>ಟೀನಾ ಶಶಿಕಾಂತ್ ಅವರು ರಶ್ಯನ್ ಸಿನಿಮಾದ ಆರಂಭದ ಹೆಜ್ಜೆಗಳ ಬಗ್ಗೆ ಬರೆದ ಒಂದಿಷ್ಟು ಮಾಹಿತಿಯಿದು. ಇಲ್ಲಿ ಪ್ರಕಟಿಸಲಾಗುತ್ತಿದೆ.

ರಶ್ಯನ್ ಸಿನೆಮಾವನ್ನು ನಾವು ‘ಸೋವಿಯೆತ್ ನ ಸಿನೆಮಾದೊಂದಿಗೆ ಸಮಾನಾರ್ಥಕವಾಗಿ ನೋಡುವಂತಿಲ್ಲ. ಎರಡೂ ಬೇರೆಬೇರೆಯ, ಆದರೆ ಒಂದು ಕಾಲಘಟ್ಟದಲ್ಲಿ ಮಿಳಿತವಾಗಿದ್ದ ಸಿನೆಮಾ ಪ್ರಕಾರಗಳು. ಸೋವಿಯೆತ್ ಸಿನೆಮಾ ಇಂದು ಅಸ್ತಿತ್ವದಲ್ಲಿಲ್ಲ, ರಶ್ಯನ್ ಸಿನೆಮಾ ಇಂದಿಗೂ ಇದೆ. ಎರಡೂ ಪ್ರಕಾರಗಳಲ್ಲಿರುವ ಸಾಮಾನ್ಯ ಅಂಶವೆಂದರೆ ರಶ್ಯನ್ ಭಾಷೆ. ಎರಡೂ ರಶ್ಯನ್ ಚಲನಚಿತ್ರ ಇತಿಹಾಸದ ಪ್ರಮುಖ ಭಾಗಗಳು.

ಇಪ್ಪತ್ತನೆಯ ಶತಮಾನದ ಯುರೋಪ್ ಮತ್ತು ಉತ್ತರ ಅಮೆರಿಕಗಳಲ್ಲಿ ಸಿನೆಮಾ ಅತ್ಯಂತ ಜನಪ್ರಿಯವಾದ ಕಲಾಮಾಧ್ಯಮವಾಗಿದ್ದಿತು. ರಶ್ಯನ್ ಮತ್ತು ಸೋವಿಯೆತ್ ಒಕ್ಕೂಟದ ಸಾಂಸ್ಕೃತಿಕ ಇತಿಹಾಸದಲ್ಲಿ ಸಿನೆಮಾವು ಜನಪ್ರಿಯ ಮಾಧ್ಯಮ, ಕಲಾ ಪ್ರಕಾರಗಳು ಮತ್ತು ಮನರಂಜನಾ ಉದ್ಯಮ ? ಇವು ಮೂರನ್ನೂ ಒಳಗೊಂಡಿರುವಂತಹ ಏಕೈಕ ಅಭಿವ್ಯಕ್ತಿಯಾಗಿದೆ. ರಶ್ಯನ್ ಸಿನೆಮಾ ಪಡೆದುಕೊಂಡಿರುವ ಈ ಸ್ಥಾನವು ಅದನ್ನು ವಿಶಾಲವಾದ ಸೈದ್ಧಾಂತಿಕ ಮತ್ತು ಕಲಾತ್ಮಕ ಪ್ರಾಧಾನ್ಯತೆಗಳ ಘರ್ಷಣೆಯ ಪೋಷಣಸ್ಥಳವನ್ನಾಗಿ ಮಾಡಿವೆ.
ಇಪ್ಪತ್ತರ ದಶಕದಲ್ಲಿ ಕ್ರಾಂತಿಯ ಪ್ರಚಾರದಲ್ಲಿ ಚಲನಚಿತ್ರಗಳಿಗಿಂತ ಸಾಕ್ಷ್ಯಚಿತ್ರಗಳೇ ಹೆಚ್ಚು ಪರಿಣಾಮಕಾರಿಯೆನ್ನುವ, ರಂಗಮಂಚ ಮತ್ತು ಚಿತ್ರಕಲೆಗಳಿಗೆ ವಿರುದ್ಧವಾದ ಸ್ಥಾನದಲ್ಲಿ ಚಲನಚಿತ್ರಗಳಿವೆಯೆನ್ನುವ, ಕ್ರಾಂತಿಯ ನಂತರದ ಸೋವಿಯೆತ್ ಸಂಸ್ಕೃತಿ ಮತ್ತು ವ್ಯಕ್ತಿತ್ವಗಳ ರೂಪಿಸುವಿಕೆಯಲ್ಲಿ ಅಲ್ಲಿನ ಸಿನೆಮಾದ ಪಾತ್ರದ ಬಗೆಗಿನ ವಾಗ್ವಾದ, ಚರ್ಚೆಗಳು ನಡೆಯುತ್ತಲೇ ಬಂದಿವೆ. ಇವತ್ತಿಗೆ ಅಲ್ಲಿ ನಡೆಯುತ್ತಿರುವ ಚರ್ಚೆಯ ಮುಖ್ಯ ವಿಷಯವೆಂದರೆ ಸೋವಿಯೆತ್ ಒಕ್ಕೂಟದ ಕುಸಿತದ ನಂತರದಲ್ಲಿನ ಆರ್ಥಿಕ ಮತ್ತು ರಾಜಕೀಯ ರೂಪಾಂತರಗಳ ದೆಸೆಯಿಂದ, ಆ ಭೂಪಟವು ಆಧುನಿಕ, ಪ್ರಜಾಸತ್ತಾತ್ಮಕ, ಕಾನೂನುಬದ್ಧ ಗಣರಾಜ್ಯಗಳಾಗಿ ವಿಭಜಿತವಾದದ್ದರ ಪರಿಣಾಮವಾಗಿ ಉಂಟಾಗಿರುವ ಸಾಂಸ್ಕೃತಿಕ ಮತ್ತು ಮನೋವೈಜ್ಞಾನಿಕವಾದ ಬದಲಾವಣೆಗಳನ್ನು ಸಿನೆಮಾ ಮತ್ತು ಇತರ ಕಲಾಪ್ರಕಾರಗಳು ಎಷ್ಟರಮಟ್ಟಿಗೆ ಪ್ರಭಾವಿಸಿವೆ? ಅನ್ನುವುದು.

ಸಿನೆಮಾದ ಮೂಲಕ ರಶ್ಯನ್ನರಿಗೆ ತಮ್ಮ ರಶಿಯನ್ ಮತ್ತು ಸೋವಿಯೆತ್ ಸಂಸ್ಕೃತಿಯ ಖಾಲಿ ಪುಟಗಳನ್ನು ಅವಲೋಕಿಸುವ ಮತ್ತು ವ್ಯಾಖ್ಯಾನಿಸುವ ಅಪೂರ್ವ ಅವಕಾಶ ಒದಗಿದೆ ಮತ್ತು ಅದನ್ನು ಅವರು ಬಹಳ ಪ್ರಭಾವಶಾಲಿಯಾಗಿ ಬಳಸಿಕೊಂಡಿದ್ದಾರೆ ಅನ್ನುವುದು ನನ್ನ ಅಭಿಪ್ರಾಯ.

ಸೋವಿಯೆತ್-ಪೂರ್ವ ಯುಗ

ರಶ್ಯನ್ ಸಿನೆಮಾ ಅಂದಾಕ್ಷಣ ನಮಗೆ ಮೊದಲು ನೆನಪಿಗೆ ಬರುವುದು ಸರ್ಗೇಯ್ ಐಸೆನ್ಸ್ಟೀನನ “ಬ್ಯಾಟಲ್ ಶಿಪ್ ಪೋಟೆಂಕಿನ್’. ಆದರೆ ರಶ್ಯನ್ ಸಿನೆಮಾ ಅದಕ್ಕಿಂತ ಹಿಂದೆಯೇ ಇತ್ತು. ತಮಾಷೆಯ ವಿಷಯವೆಂದರೆ ರಶ್ಯಾದ ಮೊತ್ತಮೊದಲನೆಯ ಫಿಲ್ಮ್ ದಾಖಲೆಯನ್ನು ಶೂಟ್ ಮಾಡಿದವರು ಲೂಮಿಯೇರ್ ಸಹೋದರರು!! ಕ್ರೆಮ್ಲಿನಿನಲ್ಲಿ ನಡೆದ ತ್ಸಾರ್ ನಿಕೋಲಸ್ IIನ ಕಿರೀಟಧಾರಣಾ ಸಮಾರಂಭವನ್ನು ಲೂಮಿಯೇರ್ ಕ್ಯಾಮರಾಮ್ಯಾನ್ ಕಮೀಲ್ ಸೆಖ್ ಎಂಬವರು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದರು. ರಶ್ಯಾದ್ದೇ ಆದ ಮೊತ್ತಮೊದಲ ಕಥಾಧಾರಿತ ಚಲನಚಿತ್ರವೆಂದರೆ ಅಲೆಕ್ಸಾಂದ್ರ್ ದ್ರಾಂಕೋವ್ ಅವರ ಸ್ತೆಂಕಾ ರಾಜಿನ್. ವ್ಲಾದಿಮಿರ್ ರೊಮಾಶ್ಕೋವ್ ಎಂಬವರ ನಿರ್ದೇಶನದಲ್ಲಿ ೧೯೦೮ರ ಅಕ್ಟೋಬರ್ ೨೮ರಂದು ಬಿಡುಗಡೆಯಾದ ಕೇವಲ ಹತ್ತು ನಿಮಿಷಗಳ ಈ ಮೂಕೀ ಚಲನಚಿತ್ರವು ರಶ್ಯಾದ ಜನಪ್ರಿಯ ಜಾನಪದ ಗೀತೆಯೊಂದರಲ್ಲಿ ನಡೆವ ಘಟನೆಗಳನ್ನಾಧರಿಸಿತ್ತು. ಇದರ ಹಿಂದೆಯೇ ೧೯೧೦ರಲ್ಲಿ, ಸರಿಯಾಗಿ ನೂರು ವರ್ಷಗಳ ಹಿಂದೆ, ಲಾದಿಸ್ಲಾಸ್ ಸ್ತಾರೆವಿಚ್ ನಿರ್ದೇಶನದಲ್ಲಿ ರಶ್ಯಾದ ಮೊತ್ತಮೊದಲ ಅನಿಮೇಟೆಡ್ ಚಲನಚಿತ್ರವಾದ ಲೂಕಾನಸ್ ಸೆರ್ವಸ್ ಎಂಬುದು ತೆರೆಗೆ ಬಂತು. ೧೯೧೨ರಲ್ಲಿ ಅಲೆಕ್ಸಾಂದ್ರ್ ಖಾನ್ಝೋನ್ಖೋವ್ ಮತ್ತು ಐವಾನ್ ಮೊಜ್ಜುಕಿನ್ ಡಿಫೆನ್ಸ್ ಆಫ್ ಸೆವಾಸ್ತಪೋಲ್ ಅನ್ನು ತಯಾರಿಸಿದರು. ಅದೇ ವರ್ಷ ಖ್ಯಾತ ರಶ್ಯನ್ ಸಾಹಿತಿ ಲೆವ್ ಟಾಲ್ ಸ್ಟಾಯ್ ರವರ ಕೊನೆಯ ದಿನಗಳ ಬಗೆಗಿನ ಯಾಕೋವ್ ಪ್ರೊಟಾಜನೋವ್ ನಿರ್ದೇಶಿತ ಚಲನಚಿತ್ರವಾದ ಡಿಪಾರ್ಚರ್ ಆಫ್ ಎ ಗ್ರ್ಯಾಂಡ್ ಓಲ್ಡ್ ಮ್ಯಾನ್ ಬಿಡುಗಡೆಯಾಯಿತು.

ಮೊದಲನೆಯ ವಿಶ್ವಯುದ್ಧದ ಸಮಯದಲ್ಲಿ ರಶ್ಯನ್ ಚಲನಚಿತ್ರೋದ್ಯಮವು ಜರ್ಮನ್ ವಿರೋಧಿ ಧೋರಣೆಯನ್ನು ತಾಳಿತು. ಈ ರಾಷ್ಟ್ರೀಯತಾವಾದಿ ಭಾವನೆಯು ಆ ಸಮಯದ ಚಲನಚಿತ್ರಗಳಲ್ಲಿ ವ್ಯಕ್ತವಾಗುತ್ತದೆ. ೧೯೧೬ರ ಹೊತ್ತಿಗೆ, ಕೇವಲ ಎಂಟೇ ವರ್ಷಗಳಲ್ಲಿ, ಚಲನಚಿತ್ರೋದ್ಯಮವು ಊಹಿಸಲಾಗದಷ್ಟು ಪ್ರಗತಿಯನ್ನು ಸಾಧಿಸಿತು. ಸ್ವತಃ ನಿರ್ದೇಶಕರೂ ಆಗಿದ್ದ ಐವಾನ್ ಮೊಜ್ಜುಕಿನ್ ಮತ್ತು ನತಾಲ್ಯಾ ಲೈಸೆಂಕೋ ಈ ಕಾಲಘಟ್ಟದ ಪ್ರಮುಖ ತಾರೆಯರಾಗಿದ್ದರು. ರಶ್ಯನ್ ಕ್ರಾಂತಿಯ ನಂತರ ಅಲ್ಲಿನ ಸಿನೆಮಾದಲ್ಲಿ ಅಭೂತಪೂರ್ವ ಬದಲಾವಣೆಗಳುಂಟಾದವು. ಹಲವಾರು ಚಲನಚಿತ್ರಗಳು ತ್ಸಾರ್ ಚಕ್ರಾಧಿಪತ್ಯವನ್ನು ವಿರೋಧಿಸುವ ಕಥೆಗಳನ್ನುಳ್ಳವಾಗಿದ್ದವು. ಈ ಯುಗದ ಕೊನೆಯ ಕೊಂಡಿಯಾದ ೧೯೧೭ರ ಫಾದರ್ ಸರ್ಜಿಯಸ್, ಸೋವಿಯೆತ್ ಯುಗದ ಮೊದಲ ಚಲನಚಿತ್ರವೆನಿಸಿಕೊಂಡಿತು.

ರಶ್ಯನ್ ಕ್ರಾಂತಿ ಮತ್ತು ಬದಲಾವಣೆಗಳು
ರಶ್ಯನ್ ಕ್ರಾಂತಿಯ ಪ್ರಥಮ ವರ್ಷವಾದ ೧೯೧೮ರಲ್ಲಿ ಚಲನಚಿತ್ರ ಇತಿಹಾಸದಲ್ಲಿಯೇ ಅಪೂರ್ವವಾದ ಪ್ರಯೋಗವೊಂದು ರಶ್ಯಾದಲ್ಲಿ ನಡೆಯಿತು. ‘ಕುಲ್ಷೋಹ್ ಎಫೆಕ್ಟ್’ ಎಂದು ಕರೆಯಲಾಗುವ ಈ ಪ್ರಯೋಗವನ್ನು ರಶ್ಯನ್ ನಿರ್ದೇಶಕರಾದ ಲೆವ್ ಕುಲ್ಷೋಹ್ ಚಲನಚಿತ್ರ ಸಂಕಲನದ ಪರಿಣಾಮವನ್ನು ತೋರ್ಪಡಿಸುವ ಸಲುವಾಗಿ ನಡೆಸಿದರು. ಇದರಲ್ಲಿ ಐವಾನ್ ಮೊಜ್ಜುಕಿನ್ ರವರ ಭಾವರಹಿತವಾದ ಶಾಟ್ ಒಂದನ್ನು ಬೇರೆಬೇರೆ ಶಾಟ್ ಗಳ ಜತೆಗೆ ಕೂಡಿಸಿ(ಸೂಪ್ ತಟ್ಟೆ, ಒಬ್ಬ ಹುಡುಗಿ, ಪುಟ್ಟ ಹುಡುಗಿಯಿರುವ ಶವಪೆಟ್ಟಿಗೆ) ಪ್ರೇಕ್ಷಕವರ್ಗಕ್ಕೆ ತೋರಿಸಲಾಯಿತು. ಪ್ರತಿಸಾರಿಯೂ ಮೊಜ್ಜುಕಿನ್ ಅವರ ಮುಖದ ಭಾವವು ಬದಲಾಗುತ್ತಿತ್ತೆಂದು ಪ್ರೇಕ್ಷಕರು ಪ್ರತಿಕ್ರಿಯಿಸಿದರು. ಪ್ರಯೋಗರ ರೂವಾರಿಗಳಲ್ಲೊಬ್ಬರೆನ್ನಲಾದ ಪುಡೋಕಿನ್ ಅವರ ಮಾತುಗಳಲ್ಲಿಯೆ ಹೇಳುವುದಾದರೆ, “ಪ್ರೇಕ್ಷಕರು ನಟನೆಯ ಬಗ್ಗೆ ಹುಚ್ಚೆದ್ದುಹೋಗಿದ್ದರು…ಮರೆತ ಸೂಪ್ ಮತ್ತು ಆತನ ಗಾಢ ಆಲೋಚನೆಯ ಬಗ್ಗೆ, ಸತ್ತ ಮಗುವಿನೆಡೆಗೆ ಆತ ಬೀರುವ ದುಃಖಪೂರಿತ ನೋಟ ಅವರನ್ನು ತಾಕಿತು, ಮತ್ತು ಆ ಹೆಣ್ಣನ್ನು ಆತ ಕಾಮುಕದೃಷ್ಟಿಯಿಂದ ನೋಡುವುದನ್ನೂ ಅವರು ಗಮನಿಸಿದರು. ಆದರೆ ಈ ಮೂರೂ ದೃಶ್ಯಗಳಲ್ಲಿ ಆ ಮುಖ ಭಾವರಹಿತವಾಗಿತ್ತು ಮತ್ತು ಅದು ಒಂದೇ ಶಾಟ್ ಆಗಿದ್ದಿತು ಅನ್ನುವುದು ನಮಗೆ ಮಾತ್ರ ಗೊತ್ತಿತ್ತು.” (Pudovkin, “Naturshchik vmesto aktera”, in Sobranie sochinenii, volume I, Moscow: 1974, p.184.) ಈ ಪ್ರಯೋಗ ಆಧುನಿಕ ಚಲನಚಿತ್ರ ನಿರ್ಮಾಪಕರಿಗೆ ಮಾದರಿಯಾಗಿದೆ ಮತ್ತು ಇದನ್ನು ಮನಶ್ಯಾಸ್ತ್ರಜ್ಞರು ಕೂಡ ಅಭ್ಯಸಿಸಿದ್ದಾರೆ. ಕುಲ್ಷೋವ್ ಪ್ರಕಾರ ಸಿನೆಮಾ ಅನ್ನುವುದು ಹಲವಾರು ತುಣುಕುಗಳ ಜೋಡಿಸುವಿಕೆಯಾಗಿದ್ದು, ಆ ತುಣುಕುಗಳು ನಿಜವಾಗಿ ಬಹಳ ಭಿನ್ನವಾದಂತಹವಾಗಿವೆ.

ಆದ್ದರಿಂದ ಒಂದು ಚಲನಚಿತ್ರದ ಬಿಂಬಗಳ ಸಂಯೋಜನೆ ಮುಖ್ಯವೇ ಹೊರತು ಅಂತರಾರ್ಥವಲ್ಲ. ಇಂತಹ ಕಲಾಸ್ವರೂಪದ ಘಟಕಗಳು ಪೂರ್ವರಚಿತವಾಗಿದ್ದು, ಇವನ್ನು ಬಿಚ್ಚಿ ಮತ್ತೆ ಹೊಸಹೊಸ ರೀತಿಗಳಲ್ಲಿ ಜೋಡಿಸಬಹುದಾಗಿರುತ್ತದೆ. ಇದನ್ನು ‘ಮಾಂಟಾಜ್ ಸಿನೆಮಾ ಎನ್ನಲಾಗುತ್ತದೆ. ಈ ಸಿದ್ಧಾಂತದಿಂದ ೧೯೨೦ರ ದಶಕದ ಸೋವಿಯತ್ ಸಿನೆಮಾ ಪ್ರಭಾವಿತವಾಯಿತು. ಇದರ ಫಲವಾಗಿ ಸರ್ಗೇಯ್ ಐಸೆನ್ ಸ್ಟೀನ್, ಸೆವೊಲಾಡ್ ಪುಡೋಕಿನ್ ಮತ್ತು ಜಿಗಾ ವೆರ್ತೋವ್ ಮೊದಲಾದ ಉತ್ತಮ ನಿರ್ದೇಶಕರ ಕುಲುಮೆಗಳಿಂದ ದ ಬ್ಯಾಟಲ್ ಶಿಪ್ ಪೋಟೆಂಕಿನ್, ಅಕ್ಟೋಬರ್, ಮದರ್, ದ ಎಂಡ್ ಆಫ್ ಸೆಂಟ್ ಪೀಟರ್ಸ್ ಬರ್ಗ್ ಮತ್ತು ದ ಮ್ಯಾನ್ ವಿದ್ ಎ ಮೂವೀ ಕ್ಯಾಮೆರಾದಂತಹ ಅದ್ಭುತ ಚಲನಚಿತ್ರಗಳು ಉದ್ಭವವಾದವು. ಸೋವಿಯೆತ್ ಮಾಂಟಾಜ್ ಸಿನೆಮಾವನ್ನು ೧೯೩೦ರ ದಶಕದ ಸ್ಟಾಲಿನ್ನನ ಆಳ್ವಿಕೆಯಲ್ಲಿ, ಆಗಿನ ಸಮಾಜವಾದೀ ವಾಸ್ತವವಾದದ ನೀತಿಗೆ ಹೊಂದಿಕೊಳ್ಳುವುದಿಲ್ಲವೆಂಬ ಕಾರಣ ನೀಡಿ ನಿಗ್ರಹಿಸಲಾಯಿತು.