ಕುಪ್ಪಳಿಯಲ್ಲಿ ಜುಲೈ 1-2 ರಂದು ನಡೆದ ಸಾಂಗತ್ಯದ ಹದಿನಾರನೇ ಶಿಬಿರ ವಿಶಿಷ್ಟವಾಗಿತ್ತು.

ಹೊರಗೆ ಆಗಾಗ್ಗೆ ಬರುತ್ತಿದ್ದ ಮಳೆ, ಸುತ್ತಲೂ ಹಸಿರು, ತಣ್ಣಗೆ ಬೀಸುತ್ತಿದ್ದ ಗಾಳಿ, ಒಳಗೆ ಸಿನಿಮಾ..ಹೊಸ ಅನುಭವವನ್ನೇ ನೀಡಿದ ಶಿಬಿರವನ್ನು ಸಂಪನ್ಮೂಲ ವ್ಯಕ್ತಿಗಳಾಗಿ ಮುನ್ನಡೆಸಿದವರು ಖ್ಯಾತ ಸಿನಿಮಾ ಪರಿಣಿತ ಮತ್ತು ಬೆಂಗಳೂರು ಸಿನಿಮೋತ್ಸವ ಕಲಾ ನಿರ್ದೇಶಕರಾದ ಎನ್. ವಿದ್ಯಾಶಂಕರ್ ಅವರು.

ಇತ್ತೀಚೆಗೆ ಕುಪ್ಪಳಿಯಲ್ಲಿ ನಡೆದ ಸಿನಿಮೋತ್ಸವ (ಸಿನಿ ಸಮಿಟ್) ಕ್ಕೆ ಚಾಲನೆ ನೀಡಿದ ಎನ್. ವಿದ್ಯಾಶಂಕರ್, ಸಿನಿಮಾ ಎನ್ನುವುದು ಸಂಪೂರ್ಣ ಭಿನ್ನವಾಗಿರುವ ಮಾಧ್ಯಮ. ಆದ್ದರಿಂದ ಸಾಹಿತ್ಯ, ಸಂಗೀತದಂತೆ ನೋಡಲು ಹೋಗಬೇಡಿ. ಇದು ಹಲವು ಕಲೆಗಳ ಸಂಗಮ. ನಮ್ಮ ದೇಶದಲ್ಲಿ ಇನ್ನೂ ಈಗ ಸಿನಿಮಾ ಕಾಲ ಆರಂಭವಾಗುತ್ತಿದೆ’ ಎಂದರು. ಸಿನಿಮಾವನ್ನು ನೋಡಿ, ಅರ್ಥ ಮಾಡಿಕೊಳ್ಳಿ, ಬಳಿಕ ವಿಶ್ಲೇಷಣೆ ಮಾಡಿ ಎಂಬುದು ಅವರ ಅಭಿಮತ. ಅವರ ಇನ್ನಷ್ಟು ಮಾತು :

  • ಕಥೆಯಿಂದ ಸಿನಿಮಾವನ್ನು ನೋಡುವುದಕ್ಕಿಂತ, ಕಥೆಯ ನಿರೂಪಣೆ ಬಳಸಿರುವ ಉಪಮೆಗಳು, ಅದು ಕೊಡಬಲ್ಲುದಾದ ವಿಸ್ತರಣಾ ಅರ್ಥಗಳು, ಹುಟ್ಟಿಸಬಹುದಾದ ಹೊಸ ಸಾಧ್ಯತೆಗಳನ್ನು ಗುರುತಿಸಬೇಕು. ಅದರ ಮೂಲಕವೇ ಸಿನಿಮಾದೊಳಗೆ ಪ್ರವೇಶಿಸಬೇಕು. ಇಂಥ ಶಿಬಿರಗಳು ಆ ನೆಲೆಯಲ್ಲಿ ಹೆಚ್ಚು ಪೂರಕವಾಗುತ್ತವೆ.
  • ಒಂದು ಸಿನಿಮಾದಲ್ಲಿ ಬೆಳವಣಿಗೆಯೆಂಬುದು ಇರಬೇಕು. ಕೇವಲ ನಿರೂಪಣೆ ಅಥವಾ ಒಂದು ಘಟನೆಯ ವಿವರ ಸಿನಿಮಾವಾಗದು. ಸಂಬಂಧಪಟ್ಟ ಸಿನಿಮಾ ನೋಡಿದ ಮೇಲೆ ಪ್ರೇಕ್ಷಕನಿಗೆ ಏನಾದರೂ ಸಿಗಬೇಕು. ಅವನನ್ನು ಹೊಸ ಚಿಂತನೆಯತ್ತ ಹೊರಳಿಸುವ ಅಥವಾ ಮತ್ತೊಂದು ಹೊಸ ಸಾಧ್ಯತೆಯತ್ತ ಮುಖ ಮಾಡಿಸುವಂತಿರಬೇಕು. ಒಳ್ಳೆಯ ಸಿನಿಮಾಗಳಿಗೆ ಈ ಎಲ್ಲ ಶಕ್ತಿ ಇದೆ. ಅದು ನಮ್ಮೊಳಗೇ ಬೆಳೆಯುತ್ತದೆ.
  • ಸಿನಿಮಾದಲ್ಲಿ ನೋಡಬೇಕು ಮತ್ತು ನೋಡಬಹುದು ಎಂಬ ಎರಡು ಸಾಧ್ಯತೆಳಿರುತ್ತವೆ. ನೋಡಬಹುದು ಎಂಬುದನ್ನು ನೋಡಬೇಕು ಎಂಬ ನೆಲೆಗೆ ಪ್ರೇಕ್ಷಕರು ರೂಪಾಂತರಗೊಳ್ಳಬೇಕು. ಅದು ನಿಜವಾದ ಬೆಳವಣಿಗೆ.
  • ಒಂದು ಸಿನೆಮಾ ನಮಗೆ ಏನನ್ನಾದರೂ ಕೊಡಬೇಕು. ವೃಥಾ ಮನರಂಜನೆಯಷ್ಟೇ ಸಾಲದು ; ಸಿನಿಮಾ ಮುಗಿದ ಮೇಲೆ ನಮ್ಮನ್ನೂ ಬೆಳೆಸುವ ಶಕ್ತಿ ಒಳ್ಳೆ ಸಿನಿಮಾಕ್ಕಿರುತ್ತದೆ.
  • ಶುಭ್ರ ಪ್ರದರ್ಶನ
  • ಎಂ. ರಾಮಮೂರ್ತಿ ನಿರ್ದೇಶನದ ‘ಶುಭ್ರ’ ಚಲನಚಿತ್ರವನ್ನು ವಿಶೇಷ ಚಿತ್ರವನ್ನಾಗಿ ಪ್ರದರ್ಶಿಸಲಾಯಿತು. ನಂತರ ನಡೆದ ಸಂವಾದದಲ್ಲಿ ರಾಮಮೂರ್ತಿಯವರು, ಶಿಬಿರಾರ್ಥಿಗಳ ಹ ಲವು ಪ್ರಶ್ನೆಗಳಿಗೆ ಉತ್ತರಿಸಿದರು. ಈ ಸಿನಿಮಾ ಅಲ್ಲದೇ ಇರಾನಿ ಚಿತ್ರ ಸಾಂಗ್ ಆಫ್ ಸ್ಪ್ಯಾರೋ ಸೇರಿದಂತೆ ಕೆಲವು ಭಾರತೀಯ ಭಾಷೆ ಚಿತ್ರಗಳನ್ನು ಪ್ರದರ್ಶಿಸಲಾಯಿತು. ಪ್ರತಿ ಚಿತ್ರದ ನಂತರ ನಡೆದ ಚರ್ಚೆಯಲ್ಲಿ ಶಿಬಿರಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು. ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.
  • ಮುಂದಿನ ಶಿಬಿರವು ಡಿಸೆಂಬರ್ ಎರಡನೇ ವಾರದಲ್ಲಿ ನಡೆಯುವ ಸಂಭವವಿದೆ.