ಪಣಜಿ : ಏಳನೇ ದಿನಕ್ಕೆ ಕಾಲಿಟ್ಟ ಗೋವಾ ಚಿತ್ರೋತ್ಸವದಲ್ಲಿ ಚಿತ್ರಗಳ ಮರುಪ್ರದರ್ಶನದ್ದೇ ಮೇಲುಗೈ.
ಹೆಚ್ಚು ಜನ ಆಸಕ್ತರು ಮೊದಲ ವಾರದಲ್ಲಿ ತಾವು ನೋಡದ ಚಿತ್ರಗಳಿಗೆ ಮೊರೆಹೋಗುತ್ತಿದ್ದಾರೆ. ಹಾಗಾಗಿ ಭಾರತೀಯ ಪನೋರಮಾಕ್ಕೂ ಜನ ಬರತೊಡಗಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಶಂಕರ್ ಮೋಹನ್, ಮನೋಜ್ ಶ್ರೀವಾಸ್ತವ

ಮೊದಲ ವಾರದಲ್ಲಿ ಸಾಮಾನ್ಯವಾಗಿ ಬೇರೆ ದೇಶದ ಚಿತ್ರಗಳತ್ತ ಮುಖ ಮಾಡಿದ್ದವರೇ ಹೆಚ್ಚಿದ್ದರು. ಭಾರತೀಯ ಪನೋರಮಾದ ಸಿನಿಮಾಗಳು ಮರು ಪ್ರದರ್ಶನಗೊಳ್ಳುವ ಸಾಧ್ಯತೆ ಇದ್ದದ್ದರಿಂದ ಬಹಳಷ್ಟು ಮಂದಿ ಜರ್ಮನಿ, ಫ್ರಾನ್ಸ್ ಸೇರಿದಂತೆ ವಿವಿಧ ದೇಶಗಳ ಚಿತ್ರಗಳು, ಮಾಸ್ಟರ್ ಸ್ಟ್ರೋಕ್ಸ್ ಮುಂತಾದವುಗಳನ್ನು ವೀಕ್ಷಿಸಿದ್ದರು.
ಕೇರಳ ಸೇರಿದಂತೆ ಹಲವು ರಾಜ್ಯಗಳ ಪ್ರತಿನಿಧಿಗಳು ಈ ಬಾರಿ ಭಾಗವಹಿಸಿದ್ದಾರೆ. ಆದರೆ, ಕರ್ನಾಟಕದವರು ತೀರಾ ಕಡಿಮೆ ಎನ್ನುವಷ್ಟಿದ್ದಾರೆ. ಚೆನ್ನೈ, ಹರ್ಯಾಣ, ಕೇರಳ, ಪುಣೆಯ ಸಿನಿಮಾ ಸ್ಕೂಲ್ ನ ವಿದ್ಯಾರ್ಥಿಗಳೆಲ್ಲಾ ಸಂಪೂರ್ಣವಾಗಿ ಬ್ಯುಸಿ. ಸಿನಿಮಾ ವೀಕ್ಷಿಸಿದ ನಂತರ ನಿರ್ದೇಶಕರೊಂದಿಗೆ ಚರ್ಚಿಸುವುದು, ಮಾಧ್ಯಮದ ಕುರಿತು ತಿಳಿದುಕೊಳ್ಳುವುದು ಅವರ ಪ್ರಾಧಾನ್ಯತೆ.

ಹತ್ತು ಸಾವಿರ ಮಂದಿ
ಈ ಬಾರಿಯ ಚಿತ್ರೋತ್ಸವದಲ್ಲಿ 10, 221 ಮಂದಿ ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಮುನ್ನೂರು ಮಂದಿ ಮಾಧ್ಯಮ ಪ್ರತಿನಿಧಿಗಳು ನೋಂದಣಿ ಮಾಡಿದ್ದಾರೆ ಎಂದು ಗೋವಾ ಎಂಟರೈನ್ ಮೆಂಟ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನೋಜ್ ಶ್ರೀವಾಸ್ತವ ತಿಳಿಸಿದ್ದಾರೆ.

ಆದರೆ, ಈ ಪ್ರದರ್ಶಿಸಲಾಗುತ್ತಿರುವ ಹಲವು ಚಿತ್ರಗಳ ಪ್ರತಿನಿಧಿಗಳು (ನಿರ್ದೇಶಕರು ಇತ್ಯಾದಿ) ಭಾಗವಹಿಸದಿದ್ದರ ಕಾರಣ ಕೇಳಿದ್ದಕ್ಕೆ, “ದೇಶಾದ್ಯಂತ ಹಲವು ಚಿತ್ರೋತ್ಸವಗಳು ನಡೆಯುತ್ತಿವೆ. ಕೆಲವರು ಅದರಲ್ಲಿ ಭಾಗವಹಿಸುತ್ತಿದ್ದಾರೆ’ ಎಂಬುದು ಉತ್ಸವ ನಿರ್ದೇಶಕ ಶಂಕರ್ ಮೋಹನ್ ರ ವಿವರಣೆ.

” ಈ ವರ್ಷದ ಮುಖ್ಯ ಕೇಂದ್ರ ಬಿಂದು ಕಂಟೆಂಟ್ ಮತ್ತು ಟೆಕ್ನಾಲಜಿ. ಉತ್ಸವಕ್ಕೆ ಆಯ್ಕೆ ಮಾಡಿರುವ ಚಲನಚಿತ್ರಗಳ ಬಗ್ಗೆ ಒಳ್ಳೆ ಅಭಿಪ್ರಾಯ ವ್ಯಕ್ತವಾಗಿದೆ. ಇದು ಒಳ್ಳೆಯ ಸಂಗತಿ’ ಎಂದವರು ಅವರು.
ಇಫಿ (ಅಂತಾರಾಷ್ಟ್ರೀಯ ಚಿತ್ರೋತ್ಸವ ಸಮಿತಿ) ಸಹ ಪುಣೆ, ತ್ರಿವೇಂದ್ರಂ ಹಾಗೂ ಚೆನ್ನೈ ಚಿತ್ರೋತ್ಸವಗಳಿಗೆ ಸಹಕಾರ ನೀಡುತ್ತಿದ್ದು, ಸೂಕ್ತ ಸಿನಿಮಾಗಳನ್ನು ಪೂರೈಸುತ್ತಿದೆ.

ಖುಷಿಗೊಡುತ್ತಿರುವ ಮುಕ್ತ ವೇದಿಕೆ
ಮುಕ್ತ ವೇದಿಕೆ (ಓಪನ್ ಫೋರಂ) ಒಂದರ್ಥದಲ್ಲಿ ಖುಷಿ ಕೊಡುತ್ತಿದೆ. ಮೂರು ದಿನಗಳಿಂದ ವಿವಿಧ ವಿಷಯಗಳ ಕುರಿತು ಮಧ್ಯಾಹ್ನ 1. 30 ಗೆ ವೇದಿಕೆ ತೆರೆದುಕೊಳ್ಳುತ್ತದೆ. ಇದರಲ್ಲಿ ತಂತ್ರಜ್ಞಾನದಿಂದ ಹಿಡಿದು ಸಿನಿಮಾ ತಯಾರಿಕೆ ವರೆಗೂ ಚರ್ಚೆಯಾಗುತ್ತದೆ.

ಮತ್ತೊಂದು ವಿಶೇಷವೆಂದರೆ ಚಾಯ್ ಅಂಡ್ ಚಾಟ್. ಈ ವರ್ಷದಿಂದ ಪ್ರಾರಂಭಗೊಂಡಿರುವ ಈ ವೇದಿಕೆಯೂ ಒಂದು ಬಗೆಯಲ್ಲಿ ಮುಕ್ತವೇ. ನಿತ್ಯವೂ ಮಧ್ಯಾಹ್ನ 1.15 ಕ್ಕೆ ಒಂದಿಷ್ಟು ಮಂದಿ ಆಸಕ್ತರು ಇಲ್ಲಿ ಸೇರಿಕೊಳ್ಳುತ್ತಾರೆ. ಚಹಾ ಕುಡಿದು, ಬಾಳೆಹಣ್ಣಿನ ಚಿಪ್ಸ್ ತಿಂದು, ತಮ್ಮ ಮೆಚ್ಚಿನ ನಿರ್ದೇಶಕರೊಂದಿಗೆ ಹರಟುತ್ತಾರೆ. ಚರ್ಚೆಗೆ ಅನುವಾಗುವಂತೆ ವಿಷಯವನ್ನೂ ನಿಗದಿಪಡಿಸುವುದಿದೆ. ನೂರು ವರ್ಷದ ಸಿನಿಮಾ ಇತಿಹಾಸದಲ್ಲಿ ನಿಮಗಿಷ್ಟವಾದ ಒಂದು ಸಿನಿಮಾ ಹೆಸರಿಸಿ ಎಂಬ ವಿಷಯ ಬಹಳಷ್ಟು ಚರ್ಚೆಗೀಡಾಯಿತು. ಗಿರೀಶ್ ಕಾಸರವಳ್ಳಿ, ಆಡೂರು ಗೋಪಾಲಕೃಷ್ಣನ್, ಷಾಜಿ ಕರುಣ್, ಸುರೇಶ್ ಜಿಂದಾಲ್, ಸುಮಿತ್ರಾ ಭಾವೆ, ಪ್ರದೀಪ್ ಬಿಸ್ವಾಸ್, ಫಿಲ್ಮ್ ಡಿವಿಷನ್ ನ ಕುಂಡು ಮತ್ತಿತರರು ತಮ್ಮ ಆಯ್ಕೆಯನ್ನು ಹೇಳಿದ್ದು ಖುಷಿಯಾಗಿತ್ತು.

ಮಾಸ್ಟರ್ ತರಗತಿಗಳು
ಸಿನಿಮಾ ಆಸಕ್ತರಿಗೆ, ಸಿನಿಮಾ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂಥದ್ದು “ಮಾಸ್ಟರ್ ಕ್ಲಾಸಸ್”. ಖ್ಯಾತ ನಿರ್ದೇಶಕರು, ತಂತ್ರಜ್ಞರು ಮಾಧ್ಯಮದ ಕುರಿತು ವಿವರಿಸುತ್ತಾರೆ. ಶ್ಯಾಮ್ ಬೆನಗಲ್, ಆಡೂರು ಗೋಪಾಲಕೃಷ್ಣನ್ ಮತ್ತಿತರರು ಭಾಗವಹಿಸಿದ್ದರು. ರಸೂಲ್ ಪೂಕುಟ್ಟಿಯವರ ಧ್ವನಿ ತಂತ್ರಜ್ಞಾನ ಕುರಿತು ಇಂದು ತರಗತಿಗಳಿವೆ. ಗಿರೀಶ್ ಕಾಸರವಳ್ಳಿಯವರ ಪತ್ರಿಕಾಗೋಷ್ಠಿ ನಿನ್ನೆಯ ಹೈಲೈಟ್. ಉಳಿದಂತೆ ಟರ್ಕಿಶ್ ನಿರ್ದೇಶಕ ತೈಫೂರ್ ಐದೀನ್ ಅವರ ವಿವರಣೆ, ನಿರ್ದೇಶಕ ಹರಿಕೃಷ್ಣ ಆನೆಂದೆನ್ ತತಮ್ಮ ಚಿತ್ರ “ನಥಿಂಗ್ ಈಸ್ ಇಂಪಾಸಿಬಲ್’ ಬಗ್ಗೆ ವಿವರ, ಮಲಯಾಳಿ ನಿರ್ದೇಶಕ ಡಾ. ಬಿಜು, ಕೊಂಕಣಿ ಚಿತ್ರ ನಿರ್ದೇಶಕ ಧ್ಯಾನೇಶ್ ಮೋಃಎ ಹಾಗೂ ಸಾಕ್ಷ್ಯಚಿತ್ರ ನಿರ್ದೇಶಕಿ ಸುನಾದ ಭಟ್ ಅವರ ಪತ್ರಿಕಾಗೋಷ್ಠಿ.