ಇಜ್ಜೋಡು ಚಿತ್ರ ಎಂ.ಎಸ್. ಸತ್ಯು ನಿರ್ದೇಶನದ್ದು. ಚಿತ್ರ ಸಮೂಹ ಸಂಘಟನೆ ಸುಚಿತ್ರಾ ಕಲಾಕೇಂದ್ರದೊಂದಿಗೆ ಬೆಂಗಳೂರಿನ ಬನಶಂಕರಿಯ ಸುಚಿತ್ರಾ ಸಭಾಂಗಣದಲ್ಲಿ ಆ.28 ಮತ್ತು 29 ರಂದು ಈ ಚಿತ್ರವನ್ನು ಪ್ರದರ್ಶನಕ್ಕೆ ಇಟ್ಟುಕೊಂಡಿದೆ. ಆಸಕ್ತರು 9743531223 ಸಂಪರ್ಕಿಸಬಹುದು.

ಕಥಾ ಸಾರಾಂಶ
ಊರಿಗೆ ಬಂದ ಮಹಾಮಾರಿಯಿಂದ ಜನರನ್ನು ರಕ್ಷಿಸಲು, ಸ್ಥಳೀಯರ ಮೂಢನಂಬಿಕೆಯಂತೆ ಚೆನ್ನಿ ಬಸವಿಯಾದ ಹೆಣ್ಣುಮಗಳು. ಛಾಯಾಗ್ರಾಹಕ ಪತ್ರಕರ್ತ ಆನಂದನಿಗೆ ಆಕೆಯ ಪರಿಚಯವಾಗುತ್ತದೆ. ಬಸವಿಯರು, ದೇವದಾಸಿಯರಂತೆ ವೇಶ್ಯೆಯರಾಗಿ, ಸಾಮಾಜಿಕ ಕಳಂಕದ ನೆರಳಲ್ಲಿ ಬದುಕುತ್ತಿದ್ದಾರೆ ಎಂದು ಆನಂದನಿಗೆ ತಿಳಿದಾಗ ಆಘಾತವಾಗುತ್ತದೆ. ಚನ್ನಿ ಮೂಢನಂಬಿಕೆಗೆ ಬಲಿಯಾಗದೆ ಅದರಿಂದ ಹೊರಬಂದು ಹೊಸ ಜೀವನ ನಡೆಸುವಂತೆ ಆನಂದ ಒತ್ತಾಯಿಸುತ್ತಾನೆ. ಅದಕ್ಕೆ ಅವಳು ತನ್ನನ್ನು ಮದುವೆಯಾಗಿ ಹೊಸ ಬಾಳು ಕೊಡುವಂತೆ ಆತನನ್ನು ಕೇಳುತ್ತಾಳೆ. ಸ್ಥೈರ್ಯವಿಲ್ಲದ ಆತ ಮೌನಿಯಾಗುತ್ತಾನೆ. ಮಾರನೆಯ ದಿನ ದೇವಸ್ಥಾನದ ಕಲ್ಯಾಣಿಯ ಮೆಟ್ಟಲ ಮೇಲೆ ಆಕೆ ಶವವಾಗಿರುತ್ತಾಳೆ. ಆಕೆಗೆ ಹೊಸಬಾಳು ಕೊಡಲಾಗದೆ ತಾನೇ ಆಕೆಯ ಆತ್ಮಹತ್ಯೆಗೆ ಕಾರಣನಾದೆ ಎನ್ನುವ ಅಪರಾಧ ಪ್ರಜ್ಞೆ ಆತನನ್ನು ಕಾಡುತ್ತದೆ.

ಭಾಗವಹಿಸಿದ ಚಿತ್ರೋತ್ಸವಗಳು
ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವ- ಗೋವಾ 2009
ಅಹಮದಾಬಾದ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವ 2009
ತ್ರಿಚೂರ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವ – 2009
ಓಸಿಯಾನ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವ – 2009

ಸಮಯ : 90 ನಿಮಿಷ / 2008
ನಿರ್ದೇಶಕರ ನುಡಿ
ನಾನು ಚಿತ್ರ ನಿರ್ದೇಶಿಸಿ ಸುಮಾರು ಹನ್ನೆರಡು ವರ್ಷಗಳೇ ಆದವು. ಬದಲಾದ ಹೊಸ ತಾಂತ್ರಿಕ ಆವಿಷ್ಕಾರಗಳ ನಡುವೆ ನನಗೆ ಚಿತ್ರ ನಿರ್ದೇಶನದ ವ್ಯಾಕರಣ ಈಗಲೂ ನೆನಪಿದೆಯೇ ಎಂಬ ಅನುಮಾನ ಕಾಡುತ್ತಿತ್ತು. ಈ ಒಂದು ದಶಕದಲ್ಲಿ ಬಂದ ಚಿತ್ರಗಳನ್ನು ವೀಕ್ಷಿಸುವಾಗಲೆಲ್ಲ ತಾಂತ್ರಿಕ ಆವಿಷ್ಕಾರಗಳು ಕಥನ ಕ್ರಮವನ್ನು ಶ್ರೀಮಂತಗೊಳಿಸಿವೆಯೇ ಅಥವಾ ಅವುಗಳ ದುರ್ಬಳಕೆಯಾಗುತ್ತಿದೆಯೇ ಎಂಬ ಗೊಂದಲ ನನ್ನಲ್ಲಿ ಉಂಟಾಗುತ್ತಿತ್ತು. ಶಬ್ದ ಮತ್ತು ಸ್ಪೆಷಲ್ ಎಫೆಕ್ಟ್‌ಗಳಲ್ಲಾದ ಹೊಸ ಬೆಳೆವಣಿಗೆಗಳು ಚಿತ್ರವನ್ನು ಇನ್ನಷ್ಟು ಸಶಕ್ತಗೊಳಿಸಿದಲ್ಲಿ ಅವುಗಳ ಬಗ್ಗೆ ನನ್ನ ಮೆಚ್ಚುಗೆಯಿದೆ. ನನ್ನ ‘ಇಜ್ಜೋಡು ಚಿತ್ರದಲ್ಲಿ ಸರಳವಾದ ನಿರೂಪಣೆಯಿದ್ದು ದೀರ್ಘವಾದ ಚಿತ್ರಿಕೆಗಳನ್ನು ಬಳಸಿದ್ದೇನೆ. ಚುರುಕುಗತಿಯ ಸಂಕಲನ ತಂತ್ರ ಬಳಸಿಲ್ಲ. ಹೊಯ್ಸಳ ಶಿಲ್ಪಕಲೆಗೆ ಹೆಸರಾದ ಹಾಸನ ಜಿಲ್ಲೆಯ ಸುತ್ತು ಮುತ್ತಲ ಪ್ರದೇಶಗಳಲ್ಲಿ ಇಜ್ಜೋಡು ಚಿತ್ರೀಕರಣವಾಗಿದೆ.

ತಾಂತ್ರಿಕ ವರ್ಗ
ಸಂಕಲನ : ಸುಧಾಂಶು ಚಕ್ರವರ್ತಿ
ಹಾಡುಗಳು : ಸುಧೀರ್ ಅತ್ತಾವರ್
ಸಂಗೀತ : ಮಣಿಕಾಂತ ಕದ್ರಿ
ಛಾಯಾಗ್ರಹಣ : ಜಿ.ಎಸ್. ಭಾಸ್ಕರ್
ಚಿತ್ರಕಥೆ ಮತ್ತು ನಿರ್ದೇಶನ : ಎಂ. ಎಸ್. ಸತ್ಯು
ತಾರಾಗಣ :ಅನಿರುದ್ಧ, ಮೀರಾ ಜಾಸ್ಮಿನ್, ಸತ್ಯ, ರಾಮಕೃಷ್ಣ ಮೊದಲಾದವರು

ನಿರ್ಮಾಪಕರು
ರಿಲೆಯನ್ಸ್ ಬಿಗ್ ಎಂಟರ್ಟೈನ್‌ಮೆಂಟ್‌ನ ಚಲನಚಿತ್ರ ವಿಭಾಗವಾದ ರಿಲೆಯನ್ಸ್ ಬಿಗ್ ಪಿಕ್ಚರ್ಸ್‌ನವರು ಭಾರತೀಯ ಚಿತ್ರ ನಿರ್ಮಾಣದಲ್ಲಿ ಒಂದು ದೊಡ್ಡ ಹೆಸರು. ಇಂಗ್ಲೀಷ್, ಹಿಂದಿ ಹಾಗೂ ಅನೇಕ ಪ್ರಾದೇಶಿಕ ಭಾಷೆಗಳಲ್ಲಿ ಚಿತ್ರಗಳನ್ನು ನಿರ್ಮಿಸಿ ಅವುಗಳನ್ನು ಪ್ರಪಂಚದಾದ್ಯಂತ ಮಾರಾಟ ಹಾಗೂ ವಿತರಿಸುವ ಒಂದು ಸಂಸ್ಥೆ. ಈಗ ಈ ಸಂಸ್ಥೆ ಹಾಲಿವುಡ್‌ನ ಪ್ರಖ್ಯಾತ ಸಂಸ್ಥೆಗಳೊಂದಿಗೆ ಚಿತ್ರನಿರ್ಮಾಣದಲ್ಲಿ ಕೈಜೋಡಿಸಿದೆ.

ನಿರ್ದೇಶಕರು
ಎಂ.ಎಸ್.ಸತ್ಯು, ಭಾರತದ ಪ್ರಮುಖ ನಿರ್ದೇಶಕರಲ್ಲಿ ಒಬ್ಬರು. ಅವರು ಕಲಾನಿರ್ದೇಶಕರು ಹಾಗೂ ರಂಗಭೂಮಿಯ ನಿರ್ದೇಶಕರಾಗಿದ್ದೂ ಖ್ಯಾತರಾಗಿದ್ದಾರೆ. ೧೯೭೪ ರಲ್ಲಿ ಅವರು ನಿರ್ದೇಶಿಸಿದ ಪ್ರಥಮ ಚಿತ್ರ ‘ಗರಂ ಹವಾ ಕ್ಯಾನೆ ಚಿತ್ರೋತ್ಸವದಲ್ಲಿ ಪ್ರದರ್ಶಿಸಲ್ಪಟ್ಟಿತು ಜೊತೆಗೆ ಆಸ್ಕರ್ ಪ್ರಶಸ್ತಿಗೆ ಭಾರತಧಿಂದ ನಾಮಾಂಕಿತವಾಗಿತ್ತು. ೧೯೮೯ ರಲ್ಲಿ ಅವರು ನಿರ್ದೇಶಿಸಿದ ಕನ್ನಡ ಚಿತ್ರ ‘ಬರ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗೆ ಭಾಜನವಾಗಿತ್ತು. ಅವರ ‘ಗಳಿಗೆ ಚಿತ್ರವು ನಾರ್ಟೆಲ್ ಪಾಮ್‌ಸ್ಪ್ರಿಂಗ್ಸ್ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತು.
ಅವರ ಇತರೆ ಚಿತ್ರಗಳು
ಏಕ್ ಥಾ ಚೋಟು ಏಕ್ ಥಾ ಮೋಟು (ಹಿಂದಿ)
ಗರಂ ಹವಾ (ಹಿಂದಿ)
ಕನ್ನೇಶ್ವರರಾಮ
ಕಹಾಂ ಕಹಾಂಸೆ ಗುಜರ್ ಗಯೇ (ಹಿಂದಿ)
ಚಿತೆಗೂ ಚಿಂತೆ
ಬರ
ಗಳಿಗೆ
ಇಜ್ಜೋಡು