ಸಾಂಗತ್ಯ ಪ್ರತಿನಿಧಿಯಿಂದ

ಪಣಜಿ : 48 ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಇನ್ನೇನು ಕ್ಷಣ ಗಣನೆ. ಇಂದು (ನ.20) ಚಿತ್ರೋತ್ಸವಕ್ಕೆ ಬಾಲಿವುಡ್ ನಟ ಶಾರೂಖ್ ಖಾನ್ ಚಾಲನೆ ನೀಡುವರು. ಆದರೆ ಈ ಬಾರಿ ಚಿತ್ರೋತ್ಸವಕ್ಕೆ ವಿವಾದದ್ದೇ ಮುನ್ನುಡಿ.

ಚಿತ್ರೋತ್ಸವ ಆರಂಭವಾಗುವ ಮುನ್ನವೇ ವಿವಾದದ ಮುಸುಕೆಳೆದುಕೊಂಡಿದೆ. ಭಾರತೀಯ ಪನೋರಮಾ ವಿಭಾಗದಲ್ಲಿ ಎರಡು ಚಿತ್ರಗಳನ್ನು ಆಯ್ಕೆ ಪಟ್ಟಿಯಿಂದ ಕೈ ಬಿಟ್ಟಿದ್ದನ್ನು ಪ್ರತಿಭಟಿಸಿ ಆಯ್ಕೆ ಸಮಿತಿಯ ಇಬ್ಬರು ಸದಸ್ಯರು ರಾಜೀನಾಮೆ ನೀಡಿದ್ದಾರೆ.

ಭಾರತೀಯ ಪನೋರಮಾ ವಿಭಾಗದ ಮುಖ್ಯ ತೀರ್ಪುಗಾರ ಸುಜಯ್ ಘೋಷ್ ರಾಜೀನಾಮೆ ನೀಡಿದ್ದಾರೆ. ಅದರ ಬೆನ್ನಿಗೇ ಮತ್ತೋರ್ವ ಸದಸ್ಯರಾದ ಅಪೂರ್ವ ಅಸ್ರಾಣಿ ರಾಜೀನಾಮೆ ನೀಡಿದ್ದಾರೆ. ಇದಕ್ಕೆ ಕೊಟ್ಟಿರುವ ಕಾರಣವೆಂದರೆ, ಆಯ್ಕೆಯ ಅಂತಿಮ ಪಟ್ಟಿಯಲ್ಲಿದ್ದ ರವಿ ಜಾಧವ್ ಅವರ ’ನ್ಯೂಡ್’ ಹಾಗೂ ಸನಲ್ ಕುಮಾರ್ ಶಶಿಧರನ್ ಅವರ ’ಎಸ್ ದುರ್ಗಾ’ ಸಿನಿಮಾಗಳನ್ನು ತೀರ್ಪುಗಾರರಿಗೆ (ಆಯ್ಕೆ ಸಮಿತಿ ಸದಸ್ಯರಿಗೆ) ತಿಳಿಸದೇ ವಾರ್ತಾ ಮತ್ತು ಪ್ರಚಾರ ಸಚಿವಾಲಯ ಕೈ ಬಿಟ್ಟಿರುವುದು. ಮತ್ತೊಂದು ಮಾಹಿತಿ ಪ್ರಕಾರ ಮತ್ತೋರ್ವ ಸದಸ್ಯ ಗ್ಯಾನ್ ಕರೇರಾ ಸಹ ರಾಜೀನಾಮೆ ನೀಡಿದ್ದಾರೆ. ಬಹುತೇಕ ಸದಸ್ಯರು  ಅಭಿಪ್ರಾಯ ಸ್ವಾತಂತ್ರ್ಯ ಹತ್ತಿಕ್ಕುವ ಕೆಲಸವಿದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಸ್ತುತ ಸ್ಮೃತಿ ಇರಾನಿ ಈ ಖಾತೆಯ ಸಚಿವರು. ಹದಿಮೂರು ಮಂದಿ ಸದಸ್ಯರ ಆಯ್ಕೆ ಸಮಿತಿ ಈ ಸಿನಿಮಾಗಳನ್ನು ಸೇರಿದಂತೆ ಒಟ್ಟು 26 ಸಿನಿಮಾಗಳನ್ನು ಆಯ್ಕೆ ಮಾಡಿತ್ತು. ಆಯ್ಕೆ ಸಮಿತಿಯು ನ್ಯೂಡ್ ಚಿತ್ರವನ್ನು ಈ ಉತ್ಸವದ ಭಾರತೀಯ ಪನೋರಮಾ ವಿಭಾಗದ ಉದ್ಘಾಟನಾ ಚಿತ್ರವನ್ನಾಗಿಯೂ ಸೂಚಿಸಿತ್ತು. ಈ ಮಧ್ಯೆ ಶಶಿಧರನ್ ತಮ್ಮ ಚಿತ್ರವನ್ನು ಕೈಬಿಟ್ಟಿದ್ದನ್ನು ಪ್ರಶ್ನಿಸಿ ಕೇರಳ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಚಿತ್ರೋತ್ಸವ ಸಮಿತಿ ಅಧ್ಯಕ್ಷರೂ ಮತ್ತು ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್, ಎರಡೂ ಚಿತ್ರಗಳು ಸೆನ್ಸಾರ್ ಆಗದೇ ಇರುವುದರಿಂದ ಪ್ರದರ್ಶನದಿಂದ ಕೈ ಬಿಡಲಾಗಿದೆ’ ಎಂದು ಪ್ರತಿಕ್ರಿಯಿಸಿದ್ದರು.

ಈ ಹಿನ್ನೆಲೆಯಲ್ಲಿ ಈ ಬಾರಿ ಚಿತ್ರೋತ್ಸವ ವಿವಾದದಿಂದಲೇ ಆರಂಭವಾದಂತಿದೆ. ಮೊದಲ ಬಾರಿಗೆ ಎನ್ ಎಫ್ ಡಿಸಿ ಈ ಚಿತ್ರೋತ್ಸವವನ್ನು ನಿರ್ವಹಿಸುತ್ತಿದೆ.