ಪರಮೇಶ್ ಗುರುಸ್ವಾಮಿಯವರ ಸಿನಿಮಾ ಸಂಸ್ಕಾರದ ಕೊನೆಯ ಕಂತಿದು. ಓದಿ, ಚರ್ಚೆ ಬೆಳೆಸುವುದಿದ್ದರೆ ನಮ್ಮ ಇಮೇಲ್ ಗೆ ಲೇಖನವನ್ನು ಕಳುಹಿಸಿ. ನಮ್ಮ ಇಮೇಲ್ ವಿಳಾಸ saangatya@gmail.com.

ಯಾವುದೇ ಕಲಾಪ್ರಕಾರಗಳಲ್ಲಿ ಹುಟ್ಟಿಕೊಂಡಹೊಸಮಾದರಿ-ಶೈಲಿಗಳು ಮುಂದಿನವರಮೇಲೆ ಪ್ರಭಾವಬೀರಿವೆ. ಆದರೆ ಇಂದೂ ಚಂಪೂವಿನಲ್ಲೇ ಯಾರೂ ಬರೆಯುತ್ತಿಲ್ಲ. ಇಂದಿನ ತುರ್ತುಗಳೇ ಬೇರೆ. ಇಂದಿನ ಸಂವಹನ ಪ್ರಕ್ರಿಯೆ ಇಂದಿಗೆ ಅಗತ್ಯವಾದ ತಂತ್ರವನ್ನು ಬೇಡುತ್ತದೆ. ಹಾಗೆ ನೋಡಿದರೆ ಭಿನ್ನ ಕಾಲ ದೇಶಗಳು ಭಿನ್ನವಾದ ತಾಂತ್ರಿಕ ಅಂಶಗಳನ್ನು ಮಾತ್ರವಲ್ಲ, ತಿರುಳನ್ನೂ ಅಪೇಕ್ಷಿಸುತ್ತವೆ.

ನಮ್ಮ ಸಂದರ್ಭದಲ್ಲಿ ಸಿನಿಮಾವನ್ನು ಐತಿಹಾಸಿಕವಾಗಿ ಅರ್ಥ ಮಾಡಿಕೊಳ್ಳುವ ಪ್ರಯತ್ನವಾಗಿ ಪಾಶ್ಚಾತ್ಯ ಹಾಗು ಪೌರಾತ್ಯ ಸೌಂದರ್ಯ ಮೀಮಾಂಸೆಯನ್ನು ಸಹ ಅರ್ಥ ಮಾಡಿಕೊಳ್ಳುವ ಅಗತ್ಯವಿದೆ. ಇದರಿಂದ ನಮ್ಮ ಅದರಲ್ಲೂ ಕನ್ನಡದ ಮುಖ್ಯವಾಹಿನಿ ಮತ್ತು ಪರ್ಯಾಯ ಕವಲುಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬಹುದು. ಹಾಗೆ ನೋಡಿದರೆ ಎಲ್ಲ ಪುರಾತನ ಮೀಮಾಂಸೆಗಳು ಹೆಚ್ಚು ಕಡಿಮೆ ಒಂದೇ. ಆದರೆ ಪಾಶ್ಚಾತ್ಯ ದೃಷ್ಟಿಕೋನಗಳು ಕ್ರೈಸ್ತಯುಗದಲ್ಲಿ ಕರಾರುವಾಕ್ ತಳಹದಿಯ ಮೇಲೆ ಅರಳಿತು. ಎಲ್ಲವೂ ಪ್ರಮಾಣ ಬದ್ಧ. ಅಳತೆ, ನಿಖರ. ಇದೆಲ್ಲಕ್ಕೂ ಮಾನವ ಗ್ರಹಿಕೆಯೇ ಆಧಾರ. ಇದರಿಂದಾಗಿ ಪ್ರತಿಕೃತಿಯು ಮೂಲವನ್ನು ಮಾನವ ಗ್ರಹಿಕೆಯ ಇತಿಮಿತಿಯ ಮಾನದಂಡದಲ್ಲಿ ಎಷ್ಟು ಹತ್ತಿರವಾಗಿದೆ ಎಂಬುದೇ ಮುಖ್ಯವಾಯಿತು. ಪೌರಾತ್ಯ ದೃಷ್ಟಿಕೋನದಲ್ಲಿ ಮಾನವ ಗ್ರಹಿಕೆಗೂ ಮೀರಿದ್ದು ಸತ್ಯ. ನಾವು ಯಾವುದನ್ನು ವಾಸ್ತವ ಎಂದು ತಿಳಿಯುತ್ತೇವೆಯೋ ಅದು ನಮ್ಮ ಗ್ರಹಿಕೆಯ ಮಿತಿಯೊಳಗೆ ಅನುಭವಗಮ್ಯವಾದ ಸತ್ಯದ ಒಂದಿಷ್ಟು ಆಯಾಮ ಮಾತ್ರ. ವಿಶ್ವದ ಸಕಲಕ್ಕೂ ಅಧಿಪತಿ ವಿಶ್ವಕರ್ಮ. ಆದ್ದರಿಂದಲೇ ಕೃತಿಯೊಂದರ ಕರ್ತೃ ತಾನು ಕಡೆಯಬೇಕಾದ ವಸ್ತು, ವ್ಯಕ್ತಿ ಅಥವಾ ಸನ್ನಿವೇಶಗಳನ್ನು ಇಂದ್ರಿಯಗ್ರಹ್ಯ ಮಾಡಿಕೊಂಡ ಮೇಲೆ ವಿಶ್ವಕರ್ಮನ ಲೋಕದಲ್ಲಿರುವ ಮೂಲವನ್ನು ಧ್ಯಾನದ ಮೂಲಕ ಸಮಾಧಿ ಸ್ಥಿತಿಯಲ್ಲಿ ಮೊದಲು ಸಾಕ್ಷಾತ್‌ಕರಿಸಿಕೊಳ್ಳಬೇಕು. ನಂತರ ತನ್ನ ಕೃತಿಯಲ್ಲಿ ತರಬೇಕು. ಇದು ಪ್ರತಿಕೃತಿಯಾಗುವುದಿಲ್ಲ, ಪ್ರತಿಸೃಷ್ಟಿಯಾಗುತ್ತದೆ. ಹೀಗೆ ಸೃಷ್ಟಿಯಾದ ವಸ್ತುವಿನ ಪ್ರಮಾಣ ಬದ್ಧತೆ ನಿಯಮವೇನಲ್ಲ. ಪ್ರಮಾಣವು ಕೃತಿಯ ಆಶಯವನ್ನು ಅವಲಂಬಿಸುತ್ತದೆ. ಮುಖ್ಯವಾದ ಪಾತ್ರ, ವಸ್ತು ಅಥವಾ ಸನ್ನಿವೇಶಗಳು ಭಿತ್ತಿಯನ್ನು ಸಂಪೂರ್ಣ ಅನಿಸುವಷ್ಟು ಆವರಿಸಿಕೊಂಡರೆ ಅಮುಖ್ಯವಾದದ್ದು ಸಣ್ಣ ಪುಟ್ಟ ರೂಪವನ್ನು ಧರಿಸುತ್ತದೆ. ಇದನ್ನು (ಪೌರಾತ್ಯ ದೃಷ್ಟಿಕೋನದ ಗ್ರಹಿಕೆಯನ್ನು ಜೀವನದಲ್ಲಾಗಲಿ ಕಲೆಯಲ್ಲಾಗಲಿ) ಅರ್ಥ ಮಾಡಿಕೊಳ್ಳಲಾಗದ ಪಾಶ್ಚಾತ್ಯ ಸಂವೇದನೆಯು ಕಂಟ್ರಿ ಎಂದು ತುಚ್ಛೀಕರಿಸುತ್ತದೆ. ತಮಾಷೆಯೆಂದರೆ ಪಾಶ್ಚಿಮಾತ್ಯ ಮಾದರಿಗಳನ್ನೇ ಆದರ್ಶ ಮಾದರಿಗಳೆಂದು ನಂಬಿಕೊಂಡಿರುವ ಮೆಕಾಲೆಯ ಮಕ್ಕಳು ಇದೇ ಧೋರಣೆಯಲ್ಲಿ ಕಂತ್ರಿ ಎನ್ನುತ್ತಾರೆ.

ಮತ್ತೊಂದು ಮುಖ್ಯವಾದ ಅಂಶವೆಂದರೆ ಪಾಶ್ಚಾತ್ಯ ಕಲಾಕೃತಿಗಳು ವಾಚಕ, ವೀಕ್ಷಕ ಅಥವಾ ಶ್ರೋತೃಗಳ ಸಂವೇದನೆಯನ್ನು ಕರ್ತೃವಿನ ಆಶಯದೊಳಗೇ ನಿರ್ಬಂಧಿಸುತ್ತವೆ. ಪೌರಾತ್ಯ ಕೃತಿಗಳು ವಾಚಕ, ವೀಕ್ಷಕ ಅಥವ ಶ್ರೋತೃಗಳ ಸಂವೇದನೆಗಳಿಗೆ ಮುಕ್ತ ಅವಕಾಶವನ್ನು ನೀಡಿ ಅವರ ಆಲೋಚನೆ ಮತ್ತು ಕಲ್ಪನೆಗಳ ಮೂಲಕ ಸಂವಹನ ಪ್ರಕ್ರಿಯೆಯಲ್ಲಿ ಭಾಗವಹಿಸುವಿಕೆಗೆ ಅನುವು ಮಾಡಿಕೊಡುತ್ತದೆ. ಇಲ್ಲಿ ಕೃತಿಯೊಂದು ಕೊಡುವ ಅನುಭವ ವಾಚಕ, ವೀಕ್ಷಕ ಅಥವಾ ಶ್ರೋತೃವಿನ ಸಂವೇದನೆಗಳನ್ನು ನಿರ್ಬಂಧಿಸುವುದಿಲ್ಲ. ಬ್ರಿಟಿಷರ ಕಾಲದ ಸ್ಟ್ಯಾಚುಗಳು ಮತ್ತು ಬೇಲೂರು ಹಳೇಬೀಡಿನ ಪ್ರತಿಮೆಗಳು ನಮ್ಮಲ್ಲುಂಟು ಮಾಡುವ ಭಿನ್ನ ಸಂವೇದನೆಗಳನ್ನು ಗಮನಿಸಿದರೆ ಈ ಅಂಶ ಎದ್ದು ಕಾಣುತ್ತದೆ. ನಾನಿಲ್ಲಿ ಯಾವುದು ಯಾವುದಕ್ಕಿಂತ ಮುಖ್ಯ ಅಥವಾ ಉತ್ತಮ ಎಂದು ಹೇಳಲು ಪ್ರಯತ್ನಿಸುತ್ತಿಲ್ಲ. ಪ್ರಭಾವ, ಬದಲಾವಣೆ ಮತ್ತು ಸಮ್ಮಿಲನಗಳು ಜೀವನವನ್ನಾಗಲಿ ಕಲೆಯನ್ನಾಗಲಿ ಜೀವಂತವಾಗಿಡುತ್ತವೆ ಎಂದು ನಂಬಿರುವವನು. ಇಲ್ಲಿ ಜನಪ್ರಿಯ ಮತ್ತು ಕಲಾತ್ಮಕ ಎಂಬ ಕೃತಕ ಹಣೆಪಟ್ಟಿಗಳ ನಡುವಿನ ಕಂದರವನ್ನು ಗುರುತಿಸಲು ಪ್ರಯತ್ನಿಸುತ್ತಿದ್ದೇನೆ.

ಕಲಾತ್ಮಕಸಿನಿಮಾಮತ್ತುಜನಪ್ರಿಯಸಿನಿಮಾಎಂದು ಸಾಮಾನ್ಯವಾಗಿ ವಿಂಗಡಿಸುತ್ತಾರೆ. ಕಮರ್ಷಿಯಲ್ ಮತ್ತು ಆರ‍್ಟ್ ಅಥವಾ ಆಫ್ ಬೀಟ್ ಜತೆಗೆ ಬ್ರಿಡ್ಜ್ ಸಿನಿಮಾ ಗಳೆಂದೂ ವಿಂಗಡಿಸುತ್ತಾರೆ. ಆದರೆ ಇರುವುದು ಒಳ್ಳೆಯ ಸಿನಿಮಾ ಅಥವಾ ಕೆಟ್ಟ ಸಿನಿಮಾಗಳು ಮಾತ್ರ. ತಮ್ಮದು ಆರ್ಟ್ ಸಿನಿಮಾ ಎಂದು ಅವುಗಳನ್ನು ಮಾಡುವವರು, ಇಷ್ಟಪಟ್ಟು ನೋಡುವವರು ಜನಪ್ರಿಯ ಸಿನಿಮಾಗಳನ್ನು ಅಥವಾ ಮುಖ್ಯವಾಹಿನಿಯ ಸಿನಿಮಾಗಳನ್ನು ಅವು ಹಣ ಮಾಡುವ ಉದ್ದೇಶದ, ಮೆಲೊಡ್ರಾಮದಿಂದ ತುಂಬಿದ, ಅತಾರ್ಕಿಕ ಹಾಡುಗಳನ್ನೊಳಗೊಂಡ, ನಾಯಕಿಯ ಮೈ ಪ್ರದರ್ಶನವನ್ನೇ ಬಂಡವಾಳ ಮಾಡಿಕೊಂಡ ಅಗ್ಗವಾದ ಪ್ರಯತ್ನಗಳು ಎನ್ನುತ್ತಾರೆ. ಅದೇ ಮುಖ್ಯವಾಹಿನಿಯವರು ಆರ್ಟ್ ಸಿನಿಮಾದವರ ಚಿತ್ರಗಳು ಪ್ರೇಕ್ಷಕರ ಮೇಲೆ ಲಾಠಿ ಚಾರ್ಜ್‌ಗಿಂತ ಭೀಕರ ಪರಿಣಾಮ ಬೀರುತ್ತವೆ. ಪೋಲೀಸರ ಕೈಗೆ ಲಾಠಿಗಳ ಬದಲು ಆರ್ಟ್ ಸಿನಿಮಾಗಳನ್ನು ಕೊಟ್ಟರೆ ಅಹಿಂಸಾತ್ಮಕವಾಗಿ ಜನರನ್ನು ಚದುರಿಸಬಹುದು ಎಂದು ಮುಸಿ ಮುಸಿ ನಗುತ್ತಾರೆ. ಅದೇ ಸಮಯದಲ್ಲಿ ಆಳುವ ವರ್ಗದೊಂದಿಗಿನ ಆರ್ಟ್ ಸಿನಿಮಾದವರ ಒಳ ಸಂಬಂಧಗಳ ಬಗ್ಗೆ ಭಯ ಮಿಶ್ರಿತ ಗೌರವವನ್ನೂ ಇಟ್ಟುಕೊಂಡಿದ್ದಾರೆ.

ಯಾರು ಏನೇ ಅಂದರೂ ಮುಖ್ಯವಾಹಿನಿಚಿತ್ರಗಳು ಇಲ್ಲಿಯ ಸಾವಿರಾರು ವರ್ಷಗಳ ಜೀವನಕ್ರಮದಲ್ಲಿ ಹುಟ್ಟಿದ ರಸಾಸ್ವಾದನೆಯ ಪ್ರಕ್ರಿಯೆಗೆ ಪ್ರಜ್ಞಾ ಪೂರ್ವಕವಾಗಿಯೋ ಅಪ್ರಜ್ಞಾಪೂರ್ವಕವಾಗಿಯೋ ಪೂರಕವಾಗಿಯೇ ಇವೆ.ಇಲ್ಲಿನ ಜನಮಾನಸದ ಆಳದಲ್ಲಿರುವ ಪರಂಪರಾಗತ ಸಂವೇದನೆಯನ್ನು ತಟ್ಟುತ್ತವೆ. ಈ ಚಿತ್ರಗಳಲ್ಲಿ ಮೆಲೋಡ್ರಾಮ ಇರುತ್ತದೆಂಬ ಆರೋಪ ಸಹ ಸರಿ ಎನಿಸದು. ನಮ್ಮ ಬದುಕಿನಲ್ಲೇ ಮೆಲೊಡ್ರಾಮ ಇದೆ. ಅದು ಸಿನಿಮಾದಲ್ಲಿ ಬಂದರೆ ತಪ್ಪೇನು? ಸಿನಿಮಾ ಕೇವಲ ಸಾಂಸ್ಕೃತಿಕ ಚಟುವಟಿಕೆ ಅಲ್ಲ. ಲ್ಯೂಮಿಯೇರ್ ಸಹೋದರರು 1895 ರ ಡಿಸೆಂಬರ್ ೨೮ರಂದು ಹಣಪಡೆದು ತಮ್ಮ ಚಿತ್ರಗಳನ್ನು ಪ್ಯಾರಿಸ್ಸಿನ ಗ್ರ್ಯಾಂಡ್ ಹೋಟೆಲ್‌ನ ನೆಲಮಾಳಿಗೆಯಲ್ಲಿ ಸಾರ್ವಜನಿಕರಿಗೆ ಪ್ರದರ್ಶಿಸಿದ ದಿನವನ್ನೇ ಸಿನಿಮಾದ ಜನ್ಮದಿನ ಎಂದು ಏಕೆ ಗುರುತಿಸಲಾಗಿದೆ? ಅದೇ ಲೂಮಿಯೇರ್ ಸಹೋದರರು ಅವೇ ಚಿತ್ರಗಳನ್ನು 9 ತಿಂಗಳ ಹಿಂದೆ ಹಣ ಪಡೆಯದೆ ಆಹ್ವಾನಿತರಿಗೆ ಮಾರ್ಚ್‌ನಲ್ಲಿ ಪ್ರದರ್ಶಿಸಿದ ದಿನವನ್ನು ಸಿನಿಮಾದ ಜನ್ಮದಿನ ಎಂದು ಏಕೆ ಗುರುತಿಸಿಲ್ಲ? ಏಕೆಂದರೆ ಸಿನಿಮಾ ಅದರ ಹುಟ್ಟಿನಿಂದಲೇ ಲಾಭ ಗಳಿಕೆಯ ಇಂಡಸ್ಟ್ರಿಯಲ್ ಚಟುವಟಿಕೆಯಾಗಿದೆ. ಒಂದು ಕಥೆ ಹೇಳುವುದಕ್ಕೆ ಹಣ ಹೂಡಬೇಕಿಲ್ಲ. ಅದೇ ಕಥೆ ಬರೆಯುವುದಕ್ಕೆ ಸ್ವಲ್ಪ ಹಣ ಸಾಕು. ಅದೇ ಕಥೆಯನ್ನು ನೃತ್ಯ ನಾಟಕಗಳಾಗಿ ಪ್ರದರ್ಶನಗಳನ್ನು ನೀಡುವುದಕ್ಕೆ ಹೆಚ್ಚು ಹಣ ಹೂಡಬೇಕು. ಅದೇ ಕಥೆಯನ್ನು ಸಿನಿಮಾ ಮಾಡುವುದಕ್ಕೆ ಅಗಾಧವಾದ ಮೊತ್ತವನ್ನು ತೊಡಗಿಸಬೇಕು. ಹೀಗಿರುವಾಗ ತೊಡಗಿಸಿದ ಹಣಕ್ಕೆ ಲಾಭವನ್ನು ಅಪೇಕ್ಷಿಸಿದರೆ ತಪ್ಪೇನಿಲ್ಲ. ಹಾಗೆ ನೋಡಿದರೆ ಆರ್ಟ್ ಚಿತ್ರ ತಯಾರಕರು ಜನ ನೋಡದೇ ಇದ್ದರೂ ತೊಡಗಿಸಿದ ಹಣಕ್ಕೆ ಪಡೆಯುವ ಲಾಭದ ಪ್ರಮಾಣ ಕಮರ್ಷಿಯಲ್ ಚಿತ್ರ ತಯಾರಕರಿಗಿಂತ ಹೆಚ್ಚು. ನಮ್ಮ ಕನ್ನಡದಲ್ಲಂತೂ ಆರ್ಟ್ ಚಿತ್ರ ತಯಾರಕರು ಶೂ ಸ್ಟ್ರಿಂಗ್ ಬಜೆಟ್ ಅಥವಾ ಲೋ ಬಜೆಟ್ ಎಂಬ ಹೆಸರಿನಡಿ ಚಿತ್ರ ತಯಾರಿಕಾ ವೆಚ್ಚವನ್ನು ಕಡಿಮೆ ಮಾಡುವ ಭರದಲ್ಲಿ ಸಿನಿಮಾ ಮಾಡುವುದಕ್ಕಿಂತ ಕಲಾವಿದರಿಂದ ನಾಟಕ ಮಾಡಿಸಿ ಸಾಕ್ಷ್ಯ ಚಿತ್ರದಂತೆ ಚಿತ್ರೀಕರಿಸುತ್ತಾರೆ. ಈ ಚಿತ್ರಗಳ ತಾಂತ್ರಿಕ ಲೋಪದೋಷಗಳನ್ನು ಶಾಲಾ ಬಾಲಕ ಬಾಲಕಿಯರು ಗುರುತಿಸಬಲ್ಲರು. ಏಕೆಂದರೆ ಇಂದು ಚಿಕ್ಕ ಮಗು ಕೂಡ ಜಾಗತಿಕ ಗುಣಮಟ್ಟದ ಸಿನಿಮಾ ತಾಂತ್ರಿಕತೆ ಮತ್ತು ವ್ಯಾಕರಣವನ್ನು ಮನೆಯಲ್ಲಿರುವ ಟಿ.ವಿ. ಮೂಲಕ ಅರಿತಿರುತ್ತದೆ.

ತೇಜಸ್ವಿಯವರುಸಮಕಾಲೀನ ಬದುಕನ್ನುಅದರಸಮಗ್ರತೆಯಲ್ಲಿ ಹಿಡಿದಿಡಲುಮತ್ತುಓದುಗರೊಂದಿಗೆಅರ್ಥಪೂರ್ಣ ಸಂವಹನವನ್ನುಸಾಧಿಸಲು ನವ್ಯ ಶೈಲಿಯಿಂದ ಹೊರಳಿದಂತೆ ಹಾಗೂ ಭಾರತೀಯ ಸಿನಿಮಾದಲ್ಲಿ ಸತ್ಯಜಿತ್ ರೇಯವರು ಪಥ ಬದಲಿಸಿದಂತೆ ಕನ್ನಡ ಸಿನಿಮಾದಲ್ಲಿ ಯಾರೂ ಪ್ರಯತ್ನವನ್ನೇ ಮಾಡಲಿಲ್ಲ. ಇಟಲಿಯ ನಿಯೋರಿಯಲಿಸಂ ಶೈಲಿಗೇ ಆತುಕೊಂಡು ಆ ಶೈಲಿಯನ್ನೇ ಹದಗೆಡಿಸುತ್ತಿದ್ದಾರೆ. ಇಟಲಿಯವರು ತಮ್ಮ ಚಿತ್ರಗಳಿಂದ ಚರ್ಚ್ ಮತ್ತು ಸರ್ಕಾರದ ಸಿಟ್ಟನ್ನು ಎದುರಿಸಿದರೆ ನಮ್ಮವರು ಅವುಗಳಿಂದ ಮಾನ್ಯತೆಯನ್ನು, ಸವಲತ್ತುಗಳನ್ನು ಪಡೆಯಲು ಹಾತೊರೆಯುತ್ತಿದ್ದಾರೆ. ಇಂದಿನ ನಮ್ಮ ಹೊಸ ಅಲೆಯ ಕನ್ನಡ ಚಿತ್ರಗಳು ನಿಯೋರಿಯಲಿಸಂ ಶೈಲಿಯ ಮತ್ತು ನೈತಿಕತೆಯ ಅವನತಿಗೆ ಅತ್ಯುತ್ತಮ ಉದಾಹರಣೆಯಾಗಿ ಕಾಣಿಸುತ್ತಿವೆ.

ಜನಪ್ರಿಯಸಿನಿಮಾಗಳಲ್ಲಿನಹಾಡಿನಬಗ್ಗೆಹೇಳುವುದಾದರೆ,ಬ್ರಿಟಿಷರು ಬರುವವರೆಗೆ ನಮ್ಮ ಸಾಹಿತ್ಯದಲ್ಲಿ ಗದ್ಯಪ್ರಕಾರ ಎಂಬುದುಪೂರ್ಣಪ್ರಮಾಣದಲ್ಲಿಇರಲಿಲ್ಲ. ನನಗೆಬಹಳಚೆನ್ನಾಗಿ ನೆನಪಿದೆ.ರಜಾದಿನಗಳಲ್ಲಿ ತಾಯಿಯ ತವರಿಗೆಹೋದಾಗ ನಮ್ಮ ತಾತ ಜೈಮಿನಿ ಭಾರತವನ್ನು ಸೀಮೆಎಣ್ಣೆ ಬುಡ್ಡಿಯ ಬೆಳಕಲ್ಲಿ ಆಗಾಗ್ಗೆ ರಾಗವಾಗಿ ಓದುತ್ತಿದ್ದರು. ಯಾವುದಾದರೂ ಪತ್ರಿಕೆಯ ತುಣುಕು ಸಿಕ್ಕಿದರೆ ಅದನ್ನೂ ರಾಗ ಬದ್ಧವಾಗಿಯೇ ಓದುತ್ತಿದ್ದರು. ನನಗೆ ಅದನ್ನು ಕಂಡು ಆಗ ವಿಚಿತ್ರವೆನಿಸಿ ನಗು ಬರುತ್ತಿತ್ತು ! ಹೀಗಾಗಿ ಜನಪ್ರಿಯ ಚಿತ್ರಗಳು ಎರವಲು ಸಂವೇದನೆಯವರಿಗೆ ಎಷ್ಟೇ ಹಾಸ್ಯಾಸ್ಪದ,ಹೀನ ಎನಿಸಿದರೂ ಅವು ನಮ್ಮವು ಎನಿಸುತ್ತದೆ.

ಪಾಶ್ಚಾತ್ಯ ಮತ್ತು ಪೌರಾತ್ಯ ಸಂವೇದನೆ ಗಳೆಂದು ಹೇಳಿದೆ. ಇಂದು ಜಾಗತಿಕ ಗ್ರಾಮ ಎಂಬವಾಸ್ತವತೆಯಲ್ಲಿ ಎಲ್ಲವೂಸಂಗಮಗೊಳ್ಳುತ್ತಿವೆ. ಆದರೂ ಸಂವೇದನೆಯ ಪರಂಪರೆಗಳು ಅಷ್ಡು ಸುಲಭವಾಗಿ ಕರಗಿಬಿಡದು. ಜಗತ್ತು ಪುಟ್ಟ ಹಳ್ಳಿಯಂತಾಗಿದ್ದರೆ ಪ್ರಯಾಣ, ಸಂಪರ್ಕ ಇತ್ಯಾದಿಗಳ ಅರ್ಥಗಳಲ್ಲಿ, ಜೀವನ ಕ್ರಮದಲ್ಲಲ್ಲ. ಆಗಿದ್ದರೂ ಎಲ್ಲರಿಗಲ್ಲ. ಆದ್ದರಿಂದ ಕಾದು ನೋಡಬೇಕಿದೆ ಮುಂದಿನ ಬದಲಾವಣೆಗಳಿಗಾಗಿ.

ಪಾಶ್ಚಾತ್ಯ ಮತ್ತು ಪೌರಾತ್ಯ ರಸಾಸ್ವಾದನಾ ಸಂವೇದನೆಗಳ ನಡುವಿನ ವ್ಯತ್ಯಾಸವನ್ನು ಸಿನಿಮಾದಲ್ಲಿ ಗಮನಿಸಬೇಕಾದರೆ ರೊಮಾನ್ ಪೊಲಾನ್ಸ್ಕಿಯ ಟ್ರ್ಯಾಜಿಡಿ ಆಫ್ ಮ್ಯಾಕ್‌ಬೆತ್ ಮತ್ತು ಅಕಿರಾ ಕುರೋಸಾವರವರ ಥ್ರೋನ್ ಆಫ್ ಬ್ಲಡ್ ಚಿತ್ರಗಳನ್ನು ಅನುಭವಿಸಬೇಕು. ಪೊಲಾನ್ಸ್ಕಿ, ಯೂರೋಪಿನ ಪ್ರತಿಭಾವಂತ ಚಿತ್ರ ನಿರ್ದೇಶಕ. ಕುರೋಸಾವ ಏಷ್ಯಾದ (ಏಕೆ ಜಗತ್ತಿನ) ಅತ್ಯಂತ ಪ್ರತಿಭಾವಂತ ಚಿತ್ರ ನಿರ್ದೇಶಕ. ಸಾಮ್ರಾಟ ಎಂದೇ ಅವರನ್ನು ಕರೆಯುತ್ತಾರೆ. ಹಾಲಿವುಡ್‌ನವರು ಅತಿ ಹೆಚ್ಚು ರಿಮೇಕ್ ಮಾಡಿರುವ ಒಬ್ಬ ನಿರ್ದೇಶಕನ ಚಿತ್ರಗಳೆಂದರೆ ಅಕಿರಾ ಕುರೋಸಾವರದ್ದು. ಪೊಲಾನ್ಸ್ಕಿ ಮತ್ತು ಕುರೋಸಾವ ಇಬ್ಬರೂ ತಮ್ಮ ಚಿತ್ರಗಳಿಗೆ ಕಥೆಯಾಗಿ ಆರಿಸಿಕೊಂಡಿರುವುದು ಶೇಕ್‌ಸ್ಪ್ಪಿಯರನ ಮ್ಯಾಕ್ಬೆತ್ ನಾಟಕದ ಕಥಾವಸ್ತು. ಇಬ್ಬರೂ ತಮ್ಮ ಚಿತ್ರಗಳಲ್ಲಿ ಮ್ಯಾಕ್ಬೆತ್ತನ ದುರಂತವನ್ನು ಸಮಸಮವಾಗಿ ಕಟ್ಟಿಕೊಡುತ್ತಾರೆ. ಆದರೆ ಪೊಲಾನ್ಸ್ಕಿಯ ಮಾಕ್ಬೆತ್ ಐರೋಪ್ಯ ಅನಿಸಿದರೆ ಕುರೋಸಾವ ಮ್ಯಾಕ್ಬೆತ್ ಜಪಾನಿ ಅನಿಸುತ್ತದೆ.
ಈ ಐರೋಪ್ಯಶೈಲಿಯಲ್ಲಿ ನಮ್ಮ ಅನಂತ್‌ನಾಗ್ನಟಿಸುತ್ತಿದ್ದಾಗ (ಅದೂಹಿಂದಿಯವಿಸ್ತಾರರೀಚ್‌ನಲಿ), ಭಾರತೀಯಶೈಲಿಯಲ್ಲಿನಟಿಸಲಾರಂಭಿಸಿದ(ಅದೂ ಕನ್ನಡದಸೀಮಿತರೀಚ್‌ನಲ್ಲಿ)ನಂತರ ದೊರೆತಷ್ಟುಜನಪ್ರಿಯತೆ
ದೊರಕಿರಲಿಲ್ಲ. ಆದ್ದರಿಂದಲೇ ವಿದ್ಯಾವಂತರು ಮೆಚ್ಚುವ ನಾಸಿರುದ್ದೀನ್ ಷಾ ಗಿಂತ ಶಾರುಕ್ ಖಾನ್ ತಾರೆಯಾಗಿರುವುದು.

ನಮ್ಮ ಕನ್ನಡ ಆರ್ಟ್ ಸಿನಿಮಾಪರಿವ್ರಾಜಕರಮತ್ತೊಂದು ಅಳಲೆಂದರೆ ಉದ್ಯಮದಹಿತಾಸಕ್ತಿಗಳು ಅರ್ಟ್ ಸಿನಿಮಾದ ಕತ್ತು ಹಿಚುಕುತ್ತಿವೆ ಎಂಬುದು. ಆದರೆ ಉದ್ಯಮದ ಆಸಕ್ತಿ ಹಿತಾಸಕ್ತಿಯೆಲ್ಲ ಹಣಗಳಿಕೆಯೇಯಾಗಿರುವುದರಿಂದ, ಆರ್ಟ್ ಚಿತ್ರಗಳು ಸಾಮಾನ್ಯ ಜನರನ್ನು ತಲುಪುವುದೇ ಇಲ್ಲವಾದ್ದರಿಂದ ಇವರಿಗೆ ಚಿತ್ರಮಂದಿರಗಳು ದೊರಕದು ಎಂಬುದು ನನ್ನ ಅನಿಸಿಕೆ. ಸಂಸ್ಕಾರವನ್ನು ನಿರ್ಮಿಸಿ ನಿರ್ದೇಶಿಸಿದವರು ತೆಲುಗು ಚಿತ್ರೋದ್ಯಮದವರಾದ ಪಟ್ಟಾಭಿರಾಮ ರೆಡ್ಡಿಯವರು. ಸಾಮಾನ್ಯ ಜನರೂ ಅದನ್ನು ಪ್ರೋತ್ಸಾಹಿಸಿದರು. ಮನಾಮನಿ ದುಡ್ಡು ಮಾಡಿತು. ಕಾಡು ಚಿತ್ರಕ್ಕೆ ಒತ್ತಾಸೆಯಾಗಿದ್ದವರು ಚಿತ್ರೋದ್ಯಮ ದವರೇ ಆದ ಎಂ. ಭಕ್ತವತ್ಸಲ ಅವರು. ಜನ ಅದನ್ನೂ ಪ್ರೋತ್ಸಾಹಿಸಿ ದರು. ವಂಶವೃಕ್ಷ ನಿರ್ಮಾಪಕರು ಚಿತ್ರೋದ್ಯಮದಲ್ಲಿ ಬೇರು ಬಿಟ್ಟಿದ್ದ ಜಿ.ವಿ.ಅಯ್ಯರ್. ಅದನ್ನೂ ಜನ ಮರೆಯಲಿಲ್ಲ.

ಆದರೆ ಕ್ರಮೇಣ, ಪುರಸ್ಕಾರ ಪ್ರಶಸ್ತಿ ಗಳಿಸುವ ಕಥೆಯೊಂದಿದ್ದರೆ ಸಾಕು. ತಾಂತ್ರಿಕ ಗುಣಮಟ್ಟ ಕನಿಷ್ಟಕ್ಕಿಂತ ಕನಿಷ್ಟವಾದರೂ ಪರವಾಗಿಲ್ಲ. ಕಡಿಮೆ ಖರ್ಚಿನಲ್ಲಿ ಹೇಗಾದರೂ ಸುತ್ತಿ ಸಂಪರ್ಕ ಸೂತ್ರಗಳನ್ನು ಯಾವಾಗ ಎಲ್ಲಿ ಎಳೆಯಬೇಕೊ ಆಗ ಅಲ್ಲಿ ಎಳೆದು ಬಿಟ್ಟರೆ ಮುಗಿಯಿತು. ಜನ ನೋಡಿದರೆ ಒಂದು ನೋಡದಿದ್ದರೆ ಇನ್ನೊಂದು ಎಂಬ ಧೋರಣೆಯಿಂದ ಇವರೇ ಉದ್ಯಮದ ಮತ್ತು ಜನರ ಬೆಂಬಲವನ್ನು ಹಾಳು ಮಾಡಿಕೊಂಡರು. ವಸ್ತು ವಿಭಿನ್ನವಾಗಿದ್ದರೆ ಸಾಕೆ? ಕೇಂದ್ರ ಸರ್ಕಾರದ ಒಲವಿಗೆ ತಕ್ಕಂಥ ಕಥೆ ಆರಿಸಿಕೊಂಡರೆ ಮುಗಿಯಿತೆ? ರೂಪ ಮತ್ತು ತಂತ್ರವೂ ಚೆನ್ನಾಗಿರಬೇಡವೆ ? ಕನಿಷ್ಟ ಮಾಧ್ಯಮದ ಮೂಲಭೂತ ಅಂಶಗಳಿರಬೇಡವೆ? ಎಂದು ಯೋಚಿಸಲಿಲ್ಲ. ಈ ದಿಕ್ಕಿನಲ್ಲಿ, ನನಗೆ ತೆಲುಗು ಮತ್ತು ತಮಿಳು ಚಿತ್ರರಂಗ ಅಷ್ಟಾಗಿ ಗೊತ್ತಿಲ್ಲ. ಗೊತ್ತಿರುವ ಚೂರು ಪಾರಿನ ಮೇಲೆ ತೆಲುಗು ಮತ್ತು ತಮಿಳು ಚಿತ್ರ ನಿರ್ದೇಶಕರು ಆರ್ಟ್ ಮತ್ತು ಕಮರ್ಷಿಯಲ್ ಎಂಬ ಹಣೆಪಟ್ಟಿಗಳಿಗೆ ಅವಕಾಶ ನೀಡದೆ ನಿಜವಾದ ಚಿತ್ರಗಳನ್ನು ಕೊಟ್ಟಿದ್ದಾರೆ ಅನಿಸುತ್ತದೆ.

ಸತ್ಯಜಿತ್ ರೇ
ರಿತ್ವಿಕ್ ಘಟಕ್

ಕೊನೆಗೆ, ಮೊದಲೊಮ್ಮೆ ನಾನು ಉದ್ಧರಿಸಿದ್ದಪಾಶ್ಚಾತ್ಯ ಮತ್ತು ಪೌರಾತ್ಯಸೌಂದರ್ಯಮೀಮಾಂಸಕಾರ ಆನಂದಕೆಂಟಿಷ್ ಕೂಮಾರ ಸ್ವಾಮಿಮತ್ತು ೧೪ ನೇಶತಮಾನದಭಾರತೀಯಲಾಕ್ಷಣಿಕ ವಿಶ್ವನಾಥರಮಾತುಗಳನ್ನು ಉದ್ಧರಿಸಿ ಮುಗಿಸುತ್ತೇನೆ:

ಕಲಾಕೃತಿ ಮತ್ತು ರಸಿಕರ ನಡುವಿನ ಸಮತೋಲನವನ್ನು ಕಾಯ್ದುಕೊಳ್ಳದ ಕಲಾವಿದನು ವೈಯಕ್ತಿಕವಾಗಿ ನಾಶವಾಗುತ್ತಾನೆ. ಮಾತ್ರವಲ್ಲ ಪಂಗಡವಾಗಿಯೂ ನಾಶವಾಗುತ್ತಾನೆ. – ಆನಂದ ಕೆಂಟಿಷ್ ಕೂಮಾರಸ್ವಾಮಿ. (ಭಾರತೀಯ ಜೀವನದಲ್ಲಿ ಕಲೆ)

ಜಗತ್ತಿಗೆ, ಕಲಾಕೃತಿಗಳನ್ನು ಕುರಿತು, ಆ ಕೃತಿಗಳು ಏನು, ಯಾವುದರ ಬಗ್ಗೆ, ಎಂದು ಕೇಳುವ ಎಲ್ಲ ಹಕ್ಕುಗಳು ಇವೆ. ಕಲಾವಿದನು, ಆ ಕೃತಿಗಳು ನನಗೆ ಮಾತ್ರ. ನನಗಾಗಿ ಮಾತ್ರ. ಎಂದು ಹೇಳಿ, ಅವುಗಳಲ್ಲಿ ನನ್ನ ಅಭಿವ್ಯಕ್ತಿ ಬಿಟ್ಟು ಬೇರೇನೂ ಮುಖ್ಯವಲ್ಲ. ಎಂದರೆ, ಅದನ್ನು ಹುಚ್ಚನೊಬ್ಬನ ಬಡಬಡಿಕೆ ಎಂದುಕೊಳ್ಳಬೇಕು. ಅಂಥವರಿಗೆ ಊಟದ ಬದಲು ಕಲ್ಲುಗಳನ್ನು ಕೊಡಬೇಕು. ಆದಷ್ಟು ಬೇಗ ಅಂಥವರನ್ನು ವ್ಯಥೆ ಪಡದೆ ಹೂತು ಹಾಕಬೇಕು. – ವಿಶ್ವನಾಥ. (ಸಾಹಿತ್ಯ ದರ್ಪಣ)