ಸಾಂಗತ್ಯ ಪ್ರತಿನಿಧಿಯಿಂದ

ಪಣಜಿ : ಸಣ್ಣದೊಂದು ವಿವಾದದ ಮುಸುಕೆಳೆದುಕೊಂಡರೂ ಭವ್ಯವೆನಿಸುವ ಆರಂಭ 48 ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಸೋಮವಾರ ಸಿಕ್ಕಿದೆ.

ಕರ್ನಾಟಕದ ಡೊಳ್ಳು ಕುಣಿತವೂ ಸೇರಿದಂತೆ ವಿವಿಧ ಸಾಂಸ್ಕೃತಿಕ ಪ್ರಕಾರಗಳ ಮೇಳೈಸಿದ್ದು ಚಿತ್ರೋತ್ಸವದ ಉದ್ಘಾಟನೆ ಕಳೆಗಟ್ಟಿತು. ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಜವಳಿ, ವಾರ್ತಾ ಸಚಿವೆ ಸ್ಮೃತಿ ಇರಾನಿ, ನಟ ಶಾರೂಖ್ ಖಾನ್, ಗೋವಾದ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಮಾತನಾಡಿದರು.

ಭಾರತವೆಂದರೇ ಹಲವಾರು ಭಾಷೆ, ಉತ್ಸವಗಳ ನಾಡು. ಈ ಚಿತ್ರೋತ್ಸವ ಹಲವು ದೇಶ ಮತ್ತು ಸಂಸ್ಕೃತಿಗಳನ್ನು ಹೊತ್ತು ತಂದಿದೆ ಎಂದರು ಸ್ಮೃತಿ ಇರಾನಿ.

ಸಿನಿಮಾ ಎಂದರೇ ಒಂದು ಬಗೆಯ ಪ್ರೀತಿ ಹುಟ್ಟಿಸುವ ಕಲೆ. ನೂರಾರು ಮಂದಿ ಸೇರಿ ಒಟ್ಟಿಗೇ ದುಡಿಯವ ಅದ್ಭುತ ಕಲೆ ಎಂಬ ಅಭಿಪ್ರಾಯ  ನಟ ಶಾರೂಖ್ ಖಾನ್ ಅವರದ್ದು.

2019 ರಲ್ಲಿ ನಡೆಯುವ 50 ಚಿತ್ರೋತ್ಸವಕ್ಕೆ ಗೋವಾ ವಿಶೇಷವಾಗಿ ಸಿದ್ಧಗೊಳ್ಳುತ್ತಿದೆ ಎಂದು ಮುಂದಿನೆರಡು ಚಿತ್ರೋತ್ಸವಗಳಿಗೆ ತೋರಣ ಕಟ್ಟಿದವರು ಮನೋಹರ್ ಪಾರಿಕ್ಕರ್.

ಡೊಳ್ಳು ಕುಣಿತ, ಕಥಕ್ಕಳಿ ಸೇರಿದಂತೆ ವಿವಿಧ ನೃತ್ಯ ಪ್ರಕಾರಗಳ ಸಂಯೋಜನೆಯ ನೃತ್ಯ ರೂಪಕ ಭರ್ಜರಿ ಆರಂಭವನ್ನು ನೀಡಿತು. ಸಮಾರಂಭದಲ್ಲಿ ರಾಜ್ಯಪಾಲೆ ಮೃದುಲಾ ಸಿನ್ಹಾ, ಸಂಗೀತ ನಿರ್ದೇಶಕ ಎಆರ್ ರೆಹಮಾನ್, ನಟಿ ಶ್ರೀದೇವಿ ಮತ್ತಿತರರು ಭಾಗವಹಿಸಿದ್ದರು.

ಉದ್ಘಾಟನಾ ಚಿತ್ರವಾಗಿ ಇರಾನಿ ಚಿತ್ರ ನಿರ್ದೇಶಕ ಮಜಿದ್ ಮಜಿದಿ ನಿರ್ದೇಶಿಸಿದ ‘ಬಿಯಾಂಡ್ ದಿ ಕ್ಲೌಡ್ಸ್’ ಚಿತ್ರ ಪ್ರದರ್ಶನಗೊಂಡಿತು.