ಈ ಅನಿಮೇಷನ್ ಚಿತ್ರ ತಯಾರಾದದ್ದು 2009 ರಲ್ಲಿ. “ಸೀತಾ ಸಿಂಗ್ಸ್ ದ ಬ್ಯೂಸ್” ಚಿತ್ರದ ಬಗ್ಗೆ ಮಾಹಿತಿ ಒದಗಿಸಿರುವವರು ರವಿರಾಜ್ ಗಲಗಲಿ.

ಸ್ತ್ರೀ ಸಮಾನತೆ, ಸ್ತ್ರೀ ಶೋಷಣೆ ಕುರಿತ ನೂರಾರು ಚಿತ್ರಗಳು ಸಿನಿಮಾ ಇತಿಹಾಸದಲ್ಲಿ ದಾಖಲಾಗಿವೆ. ಅಂತಹ ಚಿತ್ರಗಳ ಪಟ್ಟಿಗೆ ಸೇರ್ಪಡೆಯಾಗಿದೆ ಮತ್ತೊಂದು ಚಿತ್ರ, ಹೆಸರು ಸೀತಾ ಸಿಂಗ್ಸ್ ದ ಬ್ಲೂಸ್. ಭಾರತೀಯ ಸಂಜಾತೆ ನೀನಾ ಪೆಲೆ ನಿರ್ದೇಶಿಸಿರುವ ಇದು ಅನಿಮೇಶನ್ ಮೂವಿ. ರಾಮಾಯಣದ ಸೀತಾ ಅಗ್ನಿ ಪರೀಕ್ಷೆ ಕತೆಯ ಹಂದರವನ್ನಿಟ್ಟು ಚಿತ್ರ ನಿರ್ಮಿಸಲಾಗಿದೆ.

sitaposteragnia2

ಭಾರತೀಯ ತೊಗಲು ಬೊಂಬೆ, ಕಾರ್ಟೂನ್, ಅನಿಮೇಶನ್ ಸೇರಿ 2-ಡಿ ತಂತ್ರಜ್ಞಾನದಲ್ಲಿ ಸಿದ್ಧಗೊಂಡಿರುವ ಚಿತ್ರ ಎರಡು ಹಂತಗಳಲ್ಲಿದೆ. ಮೊದಲ ಹಂತದಲ್ಲಿ ಸೀತೆಯ ಅಪಹರಣ, ಅಗ್ನಿ ಪರೀಕ್ಷೆಯ ಯಥಾವತ್ತು ಕತೆ. ಎರಡನೇ ಹಂತದಲ್ಲಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಗಂಡನೊಂದಿಗೆ ವಾಸಿಸುವ ಗೃಹಿಣಿಯ ಕತೆ. ತನ್ನ ನೆಚ್ಚಿನ ಬೆಕ್ಕು, ಗಂಡನೊಂದಿಗೆ ಬದುಕುವ ಕಥಾನಾಯಕಿ.

ಚೆನ್ನೆಗೆ ಪ್ರಾಜೆಕ್ಟ್ ಗಾಗಿ ತೆರಳುವ ಸಾಫ್ಟವೇರ್ ಗಂಡ ತನ್ನ ಸಂಸ್ಥೆಯ ಕಾಂಟ್ರ್ಯಾಕ್ಟ್ ವಿಸ್ತರಣೆಯಾಗಿದೆ ಎಂದು ತಿಳಿಸುತ್ತಾನೆ. ಗಂಡನ ಭೇಟಿಗೆ ಭಾರತಕ್ಕೆ ಬರುವ ನಾಯಕಿಗೆ ಪತಿಯಿಂದ ತಕ್ಕ ಪುರಸ್ಕಾರ ದೊರೆಯುವುದಿಲ್ಲ, ಆತನ ನಿರ್ಲಕ್ಷ್ಯ, ನಿರಾಸೆಗೆ ಬೇಸತ್ತು ನಾಯಕಿ ಅಮೆರಿಕಕ್ಕೆ ವಾಪಸ್ಸಾಗುತ್ತಾಳೆ, ಅಲ್ಲಿ ಹೊಸ ಬೆಕ್ಕಿನೊಂದಿಗೆ ಹೊಸ ಮನೆ ತಲಾಶ್ ಮಾಡುತ್ತಾಳೆ, ಇದಿಷ್ಟು ಕತೆ.

ಅಗ್ನಿ ಪರೀಕ್ಷೆಗೆ ಮುಂದಾದಾಗ ಸೀತೆ ಅನುಭವಿಸುವ ಸಂಕಟ, ತಪನೆಯನ್ನು ಸಿನಿಮಾದಲ್ಲಿ ಪ್ರತಿಬಿಂಬಿಸಿದ್ದೇನೆ ಎನ್ನುವುದು ನಿರ್ದೇಶಕಿ ಅಭಿಮತ. ದಿ.ಆನೆಟ್ಟೆ ಹೆನ್‌ಶಾವ್ ಹಾಡಿದ ಜಾಜ್ ಹಾಗೂ ಬ್ಲೂಸ್ ಗೀತೆಗಳನ್ನು ಸೀತೆ ಹಾಡುತ್ತಾಳೆ, ಸಂಗೀತವೂ ಪಾಶ್ಚಾತ್ಯಮಯ. ಹೀಗಾಗಿ ಇದೊಂದು ವಿಭಿನ್ನ ಪ್ರಯತ್ನ ಎನ್ನುವುದು ನಿರ್ಮಾಪಕರ ಅಂಬೋಣ.

sita ಆದರೆ ಚಿತ್ರದ ಕಾರ್ಟೂನ್‌ಗಳು  ದೇವತೆಯರನ್ನು ಕುಚೇಷ್ಟೆ ಮಾಡುವಂತಿವೆ,  ಇದು ನಮ್ಮ ಸಂಪ್ರದಾಯಕ್ಕೆ  ಒಗ್ಗುವಂತಹದ್ದಲ್ಲ ಎಂದು ಪ್ರತಿಭಟನೆಗಳೂ  ನಡೆದಿವೆ. ಅನುಮತಿ ಇಲ್ಲದೇ ಜಾಜ್  ಹಾಡುಗಳನ್ನು ಬಳಸಿಕೊಂಡಿದ್ದಕ್ಕೆ  ನಿರ್ದೇಶಕಿ ದಂಡವನ್ನೂ ತೆತ್ತಿದ್ದಾರೆ.  ಕಾಪಿರೈಟ್ ಸಮಸ್ಯೆಯಿಂದಾಗಿ ಫ್ರೀ ಕಲ್ಚರ್ ಎನ್ನುವ ಹೊಸ ಸಂಸ್ಕೃತಿಯ ಉತ್ಥಾನಕ್ಕೂ ಕಾರಣರಾಗಿದ್ದಾರೆ.

ನೆಟ್‌ನಲ್ಲಿ, ಯೂ ಟ್ಯೂಬ್ ಅಥವಾ ನಿಮ್ಮದೇ ಕಂಪ್ಯೂಟರ್‌ಗಳಲ್ಲಿ ಡೌನ್‌ಲೋಡ್ ಮಾಡಿಕೊಂಡು ಚಿತ್ರ ನೋಡಬಹುದು, ಬೇಕಾದವರಿಗೂ ತೋರಿಸಬಹುದು. ನೀವು ಚಿತ್ರ ವೀಕ್ಷಿಸಿದ ನಂತರ ನಮ್ಮ ಸಂಸ್ಥೆಗೂ ಸ್ವಲ್ಪ ಧನಸಹಾಯ ಮಾಡಿ ಎನ್ನುವುದು ನಿರ್ಮಾಪಕರ ಅರಿಕೆ. ಸಂಜೀವ್ ಝವೇರಿ, ಅಲ್ಲಾದ್ದೀನ್ ಉಲ್ಲಾಹ್, ನಿತ್ಯಾ ವಿದ್ಯಾಸಾಗರ್ ಚಿತ್ರದ ಪಾತ್ರಧಾರಿಗಳಿಗೆ ಧ್ವನಿಯಾಗಿದ್ದಾರೆ. ಟಾಡ್ ಮಾರ್ಟಿನೆಜ್ ಸಂಗೀತ ಚಿತ್ರಕ್ಕಿದೆ. ಯೂ ಟ್ಯೂಬ್‌ನಲ್ಲಿ 10 ಭಾಗಗಳಲ್ಲಿ ಚಿತ್ರ ವೀಕ್ಷಣೆ ಸಾಧ್ಯ, ನೆಟ್‌ನಿಂದಲೂ ಡೌನ್ ಲೋಡ್ ಮಾಡಿಕೊಳ್ಳಬಹುದು, ಆದರೆ ವೇಗವರ್ಧಕ ಇಂಟರ್‌ನೆಟ್ ಸೌಲಭ್ಯ ಬೇಕು.

nina-paley1ವಿವಾದಾತ್ಮಕ ಚಿತ್ರಗಳಿಗೆ ಪ್ರಶಸ್ತಿ ದೊರಕುತ್ತವೆ ಎಂಬ ಮಾತಿಗೆ ಈ ಚಿತ್ರವೂ ಪುಷ್ಠಿ ನೀಡುತ್ತದೆ. ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿದಂತೆ ಹಲವು ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ದೊರೆತಿದೆ. ಚಾನೆಲ್‌ವೊಂದರಲ್ಲಿ ದೊರೆತ ಮಾಹಿತಿಯೊಂದಿಗೆ ನೆಟ್ ಜಾಲಾಡಿದಾಗ ಇಷ್ಟು ಮಾಹಿತಿ ದೊರೆಯಿತು, ಚಿತ್ರ ವೀಕ್ಷಣೆಗೂ ಅವಕಾಶ ದೊರೆಯಿತು. ಹೆಚ್ಚಿನ ಮಾಹಿತಿಗೆ http://www.sitasingstheblues.com ನೋಡಬಹುದು. ಚಿತ್ರದ ಬಗ್ಗೆ ಮತ್ತಷ್ಟು ಮಾಹಿತಿ, ಪ್ರತಿಕ್ರಿಯೆಗೆ ಸ್ವಾಗತ.