ಕರ್ನಾಟಕ ಚಲನಚಿತ್ರ ಅಕಾಡೆಮಿ ಮತ್ತು ವಾರ್ತಾ ಮತ್ತು ಪ್ರಸಾರ ಇಲಾಖೆ ನೇತೃತ್ವದ ಸಿನಿ ಸಂಭ್ರಮ ಕಾರ್ಯಕ್ರಮದಲ್ಲಿ ಪುಟಾಣಿ ಸಫಾರಿ ಎನ್ನುವ ಕನ್ನಡ ಮಕ್ಕಳ ಚಿತ್ರವನ್ನು ನೋಡಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ  ವಿಜಯಕುಮಾರ್ ವೆಂಕಟ್.

ಪುಟಾಣಿ ಸಫಾರಿ ಹೆಸರೇ ಹೇಳುವಂತೆ ಮಕ್ಕಳಿಗಾಗಿ ಮಾಡಿದ ಚಿತ್ರ. ನಾನು ಮೊದಲೇ ಹೇಳಿಬಿಡುತ್ತೇನೆ. ಗಮನಾರ್ಹ ಸಂದೇಶವಾಗಲಿ , ಶಾಟ್ ಸಂಯೋಜನೆ, ಹಿನ್ನೆಲೆ ಸಂಗೀತ ಅಭಿನಯ ಇದಾವುದರಲ್ಲೂ ಕಲಾತ್ಮಕ ಅಂಶಗಳಾಗಲಿ ಈ ಚಿತ್ರದಲ್ಲಿ ಕಾಣಸಿಗದು. ಇದು ಚಿತ್ರದ ಮೈನಸ್ ಇರಬಹುದಾ..? ಎಂದುಕೊಂಡು ನೋಡುವುದಾದರೆ ಚಿತ್ರ ನೋಡಿಯಾದ ಮೇಲೆ ಅನಿಸುವುದು ಖಂಡಿತ ಅಲ್ಲ ಎಂಬುದು. ಅದಕ್ಕೆ ಕಾರಣ ಸ್ಪಷ್ಟವಿದೆ.

ನಿರ್ದೇಶಕ ರವೀಂದ್ರ ವೆಂಶಿ ಮಕ್ಕಳ ಮನಸ್ಥಿತಿ ಅರಿತು ಸಿನಿಮಾ ಮಾಡಿರುವುದು ಕಂಡು ಬರುತ್ತದೆ. ಎರಡು ವಿಭಿನ್ನ ಮನಸ್ಥಿತಿ, ಪರಿಸ್ಥಿತಿಯಲ್ಲಿ ಬೆಳೆದ ಮಕ್ಕಳು ಕಾಡಿನಲ್ಲಿ ಸಿಲುಕಿಕೊಂಡು ಹೊರಬರುವ ಹೋರಾಟದಲ್ಲಿ ಬದುಕಿನ ಮಹತ್ವಗಳನ್ನು ಅರಿತುಕೊಳ್ಳುವ ಸರಳ ಕತೆಯನ್ನು ಸೊಗಸಾಗಿ ಯಾವುದೇ ಕ್ಲಿಷ್ಟಕರ ಎನಿಸದ ಸರಳ ನಿರೂಪಣೆಯ ಮೂಲಕ ಪ್ರೇಕ್ಷಕರ ಮುಂದೆ ತೆರೆದಿಡುತ್ತಾ ಸಾಗುತ್ತಾರೆ. ಸಿನಿಮಾ ನೋಡಲು ಕುಳಿತ ಪುಟಾಣಿ ಪ್ರೇಕ್ಷಕನಿಗೆ ಪ್ರತಿಯೊಂದೂ ಅರ್ಥವಾಗುತ್ತದೆಯಲ್ಲದೆ ಮಜಾ ಕೊಡುತ್ತದೆ.

ಚಿತ್ರದಲ್ಲಿ ಬರುವ ಟಿವಿ ನೋಡುವ ದೃಶ್ಯದಲ್ಲಿಯೇ ವಿಶೇಷವಿದೆ. ಶ್ರೀಮಂತರ ಮನೆಯ ಹುಡುಗನಾದ ರೋಹಿತ್ ಮನೆಯಲ್ಲಿಯೇ ದೊಡ್ಡದಾದ ಟಿವಿ ಇದ್ದರೂ ಪ್ರೋಷಕರ ಅಂಕುಶದಿಂದಾಗಿ ಮನೆಗೆಲಸದವಳ ಮನೆಗೆ ಹೋಗಿ ಚಿಕ್ಕ ಟಿವಿಯಲ್ಲಿ ಸಿನಿಮಾ ನೋಡಿ ಖುಷಿ ಪಡುತ್ತಾನೆ. ಅದೇ ರೀತಿಯಾಗಿ ಕಾಡಿನ ನಡುವಣ ಕಡುಬಡವರ ಕುಟುಂಬದ ಸಿದ್ದೇಶ ತನ್ನ ಮನೆಯಲ್ಲಿ ಟಿವಿ ಇಲ್ಲದ ಕಾರಣ ಬೇರೆ ಮನೆಗೆ ಹೋಗಿ ಟಿವಿ ನೋಡುತ್ತಾನೆ. ಅಂದರೆ ಮಕ್ಕಳ ಮನಸ್ಥಿತಿ ಸಾಮಾಜಿಕ ಅಥವಾ ಅರ್ಥಿಕ ಪರಿಸ್ಥಿತಿಯ ಮೇಲೆ ಅವಲಂಬಿತವಾಗಿಲ್ಲ, ಮಕ್ಕಳು ಮಕ್ಕಳೇ ಎಂಬುದನ್ನು ಸೂಚ್ಯವಾಗಿ ನಿರ್ದೇಶಕರು ತೆರೆದಿಟ್ಟಿದ್ದಾರೆ.

ಇಂತಹ ಅಂಶಗಳು ಸಿನೆಮಾದುದ್ದಕ್ಕೂ ಇದ್ದರೂ ಅದರ ಛಾಪು ಗಾಢವಾಗಿಲ್ಲ. ಬಹುಶಃ ನಿರ್ದೇಶಕರು ಬೇಕೆಂತಲೇ ಮನರಂಜನೆಯ ಕಡೆಗೆ ಗಮನ ಹರಿಸಿ ಇಂತಹ ಸಂದೇಶಾತ್ಮಕ ಅಂಶಗಳನ್ನು ಕಂಡು ಕಾಣದಂತೆ ಇರಿಸಿದ್ದಾರೇನೋ..? ಮಾಲಿಂಗನ ಮಾತುಗಳಲ್ಲಿ ಸತ್ಯಾಂಶಗಳಿವೆ, ಮೇಲ್ನೋಟಕ್ಕೆ ಉಡಾಫೆ ವ್ಯಕ್ತಿತ್ವದವನಂತೆ ಕಾಣುವ ಮಾಲಿಂಗ ಕಳಕಳಿಯಿರುವ ಮನುಷ್ಯ ಎನ್ನುವುದು ಅವನ ವರ್ತನೆಯಿಂದ ಕಂಡುಬರುತ್ತದೆ. ಹಾಗೆಯೇ ನಕ್ಸಲೈಟ್, ಮಾಧ್ಯಮಗಳ ಟಿ.ಆರ್.ಪಿಯ ಹಪಾಹಪಿ, ಕಾಡು ಮರಗಳ್ಳರ ಕುಚೇಷ್ಟೆ ಮುಂತಾದವುಗಳನ್ನು ಕ್ಲೀಷೆಯಾಗಿಸದೆ ಸೊಗಸಾಗಿ ಮತ್ತು ಅರ್ಥಪೂರ್ಣವಾಗಿ ಚಿತ್ರದ ಚಿತ್ರಕತೆಯಲ್ಲಿ ಅಳವಡಿಸಿದ್ದಾರೆ ನಿರ್ದೇಶಕರು. ಲವಲವಿಕೆಯ ಮೂಲಕ ಚಿತ್ರ ನಿರೂಪಿಸಿರುವ ನಿರ್ದೇಶಕರು ಅಂತ್ಯದಲ್ಲಿ ಚಿತ್ರದಲ್ಲಿ ಲಘು ಹಾಸ್ಯವನ್ನು ಬಳಕೆ ಮಾಡಿಕೊಂಡಿರುವುದರಿಂದಾಗಿ ಚಿತ್ರ ಮುಗಿದ ಮೇಲೆ ಖುಷಿಯ ಭಾವ ಮನತುಂಬಿಕೊಳ್ಳುತ್ತದೆ.

ಚಿತ್ರವನ್ನು ರೋಹಿತ್, ಸಿದ್ದೇಶ, ಮುಖಾಮುಖಿ, ಡೇರ್ ಡೆವಿಲ್ ಮಾಲಿಂಗ, ಪುಟಾಣಿ ಸಫಾರಿ, ಕ್ರಾಂತಿಕಾರರು, ತ್ರಿ ಮೂರ್ಖರು ಎಂಬುದಾಗಿ ಏಳು ಅಧ್ಯಾಯಗಳಾಗಿ ವಿಂಗಡಿಸಿದ್ದಾರೆ ನಿರ್ದೇಶಕರು. ಒಂದರ ನಂತರ ಒಂದೊಂದು ಅಧ್ಯಾಯ ತೆರೆದುಕೊಂಡರು ಚಿತ್ರದ ಓಟಕ್ಕೆ ಎಲ್ಲೂ ಅಡೆತಡೆಯಾಗದೆ ಬದಲಿಗೆ ಇನ್ನಷ್ಟು ವೇಗ ಹೆಚ್ಚಿಸುತ್ತದೆ. ಕುತೂಹಲ ಹೆಚ್ಚಿಸುತ್ತದೆ. ಪ್ರಾರಂಭದಿಂದಲೇ ಸಿನೆಮಕ್ಕೊಂದು ವೇಗ ಕೊಡುವ ಚಿತ್ರಕತೆ ಸಾಗುತ್ತ ಸಾಗುತ್ತ ವೇಗ ಹೆಚ್ಚಿಸಿಕೊಳ್ಳುತ್ತದೆ. ನೋಡಿಸಿಕೊಳ್ಳುತ್ತಾ ನಗಿಸುತ್ತಾ ಸಾಗುತ್ತದೆ.

ಚಿತ್ರದ ಬಹುಮುಖ್ಯ ಧನಾತ್ಮಕ ಅಂಶ ಎಂದರೆ ಮಕ್ಕಳ ಪಾತ್ರ ಪೋಷಣೆ. ರೋಹಿತ್ ಸಿಟಿ ಹುಡುಗ, ಎಲ್ಲದರಲ್ಲೂ ಫಸ್ಟ್ ಕ್ಲಾಸ್. ಸಿದ್ದೇಶ ಶಾಲೆಯಿಂದ ವಂಚಿತನಾದವ, ಕಾಡಿನ ಬಗ್ಗೆ ಜ್ಞಾನವಿದೆ. ಇಷ್ಟೆಲ್ಲಾ ಆದರೂ ಮಕ್ಕಳು ಮಕ್ಕಳಾಗಿಯೇ ಇರುವುದು ಚಿತ್ರದಲ್ಲಿ ಸಹಜತೆಯನ್ನು ಎತ್ತಿ ಹಿಡಿದಿದೆ. ಏಕೆಂದರೆ ಮಕ್ಕಳು ಮುಖ್ಯಭೂಮಿಕೆಯಲ್ಲಿರುವ ಚಿತ್ರಗಳ ಮೈನಸ್ ಅಂಶವೆಂದರೆ ಮಕ್ಕಳು ದೊಡ್ಡ ದೊಡ್ಡ ಮಾತುಗಳನ್ನಾಡುವುದು. ಅದು ನೋಡುವುದಕ್ಕೆ ಕಿರಿಕಿರಿ ಉಂಟು ಮಾಡುತ್ತದೆ.

ಹಾಗೆಯೇ ಮಕ್ಕಳು ದೊಡ್ಡದಾದ ಕೆಲಸ ಮಾಡುವುದು. ಮಾಮೂಲಿ ಮಕ್ಕಳ ಚಿತ್ರಗಳಲ್ಲಿ ಮಕ್ಕಳೆಲ್ಲಾ ಸೇರಿಕೊಂಡು ಕೇಡಿಗಳ ಅನ್ಯಾಯವನ್ನು ಬಯಲಿಗೆಳೆಯುವ, ಊರು ಉದ್ಧಾರ ಮಾಡುವ ಕೆಲಸಕ್ಕೆ ಕೈಹಾಕುವ, ವರದಕ್ಷಿಣೆ, ಬಾಲ್ಯವಿವಾಹ ಮುಂತಾದ ಸಾಮಾಜಿಕ ಪಿಡುಗಿನ ವಿರುದ್ಧ ಹೋರಾಡುವ ಕೆಲಸವನ್ನು ಮಾಡುತ್ತಾರೆ. ಇಂತಹವು ಚಿತ್ರದ ಮೂಲವಸ್ತುವಿನ ದೃಷ್ಟಿಯಿಂದ ಗಟ್ಟಿತನವನ್ನು ಚಿತ್ರಕ್ಕೆ ತಂದುಕೊಡುತ್ತವೆಯಾದರೂ ಮಕ್ಕಳ ಸಿನಿಮಾದ ಮನರಂಜನೆಯನ್ನು ಕಡಿಮೆಗೊಳಿಸಿ, ಚಿತ್ರವನ್ನು ಗಂಭೀರತೆಯ ಕಡೆಗೆ ದೂಡುತ್ತವೆ. ಹಾಗಾಗಿ ಬಹುತೇಕ ಮಕ್ಕಳ ಚಿತ್ರಗಳು ಮಕ್ಕಳು ನೋಡುವಂತಿರುವುದಿಲ್ಲ. ಅದಕ್ಕೆ ಪುಟಾಣಿ ಸಫಾರಿ ಅಪವಾದ ಎನಿಸುತ್ತದೆ. ಇಂತಹ ಯಾವುದೇ ಅಂಶವಿಲ್ಲದೆ, ಇರುವ ಸಂದೇಶ ತರಗತಿಯ ಪಾಠವಾಗದೆ ಮನರಂಜಿಸುವುದರಿಂದ ಪುಟಾಣಿ ಸಫಾರಿ ಇತ್ತೀಚಿನ ದಿನಗಳಲ್ಲಿ ಬಂದಂತಹ ಮಕ್ಕಳ ಚಿತ್ರಗಳ ಸಾಲಿನಲ್ಲಿ ಅತ್ಯುತ್ತಮ ಮಕ್ಕಳಿಗಾಗಿ ನಿರ್ದೇಶಿಸಿದ ಚಿತ್ರ ಎನ್ನುವುದರಲ್ಲಿ ಎರಡು ಮಾತಿಲ್ಲ.

ಹಾಗಂತ ಪುಟಾಣಿ ಸಫಾರಿ ಗ್ರೇಟ್ ಸಿನಿಮಾ ಎನ್ನುವುದಕ್ಕಾಗುವುದಿಲ್ಲ. ಚಿತ್ರದಲ್ಲಿನ ಸಣ್ಣಪುಟ್ಟ ದೋಷಗಳು ಗಮನಾರ್ಹ ಎನಿಸುವುದಿಲ್ಲ. ಬದಲಿಗೆ ಮಕ್ಕಳ ಚಿತ್ರಗಳು ಇದೇ ಧಾಟಿಯಲ್ಲಿ ಬಂದರೆ ಕನ್ನಡದಲ್ಲಿ ಬರೀ ಪ್ರಶಸ್ತಿಗೆ ಸೀಮಿತವಾದ ಮಕ್ಕಳ ಚಿತ್ರಗಳು ಪ್ರೇಕ್ಷಕರ ಚಿತ್ರಗಳಾಗಿಯೂ ಮಾರ್ಪಾಡಾಗುವುದರಲ್ಲಿ ಸಂದೇಹವಿಲ್ಲ.

ಮನೆಮಂದಿಯ ಜೊತೆಗೆ, ಹೆಚ್ಚಾಗಿ ಮಕ್ಕಳ ಜೊತೆಗೆ ಪುಟಾಣಿ ಸಫಾರಿ ನೋಡಿದರೆ ನಾವು ಸಿನಿಮಾ ನೋಡಿ ಖುಷಿ ಪಡುತ್ತೇವೋ ಇಲ್ಲವೋ..? ಮಕ್ಕಳು ಖುಷಿ ಪಡುವುದನ್ನು ನೋಡಿಯಾದರೂ ನಮಗೆ ಖುಷಿ ಆಗೇ ಆಗುತ್ತದೆ.