ಸೃಜನ್ ಅವರ ಕಳೆದ ವಾರದ ಅಂಕಣ ಬರಹ ಕಾರಣಾಂತರಗಳಿಂದ ಈ ವಾರ ಪ್ರಕಟವಾಗುತ್ತಿದೆ-ಸಂ.

ತೆಲುಗು ಚಿತ್ರಗಳಲ್ಲಿ ಇಂದಿಗೂ ಕುಂದದ ವರ್ಚಸ್ಸಿನ,ಪ್ರತಿಸಲ ನೋಡುವಾಗಲೂ ಹೊಸ ಅನುಭವ ಕೊಡುವ ನಿತ್ಯ ನೂತನ ಚಿತ್ರ ಮಾಯಾಬಜಾರ್ .

ಕಳೆದ ಐದೂವರೆ ದಶಕಗಳಿಂದ ಪ್ರೇಕ್ಷಕರಿಂದ ವಿಶಿಷ್ಟ ಮನ್ನಣೆ ಪಡೆಯುತ್ತಿರುವ ಅಪರೂಪದ ಸೃಷ್ಟಿ ಇದು.ಮಾಯಬಾಜಾರ್ ಸಿನಿಮಾದ ಲೆಕ್ಕವಿಲ್ಲದಷ್ಟು ಹಾಸ್ಯದ ಪಂಚ್ ಲೈನುಗಳು,ಲಿಮರಿಕ್ ಗಳು , ತಮಾಷೆಯ ಸಂಭೋದನೆಗಳು ,ಭಾಷೆಯ ಚಮತ್ಕಾರ ಇಂದಿಗೂ ತೆಲುಗರ ದೈನಂದಿನ ಬದುಕಲ್ಲಿ ಒಂದು ಭಾಗವೇ ಆಗಿಹೋಗಿವೆ.ಆ ಮಾತುಗಳು ,ಹಾಡುಗಳು,ಪದ ಪ್ರಯೋಗಗಳು ಪ್ರತಿಯೊಬ್ಬರ ಬಾಯಿಯಲ್ಲಿ ಪ್ರತಿಧ್ವನಿಸುತ್ತಿರುತ್ತವೆ.ಈ ಚಿತ್ರದ ಹಾಡಿನ ಸಾಲುಗಳು ಎಷ್ಟೋ ಚಿತ್ರಗಳಿಗೆ ಟೈಟಲ್ ಗಳಾಗಿವೆಎಂದರೆ ಆ ಜನಪ್ರಿಯತೆ ನೀವೇ ಊಹಿಸಿ.
Mayabazar
ನಾಗೇಂದ್ರರಾಯರ ಸಾಹಿತ್ಯ,ಘಂಟಸಾಲರವರ ಮಧುರ ಸಂಗೀತ ಸಂಯೋಜನೆ ಮಾರ್ಕ್ಸ್ ಬಾರ್ಟ್ಲಿಯ ಮೋಹಕ ಛಾಯಾಗ್ರಹಣ,ತಿಂಗಳು ಗಟ್ಟಲೆ ಶ್ರಮಿಸಿ ವಸ್ತ್ರವಿನ್ಯಾಸದ ಚಿತ್ರಗಳನ್ನು,ಮಿನಿಯೇಚರ್ ಚಿತ್ರಗಳನ್ನು,ಸೆಟ್ಟಿಂಗ್ ಚಿತ್ರಗಳನ್ನು ಹಗಲಿರುಳು ಮಾಡಿದ್ದ ಅಪ್ರತಿಮ ಕಲಾ ನಿರ್ದೇಶಕ ಮಾ.ಗೋಖಲೆ ಮತ್ತು ಈ ಎಲ್ಲ ಪ್ರಚಂಡ ಪ್ರತಿಭೆಗಳ ಕ್ಯಾಪ್ಟನ್ ಕೆ.ವಿ.ರೆಡ್ಡಿಯಾದರೆ , ಮತ್ತು ಇಂಥದೊಂದು ಸೃಷ್ಟಿಗೆ ಬೆನ್ನೆಲುಬಾಗಿ ನಿಂತವರು ವಿಜಯಾ ಸಂಸ್ಥೆಯ ನಾಗಿರೆಡ್ಡಿ ಮತ್ತು ಚಕ್ರಪಾಣಿ.
ಮುಂದೆಂದೂ ಮತ್ತು ಯಾರೂ ಮಾಡಲಾರದ ಕಲಾ ಕೃತಿ ಯಂಥ ಚಿತ್ರವೆಂದು ಹೊಗಳಿಸಿಕೊಂಡ ಮಹೋನ್ನತ ತೆಲುಗು ಪೌರಾಣಿಕ ಚಿತ್ರ ಮಾಯಾಬಜಾರ್.

1956 ರಲ್ಲಿ ಬಿಡುಗಡೆಗೊಂಡ ಮಾಯಾಬಜಾರ್ ಪೌರಾಣಿಕ ಚಿತ್ರಗಳೆಂದರೆ ತೆಲುಗು ಚಿತ್ರಗಳನ್ನೇ ನೋಡಬೇಕೆಂಬ ಶಾಶ್ವತ ಮುದ್ರೆ ಒತ್ತಿದ ಅಪರೂಪದ ಚಿತ್ರವಿದು.ಇಷ್ಟಕ್ಕೋ ಮಾಯಾಬಜಾರ್ ಪೌರಾಣಿಕ ಚಿತ್ರವೇ?ಸಾಮಾಜಿಕ ಚಿತ್ರವೇ?ಏಕೆಂದರೆ ಬಲರಾಮನಿಗೆ ಶಶಿರೇಖ ಹೆಸರಿನ ಮಗಳಿದ್ದಂತೆ,ಅವಳನ್ನು ಅಭಿಮನ್ಯು ಮದುವೆಯಾದಂಥ ಪ್ರಸ್ತಾಪ ಎಲ್ಲೂ ನಮಗೆ ಸಿಗುವುದಿಲ್ಲ.ಹಾಗೆ ನೋಡಿದರೆ ಶಶಿರೇಖ ಪರಿಣಯವೇ ಚಿತ್ರದ ಎಳೆ.
srujan column new
ಚಕ್ರವ್ಯೂಹದಲ್ಲಿ ಅಭಿಮನ್ಯು ವೀರ ಮರಣವನ್ನಪ್ಪಿದಾಗ, ಹೆಂಗಸರು ಯುದ್ಧ ಭೂಮಿಗೆ ಬಂದು ಆಲಾಪಿಸುವಾಗಲೂ ಕೂಡ ಅವನ ಹೆಂಡತಿ ಉತ್ತರೆಯನ್ನು ಪ್ರಸ್ತಾಪಿಸುತ್ತರೆಯೇ ಹೊರತು ಶಶಿ ರೇಖಾಳನ್ನಲ್ಲ .ಈಕೆಯ ಹೊರತು ಪಡಿಸಿ ಉಳಿದೆಲ್ಲ ಪಾತ್ರಗಳು,ಅವುಗಳ ಸಂಬಂಧಗಳು ಎಲ್ಲವೂ ಮಹಾಭಾರತದ್ದೆ.ಅದೂ ಅಲ್ಲದೆ ಈ ಕಥೆ ಈಗಾಗಲೇ’ ಶಶಿ ರೇಖಾಪರಿಣ ಯಂ’ಮತ್ತು ’ವೀರ ಘಟೋತ್ಕಚ ’ಹೆಸರಿಂದ ನಾಟಕಗಳ ರೂಪದಲ್ಲಿ ಸಾಕಷ್ಟು ಜನಪ್ರಿಯ ಗೊಂಡಿದ್ದವು.

ಮೂಕಿಯ ಕಾಲದಿಂದಲೂ ನಮ್ಮ ದೇಶ ದಲ್ಲಿ ಪದೇ ಪದೇ ಸಿನೆಮಾಗಳಾಗಿ ನಿರ್ಮಾಣ ಗೊಂದದ್ದು ಎರಡೇ, ಒಂದು ’ಸತ್ಯ ಹರಿಶ್ಚಂದ್ರ’ ಮತ್ತೊಂದು ’ಮಾಯಾಬಜಾರ್’ .ವಿಜಯಾ ಸಂಸ್ಥೆ ’ಮಾಯಾಬಜಾರ್ ನಿರ್ಮಿಸಿದ ಮೇಲೆ ಮತ್ತೆ ಯಾರು ಅದನ್ನು ನಿರ್ಮಿಸುವ ಧೈರ್ಯ ಮಾಡಲಿಲ್ಲ.

10-12 ಲಕ್ಷಗಳಲ್ಲಿ ಅದ್ಭುತವಾದ ಅದ್ದೂರಿಯಾದ ಸಿನಿಮಾಗಳನ್ನು ನಿರ್ಮಿಸುತ್ತಿದ್ದ ಕಾಲದಲ್ಲಿ ಮಾಯಾಬಜಾರ್’ ಚಿತ್ರದ ವೆಚ್ಹ 32 ಲಕ್ಷ. ಕೆ.ವಿ ರೆಡ್ಡಿಯಂಥ ನಿರ್ದೇಶಕರ ಸ್ಟಾರ್ ವಾಲ್ಯೂ ನೋಡಿ ವಿಜಯಾ ಸಂಸ್ಥೆ ಧೈರ್ಯೇ ಸಾಹಸೇ ಲಕ್ಷ್ಮಿ ’ಎಂದು ಮಾಯಾಬಜಾರ್ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ತೋರಿಸುತ್ತಾರೆ.

ಮಹಾಭಾರತದ ಪಾತ್ರಗಳಿಂದ ಪ್ರಾರಂಭವಾಗುವ ಕಥೆಯಲ್ಲಿ ಪಾಂಡವರೊಂದಿಗೆ ಯಾದವರ ಸಂಭಂಧವೆ ಚಿತ್ರದ ಸಬ್ಜೆಕ್ಟ್ .ಇಡೀ ಚಿತ್ರದಲ್ಲಿ ಪಾಂಡವರೇ ಇಲ್ಲದಂತೆ ಸ್ಕ್ರಿಪ್ಟ್ ತಯಾರಿಸಿದ್ದು ರೆಡ್ಡಿಯವರ ಕ್ರಾಫ್ಟ್ ಮ್ಯಾನ್ ಶಿಪ್ ಗೆ ಉದಾಹರಣೆ.ಮಾಯಾಬಜಾರ್ ಚಿತ್ರದ ಟೈಟಲ್ಸ್ ಅಷ್ಟೇ ಆಕರ್ಷಕ.ಸಿನಿಮಾ ಬಗ್ಗೆ ಗೊತ್ತಿರುವ ಯಾರೂ ಟೈಟಲ್ಸ್ ಮಿಸ್ ಮಾಡಿಕೊಳ್ಳುವುದಿಲ್ಲ.ಆಕಾಶದಲ್ಲಿ ಅಭಿಮನ್ಯು ಮತ್ತು ಘಟೋತ್ಕಚರಿಬ್ಬರ ರೋಚಕ ಹೋರಾಟದ ಆಯುಧಗಳು ಕೆಂಡದ ಉಂಡೆಗಳಂತೆ ಒಂದಕ್ಕೊಂದು ಬೇಧಿಸುವ, ಕಣ್ಣು ಕೋರೈಸುವ ಬೆಳಕಿನ ಹಿನ್ನೆಲೆಯಲ್ಲಿ ಟೈಟಲ್ಸ್ ಪ್ರತ್ಯಕ್ಷವಾಗುತ್ತವೆ.

ಸಿನೆಮಾದ ಆರಂಭದಲ್ಲಿ ಕೋಟೆ ಬುರುಜುಗಳ ಮೇಲೆ ಕೊಂಬಿನ ಕಹಳೆ ಓದುವ ದೃಶ್ಯ ತೋರಿಸುವುದರ ಮೂಲಕ ಚಿತ್ರ ಪ್ರಾರಂಭವಾಗುತ್ತದೆ.ದ್ವಾರಕಾ ನಗರದಲ್ಲಿ ನಡೆಯುತ್ತಿರುವ ಸಂಭ್ರಮದ ಸಮಾರಂಭವನ್ನು ಸಾಂಕೇತಿಕವಾಗಿ ಹೇಳುವ ದೃಶ್ಯ ಅದು.ಇಲ್ಲಿ ಉಪಯೋಗಿಸಿದ ಕೊಂಬಿನ ಕಹಳೆ ಯಾದವರ ಸಂಸ್ಕೃತಿಯನ್ನು ಪರಿಚಯಿಸುತ್ತದೆ.ಯಾದವರು ಪರಸ್ಪರ ಸಂದೇಶ ರವಾನೆಗೆ ಈ ರೀತಿಯ ವಾದ್ಯಗಳನ್ನು ಬಳಸುತ್ತಿರಬಹುದೆಂಬ ಕಲ್ಪನೆ.!

ಈ ಸಂದರ್ಭದಲ್ಲಿ ಪ್ರಧಾನ ಚಿತ್ರದ ಅರ್ಧದಷ್ಟು ತಾರಾಗಣವನ್ನು ಸಮಾರಂಭದ ನೆಪದಲ್ಲಿ ನಿರ್ದೇಶಕರು ಪ್ರೇಕ್ಷಕರಿಗೆ ಪರಿಚಯಿಸುತ್ತಾರೆ. ರಾಜಾಸೂಯಾಗದ ದೃಶ್ಯ. ಸಾತ್ಯಕಿ ಪೆಟ್ಟಿಗೆ ಯೊಂದನ್ನು ತರುತ್ತಾನೆ.’ಮನಸಲ್ಲಿರೋದನ್ನ ತೋರಿಸೋ ಅದು ಪ್ರಿಯದರ್ಶಿನಿ.ಪೆಟ್ಟಿಗೆ ತೆರೆಯುತ್ತಿದ್ದಂತೆ ಶಶಿರೇಖಳ ತಾಯಿ ರೇವತಿಗೆ ಚಿನ್ನದ ಆಭರಣಗಳು ಕಂಡರೆ ,ಬಲರಾಮನಿಗೆ ಧುರ್ಯೋಧನ ಕಾಣುತ್ತಾನೆ.ಕೃಷ್ಣ ಬಲವಂತಕ್ಕೆ ತೆರೆದರೆ ಅಲ್ಲಿ ಜೂಜಿಗೆ ಸಿದ್ಧವಾಗುತ್ತಿರುವ ಶಕುನಿ ಕಾಣುತ್ತಾನೆ.ಶಶಿರೇಖ ನಾಚುತ್ತಲೇ ಕೋಣೆಯೊಳಕ್ಕೆ ಹೋಗಿ ಪೆಟ್ಟಿಗೆ ತೆರೆದರೆ ಅಲ್ಲಿ ನಸು ನಗುವ ಅಭಿಮನ್ಯು ಕಾಣುತ್ತಾನೆ.’ನೀವೇನಾ ನಾನು ಪಿಲಚಿನದೀ..ಎಂದು ಹಾಡುವ ದೃಶ್ಯ ಕಾಣುತ್ತದೆ.
mayabazar0123
ಮಾಯಾಬಜಾರ್ ಚಿತ್ರದ ಕಥೆಗೆ ಮೂಲವೆಲ್ಲ ಈ ಪಾತ್ರಗಳೊಂದಿಗೆ ನಡೆಯುತ್ತದೆ.ಪಾಂಡವರು ಜೂಜಿನಲ್ಲಿ ಸೋತ ನಂತರ ,ಅಭಿಮನ್ಯುವಿಗೆ ಕೊಟ್ಟು ಮದುವೆ ಮಾಡಬೇಕೆಂದಿರುವ ಶಶಿ ರೇಖಾಳನ್ನು ಅವಳ ತಂದೆ ತಾಯಿಯರು ಧುರ್ಯೋಧನನ ಪುತ್ರನಾದ ಲಕ್ಷ್ಮಣ ಕುಮಾರನೊಂದಿಗೆ ಮದುವೆ ಮಾಡಲು ನಿರ್ಧರಿಸುತ್ತಾರೆ.ಘಟೋತ್ಕಚನ ಸಹಾಯದಿಂದ ಕೃಷ್ಣ ಶಶಿರೇಖಾ ಇಷ್ಟಪಟ್ಟವನೊಂದಿಗೆ ಮದುವೆ ಮಾಡುತ್ತಾನೆ. ಕಥೆಯಲ್ಲಿ ಘಟೋತ್ಕಚನ ಪಾತ್ರ ಪ್ರವೇಶ ಕೂಡ ಸಿನಿಮಾ ಕಥಾಲೆಖಕರ ಹಾಗು ನಿರ್ದೇಶಕರ ಅದ್ಭುತ ಕಲ್ಪನಾ ಶಕ್ತಿಗೆ ಒಂದು ಉದಾಹರಣೆ ಅಷ್ಟೇ.

ಇನ್ನು ಮಾರ್ಕ್ಸ್ ಬಾರ್ಟ್ಲಿಯ ಛಾಯಾಗ್ರಹಣವೇ ಇಡೀ ಸಿನಿಮಾದ ಜೀವಾಳವಾಗಿದೆ.ಬಾರ್ಟ್ಲಿ ವಿಜಯಾ ಸಂಸ್ಥೆಯ ಸಿನೆಮಾಗಳ ಖಾಯಂ ಛಾಯಗ್ರಾಹಕರು.ಮತ್ತೂ ಅವರ ಚಿತ್ರೀಕರಣದ ಬೆಳದಿಂಗಳು ನಿಜವಾದ ಬೆಳದಿಂಗಳಿಗಿಂತ ಸೊಗಸಾಗಿರುತ್ತದೆ.ವಿಜಯಾ ಸಂಸ್ಥೆಯ ಪ್ರತಿ ಚಿತ್ರದಲ್ಲೂ ಬೆಳದಿಂಗಳ ಹಾಡು ಇದ್ದೇ ಇರುತ್ತದೆ.ಯಾಕೆಂದರೆ ಪ್ರೇಮಿಗಳಾಗಲಿ, ವಿರಹಿಗಳಾಗಲಿ ತಮ್ಮ ಖುಷಿ ಹಾಗು ದುಃಖಗಳನ್ನು ಹೇಳಿಕೊಳ್ಳಲು ಚಂದಿರನೆ ಬೇಕು ಎನ್ನುತ್ತಾರೆ ಬಾರ್ಟ್ಲಿ.

ಕೆಲವು ರಸಜ್ನರಂತೂ ಆಗಸದಲ್ಲಿ ಪೂರ್ಣ ಚಂದಿರನನ್ನು ನೋಡಿದಾಗ “ಇವತ್ತು ಚಂದಿರ ವಿಜಯಾ ಅವರ ಚಂದಿರನಂತಿ ದ್ದಾನಲ್ಲ”ಎಂದು ರೂಪಕವಗುವಷ್ಟರ ಮಟ್ಟಿಗೆ ಪ್ರಭಾವ ಬೀರಿತ್ತು.”ಪ್ರೀತಿ ಮತ್ತು ಚಂದಿರನ ಅನುಬಂಧವೇ ಅಂಥದ್ದು”ಎನ್ನುತ್ತಾರೆ ಬೆಳ್ಳಿ ತೆರೆಯ ಚಂದಮಾಮನ ಸೃಷ್ಟಿಕರ್ತ ಬಾರ್ಟ್ಲಿ.
ಚಿತ್ರದ ಮತ್ತೊಂದು ವಿಶಿಷ್ಟ ವೆಂದರೆ ಬಾಲೆ ಶಶಿರೇಖಾ ನಿರಾಸಕ್ತಳಾಗಿ ಕೊಳವೊಂದರ ಹತ್ತಿರ ಕೂತಿರುತ್ತಾಳೆ.ನೀರ ಅಲೆ ಗಳಲ್ಲಿ ಆಕೆಯ ಪ್ರತಿಬಿಂಬ ತೋರಿಸುತ್ತಲೇ, ಹಳೆಯ ಮಾದರಿಯ ಡಿಸಲ್ಯುಶನ್ ತಂತ್ರ ಬಳಸದೆ ಕೊಳದ ಅಲೆಗಳು ನಿಶ್ಚಲವಾದಂತೆ ನೀರಿನಲ್ಲಿ ಬೆಳೆದ ಶಶಿರೇಖಾಳ ಬಿಂಬ ತೋರಿಸುತ್ತಾರೆ.ಆ ಕಾಲದಲ್ಲಿ ಇದು ದಕ್ಷಿಣ ಭಾರತದ ಉದ್ಯಮದಲ್ಲೇ ಬಹು ದೊಡ್ಡ ಟಾಕ್! ಹಾಗೆಯೇ ’ಲಾಹಿರಿ ಲಾಹಿರಿ ’ಹಾಡನ್ನು ಕೂಡ ಸ್ವಲ್ಪ ಹಗಲು ಹೊತ್ತಿನಲ್ಲಿ,ಒಂದಿಷ್ಟು ಸೆಟ್ ಹಾಕಿ ,ಒಂದಿಷ್ಟು ಬ್ಯಾಕ್ ಪ್ರೊಜೆಕ್ಷನ್ ನಲ್ಲಿ ತೆಗೆದಿದ್ದಾರೆ.ಎಷ್ಟು ಆಹ್ಲಾದಕರ ವಾಗಿದೆಯೆಂದರೆ ನಿಮಗೆ ಎಲ್ಲೂ ಬೆಳಕಿನ ವ್ಯತ್ಯಾಸ ಕಾಣುವುದಿಲ್ಲ.ಒಂದು ದೃಶ್ಯದಲ್ಲಂತೂ ಶರ್ಮ ಹಾಗು ಶಾಸ್ತ್ರಿ ಕೂತ ರತ್ನಗಂಬಳಿ ಎರಡೂ ಕಡೆಯಿಂದ ಸುತ್ತಿ ಕೊಳ್ಳುವ ದೃಶ್ಯವಂತೂ ಥ್ರಿಲ್ಲಿಂಗ್ . ಇಂದಿಗೂ ಆ ಶಾಟ್ ವಿವರಗಳು ಯಾರಿಗೂ ಗೊತ್ತಿಲ್ಲ.ವಿಚಿತ್ರವಾದ ಫೀಟ್ ಅದು.

ಸುಭದ್ರೆ, ಅಭಿಮನ್ಯುರನ್ನು ಕೃಷ್ಣ ದ್ವೈತವನಕ್ಕೆ ಕಳಿಸುವಾಗ ಕೃಷ್ಣ ನ ಪಾತ್ರಧಾರಿ ಎನ್ .ಟಿ.ಆರ್ ಕಂಗಳಲ್ಲಿನ ತೆಳು ನೀರಿನ ಪೊರೆ ಕಾಣುತ್ತದೆ.ಇಷ್ಟು ಸಾಕು ಆ ಸನ್ನಿವೇಶದ ಆಳ ಗೊತ್ತಾಗಲು.ರೆಪ್ಪೆಗಳ ಕೆಳಗಿನ ಅಸ್ಪಷ್ಟ ನೀರ ತೆರೆಯನ್ನು ತೋರಿಸಿದ ಪ್ರತಿಭೆ ಎನ್.ಟಿ .ಆರ್ ದೋ ಅಥವಾ ಅಂತಹ ಸೂಕ್ಷ್ಮವನ್ನು ಚಿತ್ರೀಕರಿಸಿದ ಬಾರ್ಟ್ಲಿ ಯವರದೋ ಊಹಿಸಲೂ ಕಷ್ಟ ನೋಡಿ.

ಮೇಕಪ್,ಆಭರಣಗಳ ವಿನ್ಯಾಸ ಗಳು ತುಂಬಾ ವಿಶಿಷ್ಟ ವೆನಿಸುವ ’ಮಾಯಾಬಜಾರ್’ನಲ್ಲಿ ಘಟೋತ್ಕಚ ನ ವಸ್ತ್ರ ವಿನ್ಯಾಸ ಆರ್ಯ,ದ್ರಾವಿಡ ಸಂಸ್ಕೃತಿಯ ದಟ್ಟ ಪ್ರಭಾವವನ್ನು ಗಮನಿಸಬಹುದು . ಒಮ್ಮೆ ನಿದ್ರಿಸುತ್ತಿರುವ ಶಶಿರೇಖಳನ್ನು ಮಂಚದೊಂದಿಗೆ ಮಾಯಾ ತಂತ್ರದಿಂದ ತನ್ನ ಮಂದಿರಕ್ಕೆ ಕರೆತರುತ್ತಾನೆ ಘಟೋತ್ಕಚ. ದ್ವಾರಕ ತಲುಪಿ ಕೌರವರಿಗೆ ವಾಸಕ್ಕೆ ಏರ್ಪಾಡು ಮಾಡಿ ಅವರನ್ನು ನೋಡಿಕೊಳ್ಳಲು ತನ್ನ ಇಬ್ಬರು ಅನುಚರರನ್ನು ನಿಯಮಿಸುತ್ತಾನೆ.ತಾನು ದ್ವಾರಕ ಸೇರಿ ಶಶಿರೇಖಳ ವೇಷದಲ್ಲಿ ಕಾಯುತ್ತಾನೆ. ಘಟೋತ್ಕಚನ ಆ ರೂಪವೇ ಮಾಯಾ ಶಶಿರೇಖ .ಕೌರವರಿಗಾಗಿ ಘಟೋತ್ಕಚನ ಶಿಷ್ಯ ಚಿನ್ನಮಯ್ಯ ನಿರ್ಮಿಸಿದ ತಂಗು ಮನೆಯೇ ’ಮಾಯಾಬಜಾರ್’ ಕೌರವರು ಮಾಯಾಬಜಾರ್ ನಲ್ಲಿ ಪ್ರವೇಶಿಸಿದಾಗ ಅಲ್ಲೊಂದು ಅವರಿಗೆ ವಿಚಿತ್ರ ಮತ್ತು ಆಕರ್ಷಿಕ ನೃತ್ಯ ಎದುರಾಗುತ್ತದೆ. ಇಬ್ಬರು ಸಮಾನ ಸದೃಢ ಶರೀರದ ಯುವತಿಯರು ನರ್ತಿಸುತ್ತಿರುತ್ತಾರೆ.ಇಲ್ಲಿ ಎಂಥವರನ್ನು ಚಕಿತಗೊಳಿಸುವುದು ನಾಟ್ಯದ ಸಿಂಕ್ರೋನಿ. ಹಾಗೆ ನೋಡಿದರೆ ದಕ್ಷಿಣ ಭಾರತದ ಮೊತ್ತ ಮೊದಲ ಸಿಂಕ್ರನೈಸ್ಡ್ ನೃತ್ಯ’ಚಂದ್ರಲೇಖ’ ಚಿತ್ರದಲ್ಲಿತ್ತು.ಅದು ಪೂರ್ತಿಯಾಗಿ ಪಾಶ್ಚ್ಯಾತ್ಯ ಮಾದರಿಯಾಲಿತ್ತು. ಆದರೆ ಮಾಯಾಬಜಾರ್ ದು ಮಾತ್ರ ಅಪ್ಪಟ ದೇಸಿ ನೃತ್ಯ.
ಚಿತ್ರದ ಯಶಸ್ಸಿನ ಮತ್ತೊಂದು ಗರಿ ಎಂದರೆ ಸಾವಿತ್ರಿ ಬೆಚ್ಚಿ ಬೀಳಿಸುವ ನಟನೆ..ಸಾಧಾರಣ ಶಶಿರೇಖಳಾಗಿ ಅತ್ತ ಮಾಯಾ ಶಶಿರೇಖಳಾಗಿ ಈಕೆಯ ನಟನೆ ಸಮ್ಮೋಹನಗೊಳಿಸುತ್ತದೆ.ಒಮ್ಮೆ ಲಾಲಿತ್ಯವೇ ಮೂರ್ತಿವೆತ್ತ ಮುಗ್ಧೆಯಾಗಿ ,ಮತ್ತೊಮ್ಮೆ ಗಂಭೀರಳಾಗಿ,ಮಂದಹಾಸದ ಚೆಲುವೆಯಾಗಿ ಮತ್ತೊಮ್ಮೆ ಭೀಭತ್ಸಳಾಗಿ,ನವರಸ ಭರಿತಳಾಗಿ ಸೈ ಅನಿಸಿ ಕೊಳ್ಳುತ್ತಾಳೆ.ಆಗ ಸಾವಿತ್ರಿ ಜನಪ್ರಿಯತೆಯ ಉತ್ತುಂಗದಲ್ಲಿದ್ದಳು.ಮತ್ತು ಸಾವಿತ್ರಿಯನ್ನು ಹೊರತು ಪಡಿಸಿದರೆ ಬೇರೆ ಯಾರಿಂದಲೂ ಈ ಪಾತ್ರ ಮಾಡಲು ಸಾಧ್ಯವಾಗುತ್ತಿರಲಿಲ್ಲ.
ಮಾಯಾಬಜಾರ್ ಸಿನೆಮಾವೆಂದರೆ ಇಂದಿಗೂ ನೆನಪಿಗೆ ಬರೋದು ’ವಿವಾಹ ಭೋಜನವಿದು.. ’ಘಂಟಸಾಲರ ವಿಶಿಷ್ಟ ಹಾಡು.ಇಂದಿಗೂ ದಕ್ಷಿಣದ ಸಿನೆಮಾಗಳಲ್ಲಿ ಅಡುಗೆಗಳ ದೃಶ್ಯಗಳು ಬಂದಾಗ , ಮದುವೆಯ ಹಿನ್ನೆಲೆಯಾಗಿ ಈ ಹಾಡನ್ನೇ ಬಳಸುತ್ತಾರೆ.ಇಲ್ಲಿ ನಾವು ಘಟೋತ್ಕಚನ ಒಮ್ಮೆ ನೆನಪಿಸಿಕೊಳ್ಳೋಣ ಬನ್ನಿ.

ಮಾಯಾ ಶಶಿರೇಖಾಳಿಗೆ ತಂಗು ಮನೆಯಲ್ಲಿ ಒಮ್ಮೆ ಕೌರವರಿಗಾಗಿ ತಯಾರಿಸಿದ್ದ ರುಚಿಕರ ಭಕ್ಷ್ಯಗಳ ವಾಸನೆ ಮೂಗಿಗೆ ಬಡಿಯುತ್ತದೆ.ತಕ್ಷಣ ಶಶಿರೇಖಾ ತನ್ನ ಮೂಲ ರೂಪಕ್ಕೆ ಅಂದರೆ ಘಟೋತ್ಕಚನಾಗಿ ಬದಲಾಗಿ ಭೋಜನ ಶಾಲೆ ಹೊಕ್ಕುತ್ತಾನೆ.ಕೂತು ಒಂದೊಂದೇ ತಿನಿಸುಗಳನ್ನು ತಿನ್ನಲು ಕಷ್ಟವಾದಾಗ ದೇಹವನ್ನು ದೊಡ್ಡದಾಗಿ ಬೆಳೆಸುತ್ತಾನೆ ಮತ್ತು ಎಲ್ಲ ಭಕ್ಷ್ಯಗಳನ್ನೂ ಉಸಿರಾಡಲು ಗಾಳಿ ತೆಗೆದುಕೊಳ್ಳುವಂತೆ ಭಕ್ಷಿಸುತ್ತಾನೆ. ಲಾಡುಗಳೆಲ್ಲ ಅವನ ಬಾಯೊಳಕ್ಕೆ ಹೋಗುವ ಅದ್ಭುತ ದೃಶ್ಯವಂತೂ ನಿಮ್ಮನ್ನು ಮೈಮರೆಸುತ್ತದೆ.ಭೋಜನದ ನಂತರ ಘಟೋತ್ಕಚ ಪಕ್ಕದಲ್ಲಿಯ ಗದೆಗೆ ಕೈ ಹಾಕಿದಾಗ ಬೆಚ್ಚಿ ಬೀಳುತ್ತಾನೆ.ಏಕೆಂದರೆ ಗದೆ ತನ್ನ ಸಹಜ ಅಳತೆಯಲ್ಲೇ ಇರುತ್ತದೆ.ಅದು ಆಟಿಗೆಯಂತೆ ಕಾಣುತ್ತದೆ.ಏನೋ ನೆನಪಿಸಿಕೊಂಡವನಂತೆ ಘಟೋತ್ಕಚ ಮತ್ತೆ ತನ್ನ ಮೂಲ ರೂಪಕ್ಕೆ ಬಂದು ಗದೆ
ಹಿಡಿಯುತ್ತಾನೆ.ಇಲ್ಲಿ ಅನಿಮೇಶನ್ ,ಗ್ರಾಫಿಕ್ಸ್ ಏನು ಇಲ್ಲ.ನೀವು ಬಾರ್ಟ್ಲಿಯನ್ನು ಎಷ್ಟು ಅಭಿನಂದಿಸುತ್ತೆರೋ ನಿಮಗೆ ಬಿಟ್ಟದ್ದು.!ಹೀಗೆ ಪ್ರತಿ ಸನ್ನಿವೇಶ ,ದೃಶ್ಯ ನಿಮ್ಮನ್ನು ಮಂತ್ರದಂತೆ ಕಟ್ಟಿ ಹಾಕುತ್ತದೆ.ನೀವು ಒಮ್ಮೆ ’ಮಾಯಾಬಜಾರ್’ ನೋಡಿ..ಆಮೇಲೆ ನೀವು ನೋಡುತ್ತಲೇ ಇರುತ್ತೀರಿ ಅಷ್ಟೇ!

ನಿರ್ದೇಶನ:ಕೆ.ವಿ.ರೆಡ್ಡಿ, ನಿರ್ಮಾಣ:ಬಿ.ನಾಗಿರೆಡ್ಡಿ ಮತ್ತು ಚಕ್ರಪಾಣಿ, ಸಾಹಿತ್ಯ:ಪಿ. ನಾಗೇಂದ್ರ ರಾವ್ ಮತ್ತು ಕೆ.ವಿ.ರೆಡ್ಡಿ, ತಾರಾಗಣ:ಎನ್.ಟಿ .ರಾಮರಾವ್,ಅಕ್ಕಿನೇನಿ ನಾಗೇಶ್ವರ ರಾವ್, ಎಸ್.ವಿ.ರಂಗರಾವ್,ಸಾವಿತ್ರಿ. ಸಂಗೀತ : ಘಂಟಸಾಲ, ಬಿಡುಗಡೆ:ಮಾರ್ಚ್-27, 1957, ಭಾಷೆ:ತೆಲುಗು, ವೆಚ್ಹ:32 ಲಕ್ಷಗಳು.