ಬಿ. ಸುರೇಶ ನಮ್ಮ ನಡುವೆ ಇರುವ ಒಬ್ಬ ಸಂವೇದನಾಶೀಲ ನಿರ್ದೇಶಕ. ಒಂದು ಚಿತ್ರವನ್ನು ಪೂರ್ಣವಾಗಿ ಗ್ರಹಿಸುತ್ತಲೇ, ನೋಡುತ್ತಲೇ ಅದರ ಸಾಧ್ಯತೆ-ಅಸಾಧ್ಯತೆಗಳನ್ನು ಇಡಿಯಾಗಿ ಕಟ್ಟಿಕೊಡುವುದು ಅವರ ವಿಶೇಷತೆ. ಅವರ ಬ್ಲಾಗ್ ನಲ್ಲಿದ್ದ “ಗುಲಾಬಿ ಟಾಕೀಸ್” ಕುರಿತಾದ ಬರಹವನ್ನು ಎಲ್ಲರ ಓದಿಗೆ ಮರು ಪ್ರಕಟಿಸುತ್ತಿದ್ದೇವೆ. ಇದಕ್ಕೆ ಒಪ್ಪಿದ ಬಿ. ಸುರೇಶರಿಗೆ ಧನ್ಯವಾದಗಳು.

ಸಿನಿಮಾ ಎಂಬುದು ಪ್ರತಿಮೆಗಳ (ಇಮೇಜಸ್) ಸಮುದ್ರ. ಪ್ರತಿಕ್ಷಣವೂ ಕಣ್ಣ ಮುಂದೆ ಸುಳಿಯುವ ದೃಶ್ಯವು ಮಿದುಳಿಗೆ ರವಾನಿಸುವ ವಿವರಗಳು, ಅದರೊಂದಿಗೆ ತಲುಪುವ ಶ್ರವ್ಯ ವಿವರಗಳೂ ಸೇರಿ, ಚಲನಚಿತ್ರದ ಪ್ರತಿ ‘ಪ್ರತಿಮೆ’ಯು ಮೂಡಿಸುವ ಅರ್ಥ ವಿನ್ಯಾಸವೂ ಸಹ ದೊಡ್ಡದು. ಈ ಹಿನ್ನೆಲೆಯಲ್ಲಿಯೇ ಪ್ರತೀ ಚಿತ್ರ ನಿರ್ದೇಶಕನೂ ಚಿತ್ರಗಳನ್ನ ಕಟ್ಟುತ್ತಾನೆ. ಪ್ರತಿ ಚಿತ್ರಿಕೆಯು ಅನುಭವವಾಗಿ ನೋಡುಗನ ಮನಸ್ಸಿನಲ್ಲಿ ಇಳಿಯುತ್ತಾ ಸಾಗಿದಂತೆ ಚಿತ್ರ ಕಟ್ಟುವವನ ಮತ್ತು ಚಿತ್ರ ನೋಡುವವನ ನಡುವೆ ಒಂದು ಅವಿನಾಭಾವ ಸಂಬಂಧ ಉಂಟಾಗುತ್ತದೆ. ಈ ಸಂಬಂಧ ಕಣ್ಣಿಗೆ ಕಾಣದ್ದು. ಆದರೆ ಮನಸ್ಸಿಗೆ ತಿಳಿಯುವಂತಹದು. ಆದ್ದರಿಂದಲೇ ನಾವು ನೋಡುವ ಪ್ರತಿ ಚಿತ್ರವನ್ನೂ ಇದು ಇಂತಹವರದು ಎಂದು ಗುರುತಿಸಿಕೊಳ್ಳುವ ಶಕ್ತಿ ಪಡೆಯುತ್ತೇವೆ. ಹಾಗೆಯೇ ನಮಗೆ ‘ಇದು ವ್ಯಾನ್‌ಗೋದು’, ‘ಇದು ಡಾಲಿಯದು’, ‘ಇದು ರವಿವರ್ಮನದು’, ‘ಇದು ವಾಸುದೇವ್‌ದು’ ಎಂಬುದು ತಿಳಿಯುತ್ತದೆ. ಇದನ್ನ ಸಿಗ್ನೆಚರ್ ಆಫ್ ದ ಆರ್‍ಟಿಸ್ಟ್ ಎಂದು ಹೇಳುತ್ತಾ ನಮ್ಮ ಚಲನಚಿತ್ರಗಳನ್ನು ನೋಡುವುದಾದರೆ, ನಮ್ಮ ಕನ್ನಡದ ಸಂದರ್ಭದಲ್ಲಿ ಗಿರೀಶ್ ಕಾಸರವಳ್ಳಿಯವರ ಸಿನಿಮಾಗಳನ್ನ ಅವರು ಸೃಷ್ಟಿಸುವ ಪ್ರತಿಮೆಯನ್ನ ನೋಡಿದ ಕೂಡಲೇ ಗುರುತಿಸಬಹುದು. ಮನೆಯ ಬಾಗಿಲು ಹಿಡಿದು ಯಾವುದೋ ಕಾತುರದಲ್ಲಿ ನಿಂತ ಹೆಣ್ಣು, ಅವಳ ಪಕ್ಕದಲ್ಲಿ ಒಬ್ಬ ಕುತೂಹಲದ ಕಣ್ಣಿನ ಬಾಲಕನ ಪ್ರತಿಮೆ ‘ಘಟಶ್ರಾದ್ಧ’ವನ್ನು ನೆನಪಿಸುತ್ತದೆ. ದೈನೇಸಿಯಂತೆ ಅಂಗಲಾಚುವ ಮುದುಕನ ಪ್ರತಿಮೆ ‘ತಬರನಕಥೆ’ಯ ನೆನಪನ್ನು ತರುತ್ತದೆ. ದೋಣಿಯನ್ನ ತಾನೇ ನಡೆಸುವ ಹೆಣ್ಣಿನ ಚಿತ್ರ ‘ದ್ವೀಪ’ವನ್ನ, ಮನೆಯ ಬಾಗಿಲಿಗೆ ಹಾಕಿದ ತೆರೆಯನ್ನ ಹಿಡಿದು ಯಾವುದೋ ಆತಂಕದಲ್ಲಿ ನೋಡುತ್ತಿರುವ ಹೆಣ್ಣು ‘ಹಸೀನಾ’ವನ್ನ… ಹೀಗೆ ಗಿರೀಶರು ಒಂದು ಪ್ರತಿಮೆಯ ಮೂಲಕ ಒಂದು ಅನುಭವವನ್ನ ನೋಡುಗನ ಕಪಾಟಿನಲ್ಲಿ ಇರಿಸುವ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ. ಈಚೆಗಿನ ಅವರ ಚಿತ್ರ ‘ಗುಲಾಬಿಟಾಕೀಸು’ ಕೂಡ ಅಂಥಾದ್ದೇ ಒಂದು ಗಿರೀಶ್ ಚಿತ್ರ ಎಂದು ಗುರುತಿಸಬಹುದಾದ್ದು. ತಗಡಿನ ಟ್ರಂಕಿನ ಮೇಲೆ ಭದ್ರವಾಗಿ ಭೂಮಿಗೆ ಬೇರಿಳಿಸುತ್ತಾ ಇದ್ದೇನೆ ಎಂಬಂತೆ ಕೂತಿರುವ ಹೆಂಗಸು ‘ಗುಲಾಬಿ’ ಯಾಗಿ ನೋಡುಗನ ಮನಸ್ಸಲ್ಲಿ ಉಳಿಯುತ್ತಾಳೆ. ಪ್ರಾಯಶಃ ಹೋರಾಟ ಮಾಡುವ ಎಲ್ಲಾ ಹೆಂಗಸರಿಗೆ ಸೂಚಿಯಾಗಿ ಇದನ್ನೇ ಮುಂದೊಮ್ಮೆ ಬಳಸಬಹುದೇನೋ?
allinda tandaddu 1
ಇಷ್ಟು ಪೀಠಿಕೆಯೊಂದಿಗೆ ಗಿರೀಶರ ಹೊಸಚಿತ್ರ ‘ಗುಲಾಬಿ ಟಾಕೀಸು’ ಕುರಿತ ನನ್ನ ಭಾವಲೋಕಕ್ಕೆ ಪ್ರವೇಶಿಸುತ್ತೇನೆ. ಇಲ್ಲಿ ‘ನನ್ನ ಭಾವಲೋಕ’ ಎಂಬುದಕ್ಕೆ ಕಾರಣವನ್ನು ಹೇಳಿಬಿಡುತ್ತೇನೆ. ಪ್ರತಿ ಪ್ರತಿಮೆಯೂ ಪ್ರತಿ ನೋಡುಗನಿಗೆ ತಾಗಿ ಅವನದ್ದೇ ಆದ ಒಂದು ಲೋಕವನ್ನು ಸೃಷ್ಟಿಸುತ್ತದೆ. ಹಾಗಾಗಿಯೇ ಕಾಣಿಸುವ ಸತ್ಯಕ್ಕೂ, ಮನಸ್ಸಿನಲ್ಲಿ ಮೂಡುವ ಭಾವಕ್ಕೂ ಅಂತರಗಳು ಉಂಟಾಗುತ್ತವೆ ಎನ್ನುತ್ತಾನೆ ಸಾಷರ್. ಆ ಮಾತು ನಿಜ. ಅಂತೆಯೇ ಪ್ರತಿ ನೋಡುಗನ ಮನಸ್ಸಲ್ಲಿ ‘ಗುಲಾಬಿ’ ಮೂಡಿಸಿರಬಹುದಾದ ಭಾವಕ್ಕಿಂತ ನನ್ನ ಅನುಭವ ಭಿನ್ನವಿರಬಹುದು. ಆ ಅನುಭವವನ್ನು ನಿಮ್ಮ ಮುಂದೆ ಇಡುವ ಪ್ರಯತ್ನ ಇಲ್ಲಿದೆ.

ವೈದೇಹಿ ಕನ್ನಡದ ಶ್ರೇಷ್ಟ ಕತೆಗಾರರಲ್ಲಿ ಒಬ್ಬರು. ಅವರು ಬರೆದ ಕಥೆಗಳಲ್ಲಿ ‘ಗುಲಾಬಿ ಟಾಕೀಸು’ ಒಂದು ವಿಶಿಷ್ಟ ಕತೆ. ಕನ್ನಡ ಹಳ್ಳಿಗಳಲ್ಲಿ ಬದುಕಿದ ಹೆಂಗಸರ 1970 ಮತ್ತು 80ರ ನಡುವಿನ ಕಾಲಘಟ್ಟವನ್ನು ಅತ್ಯಂತ ಸಮರ್ಪಕವಾಗಿ ಹಿಡಿದಿಟ್ಟ ಕತೆ. ಈ ಕತೆಯನ್ನು ಆಧರಿಸಿ ಗಿರೀಶ್ ಕಾಸರವಳ್ಳಿಯವರು ‘ಗುಲಾಬಿ ಟಾಕೀಸು’ ಎಂಬ ಚಿತ್ರ ತಯಾರಿಸಿದ್ದಾರೆ. ಆಧರಿಸಿ ಎಂದರೆ ವೈದೇಹಿ ಅವರ ಕತೆಯ ವಿವರವು ಈ ಚಿತ್ರದಲ್ಲಿ ಇದೆ ಎಂದಲ್ಲ. ಗಿರೀಶರು ತಾವು ಹೆಣೆದ ಕಥೆಯಲ್ಲಿ ವೈದೇಹಿಯವರ ಕತೆಯ ಪಾತ್ರಗಳನ್ನ ಹೆಸರಿಗಾಗಿ ಮಾತ್ರ ಬಳಸಿಕೊಳ್ಳುತ್ತಾರೆ, ಅಷ್ಟೆ. ಉಳಿದಂತೆ ಆ ಕತೆಯ ಹೂರಣವನ್ನೂ ಬಳಸದೆ ತಮ್ಮದೇ ಆದ ಮತ್ತೊಂದ ಲೋಕ ಸೃಷ್ಟಿಗೆ ಹೊರಡುತ್ತಾರೆ. ಇದು ಗಿರೀಶ್ ಕಾಸರವಳ್ಳಿಯವರ ಶಕ್ತಿಯೂ ಹೌದು, ಅವಗುಣವೂ ಹೌದು.

ಶಕ್ತಿ ಯಾಕೆಂದರೆ ವೈದೇಹಿಯವರ ಸಾಹಿತ್ಯದ ಓದುಗನಾಗಿ ಒಬ್ಬಾತ ಪಡೆದುಕೊಂಡದ್ದನ್ನೆಲ್ಲಾ ಸುಳ್ಳಾಗಿಸಿ ಅದೇ ‘ವಿಳಾಸ’ ‘ಸ್ಥಳನಾಮ’ಗಳ ಜೊತೆಗೆ ಮತ್ತೊಂದು ಹೊಸಲೋಕದ, ಹೊಸ ಭಾವವಲಯದ ಸೃಷ್ಟಿ ಗಿರೀಶ್ ಅವರಿಗೆ ಸಾಧ್ಯವಾಗುತ್ತದೆ. ಕನ್ನಡದ ಅಥವ ಭಾರತೀಯ ಸಂದರ್ಭದಲ್ಲಿ ಶ್ರೇಷ್ಟವೆನಿಸುವ ಅಪರೂಪದ ಪ್ರಯೋಗ ಎನಿಸುವ ಸಿನಿಮಾವೊಂದನ್ನು ಗಿರೀಶರು ಕಟ್ಟಿಕೊಡುತ್ತಾರೆ.
b.suresha ಅವಗುಣ ಏನೆಂದರೆ ಮೂಲಕತೆಯ ಯಾವ ವಿವರವೂ ಇಲ್ಲದೆ, ಇಂತಹವರ ಕತೆ ಎಂದು  ಮಾತ್ರ ಹೇಳಿ, ಮತ್ತೇನನ್ನೋ ಉಣಬಡಿಸುವುದು ಮೂಲಕ್ಕೆ ಮಾಡಿದ ಅಪಮಾನ  ಎಂದು ನನ್ನ ಅಭಿಪ್ರಾಯ. ಕುದುರೆಯ ಚಿತ್ರ ಬರೆದು ಕೆಳಗೆ ಕಾಗೆ ಎಂದು ಬರೆದರೂ  ಮೂಲ ಚಿತ್ರವೇ ಸ್ವತಃ ಸಂವಾದಿಯಾದ್ದರಿಂದ ಕೆಳಗೆ ಬರೆದ ಅಕ್ಷರವು ಪ್ರಮಾದ  ಎನಿಸುವುದಿಲ್ಲ. ಇಲ್ಲಿ ಗಿರೀಶರು ಬರೆದಿರುವ ಚಿತ್ರಕ್ಕೆ ವೈದೇಹಿಯವರ ಹೆಸರನ್ನು  ಬಳಸುವುದು ಅಕ್ಷರದ ಮೂಲಕ್ಕೆ ಚಿತ್ರ ಪ್ರಕಾರ ಮಾಡಿದ ಅನ್ಯಾಯವಾಗುತ್ತದೆ.

ಇದು ಕೇವಲ ಗುಲಾಬಿ ಟಾಕೀಸು’ ಚಿತ್ರಕ್ಕೆ ಸೀಮಿತವಾದ ಮಾತಲ್ಲ. ‘ತಬರನಕಥೆ’ಯ ನಂತರ ಗಿರೀಶರು ಸೃಷ್ಟಿಸಿದ ಎಲ್ಲಾ ಕೃತಿಗಳಲ್ಲೂ ಇಂತಹ ಪ್ರಯೋಗವಾಗಿದೆ. ಇದನ್ನು ಪ್ರಯೋಗ ಪ್ರಿಯರು ಲಂಘನ ಎಂದು ಗುರುತಿಸುತ್ತಾರೆ. ಆದರೆ ಇದು… ?

ಒಂದು ಕೃತಿ ಮತ್ತೊಂದು ಪ್ರಕಾರಕ್ಕೆ ಬಂದಾಗ ಬದಲುಗಳಾಗಬೇಕಾದ್ದು ಅನೇಕ ಕಾರಣಗಳಿಗಾಗಿ ಅನಿವಾರ್ಯ. ಈ ಹಿನ್ನೆಲೆಯಲ್ಲಿ ಒಂದು ಸಾಹಿತ್ಯ ಕೃತಿಯನ್ನ ಚಲನಚಿತ್ರ ಕೃತಿಯಾಗಿ ರೂಪಾಂತರಗೊಳಿಸುವುದು ಎನ್ನುವಾಗ ಮೂಲದ ಆಶಯವಾದರೂ ಉಳಿಯಬೇಕಲ್ಲವೇ? ಅದಾಗುವುದಿಲ್ಲ, ಗಿರೀಶ್ ಕಾಸರವಳ್ಳಿಯವರ ಕೃತಿಯಲ್ಲಿ. ಈ ಹಿನ್ನೆಲೆಯಿಂದ ಅವರು ತಮ್ಮ ಸಿನಿಮಾವನ್ನ ಇಂತಹವರ ಕತೆಯ ಆಧಾರದಿಂದ ಎನ್ನುವ ಬದಲು ಸ್ಫೂರ್ತಿಯಿಂದ ಎಂದು ಹೇಳಿದರೆ ಅಡ್ಡಿಯಿಲ್ಲ. ಆದರೆ ಅವರು ಸ್ಪಷ್ಟವಾಗಿ ಇಂತಹ ಸಾಹಿತಿಗಳ ಕಥೆಯನ್ನು ಆಧರಿಸಿ ಎನ್ನುತ್ತಾರೆ. ಇದು ವೈರುಧ್ಯಗಳಿಗೆ ಕಾರಣವಾಗುತ್ತದೆ. ಇದು ಗಿರೀಶರ ಈಚೆಗಿನ ಚಿತ್ರಗಳ ದೊಡ್ಡ ಅವಗುಣ.

ಈ ದೋಷದ ಹೊರತಾಗಿಯೂ, ಮೂಲಕತೆಯನ್ನು ಮೀರಿ ಬೆಳೆಯುವ ದೈತ್ಯ ಪ್ರತಿಭೆ ಗಿರೀಶರದ್ದು. ಹಾಗಾಗಿಯೇ ಈವರೆಗಿನ ಗಿರೀಶ್ ಕಾಸರವಳ್ಳಿಯವರ ಕೃತಿಗಳಿಗಿಂತ ‘ಗುಲಾಬಿ ಟಾಕೀಸು’ ವಿಭಿನ್ನವಾಗಿಯೂ ಮತ್ತು ಹೆಚ್ಚು ತಾಗುವ ಗುಣದ್ದಾಗಿಯೂ ಕಾಣುತ್ತದೆ.

ಹೂರಣ
ವೈದೇಹಿ ಅವರ ಕಥೆಯನ್ನ ಓದಿದವರಿಗೂ ಈ ಕಥೆ ಹೊಸದು. ಹಾಗಾಗಿ ಇಲ್ಲಿನ ಹೂರಣವನ್ನ ಮೊದಲು ತಿಳಿಯಬೇಕು.
ಅದೊಂದು ಕುದ್ರು (ಹಿನ್ನೀರಿನ ದ್ವೀಪ). ಅಲ್ಲೊಬ್ಬಾಕೆ ಸೂಲಗಿತ್ತಿ. ಅವಳ ಹೆಸರು ಗುಲಾಬಿ. ಅವಳಿಗೆ ಪ್ರತಿದಿನ ಅದೇ ಸಿನಿಮಾ ನೋಡಿ ಕನಸು ಕಾಣುವುದು ಆನಂದ. ಅವಳ ಗಂಡ ಮನೆಗೆ ಬರುವುದಿಲ್ಲ. ಅವನಿಗೆ ಮತ್ತೊಂದು ಮದುವೆಯಾಗಿದೆ. ಗುಲಾಬಿಗೆ ಮಕ್ಕಳಿಲ್ಲ. ಆದರೆ ಅವಳ ಸವತಿಗೆ ಒಂದು ಮಗುವಿದೆ. ಗುಲಾಬಿಗೆ ಹೇಗಾದರೂ ಆ ಮಗುವಿನ ಪ್ರೀತಿ ಸಂಪಾದಿಸಬೇಕೆಂಬ ಬಯಕೆ. ಆದರೆ ಅದು ಸವತಿ ಮತ್ಸರದಿಂದಾಗಿ ಆಗುತ್ತಿಲ್ಲ. ಹೀಗಾಗಿ ಅವಳು ಹತ್ತಿರದ ಊರಲ್ಲಿ ಇರುವ ಚಿತ್ರಮಂದಿರದಲ್ಲಿ ಸಿನಿಮಾ ನೋಡುತ್ತಾ ತನ್ನ ಹೊಸ ಕನಸುಗಳನ್ನ ಹೊಸೆಯುತ್ತಾಳೆ. ಈ ಮಧ್ಯೆ ಯಾವುದೋ ಶ್ರೀಮಂತರ ಮನೆಯಲ್ಲಿ ಸೂಲಗಿತ್ತಿಯ ಕೆಲಸ ಮಾಡಿದ್ದಕ್ಕೆ ಅವಳಿಗೆ ಊಡುಗೊರೆಯಾಗಿ ಬಣ್ಣದ ಟೆಲಿವಿಷನ್ ಸಿಗುತ್ತದೆ. ಅಲ್ಲಿಂದ ಗುಲಾಬಿಯ ಬದುಕು ಅನೇಕ ಕನಸುಗಳನ್ನ ಕಟ್ಟಿಕೊಳ್ಳುತ್ತಾ ಸಾಗುತ್ತದೆ. ಅವಳ ಮನೆಯಲ್ಲಿರುವ ಟೆಲಿವಿಷನ್ ಮತ್ತು ಧಾರಾವಾಹಿಗಳನ್ನು ನೋಡಲು ಬರುವ ಆಸುಪಾಸಿನವರಿಂದಾಗಿ ಅವಳ ಮನೆಯೇ ಅವಳದ್ದಲ್ಲ ಎನ್ನುವಂತೆ ಅಲ್ಲಿ ಹೆಂಗಸರು ಸೇರುತ್ತಾರೆ. ಟಿವಿ ನೋಡುತ್ತಾ ಅವರೆಲ್ಲ ಕಣ್ಣೀರು ಹಾಕುತ್ತಾರೆ. ನಗುತ್ತಾರೆ. ತಮ್ಮ ನಿತ್ಯ ಕಾಯಕದ ನಡುವೆಯೂ ತಾವು ನೋಡಿದ ಸೀರಿಯಲ್ ಕುರಿತು ಮಾತಾಡುತ್ತಾರೆ. ಸೀರಿಯಲ್ಲಿನ ಕತೆಯನ್ನ ತಮ್ಮ ಜೀವನಕ್ಕೆ ಆರೋಪಿಸಿಕೊಂಡು ಬದುಕಲು ಪ್ರಯತ್ನಿಸುತ್ತಾರೆ. ಅದೇ ಊರಿನ ಮೀನುಗಾರರಿಗೆ ಯಂತ್ರ ಚಾಲಿತ ದೋಣಿಗಳಿಂದ ಇರುವ ಸಂಕಷ್ಟಗಳನ್ನು ಮರೆಸಲು ಸಹ ಟೆಲಿವಿಷನ್ ಕಾರಣವಾಗುತ್ತದೆ. ಇದೇ ಸಮಯದಲ್ಲಿ ಎಲ್ಲೋ ನಡೆವ ಯುದ್ಧ ಊರಿನವರಲ್ಲಿ ದೇಶ ಪ್ರೇಮ ಮೂಡಿಸುತ್ತದೆ. ಈ ಸಮಯದಲ್ಲಿ ಹುಟ್ಟುವ ಕೋಮು ಗಲಭೆಗಳಿಂದ ಆ ಕುದ್ರುವಿನಲ್ಲಿದ್ದ ಮುಸಲ್ಮಾನರೆಲ್ಲಾ ಮನೆ ಖಾಲಿ ಮಾಡಿಕೊಂಡು ಹೋಗುತ್ತಾರೆ. ಅಲ್ಲೇ ಉಳಿಯುವ ಗುಲಾಬಿಯನ್ನ ಮತೀಯವಾದಿಗಳು ಮನೆಯಿಂದ ಆಚೆಗೆ ಹಾಕುತ್ತಾರೆ.
g1

ಇದು ಸ್ಥೂಲವಾಗಿ ಹೇಳಬಹುದಾದ ಕಥಾವಿವರ. ಗಿರೀಶರು ಹೆಣೆದ ಕತೆಯನ್ನ ಹೀಗೆ ಸರಳೀಕರಿಸಲು ಸಾಧ್ಯವಾಗದು. ಅಲ್ಲಿ ಅನೇಕ ಪದರಗಳು, ಸ್ತರಗಳು ಇವೆ. ಪ್ರತಿ ವಿವರದಲ್ಲಿಯೂ ಅವರವರ ಭಾವಕ್ಕೆ ಗ್ರಹೀತವಾಗುವ ಅನೇಕ ವಿವರಗಳು ಇದೆ. ಹಾಗಾಗಿ ಗಿರೀಶ್‌ರ ಈ ಕತೆಯಲ್ಲಿ ಹೂರಣವೆಂಬುದು ಅಸ್ಥಿಭಾರವಿದ್ದ ಹಾಗೆ ಅಷ್ಟೆ. ಅದು ಎಲ್ಲವನ್ನೂ ಬಿಟ್ಟುಕೊಡದು. ಬಿಟ್ಟುಕೊಟ್ಟ ವಿವರಗಳು ಸರಳವಾಗಿ ಹೇಳಲೂ ಆಗದು. ಅಂತಿಮವಾಗಿ ನೋಡುಗನ ಮನಸ್ಸಿನಲ್ಲಿ ಒಂದು ವಿಚಿತ್ರ ಅನುಭವ ಮತ್ತು ‘ಗುಲಾಬಿ’ಯ ಲೋಕದೊಳಗಿನ ಸಾಂದ್ರತೆಗಳು ಮಾತ್ರ ಉಳಿಯುತ್ತವೆ.

ಕಟ್ಟಡ
ಗಿರೀಶರು ಚಿತ್ರವನ್ನ ಆರಂಭಿಸುವುದು ಪಾಲನಾ ಸಂಸ್ಕೃತಿಯ ವಿವರಗಳಿಂದ. ‘ಗುಲಾಬಿ’ ತನ್ನಲ್ಲಿರುವ ಚಿಲ್ಲರೆಯಲ್ಲಿಯೇ ಸಿಗಡಿ ಮೀನು ಕೊಳ್ಳಲು ಪ್ರಯತ್ನಿಸುತ್ತಾಳೆ. ಅವಳು ನೀಡುವ ಹಣಕ್ಕೆ ಏನೂ ಸಿಗದು ಎನ್ನುವ ಮಾರುವ ಹೆಣ್ಣುಮಗಳು ಮತ್ತು ಗುಲಾಬಿಯ ನಡುವೆ ಸಣ್ಣ ಜಗಳವಾಗುತ್ತದೆ. ಆದರೆ ಅದು ಅಂತಿಮವಾಗಿ ಪ್ರೀತಿಯಲ್ಲಿಯೇ ಪರ್ಯಾವಸನವಾಗುತ್ತದೆ. ಹೀಗೆ ಗುಲಾಬಿ ತನ್ನ ಗಂಡನನ್ನ ಮತ್ತು ತನ್ನ ಸವತಿಯ ಮಗುವನ್ನ ತನ್ನ ಪ್ರೀತಿಯ ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನಿಸುವುದು ಒಂದು ಧಾರೆಯಾದರೆ ಅದೇ ಊರಿನಲ್ಲಿರುವ ಸಣ್ಣ ಹಡಗನ್ನುಳ್ಳ ಮೀನುಗಾರರ ಒಡೆಯನಿಗೆ ಚಿತ್ರದುದ್ದಕ್ಕೂ ಚರ್ಚಿತವಾಗುವ, ಆದರೆ ಚಿತ್ರದಲ್ಲಿ ಕಾಣಿಸದ ಸುಲೇಮಾನ್ ಎಂಬ ಯಾಂತ್ರೀಕೃತ ದೋಣಿಯ ಒಡೆಯನ ನಡುವಿನ ವ್ಯಾಪಾರ ಸಂಬಂಧೀ ವಿವರಗಳು ಎರಡನೆಯ ಧಾರೆ. ಮೂರನೆಯ ಧಾರೆಯಾಗಿ ಅದೇ ಊರಿನ ನೇತ್ರಾ ಎಂಬ ಹೆಣ್ಣು ಮಗಳ ವಿವರ ಬರುತ್ತದೆ. ಆಕೆ ವಿಧವೆ. ಆದರೆ ಅವಳಿಗೂ ಕನಸುಗಳಿವೆ. ಹಾರಿಕೊಂಡು ಸ್ವತಂತ್ರ ಪಡೆಯಲು ಸಾಧ್ಯವಿಲ್ಲದ ಕಟ್ಟುಪಾಡಿದೆ. ಈ ನೇತ್ರಾಳಿಗೆ ‘ಗುಲಾಬಿ’ಯ ಟೆಲಿವಿಷನ್ನಿನ್ನಲ್ಲಿ ಬರುವ ಧಾರಾವಾಹಿಗಳ ಜೊತೆಗೆ ತನ್ನನ್ನ ಸಮೀಕರಿಸಿಕೊಂಡು ಹೊಸ ಜಗತ್ತಿಗೆ ಹಾರಬೇಕು ಎನ್ನುವ ಉಮೇದು ಬರುತ್ತದೆ. ಇದಕ್ಕೆ ಗುಲಾಬಿ ಮತ್ತು ನೇತ್ರಾಳ ನಡುವಿನ ಮಾತುಗಳೂ ನೆರವಾಗುತ್ತವೆ. ಈ ಹಾದಿಯಲ್ಲಿ ನೇತ್ರಾ ಊರು ಬಿಟ್ಟ ಸುದ್ದಿ ಹಬ್ಬಿದಾಗ ಅದಕ್ಕೆ ಗುಲಾಬಿಯ ಗಂಡನೇ ಕಾರಣವೆಂದು ಅವನಿಗೆ ಯಾರೋ ಹೊಡೆಯುತ್ತಾರೆ. ಈ ಹೊಡೆತದಲ್ಲಿ ಆತ ಸುಲೇಮಾನ್ ಬ್ಯಾರಿಯ ಏಜೆಂಟ್ ಎಂಬ ಭಾವವೂ ಇದೆ. ಒಂದರ್ಥಕ್ಕೆ ಸ್ಥಳೀಯ ಮೀನುಗಾರರ ಜೀವನವನ್ನು ನಾಶದ ಕಡೆಗೆ ತಳ್ಳಿದವನು ಎಂಬ ಕೋಪವೂ ಇದೆ. ಹೀಗೆ ನೇತ್ರಾ ಎಂಬ ಹುಡುಗಿ ಊರಿಂದಾಚೆಗೆ ಹೋಗುವುದು ಮತ್ತು ಅದನ್ನ ಮತೀಯ ಬಣ್ಣಕ್ಕೆ ತಿರುಗಿಸುವುದು ಎಲ್ಲವೂ ಆಗಿ ಒಂದು ಧಾರೆಯೊಳಗೆ ಮತ್ತೊಂದು ಧಾರೆ ಸೇರಿಕೊಂಡು ಒಂದು ಉತ್ಕರ್ಷದ ಕಡೆಗೆ ಸದ್ದಿಲ್ಲದೆ ಸಾಗುತ್ತದೆ.

ಇದು ಈಚೆಗಿನ ಕಾಸರವಳ್ಳಿ ಸಿನಿಮಾಗಳಿಗಿಂತ ಭಿನ್ನ ಪ್ರಯೋಗ. ಇಂದಿನ ಟೆಲಿವಿಷನ್‌ನಲ್ಲಿರುವ ದೈನಿಕ ಧಾರಾವಾಹಿಗಳ ಪ್ರಧಾನ ಗುಣವಿದು. ಅದೇ ಕಥಾಧಾರೆಗಳ ಕಥನಕ್ರಮ ಇಲ್ಲಿ ಬಳಕೆಯಾಗಿದೆ. ತಮಾಷೆ ಎಂದರೆ ಅದೇ ಟೆಲಿವಿಷನ್ ಮಾಧ್ಯಮದ ಒಳಿತು ಕೆಡಕುಗಳ ಕುರಿತು ಕಾಸರವಲ್ಲೀಯವರು ‘ಗುಲಾಬಿ’ ಚಿತ್ರದ ಉದ್ದಕ್ಕೂ ಮಾತಾಡುತ್ತಾರೆ. ಟೆಲಿವಿಷನ್ನಿನ ಈ ಕಥನ ಕ್ರಮ ದೈನಿಕ ಧಾರಾವಾಹಿಗಳಲ್ಲಿ ಎಂದೂ ಒಂದಾಗದೆ ಭಿನ್ನವಾಗಿಯೇ ಉಳಿದು, ಎಂದೋ ಒಂದು ದಿನ ತಟ್ಟನೆ ಮುಗಿದು ಹೋಗುತ್ತದೆ. ಆದರೆ ಗಿರೀಶರ ಈ ಪ್ರಯೋಗದಲ್ಲಿ ಎಲ್ಲಾ ಭಿನ್ನಗಳು ಒಂದರೊಳಗೊಂದು ಬೆಸೆದುಕೊಂಡು ಬೆಳೆಯುತ್ತವೆ ಮತ್ತು ಒಂದು ನಿಗೂಢದ ಕಡೆಗೆ ಚಲಿಸಿ ಸಂಗಮವಾಗುತ್ತವೆ. ಈ ಸಂಗಮದಿಂದಲೇ ಉಂಟಾಗುವ ಹೊಸ ಅರ್ಥ ಸಾಧ್ಯತೆಗಳತ್ತ ನೋಡುಗನನ್ನ ಸೆಳೆಯುವುದು ಸಹ ಈ ಪ್ರಯೋಗದಿಂದ ಸಾಧ್ಯವಾಗುತ್ತದೆ.

ಭಾಷೆ
‘ಗುಲಾಬಿ ಟಾಕೀಸಿ’ನಲ್ಲಿ ಬಳಕೆಯಾಗಿರುವುದು ಕುಂದಾಪುರಕ್ಕೆ ಹತ್ತಿರದ ಕರಾವಳಿಯ ಜನ ಆಡುವ ನುಡಿಗಟ್ಟನ್ನ. ಕಡಲತೀರದಲ್ಲಿ ಇರುವವರ ಬದುಕು ವರ್ಣಗಳ ಸಂತೆಯಂತಹುದು. ಮೀನು ಮಾರುಕಟ್ಟೆಯಲ್ಲಿ ಇರುವ ಗೌಜು, ಅಡಿಗೆ ಮನೆಯ ಒಳಗಿರುವ ಹಸಿವು, ಮಂಚದ ಮೇಲಿನ ತೀವ್ರತೆಗಳೆಲ್ಲವನ್ನೂ ವಿಶಿಷ್ಟವಾಗಿ ಕಟ್ಟಿಕೊಡುವಲ್ಲಿ ಈ ಭಾಷೆಯ ಬಳಕೆ ಗಿರೀಶರ ಸಹಾಯಕ್ಕೆ ಬಂದಿದೆ. ಪ್ರಾಯಃ ಕನ್ನಡದ ಇತರ ನುಡಿಗಟ್ಟನ್ನ ಆಡುವವರ ನಡುವೆ ಈ ಚಿತ್ರ ಪ್ರದರ್ಶನವಾದಾಗ ಅನಿವಾರ್ಯವಾಗಿ ಸಬ್‌ಟೈಟಲ್ಲನ್ನೇ ನೋಡಿ ಮಾತನ್ನು ಗ್ರಹಿಸಬೇಕಾಗಬಹುದು. ಆದರೆ ವೈದೇಹಿ ಮತ್ತು ಬೊಳುವಾರು ಮಹಮ್ಮದ್ ಕುಂಞ ಅವರ ಸಂಭಾಷಣೆ ಚಿತ್ರದುದ್ದಕ್ಕೂ ಜೀವಂತವಾಗಿದೆ. ಯಾವುದೋ ಸಿನಿಮಾ ಥೇಟರಿನಲ್ಲಿ ಕುಳಿತ ಗುಲಾಬಿಯನ್ನ ಅವಳ ಸೂಲಗಿತ್ತಿ ಸರ್ವೀಸ್ ಬೇಕಾದ ಜನ ಹೊತ್ತು ಒಯ್ಯುತ್ತಾರೆ. ಈ ದೃಶ್ಯದಲ್ಲಿ ಈ ಕರಾವಳಿಯ ಕನ್ನಡದ ಶಕ್ತಿ ತೆರೆದುಕೊಳ್ಳುತ್ತದೆ. ಗುಲಾಬಿಯು ನೇತ್ರಾಳ ಜೊತೆಗೆ ತನ್ನ ಕನಸನ್ನು ಹಂಚಿಕೊಳ್ಳುವಲ್ಲಿ ಮತ್ತು ತನ್ನ ಗಂಡನನ್ನ ಗುಲಾಬಿ ಮರಳಿ ಒಲಿಸಿಕೊಳ್ಳಲು ಪ್ರಯತ್ನಿಸುವಲ್ಲಿ ಈ ಭಾಷೆಯು ಸಮರ್ಥವಾಗಿ ಬಳಕೆಯಾಗಿದೆ. ಆ ಮಾತನ್ನ ಆಡಿರುವ ಕಲಾವಿದರು ಸಹ ಆ ನುಡಿಗಟ್ಟನ್ನ ತಮಗೆ ಒಗ್ಗಿಸಿಕೊಂಡು ಬಳಸುವಲ್ಲಿ ಸಾಕಷ್ಟು ಶ್ರಮ ಪಟ್ಟಿದ್ದಾರೆಂಬುದು ಮೊದಲ ನೋಟಕ್ಕೆ ತಿಳಿಯುತ್ತದೆ. ಈ ನುಡಿಗಟ್ಟಿನ ಒಳಸುಳಿಗಳನ್ನು ತಿಳಿದುಕೊಳ್ಳುವಷ್ಟು ಪರಿಚಯ ಈ ಲೇಖಕನಿಗೆ ಇಲ್ಲವಾದರೂ ಕಲಾವಿದರಾದ ಉಮಾಶ್ರೀ, ಎಂಡಿ.ಪಲ್ಲವಿ, ಕೆ.ಜಿ.ಕೃಷ್ಣಮೂರ್ತಿ ಅವರು ಈ ಆಡು ಬಾಷೆಯನ್ನ ತಮ್ಮ ನಟನೆಯ ಭಾಷೆಯ ಜೊತೆಗೆ ಬಳಸಿಕೊಂಡಿರುವ ಕ್ರಮ ಮೆಚ್ಚುಗೆಯಾಗುತ್ತದೆ.

ಚಲನಚಿತ್ರದಲ್ಲಿ ಭಾಷೆಯ ಬಳಕೆ ಎಂದಾಗ ನಮ್ಮಲ್ಲಿನ ಬಹುತೇಕ ಚಿತ್ರತಯಾರಕರಿಗೆ ನುಡಿಗಟ್ಟುಗಳನ್ನಾಡುವವರನ್ನ ಹಾಸ್ಯಕ್ಕೆ ಮಾತ್ರ ಬಳಸುವುದು . ಇಂತಹ ತಮಾಷೆಯಿಂದಾಗಿ ಆಯಾ ನುಡಿಗಟ್ಟನ್ನ ಮಾತಾಡುವವರಲ್ಲಿ ಕೀಳರಿಮೆ ಉಂಟಾಗಿರುವುದಿದೆ ಮತ್ತು ಅವೇ ಕಾರಣಗಳಿಂದಾಗಿ ಭಾಷಾ ತಾರತಮ್ಯವೂ ಉಂಟಾಗಬಹುದಾದ ಸಾಧ್ಯತೆಯಿದೆ. ಅತ್ಯಂತ ಪ್ರಬಲ ಮಾಧ್ಯಮವಾದ ಸಿನಿಮಾದಲ್ಲಿ ಭಾಷೆಯನ್ನು ಬಳಸುವವರು ಎಚ್ಚರಿಕೆ ವಹಿಸಬೇಕಾದ್ದು ಅಗತ್ಯ. ಈ ಹಿನ್ನೆಲೆಯಲ್ಲಿ ಗಿರೀಶರು ತಮ್ಮ ‘ಗುಲಾಬಿ’ಯಲ್ಲಿ ಮಾಡಿರುವ ಪ್ರಯತ್ನ ಮೆಚ್ಚುವಂತಹದು. ವಿಶೇಷವಾಗಿ ‘ಗುಲಾಬಿ’ ಪಾತ್ರದ ಮಾತುಗಳಲ್ಲಿ ಇರುವ ಪಾಲನೆಯ ಹಾಗೂ ಸಂಪಾದನೆಯ ಕಾತರ ಮತ್ತು ಆ ಪಾತ್ರಕ್ಕೆ ಇರುವ ಜೀವನ ಪ್ರೀತಿ ನೋಡುಗನ ಮನಸ್ಸಿನಲ್ಲಿ ಬಹುಕಾಲ ಉಳಿಯುವಂತಹದು.

ಕ್ರೋಶಿಯಾದ ಚಲನಚಿತ್ರ ನಿರ್ದೇಶಕ ಎಮಿರ್ ಕೊಸ್ಟಾರಿಕಾನ ‘ಲೈಫ್ ಇಸ್ ಎ ಮಿರಾಕಲ್’ ಮತ್ತು ‘ಬ್ಲಾಕ್ ಕ್ಯಾಟ್ ವೈಟ್ ಕ್ಯಾಟ್’ ಚಿತ್ರಗಳಲ್ಲಿ ಬರುವ ಸಮೂಹ ನಿರ್ವಹಣೆಯ ಕ್ರಮ ಗಿರೀಶರ ಚಿತ್ರಗಳ ಮೇಲೆ ಪ್ರಭಾವ ಮೂಡಿಸಿರಬಹುದು. ಜೊತೆಗೆ ಮೂರು ಧಾರೆಗಳ ಕಥನ ಕ್ರಮವು ‘ಬಾಬೆಲ್’ ‘ಅಮರೋಸ್ ಪರೆಸ್’ನಂತಹ ಚಿತ್ರಗಳ ನಿರ್ದೇಶಕ ಅಲೆಗ್ಸಾಂಡ್ರೋ ಗೋನ್ಸಾಲಿಸ್‌ನ ಪ್ರಭಾವವೂ ಗಿರೀಶರ ಮೇಲಾಗಿರಬಹುದು.

ಸಂಯೋಜನೆ
ಚಿತ್ರ ಕಟ್ಟುವ ಶಕ್ತಿಯಲ್ಲಿ ಪ್ರತಿಮೆಗಳು ಹೇಗೆ ಕೆಲಸ ಮಾಡುತ್ತವೆ ಎಂದು ಅದಾಗಲೇ ಪ್ರಸ್ತಾಪಿಸಿದ್ದೇನೆ, ‘ಗುಲಾಬಿ ಟಾಕೀಸಿ’ನಲ್ಲಿ ಚಿತ್ರದುದ್ದಕ್ಕೂ ನಮ್ಮನ್ನು ಪ್ರತಿಮೆಗಳು ಕಾಡುತ್ತವೆ. ನೀಲ ಆಗಸದ ಮಧ್ಯೆಯಿಂದ ಮೆಲ್ಲಗೆ ಇಳಿಯುವ ಡಿಶ್ ಆಂಟೆನಾ. ಆ ಡಿಶ್ ಆಂಟೆನಾದ ಜೊತೆಯಲ್ಲಿ ಕಾಣುವ ಸಮುದ್ರ ಮತ್ತು ಆಡುವ ಮಕ್ಕಳು. ಆನ್ ಆಗಿಲ್ಲದ ಟೆಲಿವಿಷನ್ನಿನಲ್ಲಿ ಕಾಣುವ ಹತಾಶ ಗುಲಾಬಿಯ ಪ್ರತಿಬಿಂಬ. ಇದರೊಂದಿಗೆ ಚಿತ್ರದ ಕಡೆಯಲ್ಲಿ ಖಾಲಿಯಾಗಿರುವ ಗುಲಾಬಿಯ ಮನೆಯೊಳಗೆ ಬಂದು ಕೂರುವ ಇಬ್ಬರು ವಯಸ್ಕ ಮಹಿಳೆಯರಿಗೆ ಇರುವ ಟೆಲಿವಿಷನ್ನ್ ನೋಡಬೇಕೆಂಬ ಹಪಹಪಿ. ಅದಕ್ಕಾಗಿ ಆನ್ ಆಗಿಲ್ಲದ ಟೆಲಿವಿಷನ್ನ್ ಎದುರು ಕೂತು ಇಬ್ಬರೂ ಬೊಚ್ಚು ಬಾಯಿತೆರೆವ ಚಿತ್ರದ ಕಡೆಯ ಚಿತ್ರಿಕೆ. ಹೀಗೆ ‘ಗುಲಾಬಿ’ಯಲ್ಲಿ ಬಹುಕಾಲ ನಮ್ಮ ಮನಸ್ಸಲ್ಲಿ ಉಳಿಯುವ ಅನೇಕ ಇಮೇಜ್‌ಗಳಿವೆ. ಈ ಚಿತ್ರಿಕೆಯ ಸಂಯೋಜನೆಯಲ್ಲಿ ಸಹ ಗಿರೀಶ್ ಮತ್ತು ಛಾಯಾಗ್ರಾಹಕ ಎಸ್.ರಾಮಚಂದ್ರ ಐತಾಳರು ಸಿನಿಮಾ ಪರದೆಯ ವಿಸ್ತೀರ್ಣವನ್ನೇ ಕಲಾಕೃತಿ ನಿರ್ಮಾಣಕ್ಕೆ ಬಳಸಿದಂತಿದೆ,

ಬೋಟಿನ ನಡುವೆ ಕಾಣಿಸುವ ಬೃಹತ್ ಡಿಶ್ ಆಂಟೆನಾದ ಪ್ರತಿಮೆಯಂತೂ ಗ್ರಾಮದೊಳಗೆ ಹಣಿಕುತ್ತಿರುವ ಆಧುನೀಕರಣ ಮತ್ತು ಜಾಗತೀಕರಣವೆಂಬ ಭೂತವನ್ನು ಸ್ಪಷ್ಟವಾಗಿ ಸೂಚಿಸುತ್ತವೆ. ಹೀಗೆ ಗುರುತಲ್ಲಿ ಉಳಿವ ವಿಶಿಷ್ಟ ಸಂಯೋಜನೆಯ ದೊಡ್ಡ ಪಟ್ಟಿಯನ್ನೇ ಮಾಡಬಹುದು.

ಇದೇ ವಿವರದಲ್ಲಿ ಊರಿನೊಳಗೆ ಮೂಲಭೂತವಾದಿಗಳು ಮತ್ತು ಹುಸಿ ರಾಷ್ಟ್ರೀಯತಾವಾದಿಗಳು ಸೇರಿಕೊಳ್ಳುತ್ತಿರುವ ವಿವರಗಳನ್ನು ಸಹ ಅತ್ಯಂತ ಸೂಕ್ಷ್ಮವಾಗಿ ಸೂಚಿಸುವ ಯತ್ನವನ್ನು ಗಿರೀಶರು ಮಾಡುತ್ತಾರೆ, ದೊಡ್ಡ ತೆರೆಯನ್ನು ಪ್ರವೇಶಿಸುವ ಬೋಟಿನ ಮೇಲಿರುವ ಜೈ ಸಂತೋಷಿಮಾ ಎಂಬ ಹೆಸರು ಆ ಪ್ರಕರಣವನ್ನ ನೋಡುಗನಿಗೆ ತಲುಪಿಸುವಲ್ಲಿ ದೊಡ್ಡ ಕೆಲಸವನ್ನೇ ಮಾಡುತ್ತದೆ.

ಆದರೆ ಅನೇಕ ದೂರ ಚಿತ್ರಿಕೆಗಳು ಈ ಚಿತ್ರದಲ್ಲಿ ಸಾಫ್ಟ್ ಆಗಿವೆ. ಇದಕ್ಕೆ ಪ್ರಾಯಶಃ ಬಳಸಿದ ಕ್ಯಾಮೆರಾ ಮಿತಿಯಾಗಿರಬಹುದು. ಸೂಪರ್ ೧೬ ಎಂಬ ಫಾರ್‍ಮೆಟ್ಟಿನಲ್ಲಿ ಚಿತ್ರಿಸುವವರ ಸಂಕಟ ಇದು. ಹಣ ಉಳಿಸುವ ಸಲುವಾಗಿ ಆಯ್ಕೆಯಾಗುವ ಈ ತಂತ್ರ ಅಂತಿಮವಾಗಿ ತೆರೆಗೆ ಬಂದಾಗ ತಂತ್ರಜ್ಞಾನ ಇಷ್ಟೆಲ್ಲಾ ಬೆಳೆದಿರುವ ಕಾಲದಲ್ಲಿ ಇದು ಹೇಗಾಯಿತು ಎಂಬ ಅನುಮಾನ ತರುತ್ತದೆ. ಚಿತ್ರದ ಓಟಕ್ಕೆ ಇದು ದೊಡ್ಡ ಧಕ್ಕೆ ಅಲ್ಲವಾದರೂ ಈ ವಿಭಾಗದಲ್ಲಿ ನಮ್ಮ ಕನ್ನಡದ ಪ್ರಯೋಗಶೀಲರು ಒಂದಷ್ಟು ಗಮನ ಹರಿಸುವುದು ಮುಖ್ಯ.

ವಸ್ತು ನಿರ್ವಹಣೆ

ಸಮಕಾಲೀನ ಇತಿಹಾಸವನ್ನ ತಮ್ಮ ಚಿತ್ರಗಳಲ್ಲಿ ಹಿಡಿಯುವುದಕ್ಕೆ ಬಹುತೇಕ ಕಲಾವಿದರು ಹಿಂಜರಿಯುತ್ತಾರೆ. ಇದಕ್ಕೆ ಚಿತ್ರವನ್ನು ಕುರಿತಂತೆ ಭಿನ್ನಾಭಿಪ್ರಾಯಗಳೆದ್ದು ಕಾಂಟ್ರವರ್ಸಿಗಳಲ್ಲಿ ತೊಂದರೆಯನ್ನು ಅನುಭವಿಸಬೇಕಾಗುವುದೋ ಎಂಬ ಭಯ ಪ್ರಧಾನ ಕಾರಣವಾಗಿರುತ್ತದೆ. ಈ ಭಾರಿ ಗಿರೀಶರು ಸ್ವಾತಂತ್ರ ಪೂರ್ವದ ಕತೆಯನ್ನ ಹೇಳುವ ಬದಲಿಗೆ ಸಮಕಾಲೀನ ಇತಿಹಾಸಕ್ಕೆ ಹತ್ತಿರದ್ದೆನಿಸುವ ವಿವರವನ್ನು ಕಥಾವಸ್ತುವಾಗಿ ಆಯ್ದುಕೊಂಡಿದ್ದಾರೆ. ಜೊತೆಗೆ ನಮ್ಮ ನಡುವೆಯೇ ಬದುಕುವ ಸಾಮಾಜಿಕ ವಿವರಗಳಿಂದ ಎದ್ದು ಬಂದಂತಹ ಪಾತ್ರಗಳನ್ನ ಗಿರೀಶರು ಬಳಸುತ್ತಾರೆ. ಇದರಿಂದಾಗಿ ಪ್ರೇಕ್ಷಕನಿಗೆ ತೆರೆಯ ಮೇಲಿನ ಪಾತ್ರಗಳೊಂದಿಗೆ ಗುರುತಿಸಿಕೊಳ್ಳುವುದು ಸುಲಭವಾಗುತ್ತದೆ ಮತ್ತು ಸಮಕಾಲೀನ ಇತಿಹಾಸವನ್ನ ನೋಡಬೇಕಾದ ಕ್ರಮ ಕುರಿತಂತೆಯೂ ಪ್ರೇಕ್ಷಕನಿಗೆ ಸೂಚನೆಗಳು ಸಿಕ್ಕಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಗಿರೀಶ್ ಕಾಸರವಳ್ಳಿಯವರು ‘ಗುಲಾಬಿ ಟಾಕೀಸಿ’ನ ಮೂಲಕ ಭಾರೀ ಧೈರ್ಯ ಮಾಡಿದ್ದಾರೆ. ಈ ಧೈರ್ಯದಿಂದಾಗಿ ಸಿನಿಮಾಕ್ಕೆ ಒಳ್ಳೆಯದಾಗಿದೆ.

ಆದರೆ ವಸ್ತು ನಿರ್ವಹಣೆ ಎನ್ನುವುದು ಇಂತಹ ಚಿತ್ರಗಳಲ್ಲಿ ಯಾವಾಗಲೂ ದೊಡ್ಡ ಸಮಸ್ಯೆಯೇ… ಅದೂ ಕೋಮುವಾದಿ ಸಂಬಂಧಿತವಾದ ಚಿತ್ರವಾದಾಗಂತೂ ಅದು ಇನ್ನೂ ಕಷ್ಟದ ಕೆಲಸ. ಗಿರೀಶರು ಈ ಕಥನಕ್ಕೆ ಎಂದು ಮಾಡಿಕೊಂಡಿರುವ ವಿಭಿನ್ನ ಧಾರೆಗಳ ಮೂಲಕ ಕಥೆ ಹೇಳುವ ಕ್ರಮದಿಂದಾಗಿ ಇಂದು ನಮ್ಮ ದೇಶವನ್ನ ಕಾಡುತ್ತಾ ಇರುವ ಪ್ರಧಾನ ಸಮಸ್ಯೆಯೊಂದರ ಮೇಲೆ ಕೇವಲ ಬೆಳಕು ಚೆಲ್ಲುವುದು ಮಾತ್ರ ಗಿರೀಶರಿಗೆ ಸಾಧ್ಯವಾಗುತ್ತದೆ. ಇಂತಹ ಕೋಮುವಾದಿ ವಿವರಗಳ ಹಿಂದೆ ಇರಬಹುದಾದ ಅನೇಕ ಮಗ್ಗುಲುಗಳು ಇಲ್ಲಿ ಚರ್ಚಿತವಾಗದೆ ಕೇವಲ ಬಂದು ಹೋಗುತ್ತವೆ ಅಷ್ಟೆ. ಈ ಸಿನಿಮಾದ ಪ್ರಧಾನ ಆಶಯ ಕೋಮು ಸೌಹಾರ್ದ ಕುರಿತ ಸಂದೇಶ ಸಾರುವುದು ಅಲ್ಲ ಎನ್ನುವುದನ್ನು ಒಪ್ಪುತ್ತಲೇ ಹೀಗೆ ಸಂಪೂರ್ಣ ವಿವರ ನೀಡದೆ ಕೇವಲ ಝಲಕ್ ನೀಡುವ ಪ್ರಯತ್ನ ಏನಿದೆ ಇದು ಸಮಸ್ಯೆಯನ್ನ ಬಿಡಿಸಿಡಬಹುದಾದ ಬಹುದೊಡ್ಡ ಅವಕಾಶವೊಂದನ್ನು ಬಿಟ್ಟುಕೊಟ್ಟಂತೆ ಎಂದೆನಿಸುತ್ತದೆ.
g2 ಚಿತ್ರ ನಮಗೆ ಏನು ತೋರಿಸಿತು ಅದನ್ನಷ್ಟೆ ಚರ್ಚೆ ಮಾಡುವ  ಎಂದು ಕೂತಾಗ ಹೀಗೆ ಝಲಕ್‌ಗಳಲ್ಲಿ ಹೇಳಿದ ವಿವರಗಳು  ಒಟ್ಟು ಸಮಸ್ಯೆಯ ಹರಹನ್ನು ತಪ್ಪಾಗಿ ಗ್ರಹಿಸುವುದಕ್ಕೂ  ಕಾರಣವಾಗಬಹುದು ಎಂದೆನಿಸುತ್ತದೆ.

ಅನುಮಾನಗಳು
ಇಷ್ಟು ಮಾತಾಡಿದರೂ ‘ಗುಲಾಬಿ ಟಾಕೀಸು’ ಚಿತ್ರದಲ್ಲಿನ  ಹಲವು ನಿಲುವುಗಳನ್ನು ಕುರಿತಂತೆ ಭಿನ್ನಾಭಿಪ್ರಾಯ  ಮೂಡುತ್ತದೆ. ಗಿರೀಶರು ಕಥೆಯನ್ನ ಆರಂಭಿಸಿದಾಗ ಕಣ್ನೆದುರು  ಬಿಚ್ಚಿಡುವ ಜಗತ್ತಿನಲ್ಲಿಯೇ ಬಂದಿಳಿಯುವ ಕೋಮು ಶಕ್ತಿಗಳ ಬಗ್ಗೆ ಮಾತಾಡುತ್ತಾರೆ. ಆ ಶಕ್ತಿಗಳು ಆ ಕುದ್ರುವಿನ ಅನೇಕ ಮುಸಲ್ಮಾನ ಕುಟುಂಬಗಳು ದಿಕ್ಕಾಪಾಲಾಗುವುದನ್ನು ತೋರುತ್ತಲೇ ‘ಗುಲಾಬಿ’ಯ ರೆಸಿಸ್ಟೆನ್ಸ್ ಕೂಡ ಸೂಚಿಸುತ್ತಾರೆ. ಆದರೆ ಆ ರೆಸಿಸ್ಟೆನ್ಸ್ ನಮ್ಮ ಮನಸ್ಸಲ್ಲಿ ನಿಲ್ಲುವುದಕ್ಕೂ ಮುನ್ನ ಕಥೆ ಮುಂದಿನ ಹಂತಕ್ಕೆ ಚಲಿಸಿ, ‘ಗುಲಾಬಿ’ಯನ್ನ ಆ ಜನ ಯಾವುದೋ ದೋಣಿಯಲ್ಲಿ ಕೂರಿಸುವ ವಿವರ ಬರುತ್ತದೆ. ದೊಡ್ಡ ಪ್ರತಿಭಟನೆ ಸಾಧ್ಯವಿದ್ದ ಗುಲಾಬಿ ಯಾವುದೇ ಪ್ರತಿಭಟನೆಯನ್ನು ಮಾಡದೆ ಸೋಲೊಪ್ಪಿಕೊಳ್ಳುವುದು ಅವಳೇ ಬದುಕಿದ ಕ್ರಮಕ್ಕೆ ವಿರುದ್ಧವಾಗಿ ನಿಲ್ಲುತ್ತದೆ.

ಗಿರೀಶ್ ‘ತಬರನ ಕತೆ’ ಹೊರತುಪಡಿಸಿ ಬೇರಾವುದೇ ಚಿತ್ರದಲ್ಲೂ ತಮ್ಮ ಪಾತ್ರಗಳನ್ನು ಹೋರಾಟಕ್ಕೆ ಹುರಿಗೊಳಿಸುವುದಿಲ್ಲ. ಅವರ ಎಲ್ಲಾ ಪಾತ್ರಗಳು ನಮಗ್ಯಾಕೆ ಬೇಕು ಎಂದು ಹೊಂದಿಕೊಂಡು ಹೋಗುವ ಅಥವಾ ತಟಸ್ಥವಾಗಿರಲು ಪ್ರಯತ್ನಿಸುವುದನ್ನ ನಾವು ನೋಡುತ್ತೇವೆ. ‘ದ್ವೀಪ’ದ ನಾಗಿಗೆ ಸಿಟ್ಟಿದೆ. ಆದರೆ ಸಿಟ್ಟನ್ನು ಯಾರ ಮೇಲೆ ತೋರಿಸಿಕೊಳ್ಳುವುದು ಎಂದು ತಿಳಿಯದು. ‘ಗುಲಾಬಿ ಟಾಕೀಸಿ’ನ ಗುಲಾಬಿಗೂ ಬದುಕು ಕಲಿಸಿದ ಪಾಠದಿಂದಲೇ ಎಲ್ಲವನ್ನೂ ತಿದ್ದುವ ಶಕ್ತಿಯಿದೆ. ಆದರೆ ಆ ಪಾತ್ರವೂ ಸಹ ತಟಸ್ಥವಾಗಿ ‘ಜಗತ್ತಲ್ಲಿ ಹೆರುವವರು ಇರುವವರೆಗೂ ಸೂಲಗಿತ್ತಿಗೆ ಕೆಲಸ ಇರುತ್ತದೆ’ ಎಂದು ಸೋಲೊಪ್ಪಿಕೊಂಡು ಬಿಡುತ್ತದೆ. ಈ ಮಾತಿಗೆ ಇರುವ ಅನೇಕ ಧ್ವನ್ಯಾರ್ಥಗಳನ್ನು ಮೀರಿಯೂ ಗುಲಾಬಿಯು ಅಂತಿಮವಾಗಿ ಒಪ್ಪಿಕೊಳ್ಳುವ ಸೋಲು ನೋಡುಗನಲ್ಲಿ ಹತಾಶೆಯನ್ನು ಮೂಡಿಸುತ್ತದೆ ಎಂಬುದು ನನ್ನ ದೂರು. ‘ಗುಲಾಬಿ’ಯಂತಹ ಚಿತ್ರಗಳು ಹತಾಶೆಗಿಂತ ಹೋರಾಟದ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡಬೇಕು. ಸಧ್ಯದ ಸಮಕಾಲೀನ ಪರಿಸ್ಥಿತಿಯಲ್ಲಿ ತಟಸ್ಥ ನಿಲುವಿಟ್ಟುಕೊಂಡು ಬದುಕುವುದೇ ಸಾಧ್ಯವಿಲ್ಲ. ಹೀಗಾಗಿ ಗಿರೀಶರ ತಾಟಸ್ಥ್ಯ ಅಪಾಯಕಾರಿ.

ಪ್ರಾಯಶಃ ಸಿನಿಮಾ ಒಂದು ನಮ್ಮನ್ನು ಇಷ್ಟೊಂದು ಮಾತಿಗೆ ಪ್ರಚೋದಿಸುತ್ತದೆ ಎಂಬುದೇ ಆ ಸಿನಿಮಾದ ಶಕ್ತಿ. ಗಿರೀಶ್ ಕಾಸರವಳ್ಳಿಯವರ ಎಲ್ಲಾ ಚಿತ್ರಗಳು ಈ ನಿಟ್ಟಿನಲ್ಲಿ ಕನ್ನಡ ಮಾತ್ರವಲ್ಲದೆ ಜಾಗತಿಕ ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಮರೆಯಲಾಗದ್ದು. ತಮ್ಮ ಜೀವನದುದ್ದಕ್ಕೂ ಒಳ್ಳೆಯ ಕಲಾಕೃತಿಯನ್ನೇ ಕಟ್ಟಲು ಪ್ರಯತ್ನಿಸುತ್ತಾ ಅವುಗಳನ್ನ ಪ್ರೇಕ್ಷಕನ ಮನಸ್ಸಲ್ಲಿ ಶಾಶ್ವತವಾಗಿ ಇರಿಸಲು ಪ್ರಯತ್ನಿಸುತ್ತಿರುವ ಗಿರೀಶ್ ಎಲ್ಲರ ಮೆಚ್ಚುಗೆಗೆ ಅರ್ಹರಾಗುತ್ತಾರೆ. ಸಾಮಾನ್ಯವಾಗಿ ಹೆಚ್ಚು ಲಾಭ ತರದ ಇಂತಹ ಸಿನಿಮಾಗಳನ್ನು ನಿರ್ಮಿಸುವವರು ಎರಡನೆಯ ಭಾರಿ ಗಿರೀಶರಿಂದ ಚಿತ್ರ ಮಾಡಿಸುವುದಿಲ್ಲ. ಈ ಬಾರಿ ಅಪವಾದ ಎಂಬಂತೆ ‘ನಾಯಿನೆರಳು’ ನಿರ್ಮಾಪಕರಾಗಿದ್ದ ‘ಬಸಂತ್ ಕುಮಾರ್ ಪಾಟೀಲ್’ ಅವರು ಎರಡನೆಯ ಚಿತ್ರವನ್ನ ಗಿರೀಶ್‌ರ ನಿರ್ದೇಶನದಲ್ಲಿ ನಿರ್ಮಿಸಿದ್ದಾರೆ. ಇದು ಮತ್ತೊಂದು ಮೆಚ್ಚತಕ್ಕ ಅಪರೂಪ. ಪಾಟೀಲರಿಗೆ ಅಭಿನಂದನೆ ಸಲ್ಲುತ್ತದೆ.

ಒಟ್ಟಾರೆ
‘ಗುಲಾಬಿ ಟಾಕೀಸು’ ಚಿತ್ರವನ್ನು ನೊಡಿದವರಿಗೆ ಉಮಾಶ್ರೀ ಅವರ ಅಭಿನಯ ಒಂದು ದೊಡ್ಡ ಅಚ್ಚರಿಯಂತೆ ಕಾಣಬಹುದು. ಆಕೆ ನಮ್ಮ ನಡುವಿನ ಅಪರೂಪದ ಕಲಾವಿದೆ. ವಾಣಿಜ್ಯ ಪ್ರಧಾನ ಚಿತ್ರಗಳು ಆಕೆಯನ್ನು ಅತಿರೇಕದ ಅಭಿನಯಕ್ಕೆ ಅದೆಷ್ಟು ಬಳಸಿಕೊಂಡಿವೆ ಎಂದರೆ ಆಕೆಗೆ ಇರುವ ಸೂಕ್ಷ್ಮ ಮನಸ್ಸು ಮತ್ತು ಪಾತ್ರ ನಿರ್ವಹಣೆಗೆ ಆಕೆ ಬಳಸುವ ಕ್ರಮಗಳು ಎಷ್ಟೋ ಭಾರಿ ತಿಳಿಯುವುದೇ ಇಲ್ಲ. ‘ಗುಲಾಬಿ ಟಾಕೀಸು’ ಆ ನಿಟ್ಟಿನಲ್ಲಿ ಒಂದು ದೊಡ್ಡ ಅವಕಾಶವಾಗಿ ಒದಗಿದೆ ಉಮಾಶ್ರೀ ಅವರಿಗೆ. ಆ ಅವಕಾಶವನ್ನು ಆಕೆ ಸಮರ್ಥವಾಗಿ ನಿರ್ವಹಿಸುತ್ತಾರೆ. ಮೀನು ಕೊಳ್ಳುವಾಗ ಮಾಡುವ ಜಗಳವಿರಬಹುದು. ಅಥವಾ ಸಿನಿಮಾ ಥೇಟರಿನಲ್ಲಿ ಯಾವುದೋ ಸಿನಿಮಾ ಹಾಡು ನೋಡುತ್ತಾ ಆಕೆ ಅನುಭವಿಸುವ ಸಂಭ್ರಮ ಇರಬಹುದು. ಇಲ್ಲಿ ಆಕೆ ಕೂರುವ ಕ್ರಮ ನಿಲ್ಲುವ ಪೋಜು ಎಲ್ಲವೂ ಆಕೆಯ ಪಾತ್ರದ ಸತ್ಯವನ್ನ ಸೂಚಿಸುತ್ತಾ ಸಾಗುತ್ತವೆ. ಈ ನಿಟ್ಟಿನಲ್ಲಿ ‘ಗುಲಾಬಿ ಟಾಕೀಸು” ಉಮಾಶ್ರೀ ಅವರ ಜೀವಮಾನದಲ್ಲಿ ಒಂದು ದೊಡ್ಡ ಮೈಲಿಗಲ್ಲು.

ಹಾಗೆಯೇ ಈ ಚಿತ್ರದಲ್ಲಿ ಅಭಿನಯಿಸಿರುವ ಎಂ.ಡಿ. ಪಲ್ಲವಿ ಅವರ ನೇತ್ರಾ ಪಾತ್ರದ ಅಭಿನಯವನ್ನೂ ಸಹ ಪ್ರತ್ಯೇಕವಾಗಿ ಗಮನಿಸಬಹುದು. ಆಕೆಯ ಪಾತ್ರಕ್ಕೆ ಮಾತುಗಳು ಕಡಿಮೆ. ಆದರೆ ಆ ಪಾತ್ರದ ಒಳಗಿರುವ ಹಪಹಪಿಯನ್ನು ಪಲ್ಲವಿ ಬಹುತೇಕ ತಮ್ಮ ಕಣ್ಣುಗಳ ಬಳಕೆಯಿಂದಲೇ ಸಾಧಿಸುತ್ತಾರೆ. ಗುಲಾಬಿಯು ಯಾವುದೋ ನದಿಯ ದಡದಲ್ಲಿ ಕುಳಿತು ಬಟ್ಟೆ ಒಗೆಯುವಾಗ ದೋಣಿಯ ಹುಟ್ಟು ಹಾಕುತ್ತಾ ಅಲ್ಲಿಗೆ ಬರುವ ನೇತ್ರಾಳ ಜೊತೆಗಿನ ಮಾತಿನ ದೃಶ್ಯದಲ್ಲಿ ಮೈ ಕುದಿಯುವ ಜ್ವರದಲ್ಲಿ ದುಡಿಯ ಬೇಕಾದ ಆ ಪಾತ್ರದ ಪರಿಸ್ಥಿಯನ್ನು ಹಿಡಿಯುವಲ್ಲಿ ಪಲ್ಲವಿ ಮತ್ತು ಉಮಾಶ್ರೀ ಇಬ್ಬರ ಕೆಲಸವನ್ನು ಮೆಚ್ಚಬೇಕು.

ಹೀಗೆಯೇ ಈ ಚಿತ್ರದಲ್ಲಿ ಕೆ.ಜಿ.ಕೃಷ್ಣಮೂರ್ತಿ (ಗುಲಾಬಿಯ ಗಂಡ) ಅಭಿನಯ ಮತ್ತು ಅಶೋಕ್ ಸಂದೀಪ್ (ಸ್ಥಳೀಯ ಮೀನುಗಾರರ ಮೇಸ್ತ್ರಿ) ಅವರ ಅಭಿನಯವೂ ಸಹ ಬಹುಕಾಲ ನೆನಪಲ್ಲಿ ಉಳಿಯುವಂತಹದು. ಇವರಿಬ್ಬರೇ ಅಲ್ಲದೆ ಗುಲಾಬಿಯ ಮನೆಯ ಆಸುಪಾಸಿನಲ್ಲಿರುವ ಅನೇಕ ಹೆಂಗೆಳೆಯರ ಪಾತ್ರಧಾರಿಗಳ ಅಭಿನಯವೂ ಸಹ ವಾಸ್ತವವನ್ನು ನೋಡುಗನ ಮುಂದಿಡುವಲ್ಲಿ ಶಕ್ತವಾಗಿವೆ.

‘ಗುಲಾಬಿ ಟಾಕೀಸು’ ವೈದೇಹಿಯವರ ಕಥೆಯಾಗಿ ನಮ್ಮನ್ನು ಕಾಡಿದ್ದಿದೆ. ಗಿರೀಶರ ‘ಗುಲಾಬಿ’ಯು ನಮ್ಮನ್ನು ಕಾಡುತ್ತಾಳೆ. ಗಿರೀಶರ ತಟಸ್ಥ ನಿಲುವನ್ನು ಕುರಿತು ನಮಗೆ ಭಿನ್ನಾಭಿಪ್ರಾಯಗಳಿದ್ದರೂ ಇದು ಕನ್ನಡದ ಮೈಲಿಗಲ್ಲುಗಳಲ್ಲಿ ಒಂದು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.