ಬಿ.ಎ. ಸಮವರ್ಥ (ಸಾಹಿಲ್) ಅವರು ಸಂಸ್ಕೃತಿ ಶೋಧಕರು. ಅವರು ಬರೆದ ಲೇಖನವಿದು. ಬರೆದು ಅಭಿಪ್ರಾಯಿಸಿ.

ಸುಬ್ಹಾ ಸುಬ್ಹಾ ಏಕ್ ಖ್ವಾಬ್ ಕೆ ದಸ್ತಕ್ ಪರ್ ದರ್‌ವಾಝ ಖೋಲಾ, ದೇಖಾ
ಸರ‍್ಹದ್ ಕೆ ಉಸ್ ಪಾರ್ ಸೆ ಕುಛ್ ಮೆಹ್ಮಾನ್ ಆಯೆ ಹೈ
ಆಂಖೋ ಸೆ ಮನೂಸ್ ಥೆ ಸಾರೆ
ಚೆಹ್ರೇ ಸಾರೆ ಸುನೇ ಸುನಾಯೆ
ಪಾಂವ್ ಧುಲೆ, ಹಾಥ್ ಧುಲಾಯೆ
ಆಂಗನ್ ಮೆ ಆಸಾನ್ ಲಗ್‌ವಾಯೆ..
ಔರ್ ತಂದೂರ್ ಪೆ ಮಕ್ಕಿ ಕೆ ಕುಚ್ ಮೊಟೆ ಮೊಟೆ ರೋಟಿ ಪಕಾಯೆ
ಪೋಟ್ಲಿ ಮೆ ಮೆಹ್ಮಾನ್ ಮೇರೆ
ಪಿಚ್ಲೇ ಸಾಲೋಂ ಕೆ ಫಸ್ಲೋ ಕಾ ಗೂಡ್ ಲಾಯೆ ಥೆ
ಆಂಖ್ ಖುಲಿ ತೊ ದೇಖಾ ಘರ್ ಮೆ ಕೋಯಿ ನಹೀ ಥಾ
ಹಾಥ್ ಲಗಾಕರ್ ದೇಖಾ ತೊ ತಂದೂರ್ ಅಭೀ ತಕ್ ಬುಜ್ಹಾ ನಹೀ ಥಾ
ಔರ್ ಹೊಟೋಂ ಪೆ ಮೀಠೇ ಗೂಡ್ ಕಾ ಝೈಕಾ ಅಬ್ ತಕ್ ಚಿಪಕ್ ರಹಾ ಥಾ
ಖ್ವಾಬ್ ಥಾ ಶಾಯದ್ !
ಖ್ವಾಬ್ ಹೀ ಹೋಗಾ !
ಸರ‍್ಹದ್ ಪರ್ ಕಲ್ ರಾತ್ ಸುನಾ ಹೈ ಚಲಿ ಥೀ ಗೋಲಿ
ಸರ‍್ಹದ್ ಪರ್ ಕಲ್ ರಾತ್ ಸುನಾ ಹೈ
ಕುಚ್ ಖ್ವಾಬೊ ಕಾ ಖೂನ್ ಹುವಾ ಹೈ !
-ಸಂಪೂರ್ಣ್ ಸಿಂಗ್ ‘ಗುಲ್ಜಾರ್

ಮುಂಜಾನೆ ನಾನು ಕನಸಿನ ಬಾಗಿಲು ತೆರೆದೆ. ಅಲ್ಲಿ ಗಡಿಯಾಚೆಗಿನ ಅತಿಥಿಗಳು ಬಂದಿದ್ದರು. ಪ್ರತಿಯೊಬ್ಬರ ಮುಖವೂ ಪರಿಚಿತ ಅನಿಸುತ್ತಿತ್ತು. ಅವರು ಕೈ ಕಾಲು ಮುಖ ತೊಳೆದುಕೊಂಡು ರೋಟಿ ತಯಾರಿಸಲು ಸ್ಟೌ ಹಚ್ಚಿದರು. ದೊಡ್ಡದೊಂದು ಜೋಳಿಗೆಯಲ್ಲಿ ಬೆಲ್ಲ ತಂದಿದ್ದರು.
ಆದರೆ ನಾನು ಕಣ್ಣು ತೆರೆಯುತ್ತಲೇ ಅಲ್ಲಿ ಯಾರೂ ಇರಲಿಲ್ಲ. ಸ್ಟೌ ಹತ್ತಿರ ಕೈ ಚಾಚಿದಾಗ ಅದಿನ್ನೂ ಬಿಸಿಯಾಗಿಯೇ ಇತ್ತು. ಬೆಲ್ಲದ ಕಂಪು ಹರಡಿತ್ತು. ಅದೊಂದು ಕನಸಾಗಿರಬಹುದು. ಹೌದು ಅದು ಕನಸೇ. ಕಳೆದ ರಾತ್ರಿ ಗಡಿಯಲ್ಲಿ ಗುಂಡು ಹಾರಿಸಿದ್ದರಂತೆ. ಗಡಿಯಲ್ಲಿ ಕೆಲವು ಕನಸಗಳನ್ನು ಕೊಂದಿದ್ದರು ಎಂದು ಹೇಳುವುದನ್ನು ಕೇಳಿದ್ದೆ.
ಇನ್ಸಿಡೆಂಟ್ ಎಟ್ ಔಲ್ ಕ್ರೀಕ್ ಅಥವಾ ಅಖರೆನ್ಸ್ ಎಟ್ ಔಲ್ ಕ್ರೀಕ್ ಎನ್ನುವ ಚಿತ್ರವನ್ನು ಫ್ರೆಂಚ್ ನಿರ್ದೇಶಕ ರಾಬರ್ಟ್ ಎನ್ರಿಕೊ ನಿರ್ದೇಶಿಸಿದ್ದಾರೆ. ೨೮ ನಿಮಿಷಗಳ ಪುಟಾಣಿ ಚಿತ್ರ ನೋಡಿದಲ್ಲಿ ಮನಸ್ಸು ಒಮ್ಮೆ ಅದುರಿಬಿಡುತ್ತದೆ. ಇನ್ನೇನು ಗಲ್ಲಿಗೇರಿಸಬೇಕು ಎನ್ನುವಷ್ಟರಲ್ಲಿ ಗಲ್ಲು ಶಿಕ್ಷೆಗೆ ಒಳಗಾದ ವ್ಯಕ್ತಿಯ ಕೊನೆ ಕ್ಷಣಗಳನ್ನು ಈ ಚಿತ್ರದಲ್ಲಿ ಚಿತ್ರಿಸಲಾಗಿದೆ. ಕುತ್ತಿಗೆಗೆ ಕುಣಿಕೆ ಬಿಗಿಯುತ್ತಲೇ ಅದು ತುಂಡಾಗುತ್ತದೆ. ಅವನು ತಪ್ಪಿಸಿಕೊಳ್ಳುತ್ತಾನೆ.
ಅಂಬ್ರೋಸ್ ಬೀಎರ‍್ಸ್ ಬರೆದ ಸಣ್ಣಕತೆಯನ್ನು ಆಧರಿಸಿ ಈ ಚಿತ್ರ ತೆಗೆಯಲಾಗಿದೆ. ಈ ಚಿತ್ರ 1962ರಲ್ಲಿ ಕೇನ್ಸ್ ಚಿತ್ರೋತ್ಸವದಲ್ಲಿ ಪಾಮೆ ಡಿಒರ್ ಶಾರ್ಟ್ ಫಿಲ್ಮ್ ಪ್ರಶಸ್ತಿ ಪಡೆದಿದೆ. 1964 ರಲ್ಲಿ ಚಿತ್ರಕ್ಕೆ ಅಕಾಡೆಮಿ ಪ್ರಶಸ್ತಿ ಬಂತು.
* * *

ನಿರ್ದೇಶನ/ ಚಿತ್ರಕಥೆ: ರಾಬರ್ಟ್ ಎನ್ರಿಕೊ
ನಿರ್ಮಾಣ: ಪೌಲ್ ಡಿ ರೋಬಾಯಿಕ್ಸ್ ಮತ್ತು ಮಾರ್ಸೆಲ್ ಇಚಾಕ್
ಫೋಟೊಗ್ರಫಿ: ಜೀನ್ ಬಫೆಟಿ, ಸಂಗೀತ : ಹೆನ್ರಿ ಲಾನೊಎ
ನಿರ್ಮಾಣ ಕಂಪೆನಿ: ಫಿಲ್ಮಾರ್ಟಿಕ್/ಫಿಲ್ಮಸ್ ಡು ಸೆಂಟರ್
ತಾರಾಗಣ: ರೋಜರ್ ಜಾಕೆಟ್(ಪತಿ) ಆನ್ ಕೊರ್ನಲಿ, (ಪತ್ನಿ)

* * *

ಕಥಾ ಸಾರಾಂಶ:
ರೈಲು ಮಾರ್ಗಕ್ಕೆ ಅಡ್ಡ ಬಂದವರನ್ನು ತಕ್ಷಣವೇ ಗಲ್ಲು ಶಿಕ್ಷೆಗೆ ಏರಿಸಲಾಗುವುದು ಎಂಬುದನ್ನು ಹೇಳುವ ಸಂಕೇತದ ಶಾಟ್‌ನೊಂದಿಗೆ ಚಿತ್ರ ಆರಂಭವಾಗುತ್ತದೆ. ಅದಾದ ನಂತರ ಸೇತುವೆಯ ದೃಶ್ಯ. ಅಲ್ಲಿ ವ್ಯಕ್ತಿಯೊಬ್ಬನನ್ನು ಗಲ್ಲಿಗೇರಿಸಲು ಸೈನಿಕರು ಸಿದ್ಧತೆ ನಡೆಸುತ್ತಿರುತ್ತಾರೆ. ಮರದ ಹಲಗೆ ಒಂದು ಬದಿ ಸೇತುವೆ ಮೇಲಿದ್ದರೆ ಮತ್ತೊಂದು ಬದಿ ನದಿಯತ್ತ ಚಾಚಿಕೊಂಡಿದೆ. ಆ ವ್ಯಕ್ತಿಯನ್ನು ಅಲ್ಲಿಗೆ ಕರೆತಂದು ಮರದ ಹಲಗೆ ಮೇಲೆ ನಿಲ್ಲಿಸುತ್ತಾರೆ. ಆತನ ಕೈ ಕಾಲುಗಳನ್ನು ಕಟ್ಟಲಾಗಿದ್ದು ಒಂದು ವೇಳೆ ಆತ ಗಲ್ಲಿಗೇರುವಾಗ ಹಗ್ಗ ಕಡಿದು ಹೋದರೂ ಆತ ನೇರವಾಗಿ ನೀರಿಗೆ ಬೀಳುತ್ತಾನೆ. ಕೈ ಕಾಲು ಕಟ್ಟಿ ಹಾಕಿದ್ದರಿಂದ ಅಕಸ್ಮಾತ್ ಆತ ಈಜಿ ಬಚಾವ್ ಆಗುವ ಸಾಧ್ಯತೆಯೂ ಇಲ್ಲ.
ಮರದ ಹಲಗೆಯ ಮೇಲೆ ನಿಂತ ವ್ಯಕ್ತಿ ತನ್ನ ಸುತ್ತಲೂ ಶಸ್ತ್ರಾಸ್ತ್ರಗಳೊಂದಿಗೆ ನಿಂತ ಸೈನಿಕರನ್ನು ನೋಡುತ್ತಾನೆ. ಒಂದು ಕ್ಷಣ ಕಣ್ಣು ಮುಚ್ಚುತ್ತಾನೆ. ಅಲ್ಲಿ ಕಾಯುವ ಮಡದಿ ಕಾಣುತ್ತಾಳೆ. ಮತ್ತೆ ಕಣ್ತೆರೆದರೆ ಸಾವೇ ಬಳಿ ಬಂದು ನಿಂತಂತೆ ಕಾಣಿಸುತ್ತದೆ. ಕ್ಷಣಾರ್ಧದಲ್ಲಿ ಆತನ ಕುತ್ತಿಗೆಗೆ ಹಗ್ಗ ಬಿಗಿದು ಕಾಲ ಕೆಳಗಿನ ಹಲಗೆ ತೆಗೆದುಬಿಡುವಂತೆ ಅಧಿಕಾರಿ ಆದೇಶಿಸುತ್ತಾನೆ. ಆದೇಶ ಪಾಲನೆಯಾಗುತ್ತದೆ, ಮರದ ಹಲಗೆಯನ್ನು ತೆಗೆದುಬಿಡಲಾಗುತ್ತದೆ ಮತ್ತು ಹಗ್ಗ ಆತನ ಕುತ್ತಿಗೆಗೆ ಬಿಗಿದುಕೊಳ್ಳಲಾರಂಭಿಸುತ್ತದೆ. ಆದರೆ ಇದ್ದಕ್ಕಿದ್ದಂತೆಯೇ ಹಗ್ಗವೇ ಹರಿದು ವ್ಯಕ್ತಿ ನದಿಗೆ ಬಿದ್ದುಬಿಡುತ್ತಾನೆ. ನೀರಿನಾಳಕ್ಕೆ ಹೋಗುತ್ತಾ ಹೋಗುತ್ತಾ ತನ್ನನ್ನು ಸುತ್ತಿದ್ದ ಹಗ್ಗದಿಂದ ಆತ ಬಿಡಿಸಿಕೊಳ್ಳುತ್ತಾನೆ. ಕೈ ಕಾಲುಗಳು ನಿರಾಳವಾಗಿ ಆತ ನೀರಿನಿಂದ ಮೇಲೆ ಬರುತ್ತಾನೆ.

ನೀರಿನಿಂದ ಮೇಲೆ ಬಂದು ನಿಡಿದಾಗಿ ಉಸಿರೆಳೆದುಕೊಳ್ಳುತ್ತಲೇ ಜಗತ್ತು ಹಿಂದೆಂದಿಗಿಂತಲೂ ಸುಂದರವಾಗಿ ಕಾಣಿಸುತ್ತದೆ. ಮರಗಳು ಜೀವಂತಿಕೆಯಿಂದ ತುಂಬಿದಂತೆ ಗೋಚರಿಸುತ್ತದೆ. ಜೇಡವೊಂದು ಬಲೆ ನೇಯುತ್ತಿರುವುದನ್ನು ನೋಡುತ್ತಾನೆ. ಅಷ್ಟರಲ್ಲಿ ಸೈನಿಕರ ಗುಂಡಿನ ಸದ್ದು ಅವನ ಖುಷಿಯನ್ನು ಭಂಗ ಮಾಡುತ್ತದೆ. ಬಂದೂಕಿನ ಗುರಿಯಿಂದ ಪಾರಾಗಲು ಆತ ನದಿಯಲ್ಲಿ ವೇಗವಾಗಿ ಈಜಲಾರಂಭಿಸುತ್ತಾನೆ. ಸ್ವಲ್ಪ ದೂರದ ವರೆಗೆ ಬಂದೂಕು ಹೊತ್ತ ಸೈನಿಕರು ಅವನನ್ನು ಅಟ್ಟಿಕೊಂಡು ಬರುತ್ತಾರೆ. ಅನಂತರ ಅವನು ನೀರಿನ ಓಘದಲ್ಲಿ ಮುಂದೆ ಸಾಗಿ, ಸೈನಿಕರು ಹಿಂದೆ ಬೀಳುತ್ತಾರೆ. ಆ ಪ್ರಯಾಸಕರ ಈಜಿನಲ್ಲಿ ಜಲಪಾತವನ್ನೂ ದಾಟಿ ಪವಾಡ ಸದೃಶವಾಗಿ ದಡ ಸೇರುವಲ್ಲಿ ಯಶಸ್ವಿಯಾಗುತ್ತಾನೆ. ಅಷ್ಟರಲ್ಲಿ ಮೂರ್ಛೆ ಹೋಗಿರುತ್ತಾನಾದರೂ, ಪ್ರಜ್ಞೆ ಮರಳಿದಾಗ ತಾನಿನ್ನೂ ಜೀವ ಇರುವುದು ನೋಡಿ ಅವನಿಗೆ ಕಿರುಚುವಷ್ಟು ಖುಷಿಯಾಗುತ್ತದೆ. ಮರಳ ಮೇಲೆ ಉರುಳಿ, ಹೂವನ್ನು ಮೂಸಿ ಖುಷಿ ಪಡುತ್ತಾನೆ. ಅಲ್ಲಿಂದ ಅವನ ಪಯಣ ಮನೆಯತ್ತ. ಏಳುತ್ತಾ ಬೀಳುತ್ತಾ, ಕಾಡುಮೇಡು ದಾಟಿ ಊರು ಸೇರುವ ವೇಳೆಗೆ ಅವನ ಹೆಂಡತಿ ಅಚ್ಚರಿಯಿಂದ ಅವನನ್ನು ಎದುರುಗೊಳ್ಳುತ್ತಾಳೆ. ಇಬ್ಬರು ಓಡೋಡಿ ಬಂದು ಒಬ್ಬರನ್ನೊಬ್ಬರು ಅಪ್ಪಿಕೊಳ್ಳಬೇಕು…ಅಷ್ಟರಲ್ಲಿ ಢಂ…ಅಂತ ಗುಂಡಿನ ಸದ್ದು ಕೇಳುತ್ತದೆ. ನಂತರ ಕಾಣುವ ದೃಶ್ಯ ಔಲ್ ಕ್ರೀಕ್ ಸೇತುವೆ ಮೇಲೆ ನೇತಾಡುವ ಅವನ ಶವ.

ಸಿನಿಮಾದ ಹಿಂದಿರುವ ತಾತ್ವಿಕತೆ ಮತ್ತು ಅದರ ವಿಮರ್ಶೆ :
ನಾನು ಈ ಸಿನಿಮಾವನ್ನು ಎರಡು ರೀತಿಯಲ್ಲಿ ಅರ್ಥೈಸಿಕೊಂಡಿದ್ದೇನೆ. ರೋಬರ್ಟ್ ಎನ್ರಿಕೋ ನಿರ್ದೇಶನದ ಇನ್ಸಿಡೆಂಟ್ ಎಟ್ ಔಲ್ ಕ್ರೀಕ್ ಚಿತ್ರ ಮನುಷ್ಯನ ಜೀವನ್ಮುಖಿ ಧೋರಣೆಯನ್ನು ಬಿಂಬಿಸುತ್ತದೆ. ಯಾರಿಗೂ ಸಾವು ಇಷ್ಟವಿಲ್ಲ. ಸಾವಿನ ನಂತರ ಸ್ವರ್ಗದ ಸುಖವೇ ಲಭಿಸುತ್ತದೆ ಎಂಬ ಭರವಸೆ ದೊರೆತರೂ ಸಾಯುವುದಕ್ಕೆ ಯಾರಿಗೂ ಇಷ್ಟವಿರುವುದಿಲ್ಲ. ಸಾವಿಗೆ ಮುಖಮಾಡಿ ನಿಂತಾಗಲೂ ಆತ ಬದುಕಿನ ಕೈಯನ್ನೇ ಬಿಗಿಯಾಗಿ ಹಿಡಿದುಕೊಳ್ಳಬಯಸುತ್ತಾನೆ. ಎನ್ರಿಕೋನ ಚಿತ್ರದಲ್ಲಿ ಇದೇ ಅಂಶ ವ್ಯಕ್ತವಾಗಿದೆ.

ನಾಯಕನನ್ನು ಗಲ್ಲಿಗೇರಿಸಲು ತಯಾರಿ ನಡೆಯುತ್ತಿರುತ್ತದೆ. ಆದರೆ ಕಣ್ಣು ಮುಚ್ಚುವಾಗ ಅವನಿಗೆ ಕಾಣಿಸುವುದು ತನಗಾಗಿ ಕಾಯುತ್ತಿರುವ ಪತ್ನಿ. ಅಂದರೆ ಅವಳೊಂದಿಗೆ ಬಾಳಲು ಆಸೆಪಡುವ ಅವನಿಗೆ ಸಾವು ಬೇಕಾಗಿಲ್ಲ. ಆದರೆ ಕಣ್ತೆರೆಯುತ್ತಲೇ ಸುತ್ತಲೂ ತನ್ನತ್ತ ಬಂದೂಕು ಹಿಡಿದು ನಿಂತ ಸೈನಿಕರು ಕಾಣಿಸುತ್ತಾರೆ. ಅಲ್ಲಿಂತ ತಪ್ಪಿಸಿಕೊಳ್ಳದಂತೆ ಗುರಿಯಿಟ್ಟಿರುತ್ತಾರೆ. ಅಲ್ಲದೆ ಬದುಕುವ ಅಕಸ್ಮಾತ್ ಅವಕಾಶಗಳೂ ಅವನಿಗೆ ಲಭ್ಯವಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಆದರೆ ಹಗ್ಗ ಕಡಿದು ಆತ ನೀರಿಗೆ ಬಿದ್ದಾಗ ಅವನ ಅಪೇಕ್ಷೆ ನಿಜವಾಯಿತೆಂದೇ ನಂಬಬಯಸುತ್ತೇವೆ. ನೀಷೆ ಹೇಳುವಂತೆ ‘ಒಬ್ಬ ವ್ಯಕ್ತಿ ಯಾಕೆ ಬದುಕಬೇಕು ಎನ್ನುವುದನ್ನು ಸಮರ್ಥವಾಗಿದ್ದಾಗ ಹೇಗೆ ಬದುಕಬೇಕು ಎನ್ನುವ ಮನಸ್ಸಿನೊಳಗಿನ ಪ್ರತಿಧ್ವನಿಯನ್ನು ಬಹುತೇಕ ಸಹಿಸಿಕೊಳ್ಳಬಲ್ಲ. ಆದರೆ ಚಿತ್ರದ ಕೊನೆಗೆ ಆತನನ್ನು ಗಲ್ಲಿಗೇರಿಸಿರುವುದನ್ನು ಕಂಡಾಗಲೇ ನಾವು ನೋಡಿದ್ದೆಲ್ಲ ಕನಸು ಎನ್ನುವುದು ಅರಿವಾಗುತ್ತದೆ. ಅಂದರೆ ಬಚಾವಾಗಲು ಅವಕಾಶವೇ ಇಲ್ಲದೇ ಇದ್ದಾಗಲೂ ಆತ ಬದುಕುವ ಕನಸಿಗೆ ಜಾರುತ್ತಾ ಎಲ್ಲ ಕಷ್ಟಗಳನ್ನು ದಾಟಿ ಮನೆ ತಲುಪುತ್ತಾನೆ. ಆದರೆ ಮರದ ಹಲಗೆ ಜಾರಿ ಗಲ್ಲಿಗೇರುತ್ತಲೇ ಎಲ್ಲದಕ್ಕೂ ಒಂದು ಪೂರ್ಣವಿರಾಮ ಬೀಳುತ್ತದೆ. ಅಂದರೆ ಸಾವಿನ ಹೊಸ್ತಿಲಲ್ಲಿ ನಿಂತಾಗಲೂ ಆತನಿಗೆ ಯಾಕೆ ಬದುಕಬೇಕು ಎನ್ನುವ ಉತ್ತರವಿತ್ತು.
ಒಬ್ಬ ವ್ಯಕ್ತಿಯನ್ನು ಕೊಲ್ಲುವುದು ಎಂದರೆ ಏನು. ಅದು ವ್ಯಕ್ತಿಯ ದೇಹವನ್ನು ಕೊಲೆ ಮಾಡುವುದಷ್ಟೆಯೇ ಅಥವಾ ಅದಕ್ಕೂ ಮಿಗಿಲಾದದ್ದು ಏನಾದರೂ ಇದೆಯೇ ಎನ್ನುವ ಪ್ರಶ್ನೆಯನ್ನು ಇನ್ಸಿಡೆಂಟ್ ಎಟ್ ಔಲ್ ಕ್ರೀಕ್ ಚಿತ್ರ ಎತ್ತುತ್ತದೆ. ಅದೇ ವೇಳೆಗೆ ಉತ್ತರವನ್ನೂ ನೀಡುತ್ತದೆ.

ರೈಲು ಹಳಿಗಳಿಗೆ ಅಡ್ಡ ಬಂದ ತಪ್ಪಿಗಾಗಿ ಕಥಾನಾಯಕನನ್ನು ಗಲ್ಲಿಗೇರಿಸಲು ಔಲ್ ಕ್ರೀಕ್ ಸೇತುವೆಯ ಬಳಿ ಆತನನ್ನು ಕರೆತರುತ್ತಾರೆ. ಆದರೆ ಮರದ ಹಲಗೆಯನ್ನು ತೆಗೆದಾಗ ಆತನ ಕುತ್ತಿಗೆ ಸುತ್ತ ಬಿಗಿದ ಹಗ್ಗ ಕಡಿದು ಆತ ನೀರಿಗೆ ಜಾರಿ.. ಬಂಧ ಮುಕ್ತನಾಗುತ್ತಾನೆ. ಅಲ್ಲಿಂದ ಮನಸ್ಸು ಕನಸಿಗೆ. ಮನೆಯಲ್ಲಿ ಕಾಯುವ ಮಡದಿ….
ಆದರೆ ವಾಸ್ತವದಲ್ಲಿ ಆತನತ್ತ ಬಂದೂಕು ಗುರಿಯಿಟ್ಟ ಸೈನಿಕರ ನಡುವೆ ಆತ ಬಚಾವ್ ಆಗುವುದು ಸಾಧ್ಯವೇ ಇಲ್ಲ. ಆದರೂ ಕನಸಿನಲ್ಲಿ ಆತ ಎಲ್ಲ ಏಳುಬೀಳುಗಳನ್ನು ದಾಟಿ ಮನೆ ಸೇರುವುದು ಸಾಧ್ಯವಾಗುತ್ತದೆ. ಇನ್ನೇನು ಮಡದಿಯನ್ನು ಭೇಟಿಯಾಗಬೇಕು ಎನ್ನುವಷ್ಟರಲ್ಲಿ ಗುಂಡಿನ ಸದ್ದು. ದೃಶ್ಯ ಫಟಾಪಟ್ ಅಂತ ಬದಲಾಗಿ ಸೇತುವೆಯ ಪಕ್ಕ ಗಲ್ಲುಗಂಬದಲ್ಲಿ ತೂಗುತ್ತಿರುವ ಆತನ ದೇಹವನ್ನು ತೋರಿಸುತ್ತದೆ.
ಅಂದರೆ ನಾಯಕನಷ್ಟೇ ಸಾಯಲಿಲ್ಲ. ಆತನ ಹೃದಯದಲ್ಲಿ ಅಡಗಿದ್ದ ಕನಸನನ್ನೂ ಕೊಲ್ಲಲಾಯಿತು. ದೇಹವಷ್ಟೇ ಅಲ್ಲ, ಮನಸ್ಸನ್ನೂ ಕೊಲ್ಲಲಾಯಿತು. ಮನಸ್ಸಿನಲ್ಲಿ ಕಾಪಿಟ್ಟುಕೊಂಡಿದ್ದ ಎಲ್ಲ ಕನಸುಗಳೂ ಒಂದು ಅಂತ್ಯ ಕಂಡಿವೆ. ಮತ್ತೊಂದು ಆಯಾಮ ನೋಡುವುದಾದರೆ ಬಹುಶಃ ಗಂಡನಿಗಾಗಿ ಕಾಯುತ್ತಿದ್ದ ಪತ್ನಿಯ ಕನಸೂ ಕೊಲೆಯಾಗಿಬಿಡುತ್ತದೆ. ಬರೀ ಕನಸಷ್ಟೇ ಅಲ್ಲ, ಕನಸುಗಳ ಕೊಲೆಯಾಗುತ್ತದೆ ಎಂದರೆ ಸರಿ.

ವಿಷಯ ಸಂರಚನೆ
ಕಥೆ: ಅಂಬ್ರೋಸ್ ಬೀರ್ಸ್ ಎಂಬ ಕಥೆಗಾರನ ಕಥೆಯನ್ನಾಧರಿಸಿ ಈ ಚಿತ್ರಕಥೆಯನ್ನು ಹೆಣೆಯಲಾಗಿದೆ. ಮುದ್ರಣ ಮಾಧ್ಯಮದಲ್ಲಿದ್ದ ಕಥೆಯೊಂದನ್ನು ದೃಶ್ಯಮಾಧ್ಯಮಕ್ಕೆ ಅಳವಡಿಸಲಾದ ಕೃತಿಗಳಲ್ಲೇ ಇದು ಅತ್ಯುತ್ತಮವಾಗಿದೆ ಎಂದು ಪರಿಗಣಿಸಲ್ಪಟ್ಟಿದೆ. ನಾಯಕನ ಜೀವನ್ಮುಖಿ ದಾಹ, ಸುಂದರ ಕನಸಿನ ಸಾವನ್ನು ದೃಶ್ಯಮಾಧ್ಯಮದ ಎಲ್ಲ ಸಾಧ್ಯತೆಗಳನ್ನು ಬಳಸಿಕೊಂಡು ಯಶಸ್ವಿಯಾಗಿ ಬಿಂಬಿಸಲಾಗಿದೆ. ಕ್ಯಾಮರಾ, ಸಂಗೀತ, ಶಬ್ದ, ಬೆಳಕು, ಮತ್ತು ನೆರಳು ಮತ್ತಿತರ ಪೂರಕ ಸರಕುಗಳ ಬಳಕೆ ಸಂಪೂರ್ಣ ಯಶಸ್ವಿಯಾಗಿದೆ.

ಕಥಾ ಹಂದರ:
ಕಥಾ ನಾಯಕನನ್ನು ಗಲ್ಲಿಗೇರಿಸಲು ಔಲ್‌ಕ್ರೀಕ್ ಸೇತುವೆ ಬಳಿ ಕರೆದೊಯ್ಯುವುದರೊಂದಿಗೆ ಅಂದರೆ ಅಸಮತೋಲನದೊಂದಿಗೆ ಚಿತ್ರ ಆರಂಭವಾಗುತ್ತದೆ. ನಾಯಕ ಬಿಗಿದ ಹಗ್ಗವನ್ನು ಬಿಡಿಸಿಕೊಂಡು ನೀರಿನಿಂದ ಮೇಲೇಳುವಾಗ ಸಮತೋಲನ ಸಾಧ್ಯವಾಗುತ್ತದೆ. ಆದರೆ ಮತ್ತೆ ಸೈನಿಕರು ಅವನ ಬೆನ್ನೆಟ್ಟುವಾಗ ಅಸಮತೋಲನ ಮರಳಿದರೆ ನಾಯಕ ಅದೆಲ್ಲದರಿಂದ ತಪ್ಪಿಸಿಕೊಂಡು ದಡ ಸೇರುವಾಗ ಸಮತೋಲನ ಮರಳುತ್ತದೆ. ಆದರೆಗುಂಡಿನ ಸದ್ದು ಕೇಳಿ ಅಸಮತೋಲನ ಮತ್ತೆ ಛಾಪೊತ್ತುತ್ತದೆ. ನಾಯಕ ಕಾಡುಮೇಡು ದಾಟಿ ಮನೆ ಸೇರುತ್ತಾನೆ. ಆದರೆ ನಾಯಕನ ಕಾಲ್ಕೆಳಗಿನ ಮರದ ಹಲಗೆಯನ್ನು ತೆಗೆಯುವುದರೊಂದಿಗೆ ಸಮತೋಲನ ಕದಡುತ್ತದೆ. ಕನಸಿನ ಕೊಲೆಯಾಗುತ್ತದೆ. ನಾಯಕನ ಜೀವನವೂ ಅಂತ್ಯವಾಗುತ್ತದೆ.

ಪ್ರಸ್ತುತಪಡಿಸಿದ ಶೈಲಿ:
ಕಥೆಯನ್ನು ದೃಶ್ಯ ರೂಪಕ್ಕೆ ತರಲು ರೋಬೊರ್ಟ್ ಎನ್ರಿಕೊ ಬೆಳಕು, ಕ್ಯಾಮರಾ ಮತ್ತು ಸಂಕಲನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಬಳಸಿಕೊಂಡಿದ್ದಾರೆ. ಅಪಾಯದ ಸಂಕೇತವನ್ನು ಮರಕ್ಕೆ ನೇತು ಹಾಕಿದ ದೃಶ್ಯವೇ ಕಥೆಯ ಹಿನ್ನೆಲೆಯನ್ನು ತಿಳಿಸುತ್ತದೆ. ಔಲ್ ಕ್ರೀಕ್ ಸೇತುವೆಯ ಸಮಗ್ರ ದೃಶ್ಯ ಕಥೆ ನಡೆಯುವ ಜಾಗವನ್ನು ತಿಳಿಸುತ್ತದೆ. ನಾಯಕನನ್ನು ಸೈನಿಕರು ಕರೆದೊಯ್ಯುವ ಸಮೀಪದ ಶಾಟ್ ಮತ್ತು ರೈಲುಮಾರ್ಗದ ದಾಟಲು ಮುಂದಾದ ಆತನಿಗೆ ನೀಡುವ ಶಿಕ್ಷೆಯ ಪ್ರಕಟಣೆ ಇಡೀ ಕಥೆಯ ಹಂದರವನ್ನು ಆರಂಭದಲ್ಲಿ ಬಿಚ್ಚಿಡುತ್ತದೆ.

ಸಮೀಪದ ಶಾಟ್‌ಗಳು ನಾಯಕನ ಅಂತರಾಳದ ಭಾವನೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸಲು ಸಹಕಾರಿಯಾಗಿವೆ. ಆತನ ಮನಸ್ಸಿನಲ್ಲಿ ಇಣುಕುವ ಬದುಕುವಾಸೆ, ಬೇಸರ ನಿರಾಸೆ ಎಲ್ಲವೂ ಸ್ಪಷ್ಟವಾಗಿ ಗೋಚರಿಸುತ್ತಿವೆ. ಉದಾಹರಣೆಗೆ ಚಿತ್ರದ ಆರಂಭದಲ್ಲಿ ಕ್ಯಾಮರಾ ನಿಧಾನವಾಗಿ ಚಲಿಸುತ್ತಾ ಸಾವಿನ ಕಳೆಯಿರುವ ಸನ್ನಿವೇಶವನ್ನು ಬಿಂಬಿಸುತ್ತದೆ. ಸಾಲ್ಮರಗಳ ದೃಶ್ಯದಲ್ಲಿ ಕ್ಯಾಮರಾ, ನಾಯಕ ಅಲ್ಲಿಗೆ ಬರುವವರೆಗೆ ಕಾಯುತ್ತಾ ಆತ ಬರುತ್ತಲೇ ಆತನೊಂದಿಗೆ ಚಲಿಸುತ್ತದೆ. ಆತ ಬಿದ್ದಾಗ ನಿಲ್ಲುವ ಕ್ಯಾಮರಾ ಚಲನೆ ಆತ ಮೇಲೆದ್ದು ಓಡಲಾರಂಭಿಸಿದಾಗ ಆತನೊಂದಿಗೇ ಸಾಗುತ್ತದೆ.
ಬೆಳಕೂ ಹಾಗೆ. ಮಂಕಾಗಿ ದುಃಖದ ಛಾಯೆಯನ್ನು ವ್ಯಾಪಿಸುತ್ತದೆ. ನಾಯಕನ ಪತ್ನಿಯನ್ನು ತೋರಿಸುವಾಗ ತಿಳಿಬೆಳಕಿನ ಬಳಕೆ ಇದೆ. ಅದು ಆತನ ಕನಸಿನ ಲೋಕ ಎಂಬುದನ್ನು ಬಿಂಬಿಸುವುದಲ್ಲದೆ ಪತ್ನಿ ಬಗ್ಗೆ ಆತನಲ್ಲಿರುವ ಹಿತಭಾವವನ್ನೂ ಸೂಚಿಸುತ್ತದೆ. ಡ್ರಮ್ ಸದ್ದು ಒತ್ತಡದ ವಾತಾವರಣ ನಿರ್ಮಿಸಿದರೆ ಸಂಗೀತ ನಾಯಕನ ಖುಷಿಯನ್ನು ಸೆರೆ ಹಿಡಿಯುತ್ತದೆ. ನಿರ್ದೇಶಕ ಹೇಳ ಹೊರಟ ವಿಚಾರ ಪ್ರೇಕ್ಷಕನಿಗೆ ತಲುಪುತ್ತದೆ.
ಕಲಾಸೌಂದರ್ಯ ಮತ್ತು ತಂತ್ರಜ್ಞಾನ

ಕ್ಯಾಮರಾ ಚಲನೆ: ಇಡೀ ಚಿತ್ರದಲ್ಲಿ ಕ್ಯಾಮರಾ ಚಲನೆ ಅತ್ಯದ್ಭುತವಾಗಿದೆ. ಅದೊಂದು ಅಂತರ್ಗತ ಪ್ರೇಕ್ಷಕನಂತೆ ಕೆಲಸ ಮಾಡಿ ಪ್ರೇಕ್ಷಕನ್ನೂ ಚಿತ್ರದೆಡೆಗೆ ಸೆಳೆದುಕೊಳ್ಳುವಂತೆ, ನಾಯಕನ ಬಗ್ಗೆ ಅನುಕಂಪ ಮೂಡುವಂತೆ ಮಾಡುತ್ತದೆ. ಆರಂಭದ ದೃಶ್ಯ ಚಲನೆಯಲ್ಲಿಯೇ ಕ್ಯಾಮರಾ ನಿಧಾನವಾಗಿ ಸೇತುವೆ ಹತ್ತಿರ ಚಲಿಸುತ್ತಾ ಬೇಸರದ ಛಾಯೆ ಮೂಡಿಸುತ್ತದೆ. ಕ್ಯಾಮರಾ ಆಕಾಶದಲ್ಲಿ ಚಲಿಸುತ್ತಾ ಒಣಗಿದ ಮರಗಳನ್ನು ಸೆರೆ ಹಿಡಿದು ಸಾವನ್ನು ತೆರೆ ಮೇಲೆ ಸೂಚಿಸುವಲ್ಲಿ ಯಶಸ್ವಿಯಾಗುತ್ತದೆ. ಆಯುಧಗಳು, ಸೈನಿಕರ ಪಡೆ ಎಲ್ಲವೂ ಸೇನೆಯ ಸಾಮರ್ಥ್ಯವನ್ನು ತೋರಿಸುತ್ತದೆ.

ಮರದ ಹಲಗೆಯ ಮೇಲೆ ನಾಯಕ ನಿಂತಿರುವ ಪಾಯಿಂಟ್ ಅಫ್ ವಿವ್ ಶಾಟ್, ಎಲ್ಲವೂ ಅಂತ್ಯದ ಕ್ಷಣಗಳನ್ನು ಸಮೀಪಿಸಿದೆ ಎಂದು ಹೇಳುತ್ತದೆ. ನಾಯಕನ ಕಾಲುಗಳ ಬಳಿಯಿಂದ ಆರಂಭವಾಗುವ ಕ್ಯಾಮರಾ ಚಲನೆ ಆತನ ಮುಖದ ಹತ್ತಿರಕ್ಕೆ ಚಲಿಸಿ ಅವನ ಭಾವನಗಳನ್ನು ಸೆರೆ ಹಿಡಿಯಲು ಯತ್ನಿಸುತ್ತದೆ. ಅಲ್ಲಿಂದ ತಕ್ಷಣವೇ ಕಡಿದುಕೊಳ್ಳುವ ದೃಶ್ಯ ಲಂಘಿಸುವುದು ನಾಯಕನ ಪತ್ನಿ ಕುಳಿತಿರುವ ಮನೆಗೆ. ಕ್ಲೋಸಪ್ ಶಾಟ್‌ನಲ್ಲಿ , ಹಿಂಡಿದಂತೆ ಕಾಣಿಸುವ ನಾಯಕನ ಮುಖ ಮನದ ನೋವನ್ನು ಬಿಂಬಿಸುತ್ತದೆ. ನಂತರದ ಶಾಟ್ ಬಿಗಿದ ಕೈಗಳು…ಬಿಡಿಸಿಕೊಳ್ಳಲು ಯತ್ನಿಸುತ್ತಿರುವ ಬೆರಳುಗಳು. ಬದುಕುವುದಕ್ಕಾಗಿ ಅಲ್ಲಿಂದ ಬಚಾವಾಗುವ ತೀವ್ರ ಆಸೆಯನ್ನು ಹೇಳುತ್ತವೆ. ನಾಯಕನ ಕುತ್ತಿಗೆಗೆ ಬಿಗಿಯಲಾಗಿದ್ದ ಹಗ್ಗ ಕಡಿದು ಆತ ನೀರಿಗೆ ಬೀಳುವಾಗ ಕ್ಯಾಮರಾ ಆತನನ್ನು ಅನುಸರಿಸುತ್ತದೆ. ಅಲ್ಲದೆ ಆತ ತನ್ನ ಕೈಗಳಿಗೆ ಕಟ್ಟಲಾದ ಹಗ್ಗಗಳನ್ನು ಬಿಡಿಸುವುದನ್ನು ಪ್ರೇಕ್ಷಕ ಕಲ್ಪನೆ ಮಾಡಿಕೊಳ್ಳುವಂತೆ ಮಾಡುತ್ತದೆ. ನೀರೊಳಗಿನ ಕ್ಲೋಸಪ್ ಶಾಟ್‌ಗಳೂ ನಾಯಕನ ಬದುಕುವ ತುಡಿತವನ್ನು ಹೇಳುತ್ತವೆ.

ನೀರಿನಿಂದ ಹೊರ ಬಂದದ್ದೇ ಆತನಿಗೆ ಇಡೀ ಜಗವೇ ಸುಂದರವಾಗಿ ಗೋಚರಿಸುತ್ತದೆ. ಜೇಡನ ಬಲೆ, ಗಿಡಗಳ ಹಸಿರು, ಪಾತರಗಿತ್ತಿ ಎಲ್ಲವೂ ಚೆಂದವೋ ಚೆಂದ. ಆದರೆ ಚೆಂದ ನೋಡುತ್ತಲೇ ಗುಂಡಿನ ಸದ್ದು ಕೇಳಿಸುತ್ತದೆ. ಸಾವಿನ ಭಯದಿಂದ ನಾಯಕ ಈಜಿ ಈಜಿ ಪಾರಾಗುತ್ತಾನೆ. ಹಸುರು ಮರಗಳು ಮತ್ತು ಆಕಾಶದ ನೋಟ ಮತ್ತೆ ಚೆಂದವಾಗಿ ಗೋಚರಿಸುತ್ತದೆ. ಮುಂದಿನ ದೃಶ್ಯದಲ್ಲಿ ನಾಯಕ ಔವ್ಲ್ ಕ್ರೀಕ್ ಸೇತುವೆಯಿಂದ ಬಹುದೂರ ಚಲಿಸಿ ನದಿಯ ಅಲೆಗಳ ಜೊತೆಗೆ ಸಾಗಿರುತ್ತಾನೆ. ಜಲಪಾತವನ್ನೂ ದಾಟಿ ದಡ ಸೇರಿರುತ್ತಾನೆ.

ದಡದಲ್ಲಿ ಕ್ಯಾಮರಾ ಎಲೆ ಹೂಗಳ ರಂಗನ್ನು ಸೆರೆ ಹಿಡಿಯುವ ಮೂಲಕ ನಾಯಕನ ಖುಷಿ, ಬದುಕು ಸುಭದ್ರ ಎನ್ನುವ ಭಾವನೆಯನ್ನು ಪ್ರತಿಬಿಂಬಿಸುತ್ತದೆ. ಮತ್ತೆ ಗುಂಡಿನ ಸದ್ದು. ಮತ್ತೆ ನಾಯಕನ ಓಟ. ಕ್ಯಾಮರಾ ಚಲನೆಯೇ ವೇಗ. ಒಣಗಿದ ಮರಗಳು ನಾಯಕನ ಜೀವ ಮತ್ತೆ ಅತಂತ್ರವಾಗಿದೆ ಎಂದು ಹೇಳುತ್ತವೆ. ಮತ್ತೆ ಇಕ್ಕೆಲಗಳಲ್ಲಿಯೂ ಮರಗಳಿರುವ ದಾರಿಯನ್ನು ಕ್ರಮಿಸುತ್ತಾ, ಆತ ಮುಗ್ಗರಿಸಿದಾಗ ಕ್ಯಾಮರಾ ಕೂಡ ಅನುಕಂಪದಿಂದ ನಿಂತುಬಿಟ್ಟಂತೆ ಭಾಸವಾಗುತ್ತದೆ. ಕೊನೆಗೆ ಆತ ಮನೆ ತಲುಪುತ್ತಲೇ ಪತ್ನಿ ಆತನ ಬಳಿಗೆ ಓಡೋಡಿ ಬರುತ್ತಾಳೆ. ಆದರೆ ಆಕೆಯ ಓಟ ತುಂಬಾ ನಿಧಾನವಾಗಿಯೂ, ಆತನ ಓಟ ವೇಗವಾಗಿಯೂ ಕಾಣಿಸುತ್ತದೆ. ಆದರೆ ಆತ ವೇಗವಾಗಿ ಓಡಿದಂತೆ ಕಂಡರೂ ಮುಂದೆ ಸಾಗುತ್ತಿಲ್ಲ. ನಿಂತ ಜಾಗದಲ್ಲಿಯೇ ಓಡುತ್ತಿರುವಂತೆ ಭಾಸವಾಗುತ್ತದೆ. ಅಂದರೆ ವಾಸ್ತವದಲ್ಲಿ ಆತ ಪತ್ನಿಯಿಂದ ಬಹುದೂರ ಇದ್ದಾನೆ ಎಂಬುದನ್ನು ಸೂಚಿಸುತ್ತದೆ.
ಸಂಕಲನ: ಡೇವಿಡ್ ಕಾಯ್ನಿಕ್ ‘ಫಿಲ್ಮ್ : ರಿಯಲ್ ಆಂಡ್ ರೀಲ್ ಎಂಬ ತನ್ನ ಪುಸ್ತಕದಲ್ಲಿ ಒಂದು ಮಾತು ಹೇಳುತ್ತಾರೆ. ಶಾಟ್‌ಗಳ ಸಂಕಲನದ ಮೂಲಕ ಸಂಕಲನಕಾರ ಹೇಗೆ ಪ್ರೇಕ್ಷಕನೊಂದಿಗೆ ಸಂವಹನ ನಡೆಸಬಹುದು ಎಂಬುದಕ್ಕೆ ಎನ್ರಿಕೋ ಅವರ ಅಖರೆನ್ಸ್ ಎಟ್ ಔಲ್ ಕ್ರೀಕ್ ಚಿತ್ರ ಉತ್ತಮ ಉದಾಹರಣೆ ಎನ್ನುತ್ತಾರೆ.

ಇದನ್ನು ಆಲಿಕೆ ಮಾದರಿಯ ಎಡಿಟ್ ಅಂತ ಡೇವಿಡ್ ಹೇಳುತ್ತಾರೆ. ಚಿತ್ರ ತೆರೆದುಕೊಳ್ಳುವುದೇ ರೈಲುಮಾರ್ಗಕ್ಕೆ ಅಡ್ಡ ಬರುವಾತನನ್ನು ತಕ್ಷಣವೇ ಗಲ್ಲಿಗೇರಿಸುವ ಶಿಕ್ಷೆಯನ್ನು ಸೂಚಿಸುವ ಸಂಕೇತದಿಂದ. ಇದು ಕಥೆಯ ಹಿನ್ನೆಲೆ ಮಾಹಿತಿ ನೀಡುತ್ತದೆ. ಎರಡನೇ ಶಾಟ್ ಕಥೆ ನಡೆಯುವ ದಟ್ಟ ಮರಗಳ ಪ್ರದೇಶ ಮತ್ತು ಅಲ್ಲಿ ಏನೋ ನಡೆಯಲಿದೆ ಎನ್ನುವುದನ್ನು ವಿವರಿಸುತ್ತದೆ. ನಂತರ ಸೈನಿಕರು, ಅವರ ಕೈಯಲ್ಲಿ ಹಗ್ಗ ಹಾಗೂ ಅವರನ್ನು ಅನುಸರಿಸುವ ವ್ಯಕ್ತಿ.. ಎಲ್ಲವೂ ಆತ ರೈಲು ಮಾರ್ಗಕ್ಕೆ ಅಡ್ಡ ಬಂದಿದ್ದಾನೆ ಮತ್ತು ಶಿಕ್ಷೆಗೊಳಪಡಲಿದ್ದಾನೆ ಎನ್ನುವ ವಿಚಾರವನ್ನು ಸ್ಪಷ್ಟಪಡಿಸುತ್ತದೆ. ಡೇವಿಡ್ ಪ್ರಕಾರ ಸಂಕಲನಕಾರ ಪ್ರೇಕ್ಷಕನ ಗಮನವನ್ನು ಆರೋಪಿ ವ್ಯಕ್ತಿಯತ್ತ ಗಮನಹರಿಸುವಂತೆ ಮಾಡಲು ಆಲಿಕೆ ಶೈಲಿಯ ಸಂಕಲನ ಪ್ರಕ್ರಿಯೆ ಬಳಸಿದ್ದಾನೆ. ಅಂದರೆ ಮೊದಲು ವಿಸ್ತೃತವಾದ ಸನ್ನಿವೇಶಗಳ ಮೂಲಕ ಗಮನ ವ್ಯಕ್ತಿಯತ್ತ ಕೇಂದ್ರೀಕೃತವಾಗುವಂತೆ ಮಾಡಿದ್ದಾನೆ. ವ್ಯಕ್ತಿಯನ್ನು ನೋಡುತ್ತಲೇ ಪರಿಸ್ಥಿತಿಯೂ ಆತನಿಗೆ ವಿಧಿಸಲಾದ ಶಿಕ್ಷೆಯ ಅರಿವೂ ಪ್ರೇಕ್ಷಕನಿಗೆ ಗೊತ್ತಾಗಿರುತ್ತವೆ.

ಆತ ಪತ್ನಿಯ ಕುರಿತು ಯೋಚಿಸುವಾಗ ಆಕೆಯ ಚಲನೆ ಸಹಜ ವೇಗದಲ್ಲಿ ಇರುವುದಿಲ್ಲ. ನಂತರ ನಾಯಕ ವಾಸ್ತವಕ್ಕೆ ಬರುತ್ತಲೇ ಎಲ್ಲ ಶಾಟ್‌ಗಳ ಚಲನೆ ಸಹಜ ವೇಗಕ್ಕೆ ಬರುತ್ತದೆ. ಆತ ನೀರಿನಿಂದ ಆಚೆ ಬರುವ ವೇಳೆಯೂ ಆತನ ಖುಷಿಗೆ ಸೈನಿಕರು ಅಡ್ಡಾಗುತ್ತಾರೆ. ಆಗ ಸೈನಿಕರ ಚಲನೆಯೂ ಸಹಜವಾದ ವೇಗದಲ್ಲಿ ಇರುವುದಿಲ್ಲ. ಅಂತಿಮವಾಗಿ ನಾಯಕ ಮನೆ ತಲುಪುವಾಗ ಮತ್ತೊಮ್ಮೆ ಆತನ ಪತ್ನಿಯ ಚಲನೆ ಸಹಜ ಗತಿಯಲ್ಲಿರುವುದಿಲ್ಲ. ಹೀಗೆ ನಿಧಾನ ಗತಿ (ಸ್ಲೋ ಮೋಷನ್)ಯ ತಂತ್ರವನ್ನು ಬಳಸುವ ಸಂಕಲನಕಾರ, ನಾಯಕನ ಪಾರಾಗುವಿಕೆ ನೈಜವಾಗಿಲ್ಲ ಎನ್ನುವುದನ್ನು ತೋರಿಸಬಯಸುತ್ತಾನೆ. *
ಇನ್ನು ನಾಯಕ ಪತ್ನಿಯ ಕುರಿತು ಚಿಂತಿಸುತ್ತಿರುವಾಗಲೇ ಹಗ್ಗ ಆತನ ಕುತ್ತಿಗೆ ಸುತ್ತ ಬಿಗಿದುಕೊಳ್ಳುವ ಮೂಲಕ ಆ ಯೋಚನೆ ಮುರಿಯುತ್ತದೆ. ಹೀಗೆ ಶಾಟ್‌ಗಳ ಅಳವಡಿಕೆಯ ಮೂಲಕವೇ ಸಂಕಲನಕಾರ ಇಡೀ ದೃಶ್ಯವನ್ನು ಮನಃಕಲಕುವಂತೆ ಮಾಡುತ್ತಾರೆ. ಸಿನೆಮಾದ ಸಂಕಲನಕಾರ ಡೆನಿಸ್ ಡಿ ಕ್ಯಾಸಬಿಯಾಂಕಾ. ನಾಯಕ ನೀರೊಳಗೆ ಇರುವ ದೃಶ್ಯಕ್ಕೆ ಕತ್ತರಿಯಾಡಿಸುವುದಿಲ್ಲ. ಅದರ ಸುದೀರ್ಘ ಅವಧಿಯನ್ನು ಹಾಗೆಯೇ ಬಿಟ್ಟು, ನಾಯಕನ ಬದುಕುವ ಆಸೆಯನ್ನು ವ್ಯಕ್ತಪಡಿಸಲು ಬಯಸುತ್ತಾನೆ. ಅದೇ ವೇಳೆಗೆ ಪ್ರೇಕ್ಷಕನಲ್ಲೂ ಆತನ ಬಗ್ಗೆ ಅನುಕಂಪ ಮೂಡುತ್ತದೆ. ಡಾನ್ ಲಿವಿಂಗ್‌ಸ್ಟನ್ ಫಿಲ್ಮ್ ಆಂಡ್ ಡೈರೆಕ್ಟರ್ ಹೇಳುವಂತೆ ದೃಶ್ಯ ದೀರ್ಘವಾದಷ್ಟೂ ಅಲ್ಲಿ ಭಾವನಾತ್ಮಕತೆ ನೆಲೆಗೊಳ್ಳುತ್ತದೆ.

ಬದುಕಿಗಾಗಿ ನಾಯಕ ಈಜುತ್ತಿರುವಾಗ ಗುಂಡಿನ ದಾಳಿಯಿಂದ ತಪ್ಪಿಸಿಕೊಳ್ಳಲು ಮತ್ತೊಮ್ಮೆ ನೀರೊಳಗೆ ಮಾಯವಾಗುತ್ತಾನೆ. ಇನ್ನೊಂದು ಕಡೆ ಹಾವಿನ ಬಾಯಿಯಿಂದ ಬಚಾವಾಗುತ್ತಾನೆ. ನೀರೊಳಗಿನ ಶಾಟ್‌ನ್ನು ಭಿನ್ನವಾಗಿಯೇ ಚಿತ್ರಿಸಲಾಗುತ್ತದೆ. ಆದರೆ ಅದನ್ನು ಎಷ್ಟು ಸುಂದರವಾಗಿ ಎಡಿಟ್ ಮಾಡಲಾಗಿದೆ ಎಂದರೆ ಕ್ಯಾಮರಾವೇ ಆತನೊಂದಿಗೆ ನೀರೊಳಗೆ ಚಲಿಸಿದಂತೆ ಭಾಸವಾಗುತ್ತದೆ. ಆತ ಕಾಡಿನಲ್ಲಿ ಓಡುವಾಗಲಂತೂ ಶಾಟ್‌ಗಳನ್ನು ಎಷ್ಟು ಚೆಂದಾಗಿ ಕಟ್ ಮಾಡಿದ್ದಾರೆಂದರೆ ಅದು ನೈಜವಾಗಿಯೇ ಇದೆಯೇನೊ ಎನ್ನುವಂತೆ. ಕೊನೆಯಲ್ಲಿ ಮತ್ತೆ ಆತ ಪತ್ನಿಯ ಬಳಿಗೆ ಓಡುವ ದೃಶ್ಯವನ್ನೇ ತೋರಿಸಲಾಗುತ್ತದೆ. ನಿಂತ ಜಾಗದಲ್ಲಿಯೇ ಮತ್ತೆ ಮತ್ತೆ ಓಡಿದಂತೆ ತೋರುತ್ತದೆ. ಆದರೆ ಆತ ಮುಂದುವರೆಯುತ್ತಿಲ್ಲ. ಹಾಗೆಯೇ ಅದು ನೈಜ ವೇಗದಲ್ಲಿರುವುದಿಲ್ಲ ಎನ್ನುವುದೂ ಗಮನಾರ್ಹ. ಅಂದರೆ ಮನೆ ಸೇರುವ ಅವನಾಸೆ, ಬದುಕುವಾಸೆ ಎಲ್ಲವೂ ಕನಸು. (ಚಿತ್ರಗಳಲ್ಲಿ ನಿಧಾನಗತಿಯ ಶಾಟ್‌ಗಳು ಅದು ವಾಸ್ತವ ಅಲ್ಲ ಎನ್ನುವುದನ್ನು ಸೂಚಿಸುತ್ತದೆ.)

ಇನ್ನೂ ಮುಖ್ಯ ಸಂಗತಿ ಎಂದರೆ ಫೇಡ್ ಇನ್, ಫೇಡ್ ಔಟ್, ಡಿಸಾಲ್ವ್ ಅಥವಾ ವೈಪ್ ತಂತ್ರವನ್ನು ಚಿತ್ರದಲ್ಲಿ ಎಲ್ಲಿಯೂ ಬಳಸಿಲ್ಲ. ಎಲ್ಲ ಕಡೆಯೂ ಶಾಟ್‌ಗಳನ್ನು ಕಟ್ ಮಾಡಿ ಸಂಕಲನ ಮಾಡಲಾಗಿದೆ.
ಶಬ್ದ: ಹೆಜ್ಜೆ, ಹಕ್ಕಿಗಳ ಇಂಚರ, ಸೈನಿಕರ ಕಹಳೆ, ಮರಗಳ ನಡುವಿನ ಸದ್ದು, ನೀರಿನ ಸದ್ದು ಮತ್ತು ನಾಯಕನ ಆಳವಾದ ಉಸಿರು ಹೀಗೆ ಚಿತ್ರದ ಬಹುತೇಕ ಭಾಗಗಳಲ್ಲಿ ಸಹಜ ಶಬ್ದವನ್ನೇ ಬಳಸಲಾಗಿದೆ. ಇದು ಚಿತ್ರಕ್ಕೆ ಮತ್ತಷ್ಟು ಸಹಜತೆಯನ್ನು ನೀಡಿದೆ. ಅಲ್ಲದೆ ನಡುವೆ ಸ್ಮಶಾನವನ್ನೇ ನೆನಪಿಸುವ ಮೌನವಿದೆ.

ನಾಯಕ ನೀರಲ್ಲಿ ಮುಳುಗೆದ್ದು ಸುಂದರ ಜಗತ್ತನ್ನು ನೋಡುವ ಕ್ಷಣದಲ್ಲಿ ಹಿನ್ನೆಲೆಯಲ್ಲಿ ಸಂಗೀತ ಕೇಳಿಸುತ್ತದೆ. ತಾನು ಬದುಕಿದ್ದೇನೆ ಎನ್ನುವ ಖುಷಿ ಮತ್ತು ನಾಯಕನಿಗೆ ಗೋಚರಿಸುವ ಜಗತ್ತಿನ ಸೌಂದರ್ಯ ಖಂಡಿತಾ ಮೌನದಲ್ಲಿ ವ್ಯಕ್ತವಾಗದು. ಆದ್ದರಿಂದ ನಿರ್ದೇಶಕ ಸಂಗೀತಕ್ಕೆ ಮೊರೆ ಹೋಗುತ್ತಾನೆ. ನಾಯಕ ದಡ ಸೇರಿ ಸೈನಿಕರಿಂದ ಪಾರಾದಾಗಲೂ ಸಂಗೀತವಿದೆ. ಕೊನೆಗೆ ಆತ ಮನೆ ತಲುಪಿ ಪತ್ನಿ ಆತನೆಡೆಗೆ ಓಡಿ ಬರುವಾಗಲೂ ಸಂಗೀತ ಕೇಳಿಸತ್ತದೆ. ಆದ್ದರಿಂದ ಪರಿಸ್ಥಿತಿಯ ಸಮತೋಲನದ ಯತ್ನದ ಸಂದರ್ಭದಲ್ಲಿ ಮಾತ್ರ ಸಂಗೀತವನ್ನು ನಿರ್ದೇಶಕ ಬಳಸಿರುವಂತೆ ತೋರುತ್ತದೆ.

ಚಿತ್ರ ಅರಂಭವಾಗುವಾಗ ಕೇಳಿಸುವ ಡ್ರಂಬೀಟ್ಸ್ ಸ್ವಲ್ಪ ಹೊತ್ತಿಗೇ ಮರೆಗೆ ಸರಿಯುತ್ತದೆ. ನಂತರ ಆತ ತಾನು ಬದುಕುಳಿದ ಖುಷಿಯಲ್ಲಿ ಓಡುತ್ತಿರುವಾಗ, ಸೈನಿಕರ ಗುಂಡಿನ ಸದ್ದಿನ ನಡುವೆ ಇದೇ ಡ್ರಂಬೀಟ್ಸ್ ಕೇಳಿಸುತ್ತದೆ. ಆತ ಮನೆ ತಲುಪುವವರೆಗೂ ಮುಂದುವರೆದು ಆತ ಕನಸಿನಿಂದ ಹೊರಬರುವ ಕ್ಷಣಕ್ಕೆ ನಿಲ್ಲುತ್ತದೆ.
ಸಂಗೀತ ಸಮತೋಲನ ಸ್ಥಾಪಿಸುವ ಯತ್ನವನ್ನು ಸಂಕೇತಿಸಿದರೆ ಡ್ರಂಬೀಟ್ಸ್ ಮತ್ತು ಮೌನ ಅಸಮತೋಲನವನ್ನು ಹೇಳುತ್ತದೆ. ಅದು ನಾಟಕೀಯ ಆತಂಕವನ್ನು ಸೃಷ್ಟಿಸುತ್ತದೆ. ಇದೊಂದು ಶಬ್ದ ಬಳಕೆಯ ತಂತ್ರ. ಅಂದರೆ ಪ್ರೇಕ್ಷಕ ದೃಶ್ಯವೊಂದನ್ನು ನೋಡುತ್ತಲೇ ಇರುವಾಗ ನಿಧಾನವಾಗಿ ಮುಂದಿನ ದೃಶ್ಯಕ್ಕೆ ಸಂಬಂಧಿಸಿದ ಸಂಗೀತ ಕೇಳಲಾರಂಭಿಸುತ್ತದೆ. ಪ್ರೇಕ್ಷಕನೂ ಪ್ರಜ್ಞಾಪೂರ್ವಕವಾಗಿ ಮುಂದಿನ ದೃಶ್ಯವನ್ನು ಗ್ರಹಿಸುತ್ತಾನೆ. ಈ ಶೈಲಿಯನ್ನು ಬಳಸುವ ರಾಬರ್ಟ್, ನಾಯಕ ಜೀವ ಉಳಿಸಿಕೊಳ್ಳಲು ಈಜುವಾಗ ಮತ್ತು ಮರಗಳ ಮುಂಚೂಣಿಯೂ ಆಕಾಶವೂ ಕಾಣಿಸುವಾಗ ಅಲೆಗಳ ಸದ್ದು ಕೇಳಿಸುತ್ತದೆ. ಮರುಕ್ಷಣವೇ ಆತ ಅಲೆಗಳೊಂದಿಗೆ ಸಾಗುವ ದೃಶ್ಯ ಕಾಣಿಸುತ್ತದೆ.
ಬೆಳಕು: ‘ಫಿಲ್ಮ್ ಆಂಡ್ ಡೈರೆಕ್ಟರ್ ಕೃತಿಯಲ್ಲಿ ಡಾನ್ ಲಿವಿಂಗ್‌ಸ್ಟನ್ ಹೇಳುತ್ತಾರೆ: ಸಾಮಾನ್ಯವಾಗಿ ಮಸುಕು ದೃಶ್ಯ ಅಥವಾ ಕಡಿಮೆ ಬೆಳಕಿರುವ ದೃಶ್ಯ ನಿಗೂಢತೆ ಮತ್ತು ನಾಟಕೀಯತೆಯನ್ನು ಬಿಂಬಿಸುತ್ತದೆ. ಸಾಕಷ್ಟು ಬೆಳಕು ಬಳಸುವ ಹೊಳಪಿನ ದೃಶ್ಯಗಳು ಹಾಸ್ಯ ಅಥವಾ ಖುಷಿಯ ಮೂಡ್‌ಗೆ ಸರಿ ಹೊಂದುತ್ತದೆ.

ಹಾಗಾಗಿ ಎನ್ರಿಕೋ ಈ ಚಿತ್ರದಲ್ಲಿ ಮಸುಕು ದೃಶ್ಯಗಳನ್ನೇ ಚಿತ್ರಿಸುತ್ತಾನೆ. ಕಡಿಮೆ ಬೆಳಕು ನಾಯಕನ ವಾಸ್ತವ ಸ್ಥಿತಿ ಮತ್ತು ಮನಸ್ಥಿತಿಯನ್ನು ಬಿಂಬಿಸುತ್ತದೆ. ಅಲ್ಲದೆ ಚಿತ್ರ ಹೇಳುವ ಬೇಸರ ಕಥೆಗೆ ಹಿನ್ನೆಲೆ ನಿರ್ಮಾಣ ಮಾಡುತ್ತದೆ. ಆದರೆ ನಾಯಕ ನೀರೊಳಗಿನಿಂದ ಎದ್ದು ಬರುವಾಗ ಸಾಕಷ್ಟು ಬೆಳಕಿನ ಬಳಕೆಯಿದ್ದರೆ ದಡ ಸೇರುತ್ತಲೇ ಮತ್ತೆ ಮಸುಕಾಗುತ್ತದೆ. ಕಾಡಿನಲ್ಲಿ ಓಡುವಾಗ ಕತ್ತಲೆಯೂ ನಿರ್ಭಯವಾಗಿ ನಡೆಯುವಾಗ ಹೊಳಪಿನ ಬೆಳಕೂ ಗೋಚರಿಸುತ್ತದೆ. ಸಮತೋಲಿತ ದೃಶ್ಯ ತೋರಿಸುವ ವೇಳೆ ಹೊಳಪಿನ ಬೆಳಕು ಕಾಣಿಸುತ್ತದೆ, ಪತ್ನಿಯ ಬಗ್ಗೆ ಕನಸು ಕಾಣುವಾಗ ಬೆಳಕು ಮೃದುವಾಗಿ ಗೋಚರಿಸುತ್ತದೆ. ಮೃದು ಬೆಳಕಿನ ಬಳಕೆ ಪತ್ನಿ ಕುರಿತು ಆತನಿಗಿರುವ ಮೃದು ಭಾವನೆಗಳನ್ನು ಬಿಂಬಿಸುತ್ತದೆ ಎನ್ನುವುದೂ ಮುಖ್ಯ.