ಇಂದಿನಿಂದ ನಮ್ಮ ರಾಜ್ಯ ಚಲನಚಿತ್ರ ಪ್ರಶಸ್ತಿ ಕುರಿತ ಚರ್ಚೆ ಆರಂಭ. ಈ ಚರ್ಚೆಯ ಉದ್ದೇಶ ಸ್ಪಷ್ಟ. ಯಾವ ವೈಯಕ್ತಿಕ ನೆಲೆಯಲ್ಲೂ ಅಲ್ಲ, ಹಿತದೃಷ್ಟಿಯಿಂದಲೂ ಅಲ್ಲ, ಸಮಷ್ಟಿ ಹಿತದ ಹಿನ್ನೆಲೆಯಲ್ಲಿ. ಪ್ರಶಸ್ತಿ ಆಯ್ಕೆ ಇತ್ಯಾದಿ ಕುರಿತು ಒಂದು ಆರೋಗ್ಯಕರ ಸಂವಾದ ಸಾಧ್ಯವಾಗಬೇಕು ಹಾಗೂ ಮುಂದಾದರೂ ಆಯ್ಕೆಯ ಕ್ರಮ ಹೆಚ್ಚು ಪಾರದರ್ಶಕ, ಸರ್ವ ಸಮ್ಮತ ರೀತಿಯಲ್ಲಾಗಬೇಕೆಂಬುದು. ಚಿಕ್ಕಮಗಳೂರಿನ ಮಂಜುನಾಥ್ ಎನ್ನುವವರು ಕಳಿಸಿರುವ ಲೇಖನವನ್ನು ಇಲ್ಲಿ ಪ್ರಕಟಿಸಲಾಗುತ್ತಿದೆ. ನಿಮ್ಮ ಅಭಿಪ್ರಾಯ, ಅನಿಸಿಕೆ, ಲೇಖನಗಳನ್ನು saangatya@gmail.com ಗೆ ಕಳುಹಿಸಿ, ಈ ಚರ್ಚೆ ಬೆಳೆಸಿ.

ರಾಜ್ಯ ಪ್ರಶಸ್ತಿಯ ಬಗ್ಗೆ ಇತ್ತೀಚೆಗೆ ಮತ್ತಷ್ಟು ವಿವಾದಗಳು ಗರಿಗೆದರಿಕೊಂಡಿವೆ.. ಪ್ರಶಸ್ತಿ ಆಯ್ಕೆ ಸಮಿತಿಯು ಲಾಬಿಗೆ ಒಳಗಾಗುತ್ತಿದೆಯೋ ಅಥವಾ ದಾಕ್ಷಿಣ್ಯಕ್ಕೆ ಬಲಿಯಾಗುತ್ತಿದೆಯೋ ಎಂಬುದರ ಬಗ್ಗೆಯೂ ಚರ್ಚೆ ನಡೆದದ್ದೂ ಸುಳ್ಳಲ್ಲ. ಎಷ್ಟೋ ಬಾರಿ ಪ್ರಶಸ್ತಿ ಪ್ರಕಟವಾದ ಮೇಲೆ ಆಯ್ಕೆ ಸಮಿತಿಯ ವರ್ತನೆ ಕಂಡರೆ, ದಾಕ್ಷಿಣ್ಯಕ್ಕೆ ಬಲಿಯಾದ ಲಕ್ಷಣಗಳೇ ಹೆಚ್ಚಾಗಿ ತೋರುತ್ತವೆ.

ಪ್ರಶಸ್ತಿ ಆಯ್ಕೆ ಅನುಸರಿಸುವ ಸಮಂಜಸ ನೀತಿ ಕುರಿತೇ ಹಲವು ಗೊಂದಲಗಳಿವೆ. ಯಾವ ನೆಲೆಯಲ್ಲಿ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಟ-ನಟಿ ಎಂದೆಲ್ಲಾ ವಿಂಗಡಿಸುವವರೋ ಅರ್ಥವಾಗದು. ರಾಜ್ಯಸರಕಾರವಾಗಲೀ, ವಾರ್ತಾ ಇಲಾಖೆಗಾಗಲೀ ಇದರ ಕುರಿತು ಸ್ಪಷ್ಟವಾದ ನೀತಿಯನ್ನು ರೂಪಿಸಬೇಕೆಂಬ ದರ್ದು ಇಲ್ಲ. ಹಾಗಾಗಿಪ್ರತಿ ಬಾರಿಯೂ ವಿವಾದಕ್ಕೀಡಾಗುವ ಪ್ರಶಸ್ತಿ ಕುರಿತು ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ.

2010-11 ರ ಸಾಲಿನ ಆಯ್ಕೆ ಸಮಿತಿಗೆ ಅಧ್ಯಕ್ಷರಾಗಿದ್ದವರು ಹಿರಿಯ ನಟಿ ಭಾರತಿ ವಿಷ್ಣುವರ್ಧನ್. ಒಟ್ಟು ೩೦ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಯಿತು. ಉಪೇಂದ್ರ ಅಭಿನಯದ “ಸೂಪರ್” ಚಿತ್ರಕ್ಕೆ ಅತ್ಯುತ್ತಮ ಚಿತ್ರ ಪ್ರಶಸ್ತಿ ಬಂದರೆ, “ಪೃಥ್ವಿ” ಚಿತ್ರದ ಅಭಿನಯಕ್ಕೆ ಪುನೀತ್ ರಾಜಕುಮಾರ್ ಗೆ ಅತ್ಯುತ್ತಮ ನಟ ಪ್ರಶಸ್ತಿ ಬಂದಿದೆ. ಹಾಗೆಯೇ “ಸೂಸೈಡ್” ಚಿತ್ರದ ನಟಿ ಕಲ್ಯಾಣಿ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಬಂದಿದೆ. ಮತ್ತೆರಡು ಅತ್ಯುತ್ತಮ ಚಿತ್ರಗಳ ಸಾಲಿಗೆ ಕ್ರಮವಾಗಿ “ಭಗವತಿ ಕಾಡು” ಹಾಗೂ “ಶಬ್ದಮಣಿ” ಆಯ್ಕೆಯಾಗಿದೆ. ಹೀಗೇ ಪಟ್ಟಿ ನೋಡುತ್ತಾ ಹೋದರೆ ಅದ್ಭುತವಾಗಿಯೇ ಇದೆ. ಹಿರಿಯ ನಟ ಶಿವರಾಂ ಅವರಿಗೆ ರಾಜಕುಮಾರ್ ಪ್ರಶಸ್ತಿ ಹಾಗೂ ಅಂಬರೀಷ್ ಗೆ ವಿಷ್ಣುವರ್ಧನ್ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಇಲ್ಲಿ ಇಂತಹ ವೈಯಕ್ತಿಕ ಪ್ರಶಸ್ತಿ ಕುರಿತು ಪ್ರಸ್ತಾಪಿಸಲು ಹೋಗಲಾರೆ. ನನ್ನ ಪ್ರಸ್ತಾಪದ ನೆಲೆ ಇರುವುದು ಸಂಪೂರ್ಣವಾಗಿ ಈ ಸಮಿತಿಯ ಆಯ್ಕೆಯ ಅಳತೆಗೋಲಿನ ಬಗ್ಗೆ.

ಇದನ್ನು ಅಸಮಾಧಾನವೆಂದಾದರೂ ಇಟ್ಟುಕೊಳ್ಳಬಹುದು ಅಥವಾ ಅಭಿಪ್ರಾಯವೆಂದಾದರೂ ಪರಿಗಣಿಸಬಹುದು. ಒಂದು ಚಿತ್ರವನ್ನು ಅತ್ಯುತ್ತಮವೆಂದು ಆಯ್ಕೆ ಮಾಡುವಾಗ ಅನುಸರಿಸುವ ಮಾನದಂಡವೇನು ? ಎಂಬುದರ ಬಗ್ಗೆ ಎಲ್ಲೂ ಖಚಿತವಾದ ಅಭಿಪ್ರಾಯವಿಲ್ಲ. ಸಾಂದರ್ಭಿಕ ನೆಲೆಯ, ಆಯಾ ವರ್ಷಕ್ಕೆ ಬರುವ ಸಮಿತಿಯ ಅಧ್ಯಕ್ಷರು-ಸದಸ್ಯರು ಕುಳಿತು ನಿರ್ಧರಿಸಿಕೊಳ್ಳುವ ಮಾನದಂಡದ ಮೇಲೆ ಈ ಎಲ್ಲ ಆಯ್ಕೆಗಳು ನಡೆಯುತ್ತವೆ ಎಂದೇ ನನ್ನ ಲೆಕ್ಕಾಚಾರ.

ಉದಾಹರಣೆಗೆ ಹಿಂದಿನ ಎರಡು ವರ್ಷಗಳ ಲೆಕ್ಕಾಚಾರ ಗಮನಿಸಿ. 2009-10 ರಲ್ಲಿ ಅತ್ಯುತ್ತಮ ಚಿತ್ರಕ್ಕಾಗಿ “ಗುಲಾಬಿ ಟಾಕೀಸ್”, “ಮೊಗ್ಗಿನ ಜಡೆ”, “ಮಾತಾಡ್ ಮಾತಾಡ್ ಮಲ್ಲಿಗೆ” ಚಿತ್ರಗಳು ಆಯ್ಕೆಯಾಗಿದ್ದವು. ಹಾಗೆಯೇ 2008-09 ರಲ್ಲಿ “ಕಬಡ್ಡಿ”, “ಜೋಶ್” ಹಾಗೂ “ಶಂಕರ ಪುಣ್ಯಕೋಟಿ” ಚಿತ್ರಗಳು ಆಯ್ಕೆಯಾಗಿದ್ದವು. ಇವುಗಳ ಆಯ್ಕೆಯ ಕ್ರಮವನ್ನು ಕಂಡರೇ ಅಚ್ಚರಿ ಎದುರಾಗಬಹುದು. ಬಹಳ ಮುಖ್ಯವಾಗಿ ಪ್ರತಿವರ್ಷವೂ ಆಯ್ಕೆಯಾಗಿರುವ ಚಿತ್ರಗಳ ರೇಂಜ್ (ಮಟ್ಟ) ನೋಡಿದರೆ ಬಹಳ ವ್ಯತ್ಯಾಸ ಸ್ಪಷ್ಟವಾಗಿ ತೋರುತ್ತದೆ.

ಈ ಮಾತನ್ನು ಪ್ರಸ್ತಾಪಿಸುವ ಮೊದಲು ಒಂದು ಅಂಶವನ್ನು ಸ್ಪಷ್ಟಪಡಿಸಬಹುದಾದರೆ, ಒಂದು ಚಿತ್ರವನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಕಲಾತ್ಮಕ ಅಥವಾ ವಾಣಿಜ್ಯಾತ್ಮಕ ಚಿತ್ರವೆಂದು ಪ್ರತ್ಯೇಕಿಸಬೇಕಿಲ್ಲ. ಒಟ್ಟೂ ಚಿತ್ರವೆಂದರೆ ಒಂದೇ. ಹಾಗೆ ಗಮನಿಸುವುದಾದರೆ ಈ ಬಾರಿಯ “ಸೂಪರ್” ವಾಣಿಜ್ಯ ನೆಲೆಯದ್ದಾಗಿದ್ದರೂ, ಉಳಿದೆರಡು ಸ್ಪಷ್ಟವಾಗಿ ಆ ನೆಲೆಯದ್ದಲ್ಲ. ಅವು ಟಾಕೀಸುಗಳಲ್ಲಿ ಬಿಡುಗಡೆಗೊಂಡಿರುವುದೂ ಅನುಮಾನ. ಆದರೆ ಅವುಗಳನ್ನು ಪ್ರಶಸ್ತಿಗೆ ಪರಿಗಣಿಸಬಾರದೆಂದಲ್ಲ. ಆದರೆ ಆಯ್ಕೆಗಿರುವ ಮಾನದಂಡವೇನು ಎಂಬುದು ಮೊದಲು ಸಾರ್ವಜನಿಕಗೊಳ್ಳಬೇಕು. ಆಯ್ಕೆ ಸಂದರ್ಭದಲ್ಲಿ ಚಿತ್ರದ ಯಾವ ಅಂಶ ಅದನ್ನು ಪ್ರಶಸ್ತಿಯ ಸಾಲಿಗೆ ತಂದು ನಿಲ್ಲಿಸುತ್ತದೆಂಬುದನ್ನು ಯಾವ ಬಾರಿಯೂ ಆಯ್ಕೆ ಸಮಿತಿಯ ಗಣ್ಯರು ಬಹಿರಂಗಪಡಿಸುವುದೇ ಇಲ್ಲ.

ಆಯ್ಕೆ ಮಾಡಿದ ಕಾರಣಕ್ಕೆ ನೀಡಬಹುದಾದ ನೋಟ್ಸ್ ಗಳು ಹೆಚ್ಚು ಖಾಸಗಿಯಾಗಿರಬಹುದಾದ ಸಾಧ್ಯತೆಯಿದ್ದರೂ, ಹೀಗೆ ವಿವಾದ ಎದ್ದಿರುವಂತಹ ಸಂದರ್ಭದಲ್ಲಿ ಯಾಕೆ ಬಹಿರಂಗಪಡಿಸಬಾರದು ? ಹೀಗೆ ರಹಸ್ಯವಾಗಿಡುವುದರಲ್ಲಿ ಯಾವ ದೇಶದ ಭದ್ರತೆಯ ಪ್ರಶ್ನೆ ಇದೆಯೋ ತಿಳಿಯದು. ಪ್ರತಿ ಬಾರಿಯೂ ಇದನ್ನೊಂದು ನಿರಂತರ ವಿವಾದವಾಗಿಸುವುದರಲ್ಲಿ ಸಂತೋಷವಿದೆ ಎಂದು ಕೆಲವರಿಗೆ ಅನಿಸಬಹುದು. ಆದರೆ, ನನ್ನ ದೃಷ್ಟಿಯಲ್ಲಿ ಪಾರದರ್ಶಕತೆಯ ಕೊರತೆ ಎಂದೇ ಅನಿಸುತ್ತದೆ. ಇದು ಇನ್ನಷ್ಟು ಸ್ಪಷ್ಟಗೊಂಡು, ರಾಜ್ಯ ಪ್ರಶಸ್ತಿಗೆ ಮತ್ತಷ್ಟು ಗೌರವ ಬರಬೇಕೆಂದರೆ ಇನ್ನು ಮುಂದಾದರೂ ಪ್ರಶಸ್ತಿಗೆ ಆಯ್ಕೆಯಾದ ಚಿತ್ರಗಳ ಅರ್ಹ ಗುಣಗಳನ್ನಾದರೂ ಬಹಿರಂಗಪಡಿಸಬೇಕು. ಇಲ್ಲವಾದರೆ ಈ ವಿವಾದದ ನೆರಳಿನಿಂದ ಪ್ರಶಸ್ತಿ ಹೊರಬಾರದು, ಪ್ರಶಸ್ತಿಯ ಬಗ್ಗೆ ಟೀಕೆಗಳೂ ನಿಲ್ಲದು.