ಒಂದು ಮೊಟ್ಟೆಯ ಕಥೆ ಚಿತ್ರದ ಬಗ್ಗೆ ಸೂರ್ಯ ಕಿರಣ್ ಸಾಂಗತ್ಯದೊಂದಿಗೆ ಹಂಚಿಕೊಂಡಿದ್ದಾರೆ. ಒಂದು ಆರೋಗ್ಯಕರ ಚರ್ಚೆಗೆ ವೇದಿಕೆಯಾಗಲೆಂಬ ಸದಾಶಯದಿಂದ  ಇಲ್ಲಿ ಪ್ರಕಟಿಸುತ್ತಿದ್ದೇವೆ. ನೀವೂ ನಿಮ್ಮ ಆಭಿಪ್ರಾಯಗಳನ್ನು ಕಳಿಸಬಹುದು ವಾಟ್ಸಪ್-80951 92817.ಸೂಕ್ತವಾದವುಗಳನ್ನು ಪ್ರಕಟಿಸಲಾಗುವುದು.

ಬಾಹ್ಯ ಸೌಂದರ್ಯದ ಗೀಳು ಮತ್ತು ಕೀಳರಿಮೆ – ಇವುಗಳ ನಡುವೆ ಸಿಲುಕಿ ನಡೆಯುವ ತಾಕಲಾಟಗಳನ್ನು ಹಾಸ್ಯದ ಹೊನಲಿನಲ್ಲಿ ಕಾಣಿಸುವ ಯತ್ನ  “ಒಂದು ಮೊಟ್ಟೆಯ ಕಥೆ” ಚಿತ್ರದ್ದು. ಬಾಹ್ಯ ಸೌಂದರ್ಯಕ್ಕಿಂತ ಅಂತರಂಗದ ಸೌಂದರ್ಯವೇ ಮಿಗಿಲು ಎನ್ನುವ ಆದರ್ಶ ಎಲ್ಲರ ಬಾಯಲ್ಲಿ ಕೇಳಿಬರುತ್ತದೆಯಾದರೂ ವಾಸ್ತವದಲ್ಲಿ ಅದನ್ನು ಆಚರಿಸುವವರು ಅಪರೂಪದಲ್ಲಿ ಅಪರೂಪವೇ. ಆಕಾಶದಷ್ಟು ಮುಕ್ತ ಮನಸ್ಸುಳ್ಳವರೆಂದುಕೊಂಡವರಲ್ಲೂ ಬಾಹ್ಯ ಸೌಂದರ್ಯ ಮೋಹವು ಅದೆಲ್ಲಿಂದಲೋ ಸಣ್ಣ ಮೋಡವಾಗಿ ತೇಲಿಬರುತ್ತದೆ. ಸ್ವಾರಸ್ಯವೆಂದರೆ, ನೋಡಲು ಅಷ್ಟೇನೂ ಸುಂದರವಾಗಿಲ್ಲದೇ, ಅಪಹಾಸ್ಯ, ನಿರಾಕರಣೆಗೆ ಒಳಪಟ್ಟು ನೊಂದಿರುವ ಮನುಷ್ಯನೂ ಸಹ ಮತ್ತೊಬ್ಬರ ಹೊರಗಿನ ಅಂದದ ವ್ಯಾಮೋಹಿಯಾಗಿರಲು ಸಾಧ್ಯ. ಇದನ್ನು ನಂಬಲು ಕಷ್ಟವಾದರೂ ಹಲವರಲ್ಲಿ ಇಂತಹ ಪ್ರವೃತ್ತಿಯಿರುವುದು ಸುಳ್ಳಲ್ಲ. ಆಧುನಿಕ ಜಗತ್ತಿನ ಸಾಗೋಣವೇ ಹಾಗಿದೆಯೆನ್ನಬಹುದು. ಹೂರಣಕ್ಕಿಂತ ಓರಣಕ್ಕೇ ಪ್ರಾಶಸ್ತ್ಯ. ಅಂತರಂಗದ ಸತ್ವ ಹೇಗಾದರೂ ಇರಲಿ, ವ್ಯಕ್ತಿತ್ವ ಎಂಥದ್ದಾದರೂ ಇದ್ದುಕೊಳ್ಳಲಿ, ಹೊರರೂಪದಲ್ಲಿ ಯಾವ ಕೊಂಕೂ ಇರಬಾರದು, ಇದ್ದರೂ ಅದನ್ನು ಮರೆಮಾಚಿಕೊಳ್ಳಬೇಕು! ಪತ್ರಿಕೆಗಳಿಂದ ಮೊದಲುಗೊಂಡು, ದೂರದರ್ಶನ ಅಂತರ್ಜಾಲ, ಮೊಬೈಲುಗಳವರೆಗೂ ನಮ್ಮನ್ನು ಅತಿಲೋಕ ಸುಂದರ-ಸುಂದರಿಯರನ್ನಾಗಿಸುವ ಕಂಪನಿಗಳ ಜಾಹೀರಾತುಗಳ ಜಾಲವೇ ಇದೆ. ಒಂದಲ್ಲ ಒಂದು ರೀತಿಯಲ್ಲಿ ನಾವೆಲ್ಲರೂ ಈ ಜಾಲದೊಳಗೆ ಸಿಲುಕಿಕೊಳ್ಳುವವರೇ. ನೋಡಲು ಕಪ್ಪಾಗಿರುವವರಿಗೆ ಗೌರವರ್ಣ, ಕುಳ್ಳಗಿರುವವರಿಗೆ ನೀಳಕಾಯ, ಬೊಜ್ಜಿರುವವರಿಗೆ ಸಪೂರತನ, ಬೊಕ್ಕತಲೆಯವರಿಗೆ ಕೇಶಸಮೃದ್ಧಿ, ಮೈಮೇಲೆ ಕೂದಲು ಹೆಚ್ಚಾದವರಿಗೆ ನುಣುಪುದೊಗಲು ಹೀಗೆ ಗಂಡು ಹೆಣ್ಣೆಂಬ ಭೇದವಿಲ್ಲದೇ ಯಾವ ನ್ಯೂನತೆಯೂ ತಲೆ ತೂರಿಸದಂತೆ, ಯಾವ ವಯಸ್ಸಿನಲ್ಲೂ ತೊಳೆದ ಬಂಗಾರದಂತೆ ಕಾಯಸೌಷ್ಠವ ಹೊಂದುವುದೇ ಶ್ರೇಷ್ಠತೆಯೆನ್ನುವಂತೆ ಯಾವುದಾದರೊಂದು ಬಗೆಯ ವ್ಯಾಮೋಹದ ಅಂಟನ್ನು ಲೇಪಿಸಿ ಎಲ್ಲರನ್ನೂ ತನ್ನ ತೆಕ್ಕೆಯೊಳಗೆ ಹಾಕಿಕೊಳ್ಳುತ್ತದೆ ಈ ಜಾಲ.

ಚಿತ್ರಕಥೆಯ ಮೇಲ್ಪದರದಲ್ಲಿ ಜನಾರ್ದನ ತಾನು ಇಷ್ಟ ಪಡುವ ಹುಡುಗಿಯರನ್ನು ಒಲಿಸಿಕೊಳ್ಳಲು ಪಡುವ ಪ್ರಯತ್ನಗಳು ಹಾಗೂ ಅದರ ಪರಿಣಾಮವಾಗಿ ಮೂಡುವ ಪರಿಹಾಸವನ್ನು ಕಾಣಬಹುದು. ಯುವ ಪ್ರಾಧ್ಯಾಪಕನಾದ ಜನಾರ್ದನ ತಲೆಯಲ್ಲಿ ಕೂದಲಿಲ್ಲದ ಕಾರಣಕ್ಕೆ ತನ್ನ ಕಾಲೇಜಿನ ಪ್ರಾಂಶುಪಾಲನ ಕಣ್ಣಿಗೆ ವಿದ್ಯಾರ್ಥಿಗಳ ತಂದೆಯ ವಯಸ್ಸಿನವನಂತೆ ಕಾಣಿಸುತ್ತಾನೆ. ತರಗತಿಗಳಲ್ಲಿ ವಿದ್ಯಾರ್ಥಿಗಳಿಂದ ಅಪಹಾಸ್ಯಕ್ಕೀಡಾಗುತ್ತಾನೆ. ಮನೆಯವರು ತೋರಿಸಿದ ಯಾವ ಹೆಣ್ಣೂ ಅವನ ಬೊಕ್ಕತಲೆಯಿಂದಾಗಿ ಅವನನ್ನು ಒಪ್ಪದ ಕಾರಣಕ್ಕಾಗಿ ಕುಗ್ಗಿ ಹೋಗಿರುತ್ತಾನೆ.

ತಲೆಕೂದಲಿಲ್ಲವೆಂದ ಮಾತ್ರಕ್ಕೆ ನೋಡಿದ ಹುಡುಗಿಯರಿಗೆ ತಾನು ಬೇಡವಾಗುವುದನ್ನು ಅವನು ಒಪ್ಪಲಾರ. ಮಾತ್ರವಲ್ಲ, ಇದೆಲ್ಲದರ ಹೊರತಾಗಿಯೂ ಅವನು ನೋಡಲು ಸುಂದರವಾಗಿರುವ ಹುಡುಗಿಯನ್ನೇ ಕೈಹಿಡಿಯಬೇಕೆಂಬ ಅವ್ಯಕ್ತ ಬಯಕೆಯನ್ನೂ ಹತ್ತಿಕ್ಕಲಾರ!  ಇದು ಲೋಕರೂಢಿ. ಮದುವೆಯಾಗಬೇಕೆಂದಿರುವ ಬಹುತೇಕ ಹುಡುಗರ ರೀತಿ. ಆದರೆ ಜನಾರ್ದನ ತಾನು ನಿರಂತರವಾಗಿ ಎದುರಿಸುವ ತಿರಸ್ಕಾರವನ್ನು ಪ್ರತಿರೋಧಿಸಲು ಹೂಡುವ ಉಪಾಯಗಳು, ಹಿಡಿಯುವ ಹಾದಿ, ಇವೆಲ್ಲವುಗಳ ಪರಿಣಾಮವಾಗಿ ಪಡುವ ಪರಿಪಾಟಲು ಹಾಸ್ಯಾಸ್ಪದ.  ಸುಂದರ ಯುವತಿಯನ್ನೇ ವರಿಸಬೇಕೆಂಬ ಅವನ ಸುಪ್ತ ಹಂಬಲ ಕೆಲವು ಬಾಲಿಶ ಯತ್ನಗಳನ್ನು ಕೈಗೊಳ್ಳುವಂತೆ ಮಾಡುತ್ತದೆ.

ನಿತ್ಯಜೀವನದಲ್ಲಿ ಕಾಣಸಿಗುವ ಇಂತಹ ಘಟನೆಗಳನ್ನು ತೆರೆಯ ಮೇಲೆ ಜೋಡಿಸುತ್ತ ಚಿತ್ರಕಥೆಯು ತನ್ನ ಒಳ ಪದರದಲ್ಲಿ ಕೀಳರಿಮೆಯ ಸಂಕೀರ್ಣತೆಯನ್ನೂ ಬಿಂಬಿಸುತ್ತದೆ. ಎಲ್ಲರಿಂದಲೂ ಗೇಲಿಯಾಗುವ ಜನಾರ್ದನನಲ್ಲಿ ಸಹಜವಾಗಿಯೇ ಕೀಳರಿಮೆ ಸ್ಥಾಪಿತವಾಗಿರುತ್ತದೆ. ತನ್ನನು ತಾನು ಇರುವಂತೆಯೇ ಒಪ್ಪಿಕೊಳ್ಳದ ಅವನು ಎಲ್ಲರೂ ತನ್ನನ್ನು ಇಷ್ಟ ಪಡಲಿ ಎನ್ನುವ ಮಟ್ಟಕ್ಕೆ ಸ್ವಾನುಕಂಪಿಯಾಗಿರುತ್ತಾನೆ. ಸನ್ಯಾಸಿಯಾಗಲು ಹೊರಡುವ ಅವನ ಯತ್ನವು ಈ ವಿರೋಧಾಭಾಸವನ್ನು ಮತ್ತೊಂದು ಕೋನದಿಂದ ಚಿತ್ರಿಸುತ್ತದೆ. ಕಾಲೇಜಿನಲ್ಲಿ ಪ್ಯೂನ್ ಹುದ್ದೆಯಲ್ಲಿರುವ ಶ್ರೀನಿವಾಸನ ವಿವಾಹದ ಹಿಂದಿನ ಪ್ರೇಮಕಥೆಯನ್ನು ಕೇಳಿ ಅದರಂತೆಯೆ ತಾನೂ ಪ್ರಯತ್ನಿಸಿದರೆ ಅದೇ ಕಾಲೇಜಿನ ನೀಳಕಾಯದ ಎಕನಾಮಿಕ್ಸ್ ಪ್ರಾಧ್ಯಾಪಕಿಯನ್ನು ಒಲಿಸಿಕೊಳ್ಳ ಬಹುದೆಂದು ಅವನು ಕಲ್ಪಿಸಿಕೊಳ್ಳುತ್ತಾನೆ.

ಮೇಲ್ನೋಟಕ್ಕೆ ಚೆನ್ನಾಗಿಲ್ಲದ ತನ್ನನ್ನು ಯಾರೂ ನಿರಾಕರಿಸಬಾರದೆಂದು ಮೌನವಾಗಿ ಅಂಗಲಾಚಿಕೊಳ್ಳುವ ಪ್ರವೃತ್ತಿಯ ಜನಾರ್ದನನು, ಶ್ರೀನಿವಾಸನ ಪ್ರೇಮಕಥೆಯನ್ನು ಮಾತ್ರ ಮೇಲ್ಸ್ತರದಲ್ಲಿ ಗ್ರಹಿಸಿರುತ್ತಾನೆ! ಹೇಗಾದರೊಂದು ರೀತಿಯಲ್ಲಿ ಹೊರಜಗತ್ತಿನಿಂದ ಅಂಗೀಕೃತಗೊಳ್ಳಬೇಕೆನ್ನುವ ತಹತಹ, ತುಡಿತಗಳು ಅವನ ಕೀಳರಿಮೆಯ ವಿವಿಧ ಮುಖಗಳು. ತಲೆಕೂದಲು ಪುನಃ ಬೆಳೆಯುವಂತೆ ಚಿಕಿತ್ಸೆ ನೀಡುವ ಕಂಪನಿಯೊಂದು ಸುಂದರ ಯುವತಿಯ ಮೂಲಕ ಅವನಂತೆಯೇ ಬೋಳುತಲೆಯಿಂದ ಕೀಳರಿಮೆಗೊಳಗಾಗಿರುವವರೊಡನೆ ಪ್ರೇಮದ ಆಟ ಹೂಡುವ ತಂತ್ರ ಕೊಂಚ ಅವಾಸ್ತವಿಕವೆನಿಸಿದರೂ ಚಿತ್ರಕಥೆಗೆ ಪೂರಕವಾಗಿಯೇ ತೋರುತ್ತದೆ. ಮೈಯ್ಯಲ್ಲಿ ಸಣ್ಣ ಓರೆಕೋರೆಗಳಿದ್ದರೂ ಬದುಕೇ ಬರಡು ಬಯಲಾದಂತೆ ಎನ್ನುವ ಭೀತಿ ಹುಟ್ಟಿಸಿ ಜನರಲ್ಲಿನ ಅಂದ ಚೆಂದದ ವ್ಯಾಮೋಹಗಳನ್ನೇ ಬಂಡವಾಳವಾಗಿರಿಸಿಕೊಂಡು ಹುಸಿ ಆಶ್ವಾಸನೆ, ಭರವಸೆಗಳನ್ನೇ ಸರಕಾಗಿಸಿಕೊಂಡು ಬೃಹತ್ತಾಗಿ ಬೆಳೆದಿರುವ ಸೌಂದರ್ಯ ವರ್ಧಕ ಉತ್ಪನ್ನ-ಸೇವೆಗಳ ಉದ್ದಿಮೆಯನ್ನು ನೋಡಿದರೆ ಮುಂದೊಂದು ದಿನ ಇಂತಹ ಕಂಪನಿಗಳು ಹಾಗೆ ಮಾಡಿದರೂ ಮಾಡಬಹುದು ಎಂದೆನಿಸದಿರದು.  

ಇಷ್ಟೆಲ್ಲ ತಾಕಲಾಟಗಳ ನಡುವೆ ತನ್ನನ್ನು ಮದುವೆಯಾಗಲು ಒಪ್ಪಿರುವ ಹುಡುಗಿ ಸರಳ ದಪ್ಪಗಿದ್ದಾಳೆಂದು ಅವಳನ್ನು ತಿರಸ್ಕರಿಸುವಲ್ಲಿಗೆ ಜನಾರ್ದನನ ಕೀಳರಿಮೆಯ ಮತ್ತೊಂದು ಮುಖ ಅನಾವರಣಗೊಳ್ಳುತ್ತದೆ. ಅದು ಅವನೊಳಗಿನ ಹುಳುಕುಗಳನ್ನೆಲ್ಲ ಮಸುಕಾಗಿಸಿ ಅಪ್ಸರಕನ್ಯೆಯಂಥವಳನ್ನೇ ಮದುವೆಯಾಗಬೇಕೆನ್ನುವ ಹಠಕ್ಕೆ ಬೀಳುವಂತೆ ಮಾಡಿಸುತ್ತದೆ.

ಸ್ವಲ್ಪ ದಪ್ಪವಿರುವ ಕಾರಣಕ್ಕೆ ಮದುವೆಯಾಗದೇ ಉಳಿದ ಸರಳ ಜನಾರ್ದನನನ್ನು ಒಪ್ಪುವುದು ಅವನಿಗಾಗಿ ಅಲ್ಲ ಅಥವಾ ಯಾವ ಪ್ರೇಮಾಂಕುರದಿಂದಲೂ ಅಲ್ಲ. ದಪ್ಪವಿರುವುದರಿಂದಲೇ ಹಲವಾರು ಹುಡುಗರಿಂದ ತಿರಸ್ಕೃತಳಾದ ಆಕೆಗೂ ಕೀಳರಿಮೆ. ಅಷ್ಟಾಗಿಯೂ ಮೊದಲ ಭೇಟಿಯಲ್ಲಿ ಮೊಟ್ಟೆತಲೆಯವನೆಂದು ಜನಾರ್ದನನ ಬಗ್ಗೆ ನಿರಾಸಕ್ತಿ ತಾಳುವ ಸರಳ, ತಾನೂ ಅಂಥದ್ದೇ ಮತ್ತೊಂದು ಕಾರಣಕ್ಕೆ ಮದುವೆಯಾಗದೇ ಉಳಿದವಳೆನ್ನುವುದನ್ನು ಮರೆತಿರುವಳು. ಆದರೆ ಮಗನ ಬೋಳುತಲೆಯಿಂದ ಸೊಸೆ ಸಿಗಲಾರದೇ ಚಿಂತಾಕ್ರಾಂತಳಾಗಿದ್ದ ಜನಾರ್ದನನ ತಾಯಿ ತನ್ನ ಅಂದ-ಚೆಂದಗಳನ್ನು ಶ್ಲಾಘಿಸಲು ಸರಳ ಕರಗಿಬಿಡುವಳು. ಚಿತ್ರದಲ್ಲಿನ ಈ ಪ್ರಕರಣವಂತೂ ಇಂದಿನ ಯುವಕ-ಯುವತಿಯರ ಸಂಕುಚಿತ ಪ್ರವೃತ್ತಿಗಳು, ತಂದೆ-ತಾಯಿಯರ ಅವಸರ-ಆತುರಗಳು, ವಧು-ವರಾನ್ವೇಷಣೆಗಳ ಔಪಚಾರಿಕತೆಯ ಕೃತ್ರಿಮತೆ, ಅದರ ಹಿಂದಿನ ಕಸರತ್ತು, ಯಾತನೆಗಳನ್ನು ಹಾಗೂ ಇಡೀ ಪ್ರಕ್ರಿಯೆಯ ಶೈಥಿಲ್ಯವನ್ನು ಪ್ರಹಸನದಂತೆ ಬಿಂಬಿಸಿದೆ. 

ಸಮಕಾಲೀನ ಸಮಸ್ಯೆ – ಪರಿಹಾರೋಪಾಯಗಳ ವಸ್ತುವಿದ್ದೂ ಅವಾವುವನ್ನೂ ಉಪದೇಶವನ್ನಾಗಿಸದೇ ತನ್ನ ನಿರೂಪಣೆಯ ಉದ್ದಗಲಕ್ಕೂ ಹಾಸ್ಯವನ್ನೇ ಬಳಸಿಕೊಂಡು ರಂಜಿಸಿರುವುದು ಇಡೀ ಚಿತ್ರದ ಹೆಗ್ಗಳಿಕೆ. ಕರಾವಳಿ ಕನ್ನಡದ ಸೊಗಸು-ಸೊಗಡುಗಳನ್ನುಅಚ್ಚುಕಟ್ಟಾಗಿ ದುಡಿಸಿಕೊಳ್ಳಲಾಗಿದೆ. ಭಾಷೆ ಮಾತ್ರವಲ್ಲದೇ ಅಲ್ಲಲ್ಲಿ ಕರಾವಳಿಯ ಜನಜೀವನ, ರೂಢಿಗಳ ಚಿತ್ರಣವೂ ಇದೆ.

ಬಳುಕಿನ ಬಣ್ಣದ ವ್ಯಾಪಾರದಲ್ಲಿ ನೆಲ ಒರೆಸುವ ಬಟ್ಟೆಯೂ ಮಾರುಕಟ್ಟೆಯ ಸರಕಾಗಿರುವ ಕಾಲಘಟ್ಟದಲ್ಲಿ ನಿಜವಾದ ಸೌಂದರ್ಯ ಪ್ರಜ್ಞೆ ಒಂದು ಆದರ್ಶವಾಗಿ, ಕೇವಲ ಸಂಶೋಧನೆಯ ಪ್ರಬಂಧಗಳಿಗೆ ಸೀಮಿತವಾಗಿರುವಾಗ “ಒಂದು ಮೊಟ್ಟೆಯ ಕಥೆ” ಚಿತ್ರವು ಅನಿವಾರ್ಯತೆಯನ್ನು ಅಂಗೀಕರಿಸುತ್ತಾ ಬದುಕಿನಲ್ಲಿ ದೊರಕಿದ್ದರ ಜೊತೆಗೆ ಹೊಂದಿಕೊಳ್ಳುವ ಬಗೆಯನ್ನು ಕಾಣಿಸುತ್ತಾ ವಿವಾಹಾರ್ಥಿಗಳಿಗೆಲ್ಲ, ಜೀವನ ಸಂಗಾತಿಯ ಅನ್ವೇಷಣೆಯಲ್ಲಿರುವವರಿಗೆಲ್ಲ ಸರಳ ಸೌಂದರ್ಯ ಮೀಮಾಂಸೆಯ ದಿಗ್ದರ್ಶಕ ಕಥಾನಕವಾಗಿ ಮೂಡಿಬಂದಿದೆ. ಅಭಿನಯ ಹಾಗೂ ತಾಂತ್ರಿಕ ಅಂಶಗಳಿಂದಲೂ ಚಿತ್ರ ಉತ್ಕೃಷ್ಟವೆನಿಸುತ್ತದೆ. ಹೀಗೆ ಕಂಡಾಗ ರಾಜ್ ಶೆಟ್ಟಿಯವರ ಚೊಚ್ಚಲ ಪ್ರಯತ್ನವು ವಸ್ತು ಹಾಗೂ ನಿರೂಪಣೆಯಲ್ಲಿನ ಹೊಸತನದಿಂದ, ಪ್ರಯೋಗಾತ್ಮಕ ಗುಣಗಳಿಂದ ಅಭಿನಂದನಾರ್ಹ ಹಾಗೂ ಶ್ಲಾಘನೀಯ.