ಪಣಜಿ : ಇಲ್ಲಿಯ ಸಾಂಸ್ಕೃತಿಕ ಸಮುಚ್ಚಯದಲ್ಲಿರುವ ಥಿಯೇಟರು ಗಳು, ಕಲಾ ಅಕಾಡೆಮಿ ನ. 20 ರಿಂದ 28 ರವರೆಗೆ ೪೮ ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಸಜ್ಜಾಗಿವೆ.

ಚಿತ್ರೋತ್ಸವದ ಉದ್ಘಾಟನಾ ಚಿತ್ರವಾಗಿ ಇರಾನಿ ಚಿತ್ರ ನಿರ್ದೇಶಕ ಮಜಿದ್ ಮಜಿದಿ ನಿರ್ದೇಶಿಸಿದ ’ಬಿಯಾಂಡ್ ದಿ ಕ್ಲೌಡ್’ ಪ್ರದರ್ಶನವಾಗುತ್ತಿದೆ. ಸಮಾರೋಪ ಚಿತ್ರವಾಗಿ ಖ್ಯಾತ ಕವಿ ರವೀಂದ್ರನಾಥ ಟಾಗೋರ್ ಕುರಿತು ಹೇಳುವ ಇಂಡೋ-ಅರ್ಜೆಂಟೈನಾ ಚಿತ್ರ ಪ್ಯಾಬ್ಲೋ ಸೀಸರ್ ನಿರ್ದೇಶಿಸಿದ ’ಥಿಂಕಿಂಗ್ ಆಫ್ ಹಿಮ್’ ಪ್ರದರ್ಶನವಾಗಲಿದೆ.

ಒಟ್ಟು ಸುಮಾರು 82 ಕ್ಕೂ ಹೆಚ್ಚು ದೇಶಗಳ 195 ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ಈ ಬಾರಿ ರೆಟ್ರಾಸ್ಪೆಕ್ಟಿವ್ ವಿಭಾಗದಲ್ಲಿ ಜೇಮ್ಸ್ ಬಾಂಡ್ ಮಿಂಚಲಿದ್ದಾನೆ. ಬಾಂಡ್ ಸರಣಿಯ 9 ಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಕಂಟ್ರಿ ಆಫ್ ಫೋಕಸ್ ನಲ್ಲಿ ಕೆನಡಾ ದೇಶದ ಸಿನಿಮಾಗಳು ಬಿತ್ತರಗೊಂಡರೆ, ಈ ಬಾರಿ ಜೀವಿತಾವಧಿ ಸಾಧನೆ ಪ್ರಶಸ್ತಿಯನ್ನು ಕೆನಡಾದ ಸಿನಿಮಾ ನಿರ್ದೇಶಕ ಆಟಮ್ ಎಗೋಯನ್ ಅವರಿಗೆ ನೀಡುತ್ತಿರುವುದು ವಿಶೇಷ. ಈ ವರ್ಷದ ಭಾರತೀಯ ಸಿನಿಮಾ ಜಗತ್ತಿನ ಸಾಧಕ ಪ್ರಶಸ್ತಿಗೆ ಹಿರಿಯ ನಟ ಅಮಿತಾಬ್ ಬಚ್ಚನ್ ಆಯ್ಕೆಯಾಗಿದ್ದಾರೆ. ನಾಲ್ಕು ಯುವ ನಿರ್ದೇಶಕರ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಸಿಕ್ಕಿದೆ.

ಭಾರತೀಯ ಪನೋರಮಾ ವಿಭಾಗದಡಿ 26 ಚಿತ್ರಗಳು ಪ್ರದರ್ಶಿತವಾದರೆ, ಕಥೇತರ ವಿಭಾಗದಲ್ಲೂ ಸಾಕಷ್ಟು ಚಿತ್ರಗಳಿವೆ. ಸಿನೆಮಾ ಆಫ್ ವರ್ಲ್ಡ್ ವಿಭಾಗದಲ್ಲಿ 82 ಕ್ಕೂ ಹೆಚ್ಚು ಚಿತ್ರಗಳಿದ್ದರೆ, ಅಂತಾರಾಷ್ಟ್ರೀಯ ಸ್ಪರ್ಧೆ ವಿಭಾಗದಲ್ಲಿ 15 ಚಿತ್ರಗಳು ಸೆಣಸುತ್ತಿವೆ. ಐಸಿಎಫ್ಟಿ-ಯುನೆಸ್ಕೊ ಗಾಂಧಿ ಪ್ರಶಸ್ತಿಗೆ ಸೆಣಸುತ್ತಿರುವ ಚಿತ್ರಗಳೂ ಈ ಬಾರಿಯ ಆಕರ್ಷಣೆಯಲ್ಲಿ ಸೇರಿವೆ.