ಮುಂಬಯಿಯಲ್ಲಿ ನಡೆಯುವ ಈ ಚಿತ್ರೋತ್ಸವವನ್ನು ಮಿಸ್ ಮಾಡಬೇಡಿ. ಯಾಕೆಂದರೆ, ಇದು ಸಾಕ್ಷ್ಯಚಿತ್ರಗಳು, ಕಿರುಚಿತ್ರಗಳ ಉತ್ಸವ. ಇಂಥ ಅವಕಾಶ ಸಿಗುವುದು ಕಡಿಮೆ.
ಪಣಜಿ : ಮುಂಬಯಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಮಿಫ್) ಜನವರಿ 28 ರಿಂದ ಫೆಬ್ರವರಿ 3 ರವರೆಗೆ ಮುಂಬಯಿಯಲ್ಲಿ ನಡೆಯಲಿದೆ.
ಪ್ರಮುಖವಾಗಿ ಸಾಕ್ಷ್ಯಚಿತ್ರಗಳು, ಕಿರುಚಿತ್ರಗಳು ಹಾಗೂ ಆನಿಮೇಷನ್ ಚಿತ್ರಗಳಿಗೆ ಇದು ವೇದಿಕೆಯಾಗಿದೆ. ಇದು 15 ನೇ ವರ್ಷದ ಉತ್ಸವವಾಗಿದೆ. ಸುಮಾರು 780 ಕ್ಕೂ ಹೆಚ್ಚು ಪ್ರವೇಶಗಳು ಬಂದಿವೆ. ಆ ಪೈಕಿ ಸುಮಾರು 195 ಚಿತ್ರಗಳನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಲಾಗುತ್ತಿದೆ ಎಂದು ತಿಳಿಸಿದವರು ಈ ಉತ್ಸವದ ನಿರ್ದೇಶಕ ಮನೀಷ್ ದೇಸಾಯಿ.
‘ವರ್ಷದಿಂದ ವರ್ಷಕ್ಕೆ ಉತ್ಸವ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಮನ್ನಣೆ ಪಡೆಯುತ್ತಿರುವುದು ನಿಜಕ್ಕೂ ಸಂತೋಷದ ಸಂಗತಿ. ಈ ಬಾರಿ ಹಲವು ವಿಶೇಷಗಳು ಉತ್ಸವದಲ್ಲಿ ಇರಲಿವೆ. ಈ ಪೈಕಿ 25 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಮಟ್ಟದ ಸಿನಿಮಾ ಪರಿಣಿತರು ಪಾಲ್ಗೊಳ್ಲುವರು’ ಎಂದು ಮಾಹಿತಿ ನೀಡಿದರು ದೇಸಾಯಿ.
ಸಾಕ್ಷ್ಯಚಿತ್ರಗಳು, ಕಿರುಚಿತ್ರಗಳು ಹಾಗೂ ಆನಿಮೇಷನ್ ಚಿತ್ರಗಳಿಗೆ ಪ್ರಧಾನವಾದ ಮನ್ನಣೆ ಸಿಗಬೇಕೆಂಬುದು ಈ ಉತ್ಸವದ ಉದ್ದೇಶ ಎಂದ ಅವರು, ಬಾಂಗ್ಲಾದೇಶ, ಕೆನಡಾ, ಇಸ್ರೇಲ್, ಫ್ರಾನ್ಸ್, ಅಮೆರಿಕಾ ಇತ್ಯಾದಿ ರಾಷ್ಟ್ರಗಳಿಂದ ಸಿನಿಮಾ ನಿರ್ದೇಶಕರು ತಮ್ಮ ಸಿನಿಮಾಗಳನ್ನು ಕಳುಹಿಸಿರುವುದು ಈ ಉತ್ಸವ ಬೆಳೆಯುತ್ತಿರುವುದರ ದ್ಯೋತಕ’ ಎಂದರು.
ಚಿತ್ರೋತ್ಸವದಲ್ಲಿ ಭಾಗವಹಿಸಲಿಚ್ಛಿಸುವವರು ಮಾಹಿತಿಗೆ www.miff.in ಸಂಪರ್ಕಿಸಬಹುದು. ಇದರಲ್ಲಿ ಭಾಗವಹಿಸಲು ಪ್ರತಿನಿಧಿಗಳ ನೋಂದಣಿ ಶೀಘ್ರವೇ ಆರಂಭವಾಗಲಿದೆ.
ಮಿಫ್ ಪ್ರಿಸ್ಯೂಮ್
ಇದು ಹೊಸ ವಿಭಾಗದ ಸೇರ್ಪಡೆ. ಅತ್ಯುತ್ತಮ ಚಿತ್ರಗಳ ಆಯ್ಕೆಗೆ ಹಲವಾರು ಮಾನದಂಡಗಳಿರುತ್ತವೆ. ಒಂದು ಚಿತ್ರ ಎಲ್ಲವನ್ನೂ ಪೂರೈಸಬಹುದು. ಆದರೆ, ಕೆಲವು ಚಿತ್ರಗಳು ಬಹುತೇಕ ವಿಭಾಗಗಳಲ್ಲಿ ಉತ್ತಮವಾಗಿದ್ದು, ಯಾವುದೋ ಒಂದು ಭಾಗದಲ್ಲಿ ಬಡವಾಗಿರುತ್ತದೆ. ಇಂಥ ಪ್ರಯತ್ನಗಳನ್ನು ವಿಶೇಷವೆಂದು ಪರಿಗಣಿಸಿ ಅವುಗಳಿಗೂ ಪ್ರದರ್ಶನ ಅವಕಾಶ ನೀಡುವುದು ಈ ಮಿಫ್ ಪ್ರಿಸ್ಯೂಮ್ ನ ಪರಿಕಲ್ಪನೆ. ಈ ವಿಭಾಗದಲ್ಲೂ ಹಲವಾರು ಚಿತ್ರಗಳು ಈ ಬಾರಿ ಪ್ರದರ್ಶನಗೊಳ್ಳಲಿವೆ.
ಬಹುಮಾನ ಮೊತ್ತ ಏರಿಕೆ
ಈ ಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರಕ್ಕೆ ನೀಡಲಾಗುವ ಗೋಲ್ಡನ್ ಕಾಂಚ್ ಪ್ರಶಸ್ತಿಯ ಮೊತ್ತವನ್ನು ಈ ಬಾರಿ 5ಲಕ್ಷ ರೂ. ಗಳಿಂದ 10 ಲಕ್ಷ ರೂ. ಗಳಿಗೆ ಏರಿಸಲಾಗಿದೆ. ಇದರೊಂದಿಗೆ ನಿರ್ದೇಶನ, ಸಂಕಲನ, ಸಿನೆ ಛಾಯಾಗ್ರಹಣ ಇತ್ಯಾದಿ ಕ್ಷೇತ್ರಗಳಿಗೂ ಪ್ರಶಸ್ತಿಯನ್ನು ನೀಡಿ ಪ್ರೋತ್ಸಾಹಿಸಲಾಗುತ್ತಿದೆ.
ವಿದ್ಯಾರ್ಥಿ ಸಮುದಾಯ ಹೆಚ್ಚಾಗಿ ಇದರಲ್ಲಿ ಭಾಗವಹಿಸಬೇಕೆಂಬ ಇರಾದೆ ಇದೆ. ಈ ನಿಟ್ಟಿನಲ್ಲಿ ಹೆಚ್ಚಿನ ಕ್ರಮ ಕೈಗೊಳ್ಳಲಾಗುತ್ತಿದೆ. ಸಾಮಾಜಿಕ ಮಾಧ್ಯಮಗಳ ಮೂಲಕ ಆ ಸಮುದಾಯವನ್ನು ತಲುಪುವ ಪ್ರಯತ್ನ ಚಾಲ್ತಿಯಲ್ಲಿದೆ. ಹೆಚ್ಚಾಗಿ ಜಾಹೀರಾತಿಗೆ ಮೊರೆ ಹೋಗದೇ, ಸಂಪರ್ಕ ಮಾಧ್ಯಮಗಳಾದ ಸಾಮಾಜಿಕ ಮಾಧ್ಯಮಗಳಿಗೆ ಹೆಚ್ಚಿನ ಗಮನ ನೀಡಲಾಗಿದೆ.
ಜನರನ್ನು ತಲುಪುವ ಉದ್ದೇಶ
ಐಡಿಪಿಎ (ಇಂಡಿಯನ್ ಡಾಕ್ಯುಮೆಂಟರಿ ಪ್ರೊಡ್ಯೂಷರ್ಸ್ ಅಸೋಸಿಯೇಷನ್) ಯ ಅಧ್ಯಕ್ಷ ಮೈಕ್ ಪಾಂಡೆ ಮಾತನಾಡಿ, ಸಾಕ್ಷ್ಯಚಿತ್ರಗಳ ಮೂಲಕ ನಾವು ಜನರನ್ನು ತಲುಪುವ ಪ್ರಯತ್ನ ಮಾಡುತ್ತಿದ್ದೇವೆ. ನಮ್ಮದು ನೈಜ ಬದುಕಿನ ಅನಾವರಣ ಎಂದರು.
ಫಿಲ್ಮ್ ಡಿವಿಷನ್, ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಇನ್ನಿತರ ಇಲಾಖೆಯ ಸಹಾಯದೊಂದಿಗೆ ಈ ಚಿತ್ರೋತ್ಸವವನ್ನು ಸಂಘಟಿಸುತ್ತಿವೆ.