೇ ಆಗ. ಈಗ ಐದರ ಸಂಭ್ರಮ. ಚಿತ್ರೋತ್ಸವ ವ್ಯವಸ್ಥೆಗೆ ಈಗ ಸರಕಾರಿ ರಕ್ಷಣೆ ದೊರೆತಿದೆ. ಇದು ಒಂದು ರೀತಿ ಸುಖ, ಮತ್ತೊಂದು ರೀತಿಯಲ್ಲಿ ದುಃಖ.

ಖ್ಯಾತ ನಿರ್ದೇಶಕ ಆಡೂರು ಗೋಪಾಲಕೃಷ್ಣನ್ ಅವರನ್ನು ಸಂದರ್ಶಿಸುತ್ತಿರುವ ರತ್ನೋತ್ತಮ ಸೇನ್ ಗುಪ್ತ. (photo-A.Navada)
ಖ್ಯಾತ ನಿರ್ದೇಶಕ ಆಡೂರು ಗೋಪಾಲಕೃಷ್ಣನ್ ಅವರನ್ನು ಸಂದರ್ಶಿಸುತ್ತಿರುವ ರತ್ನೋತ್ತಮ ಸೇನ್ ಗುಪ್ತ. (photo-A.Navada)

 

 

 

 

 

 

 

 

 

 

 

ಈ ಎರಡನ್ನೂ (ಸುಖ ಮತ್ತು ದುಃಖ) ಕಳೆದ ಬಾರಿ ನಾಲ್ಕನೇ ಚಿತ್ರೋತ್ಸವದಲ್ಲಿ ಅನುಭವಿಸಿದ್ದೇವೆ. ಹಾಗಾಗಿ, ಆ ದುಃಖವನ್ನು ಈ ಬಾರಿ ಕಡಿಮೆ ಮಾಡುವುದು ಹೇಗೆ ಎಂಬುದೆ ಮುಖ್ಯ ಚರ‍್ಚೆಯ ಸಂಗತಿಯಾಗಬೇಕೆಂಬುದು ನಮ್ಮ ಅಪೇಕ್ಷೆ.

ಕೆಲವು ಅಪಸವ್ಯಗಳು ಎಂಥ ಚಿತ್ರೋತ್ಸವಗಳನ್ನೂ ಬಿಡುವುದಿಲ್ಲವೆನ್ನುವುದಕ್ಕೆ ಮೊನ್ನೆ ತಾನೇ ಗೋವಾದಲ್ಲಿ ಮುಗಿದ 43 ನೇ ಅಂತಾರಾಷ್ಟ್ರೀಯ ಚಿತ್ರೋತ್ಸವವೂ ಸಾಬೀತು ಪಡಿಸಿತು. ಬಹಳ ಪ್ರಾಥಮಿಕ ಸಂಗತಿಗಳಲ್ಲಿ ಎಚ್ಚರಿಕೆ ವಹಿಸದಿದ್ದುದು ಸ್ಪಷ್ಟ. ಇದೇ ತಪ್ಪು ಅಥವಾ ಅಪಸವ್ಯ ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದಿದ್ದ ನಾಲ್ಕನೇ ಚಿತ್ರೋತ್ಸವದಲ್ಲಿ ಘಟಿಸಿತ್ತು. ಕೆಲವು ಹೊಸ ಸಂಗತಿಗಳತ್ತ ಗೋವಾ ಚಿತ್ರೋತ್ಸವ ಮುಖ ಮಾಡಿದ್ದೂ ಸುಳ್ಳಲ್ಲ. ಆ ಪೈಕಿ ಕೆಲವನ್ನೂ ಈ ಐದನೇ ಚಿತ್ರೋತ್ಸವಕ್ಕೆ ಅಳವಡಿಸಿಕೊಳ್ಳಬಹುದು, ಅದರಲ್ಲಿ ಎರಡು ಮಾತಿಲ್ಲ.
ಗೋವಾದ ಚಿತ್ರೋತ್ಸವ ಅಂತಾರಾಷ್ಟ್ರೀಯ ಖ್ಯಾತಿ. ಪ್ರಥಮ ಬಾರಿಗೆ ೧೦ ಸಾವಿರಕ್ಕೂ ಹೆಚ್ಚು ಮಂದಿ ಪ್ರತಿನಿಧಿಗಳು ನೋಂದಾಯಿಸಿಕೊಂಡಿದ್ದರು. ೨೫೦ ಕ್ಕೂ ಹೆಚ್ಚು ಚಿತ್ರಗಳು, ವಿವಿಧ ವಿಭಾಗಗಳೆಲ್ಲವೂ ಇದ್ದವು. ಮೊದಲ ದಿನ ಹೊರತುಪಡಿಸಿದರೆ, ಉಳಿದ ದಿನ ಎಲ್ಲ ಚಿತ್ರಮಂದಿರಗಳಲ್ಲೂ ಸರಿಯಾದ ಸಮಯಕ್ಕೆ ಚಿತ್ರ ಪ್ರದರ್ಶನ ಶುರುವಾಯಿತು.

ತಪ್ಪಾದದ್ದು ಎಲ್ಲಿ ?
ತಪ್ಪಾದದ್ದು ಎಲ್ಲೆಂದರೆ, ಭಾರತೀಯ ಸಿನಿಮಾಕ್ಕೆ ನೂರು ವರ‍್ಷ ತುಂಬಿದ ವಿಭಾಗದಲ್ಲಿ. ಅದಕ್ಕೆ ಆಯ್ಕೆ ಮಾಡಿದ ಕೆಲವು ಚಿತ್ರಗಳ ಪ್ರಿಂಟ್ ಸರಿಯಿರಲಿಲ್ಲ. ಅದನ್ನು ಮೊದಲು ಪರಿಶೀಲಿಸಲಾಗಿತ್ತೋ, ಇಲ್ಲವೋ ಗೊತ್ತಿಲ್ಲ (ಅದಕ್ಕೆ ಉತ್ತರಿಸಲು ಯಾರೂ ಇರುವುದಿಲ್ಲ). ಚಿತ್ರ ಶುರುವಾಗಿ ಅರ್ಧ ಗಂಟೆಗೆ ನಿಂತಿತು (ಸ್ಟ್ರಕ್), ಮತ್ತೆ ಶುರು..ಮತ್ತೆ ಸ್ತಬ್ಧ. ಕೊನೆಗೆ ಬೇಸರವಾಗಿ ಹೊರಟು ಹೋದವರೇ ಬಹುತೇಕ. ಮಾರ್ಕ್ವೆಜ್ ಪ್ಯಾಲೇಸ್ ೧ ರಲ್ಲಿ ಪ್ರದರ್ಶಿಸಿದ ಮೃಣಾಲ್ ಸೇನ್ ರ ಬಿಷ್ಣೋಯ್ ವೈಶಾಖ್ ಚಿತ್ರವೇ ಇದಕ್ಕೆ ಸ್ಪಷ್ಟ ಉದಾಹರಣೆ.
ಬೆಂಗಳೂರು ಚಿತ್ರೋತ್ಸವದಲ್ಲೂ ಇದೇ ರೀತಿಯ ವಿಭಾಗ (ಭಾರತೀಯ ಸಿನಿಮಾ ನೂರು : ನೆನಪು)ದಲ್ಲಿ ೧೪ ಚಿತ್ರ ಪ್ರದರ್ಶನಗಳಿವೆ. ಅಲ್ಲಿ ವಹಿಸಬೇಕಾದ ಎಚ್ಚರಿಕೆ ಇದು.

ಮಾಸ್ಟರ್ ಕ್ಲಾಸಸ್
ಚಿತ್ರೋತ್ಸಾಹಿಗಳು ಸಾಮಾನ್ಯವಾಗಿ ಚಿತ್ರೋತ್ಸವದಲ್ಲಿ ಪಾಲ್ಗೊಳ್ಳುವುದು ಬರಿದೇ ಚಿತ್ರವನ್ನು ನೋಡುವುದಕ್ಕಲ್ಲ. ಇಂದು ಚಿತ್ರವನ್ನು ಪಡೆಯಲು ಮತ್ತು ವೀಕ್ಷಿಸಲು ಬೇಕಾದಷ್ಟು ಅವಕಾಶಗಳು ಒದಗಿ ಬಂದಿವೆ. ಗ್ಲೋಬಲ್ ವಿಲೇಜ್ ಕಲ್ಪನೆಯಲ್ಲಿ ಚಿತ್ರಗಳನ್ನು ಪಡೆಯುವುದು ದೊಡ್ಡ ಸಂಗತಿಯಾಗಿಯೇ ಉಳಿದಿಲ್ಲ. ಅಂತಾರಾಷ್ಟ್ರೀಯ ವಿಭಾಗದ ಸ್ಪರ್ಧೆಯಲ್ಲಿ ಭಾಗವಹಿಸುವ ಕೆಲವು ಚಿತ್ರಗಳೂ ಕೆಲವೆ ತಿಂಗಳಲ್ಲಿ ಇಂಟರ್ ನೆಟ್ ನಲ್ಲಿ ಲಭ್ಯವಾಗುತ್ತಿದೆ. ಇಂಥ ಸಂದರ್ಭದಲ್ಲಿ ಅಲ್ಲಿಗೆ ಬರುವುದು ಸಂಭ್ರಮಕ್ಕೆ, ಒಂದಿಷ್ಟು ಚಿತ್ರೋತ್ಸಾಹಿಗಳು ಸೇರಲು, ಸಿನಿಮಾಗಳ ಕುರಿತು ಚರ್ಚಿಸಲು, ಅಭಿಪ್ರಾಯ ವಿನಿಮಯ ಮಾಡಿಕೊಳ್ಳಲು ಹಾಗೂ ತಮ್ಮ ನೆಚ್ಚಿನ ನಿರ್ದೇಶಕರು ಭಾಗವಹಿಸಿದ್ದರೆ ಅವರೊಂದಿಗೆ ಹರಟಲು.

ಇಷ್ಟಕ್ಕೇ ಮುಗಿಯುವುದಿಲ್ಲ. ಇದರೊಂದಿಗೆ ಸಿನಿಮಾ ಮಾಧ್ಯಮದ ಕುರಿತ ಜ್ಞಾ ನವನ್ನು ವಿಸ್ತರಿಸಿಕೊಳ್ಳಲು. ಈ ನೆಲೆಯಲ್ಲಿ ಮಾಸ್ಟರ್ ಕ್ಲಾಸಸ್ ಚೆನ್ನಾದ ಪರಿಕಲ್ಪನೆ. ಗೋವಾದ ಚಿತ್ರೋತ್ಸವದಲ್ಲಿ ಇದ್ದ ಮಾಸ್ಟರ್ ಕ್ಲಾಸಸ್ ಎಷ್ಟು ವಿಚಿತ್ರವಾಗಿತ್ತೆಂದರೆ (ಸಂಕಲನಕಾರ ರಸೂಲ್ ಕುಟ್ಟಿಯ ಕ್ಲಾಸ್ ಹೊರತುಪಡಿಸಿ)ಬಹುತೇಕ ಮೆಗಾ ಸಂದರ್ಶನಗಳು.

ಹಿರಿಯ ನಿರ್ದೇಶಕ ಶ್ಯಾಂ ಬೆನಗಲ್ ರ ಕ್ಲಾಸ್. ತಮ್ಮ ಚಿತ್ರಗಳ ಬಗ್ಗೆ, ಅದರಲ್ಲಿ ಕೈಗೊಂಡ ಚಿತ್ರಿಕೆ (ಶಾಟ್) ಗಳ ಬಗ್ಗೆ, ಚಿತ್ರೀಕರಣ ಸ್ಥಳದಲ್ಲಿ ಎದುರಾಗಬಹುದಾದ ಸಂಕಟಗಳ ಬಗ್ಗೆ..ಹೀಗೆ ಹಲವು ಸಂಗತಿಗಳ ಬಗ್ಗೆ ಹೇಳಬಹುದೆಂದು ಎಲ್ಲರೂ ಸೇರಿದ್ದರು. ನಾನೂ ಸಹ. ಆದರೆ, ಆಗಿದ್ದೇ ಬೇರೆ. ಹಿರಿಯ ವಿಮರ್ಶಕಿಯೊಬ್ಬರು, ಅವರನ್ನು ಸಂದರ್ಶಿಸುತ್ತಾ ಕುಳಿತರು. ಅವರ ಸಂದರ್ಶನ ಮುಗಿಯುವಷ್ಟರಲ್ಲೇ ಸಾಕಷ್ಟು ಸಮಯವಾಗಿತ್ತು. ಜನರೂ ಖಾಲಿಯಾಗಿದ್ದರು. ಇದೇ ಸ್ಥಿತಿ ಹಿರಿಯ ನಿರ್ದೇಶಕ ಆಡೂರು ಗೋಪಾಲಕೃಷ್ಣನ್ ರ ಸಂಗತಿಯಲ್ಲೂ ಆಗಿದ್ದು. ಆದರೆ, ಇದಕ್ಕೆ ಅಪವಾದವೆಂಬಂತೆ ರಸೂಲ್ ಕುಟ್ಟಿ ಕೆಲವು ಪ್ರಾತ್ಯಕ್ಷಿಕೆಗಳ ಮೂಲಕ ವಿವರಿಸಿದ್ದು. ಇದು ನಿಜವಾಗಲೂ ಯೋಗ್ಯವೆನ್ನಿಸುವಂತಿತ್ತು. ಇವರ ಸಂದರ್ಶನಗಳು ಸಾಕಷ್ಟು ಬಾರಿ ಸಿಗುತ್ತವೆ, ಆದರೆ ಅವರೊಂದಿಗೆ ಮಾತನಾಡಲು, ಅವರಿಂದ ಮಾಹಿತಿ ಪಡೆಯಲು ಸಿಗುವ ಅವಕಾಶ ಕಡಿಮೆ. ಪ್ರಾತ್ಯಕ್ಷಿಕೆಯುಳ್ಳ ತರಗತಿಗಳಾಗಿ ಮಾರ್ಪಟ್ಟರೆ ಮಾಸ್ಟರ್ ಕ್ಲಾಸಸ್ ನಿಜವಾಗಲೂ ಉಚಿತ.

ಬೆಂಗಳೂರು ಚಿತ್ರೋತ್ಸವದಲ್ಲೂ ಮಾಸ್ಟರ್ ಕ್ಲಾಸಸ್ ಕಲ್ಪನೆ ಜಾರಿಗೆ ಬರುವ ಸಂಭವವಿದೆ ಈ ಬಾರಿ. ಅಲ್ಲೂ ವಹಿಸಬೇಕಾದ ಎಚ್ಚರಿಕೆಯೆಂದರೆ, ಅದು ಮತ್ತೊಂದು ಮೆಗಾ ಸಂದರ್ಶನವಾಗದಂತೆ ತಡೆಯುವುದು.
ಗೋವಾ ಚಿತ್ರೋತ್ಸವದಲ್ಲಿ ಏನಿರಲಿಲ್ಲ ? ಎಲ್ಲವೂ ಇತ್ತು. ಆದರೂ ಏನೂ ಇರಲಿಲ್ಲ. ಇಂಥದೊಂದು ಭಾವ ಕಾಡಿದ್ದು ಸುಳ್ಳಲ್ಲ. ಒಳ್ಳೆಯ ಚಿತ್ರಗಳಿರಲಿಲ್ಲವೇ ? ಇತ್ತು. ಆದರೆ ಒಂದೂ ಕಾಡುವಂಥದ್ದಿರಲಿಲ್ಲ, ಸದಾ ನೆನಪಿನಲ್ಲಿಟ್ಟುಕೊಳ್ಳುವಂಥದ್ದು ಎಂಬ ಸಿನಿಮಾಗಳೂ ಇದ್ದದ್ದೂ ಕಡಿಮೆ. ಇಡೀ ಉತ್ಸವ ಮುಗಿದ ಮೇಲೆ ಈ ಸಿನಿಮಾ ಮತ್ತೊಮ್ಮೆ ನೋಡಬೇಕು ಎಂದುಕೊಳ್ಳುವಂಥದ್ದೂ ಸಿಗಲಿಲ್ಲ. ಆಯ್ಕೆ ಇನ್ನಷ್ಟು ಸ್ಪಷ್ಟ ಮತ್ತು ಗಟ್ಟಿಯಾಗಿದ್ದರೆ ಚೆನ್ನಾಗಿರುತ್ತಿತೇನೋ? ಹಾಗಾಗಿ ಬೆಂಗಳೂರು ಚಿತ್ರೋತ್ಸವದಲ್ಲೂ ಅಷ್ಟೇ. ಉತ್ಸವ ಎಂದರೆ ಜೊಳ್ಳುಗಳು ಇದ್ದದ್ದೇ, ಜೊತೆಗೆ ಒಂದಿಷ್ಟು ಕಾಳುಗಳೂ ಇದ್ದರೆ ಚೆಂದ.

ಈ ಚಿತ್ರೋತ್ಸವ ಇಂದಿನದ್ದಲ್ಲ, 43 ವರ್ಷಗಳ ಇತಿಹಾಸವಿದೆ. ಇನ್ನು, ಗೋವಾದಲ್ಲಿ ಶುರುವಾಗಿದ್ದು ೨೦೦೪ ರಲ್ಲಿ. ಈ ಉತ್ಸವದ ಹಿಂದೆ ದೊಡ್ಡ ವ್ಯವಸ್ಥೆಯಿದೆ. ಚಿತ್ರೋತ್ಸವ ನಿರ್ದೇಶನಾಲಯವೆಂಬ ಸರಕಾರಿ ವ್ಯವಸ್ಥೆಯಿದೆ. ಹೀಗೆಲ್ಲಾ ಇದ್ದರೂ ಕ್ಷುಲ್ಲಕ ತಪ್ಪುಗಳು ಹೇಗೆ ಘಟಿಸುತ್ತವೆಯೋ ಗೊತ್ತಾಗದು. ಈ ಉತ್ಸವದಲ್ಲೂ ಒಂದು ಯಾಂತ್ರಿಕ ಕ್ರಿಯೆಯಂತೆ ಉತ್ಸವ ನಡೆಯಿತೇ ಹೊರತು, ಅದೊಂದು ತಾದಾತ್ಮ್ಯಗೊಳ್ಳುವ ಸಂಗತಿಯಾಗಿ ಮಾರ್ಪಡಲಿಲ್ಲ. ಮೆರವಣಿಗೆ ಶುರುವಾಗುವುದಷ್ಟೇ ಬಾಕಿ, ನಂತರ ನಡೆದುಹೋಗುತ್ತದೆ, ಅದು ಯಾರಿಗೂ ಕಾಯುವುದಿಲ್ಲ ಎಂಬ ನಿಲುವು ಒಂದು ಪ್ರಕ್ರಿಯೆಯ ನಿರಂತರತೆಯನ್ನಷ್ಟೇ ಹೇಳುತ್ತದೆಯೇ ಹೊರತು, ಅದರ ಪೂರ್ಣಾಂಗ ಸುಂದರತೆಯನ್ನೇನೂ ಅಲ್ಲ. ಉತ್ಸವ ಕಣ್ತುಂಬಿಕೊಳ್ಳಬೇಕಾದರೆ ಪೂರ್ಣಾಂಗ ಸುಂದರತೆ ಇರಬೇಕು. ಪೂರ್ಣಾಂಗ ಸುಂದರತೆ ಎನ್ನುವುದು ಒಂದು ಆದರ್ಶ ಕಲ್ಪನೆ. ಆದರೆ, ಆ ದಾರಿಯತ್ತ ಹೋಗಲು ಪ್ರಚೋದಿಸುವ ಅಂಶವೂ ಹೌದು.

ಈ ಬಾರಿಯ ಉತ್ಸವದಲ್ಲಿ ಚಿತ್ರೋತ್ಸವ ನಿರ್ದೇಶನಾಲಯದೊಳಗಿನ ಕೆಲವು ಗೊಂದಲಗಳು, ಎಂಟರ್ ಟೈನ್ ಮೆಂಟ್ ಸೊಸೈಟಿಯೊಳಗಿನ ಗೊಂದಲಗಳೂ ತಮ್ಮ ಅರಿವಿಲ್ಲದೇ ಉತ್ಸವದ ಮೇಲೆ ತಮ್ಮ ಛಾಯೆಯನ್ನು ಬೀರಿದ್ದವು. ಅದರ ಪರಿಣಾಮ, ಮೆರವಣಿಗೆ ನಡೆಯುತ್ತಿತ್ತು, ದೇವರು ಇದ್ದಂತೆ ಭಾಸವಾಗುತ್ತಿತ್ತು . ಭಕ್ತಾದಿಗಳು ಇದ್ದಂತೆಯೂ ತೋರುತ್ತಿದ್ದರು, ಇಲ್ಲದಂತೆಯೂ ತೋರುತ್ತಿದ್ದರು. ಯಾರನ್ನು ಕೇಳುವಂತಿರಲಿಲ್ಲ. ಒಂದರ್ಥದಲ್ಲಿ ಹೇಳುವುದಾದರೆ, ಗ್ರಾಮದಲ್ಲಿ ಮುಖಂಡರ ಎರಡು ಗುಂಪುಗಳ ನಡುವೆ ಗದ್ದಲವುಂಟಾಗಿ, ಪೊಲೀಸರ ಮಧ್ಯಸ್ಥಿಕೆಯಲ್ಲಿ ಉತ್ಸವ ನಡೆದರೆ ಹೇಗಿರುತ್ತೋ ? ಹಾಗೆಯೇ ಇತ್ತು.

ಇಷ್ಟೊಂದು ಅಧಿಕಾರಿಗಳು, ಇಷ್ಟೊಂದು ನೌಕರರು ವ್ಯವಸ್ಥೆ ಇರುವಾಗ, ಇನ್ನಷ್ಟು ಎಚಚರಿಕೆ ವಹಿಸಲು ಸಾಧ್ಯವಿಲ್ಲವೇ ? ಈ ಪ್ರಶ್ನೆ ಏಕೆ ಕೇಳುತ್ತಿದ್ದೇನೆಂದರೆ, ಕೆಲವು ಪ್ರಮುಖ ಅಧಿಕಾರಿಗಳು, ಉತ್ಸವದ ನಿರ್ದೇಶಕರು ನಿತ್ಯವೂ ಇದ್ದ ವಿಶೇಷ ಆಕರ್ಷಣೆಯ ಕಾರ‍್ಯಕ್ರಮಗಳತ್ತ ಗಮನಹರಿಸುತ್ತಿದ್ದರು. ಅತ್ಯಂತ ವಿಷಾದದ ಸಂಗತಿಯೆಂದರೆ, ನಿಮ್ಮ ಮುಂದೆ ಕಲಾವಿದನೊಬ್ಬ ತನ್ನ ಸೃಜನಶೀಲಕೃತಿಯನ್ನು ಹಿಡಿದುಕೊಂಡು ನಿಂತಿರುತ್ತಾನೆ. ಆಗ, ಪಕ್ಕದಮನೆಯವರಿಂದಲೋ ಅಥವಾ ಮನೆಯ ಕಿರಿಯ ಸದಸ್ಯನನ್ನೋ ಮಾತನಾಡಿಸಲು ಬಿಟ್ಟು, ಹಿರಿಯರಾದ ನಾವು ಮೆರವಣಿಗೆಯನ್ನು ನೋಡುತ್ತಲೋ, ಅದರಲ್ಲಿ ಹೆಜ್ಜೆ ಹಾಕುತ್ತಾ ನಿಂತು ಬಿಟ್ಟರೆ ಹೇಗೆ ? ಅದೇ ಭಾವ ಇಲ್ಲಿ ಕಾಡಿದ್ದಿದ್ದಿದೆ.

ವಿವಿಧ ದೇಶಗಳಿಂದ ಹಲವು ನಿರ್ದೇಶಕರು ಇಂದು ಉತ್ಸವದಲ್ಲಿ ಭಾಗವಹಿಸಿದ್ದರು. ತಮ್ಮ ಸಿನಿಮಾಗಳ ಪ್ರದರ್ಶನಕ್ಕೆ ಮುನ್ನ ಚಿತ್ರಮಂದಿರದಲ್ಲಿ ಕುಳಿತಿರುತ್ತಿದ್ದರು. ಅವರನ್ನು ಸಿನಿಮಾಸಕ್ತರಿಗೆ ಪರಿಚಯಿಸುವಾಗ, ಕನಿಷ್ಠ ಒಂದು ಹೂಗುಚ್ಛ ಕೊಡಲೂ ನಿರ್ದೇಶನಾಲಯದ ಪರವಾಗಿ ಯಾರೂ ಇರಲಿಲ್ಲ. ಸ್ವಯಂ ಸೇವಕರು, ಅವರನ್ನು ಪರಿಚಯಿಸಿ, ಅವರಲ್ಲೇ ಒಬ್ಬರು ದೆರೀಸ್ ಸಂ ಫ್ಲವರ್ ಫಾರ್ ಯು ಎನ್ನುತ್ತಾ ಕೊಡಬೇಕಾದ ಪರಿಸ್ಥಿತಿ. ಇದು ಸರಿಯಾದುದಲ್ಲ.

ಸರಕಾರಿ ವ್ಯವಸ್ಥೆ ಇರುವಾಗ, ಒಂದಿಷ್ಟು ಜಂಟಿ ನಿರ್ದೇಶಕರ ಹುದ್ದೆ ಸಮನಾದವರೋ ಅಥವಾ ಉಪ ನಿರ್ದೇಶಕರ ಸ್ಥಾನಮಾನದ ಹುದ್ದೆಯವರನ್ನೋ ನಿಗದಿತ ಚಿತ್ರಮಂದಿರಗಳಿಗೆ ನಿಯೋಜಿಸಿದರೆ ಈ ಸಮಸ್ಯೆ ಬಗೆಹರಿಯುತ್ತಿತ್ತೇನೋ? ಯಾಕೆಂದರೆ, ಇಡೀ ಚಿತ್ರವನ್ನು ಯಾವುದೋ ಒಂದು ಮಸಿಯ ಚುಕ್ಕೆ ನುಂಗಬಾರದಲ್ಲವೇ?ಇದೂ ಸಹ ನಾವು ಬೆಂಗಳೂರಿನ ಚಿತ್ರೋತ್ಸವದಲ್ಲಿ ತೆಗೆದುಕೊಳ್ಳಬಹುದಾದ ಮತ್ತೊಂದು ಎಚ್ಚರಿಕೆಯ ಅಂಶ.

ಚಾಯ್ ಅಂಡ್ ಚಾಟ್
ಈ ಗೋವಾ ಚಿತ್ರೋತ್ಸವದಲ್ಲಿ ಹೊಸ ಪರಿಕಲ್ಪನೆ ಬಂದದ್ದು ಚಾಯ್ ಅಂಡ್ ಚಾಟ್ ಎಂಬುದು. ಪರಿಕಲ್ಪನೆಯೇನೋ ಬಹಳ ಚೆನ್ನಾಗಿತ್ತು. ಅನುಷ್ಠಾನ ಮಾತ್ರ ಅದೇ ನೆಲೆಯಲ್ಲಾಗಲಿಲ್ಲ. ಬಹುಶಃ ಮೊದಲ ವರ್ಷ, ಮುಂದಿನ ವರ್ಷಕ್ಕೆ ಇನ್ನಷ್ಟು ಸೊಬಗು ತುಂಬಿಕೊಳ್ಳಬಹುದು. ಅಲ್ಲಿ ಮತ್ತೊಂದು ಪತ್ರಿಕಾಗೋಷ್ಠಿ ಅಥವಾ ಗುಂಪು ಚರ್ಚೆಯಾಗುವುದಕ್ಕಿಂತ ಅದು ನಿಜವಾದ ಸಿನಿಮಾಸಕ್ತರ ಮತ್ತು ಅವರ ಮೆಚ್ಚಿನ ನಿರ್ದೇಶಕ, ತಂತ್ರಜ್ಞರ ಚರ್ಚೆಯ ತಾಣವಾಗಬೇಕು. ಅದು ಹೀಗೂ ಇರಬಹುದು ಎನಿಸುತ್ತದೆ.

ಪ್ರತಿ ದಿನ ಲಭ್ಯವಿರುವ ನಿರ್ದೇಶಕರನ್ನು ಹಿಂದಿನ ದಿನ ಬೆಳಗ್ಗೆಯೇ ನೋಟಿಸ್ ಬೋರ್ಡ್‌ನಲ್ಲಿ ಪ್ರಕಟಿಸಬೇಕು. ಇದರ ಉಸ್ತುವಾರಿ ಮತ್ತು ಸಮನ್ವಯಕ್ಕೆ ಒಬ್ಬನನ್ನು ನೇಮಿಸಬೇಕು. ಅವನ ಸಂಪರ್ಕ ಮೇಲ್ ಐಡಿ, ದೂರವಾಣಿ ಸಂಪರ್ಕ ಸಂಖ್ಯೆಯೂ ಪ್ರಕಟಣೆಯಲ್ಲಿರಬೇಕು. ಆ ದಿನ ಸಂಜೆಯೊಳಗೆ ಯಾರ‍್ಯಾರು ಮರುದಿನ ಆ ನಿರ್ದೇಶಕರನ್ನು ಮಾತನಾಡಿಸಲು ಇಷ್ಟ ಪಡುತ್ತಾರೋ ಅವರ ಹೆಸರು, ನಂಬರನ್ನು ನೋಂದಾಯಿಸಿಕೊಂಡು, ಒಂದು ಗುಂಪಿಗೆ (ಐದೋ, ಹತ್ತೋ ಮಂದಿ) ಸಮಯ ನಿಗದಿಪಡಿಸಿ ಅವರ ಭೇಟಿಗೆ ವ್ಯವಸ್ಥೆ ಕಲ್ಪಿಸಬೇಕು. ಅದಕ್ಕೆ ವೇದಿಕೆ ಉತ್ಸವ ನಡೆಯುವ ಹತ್ತಿರವೇ ಇರಬೇಕು. ಅಲ್ಲಿ ಚಹಾವೂ ಇರಲಿ, ಚಾಟ್ ಸಹ ಇರಲಿ. ಆಗ, ಅವರವರು ತಮ್ಮ ಇಷ್ಟವಾದ ಫಿಲ್ಮ್ ಮೇಕರ‍್ಸ್ ಗಳೊಂದಿಗೆ ಹರಟಲು ಸಾಧ್ಯವಾದೀತು. ಏಕಕಾಲದಲ್ಲಿ ಹಲವರು ಚಾಟ್ ನಲ್ಲಿ ತೊಡಗಲು ಸಾಧ್ಯ. ಇಲ್ಲದಿದ್ದರೆ ಮತ್ತೊಂದು ಪತ್ರಿಕಾಗೋಷ್ಠಿ, ಸಂವಾದ ಎನಿಸುತ್ತದೆ. ಈ ಪರಿಕಲ್ಪನೆಯನ್ನೂ ಬೆಂಗಳೂರಿನಲ್ಲಿ ಅನುಸರಿಸಬಹುದು.

ಇನ್ನು ಹಿಂದಿನ ವರ್ಷ ಬೆಂಗಳೂರು ಚಿತ್ರೋತ್ಸವದ ಸಂಘಟನೆಯ ಕೆಲವು ಹೇಳಲೇಬೇಕಾದ ಲೋಪಗಳನ್ನು ಉಲ್ಲೇಖಿಸಬೇಕಾದರೆ, ಉತ್ಸವ ಮುಗಿಯುವವರೆಗೂ ಭಾಗವಹಿಸಲಿರುವ, ಪ್ರತಿದಿನ ಲಭ್ಯವಿರಬಹುದಾದ ಸಿನಿತಜ್ಞರ ಬಗ್ಗೆ ಮಾಹಿತಿ ಕೊಡುವವರೇ ಇರಲಿಲ್ಲ. ಇದ್ದಕ್ಕಿದ್ದಂತೆ ಒಂದು ದಿನ ಓಪನ್ ಫೋರಂ ಎಂದು ಶುರುವಾಯಿತು. ಅದು ನಿರ್ವಹಣೆಯ ಕೊರತೆಯಿಂದ ಬಳಲಿತು. ಚಿತ್ರಾಸಕ್ತರು ತಮ್ಮ ನೆಚ್ಚಿನ ನಿರ್ದೇಶಕರನ್ನೋ, ಸಿನಿಮಾ ತಂತ್ರಜ್ಞರನ್ನೋ ಮಾತನಾಡಿಸಲು ಹರಸಾಹಸ ಪಡಬೇಕಾಯಿತು. ಚಿತ್ರಮಂದಿರಗಳಲ್ಲೂ ಹೇಳುವವರೂ ಇರಲಿಲ್ಲ, ಕೇಳುವವರೂ ಇರಲಿಲ್ಲ. ಎಲ್ಲರೂ ಇದ್ದರು, ಯಾರೂ ಜವಾಬ್ದಾರಯುತವಾಗಿರಲಿಲ್ಲ.

ಚಿತ್ರೋತ್ಸವ ಒಂದು ಅರ್ಥಪೂರ್ಣ ಚರ್ಚೆಗೆ, ಸಿನಿಮಾ ಮಾಧ್ಯಮದ ಸಂವಹನಕ್ಕೆ ಕಲ್ಪಿಸಿಕೊಡಬೇಕಾದ ವೇದಿಕೆ. ಅದು ಹಿಂದಿನ ಉತ್ಸವ ಆಗಿರಲಿಲ್ಲ ಎಂಬುದು ಸುಳ್ಳಲ್ಲ. ಹಾಗೆ ಹೇಳುವುದಾದರೆ, ಅದರ ಹಿಂದಿನ ಮೂರು ಉತ್ಸವಗಳಲ್ಲಿ ಹಣದ ಕೊರತೆಯಿದ್ದಿರಬಹುದು, ಸಂಭ್ರಮಕ್ಕಾಗಲೀ, ನಾವಂದುಕೊಳ್ಳುವಂತಹ ಅರ್ಥಪೂರ್ಣಗೊಳ್ಳುವ ಪ್ರಯತ್ನಕ್ಕಾಗಲೀ ಬರ ಇರಲಿಲ್ಲ. ಕಳೆದ ಉತ್ಸವದಲ್ಲಿ ಹಣಕ್ಕೆ ಕೊರತೆಯಿರಲಿಲ್ಲ, ಮತ್ತೆಲ್ಲದಕ್ಕೂ ದೊಡ್ಡ ಕೊರತೆಯಿತ್ತು. ಈ ಬಾರಿ ಅದು ಮರುಕಳಿಸಬಾರದು. ಫಿಲ್ಮ್ ಬಜಾರ್ ನಂಥ ಪರಿಕಲ್ಪನೆಗಳೂ ಜಾರಿಗೆ ಬಂದರೆ ಚೆನ್ನ. ಕನ್ನಡ ಚಿತ್ರರಂಗದ ಸಾಧ್ಯತೆಯೊಂದಿಗೆ, ದಕ್ಷಿಣ ಭಾರತೀಯ ಚಿತ್ರರಂಗದವರೂ ಇತ್ತ ಗಮನಹರಿಸುವಂತೆ ಬೆಂಗಳೂರು ಚಿತ್ರೋತ್ಸವವನ್ನು ರೂಪಿಸಬೇಕು. ಅದಾದರೆ, ಬಹಳ ಸೂಕ್ತವೆನಿಸೀತು. ಈ ಮಾತು ಸತ್ಯ, ಉತ್ಸವವೆಂದರೆ ಬರೀ ಮೆರವಣಿಗೆಯಲ್ಲ, ಸಾಮೂಹಿಕ ಭೋಜನವಲ್ಲ, ಸಂಭ್ರಮ. ಅದು ತುಂಬಬೇಕು. ಸಂಭ್ರಮ ಊರನ್ನು ಆವಾಹಿಸಿಕೊಳ್ಳಬೇಕು, ಅದಾಗಲಿ ಎಂದು ಆಶಿಸೋಣ.

ಕೊನೆ ಮಾತು ಹೇಳುವುದೊಂದು ಉಚಿತವೆನಿಸೀತು. ಇದೆಲ್ಲದರ ಮಧ್ಯೆ ಎಲ್ಲ ಕೊರತೆಯನ್ನೂ ನಿರ್ಲಕ್ಷ್ಯಿಸಿ, ಯಾವುದೇ ಬೇಸರವಿಲ್ಲದೇ, ಒಂದಿಷ್ಟು ಸಿನಿಮಾ ನೋಡಿಕೊಂಡು (ಸಿಕ್ಕ, ಇರುವ ಪರಿಸ್ಥಿತಿಯಲ್ಲಿ) ಖುಷಿ ಪಡುವ ಸಿನಿಮಾಸಕ್ತರಿಗೇನೂ ಕೊರತೆಯಿಲ್ಲ. ಆ ವರ್ಗಕ್ಕೆ ಪ್ರಚಾರ  ಇದ್ದರೂ, ಇಲ್ಲದಿದ್ದರೂ, ಮಾಹಿತಿ ಕೊಟ್ಟರೂ, ಕೊಡದಿದ್ದರೂ-ಹೇಗೋ ಪಡೆದು ಸಿನಿಮಾ ಪ್ರೀತಿಯನ್ನು ಮೆರೆಯುತ್ತಾರೆ. ಇದನ್ನೇ ತಮ್ಮ ವರ್ಚಸ್ಸು, ತಮ್ಮ ಯಶಸ್ಸು ಎಂದು ಬೀಗುವ ಮಂದಿ ಅಕಾಡೆಮಿಯಂಥ ವ್ಯವಸ್ಥೆಯಲ್ಲಿದ್ದಾರೆ. ಯಾರದೋ ಯಶಸ್ಸು ತಮ್ಮಿಂದ ಆದದ್ದು ಎನ್ನುವ ಧಾಟಿ. ಕಳೆದ ಬಾರಿ ಇಂತಹ ವರ್ತನೆ ಕಂಡು ಬಂದಿದ್ದೇನೂ ಸುಳ್ಳಲ್ಲ. ಆದರೆ, ಅದು ಸರಿಯಾದ ನಡೆಯಲ್ಲ.

ಜತೆಗೆ ಸರಿಯಿಲ್ಲದ್ದನ್ನು ಎತ್ತಿ ಹೇಳಿದವರ ಮೇಲೆ ಗೂಬೆ ಕೂರಿಸುವುದು ಅಥವಾ ಕೊರತೆಯನ್ನೇನೂ ಹೇಳದೇ ಸುಮ್ಮನಿದ್ದು ಬಿಡುವ ವರ್ಗದಂತಿರಬೇಕು ಎಂದು ಆಜ್ಞೆ ಹೊರಡಿಸುವುದು, ಬಯಸುವುದೂ ಒಂದು ವ್ಯವಸ್ಥೆಗೆ (ಅಕಾಡೆಮಿ, ಸರಕಾರಿ) ಸರಿಹೋದುದಲ್ಲ. ಅದು ಎಂದಿಗೂ ಜವಾಬ್ದಾರಿಯುತ ನಡವಳಿಕೆಯಲ್ಲ. ಯಾವುದೂ ಪರಿಪೂರ್ಣವಲ್ಲ. ಅಂದ ಮಾತ್ರಕ್ಕೆ ವರ್ಷದಿಂದ ವರ್ಷಕ್ಕೆ ಉತ್ಸವವಾಗಲೀ, ಸಂಸ್ತೆಯಾಗಲೀ ಬೆಳೆಯುತ್ತಾ ಹೋಗಬೇಕು, ತನ್ನಷ್ಟಕ್ಕೇ ತನ್ನ ಮಹತ್ವವನ್ನು ಸ್ಪಷ್ಟಪಡಿಸುತ್ತಾ ಹೋಗಬೇಕು. ಇಡೀ ಸಂಸ್ಕೃತಿಯ ನೆಲೆಯಲ್ಲಿ ತನ್ನ ಹೆಜ್ಜೆ ಗುರುತುಗಳನ್ನು ಇಡುತ್ತಾ ಬೆಳೆಯಬೇಕು. ಆಗ ಸಾರ್ವಜನಿಕರ ತೆರಿಗೆ ಹಣವನ್ನು ಸಂಸ್ಕೃತಿ ಪ್ರಸಾರದ ನೆಲೆಯಲ್ಲಿ ಖರ್ಚು ಮಾಡಿದ್ದಕ್ಕೆ-ಬಂಡವಾಳವನ್ನಾಗಿ ಹೂಡಿದ್ದಕ್ಕೆ ಸಾರ್ಥಕವಾದೀತು.