ನಾವೀಗ ಕುಪ್ಪಳಿಗೆ ಹೊರಟಿದ್ದೇವೆ. ನೀವೂ ಬನ್ನಿ.

ಸಾಂಗತ್ಯ ಹಮ್ಮಿಕೊಂಡಿರುವ ನಾಲ್ಕನೇ ಶಿಬಿರ ನಾಳೆಯಿಂದ ಪ್ರಾರಂಭ. ಒಂದಿಷ್ಟು ಸಿನಿಮಾ, ಒಂದಿಷ್ಟು ಸಂವಾದ ಹಾಗೂ ಮೆಲ್ಲಲು ಏನಾದರೂ ಒಂದಿಷ್ಟು…

ಹೀಗೇ ಒಂದಿಷ್ಟು ಹೊಸ-ಹೊಸತುಗಳ ಮಧ್ಯೆ ಎರಡು ದಿನ ಕಳೆಯುತ್ತೇವೆ. ಸಣ್ಣಗೆ ಮಳೆ ಹನಿಯುತ್ತಿರಲೂ ಬಹುದು. ಮೊದಲೇ ಹಸಿರು, ಅದಕ್ಕೆ ಪುಟಗಟ್ಟುವಂತೆ ಹಸಿರು ಮತ್ತಷ್ಟು ಕಂಗೊಳಿಸಲಿದೆ.

ನಗರದ ಕಾಂಕ್ರೀಟಿನ ಏಕತಾನತೆಯನ್ನು ಮುರಿದುಕೊಂಡು ಹೊಸ ಹುರುಪನ್ನು ತುಂಬಿಸಿಕೊಳ್ಳುವ ಪ್ರಯತ್ನವೂ ಹೌದು, ಹೀಗೇ ಸ್ವಲ್ಪ ದೂರವೆನಿಸುವಲ್ಲಿ ಏರ್ಪಡಿಸುತ್ತಿರುವುದು.

ಸುಮಾರು 35 ರಿಂದ 40ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಈಗಾಗಲೇ ಹಲವು ಕಡೆಯಿಂದ ಬರುತ್ತಿದ್ದಾರೆ. ಈ ಬಾರಿ ಮತ್ತೊಂದು ಹೊಸತೆಂದರೆ, ಒಂದಿಷ್ಟು ಕಲಾವಿದರು (ಚಿತ್ರಕಲಾವಿದ ವಿದ್ಯಾರ್ಥಿಗಳು) ಬರುತ್ತಿದ್ದಾರೆ. ತಾವು ನೋಡಿದ ಸಿನಿಮಾ ಕುರಿತು ತಮ್ಮ ಮನಸ್ಸಿನಲ್ಲಿ ಮೂಡುವ ಚಿತ್ರವನ್ನು ಬಿಡಿಸುತ್ತಾರೆ. ಒಂದರ್ಥದಲ್ಲಿ ಒಂದು ಕಲೆಯಿಂದ ಮತ್ತೊಂದರತ್ತ ಪಯಣದ ಹೆಜ್ಜೆ.

ಅದಕ್ಕಾಗಿ ಕ್ಯಾನ್ವಾಸ್ ಗಳನ್ನು ಪೂರೈಸುತ್ತಿದ್ದೇವೆ. ಬಣ್ಣವನ್ನು ಅವರೇ ತರುತ್ತಿದ್ದಾರೆ. ಹೊಸ ಪ್ರಯತ್ನ, ನೋಡಲು ಚೆನ್ನಾಗಿರುತ್ತದೆ. ಪುರಸೊತ್ತು ಮಾಡಿಕೊಂಡು ಬನ್ನಿ.

ಈ ಬಾರಿ ನಮ್ಮದು ಏಸ್ತಟಿಕ್ಸ್ ಬಗೆಗಿನ ನೋಟ. ಹಾಗಾಗಿ ಚಿತ್ರ ನಿರ್ದೇಶಕರಾದ ಉಮಾಶಂಕರ್ ಸ್ವಾಮಿ ಮತ್ತು ಶ್ರೀ ಪರಮೇಶ್ವರ ಗುರುಸ್ವಾಮಿ ನಮ್ಮೊಂದಿಗಿರುವರು. ಆಮಂತ್ರಣ ಪತ್ರವನ್ನು ಇಲ್ಲಿ ಲಗತ್ತಿಸಲಾಗಿದೆ.

ಮತ್ತೆ ಎರಡು ದಿನಗಳ ನಂತರ ಭೇಟಿಯಾಗೋಣ, ನಮಸ್ಕಾರ.