ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಇರಾನಿನ ಡಾಟರ್ ಚಿತ್ರದ ನಿರ್ದೇಶಕ ರೆಜಾ ಮೀರ್ಕಾರಿಮಿ ಅವರಿಗೆ ನೀಡಲಾಯಿತು.
ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಇರಾನಿನ ಡಾಟರ್ ಚಿತ್ರದ ನಿರ್ದೇಶಕ ರೆಜಾ ಮೀರ್ಕಾರಿಮಿ ಅವರಿಗೆ ನೀಡಲಾಯಿತು.

ಸಾಂಗತ್ಯ ಪ್ರತಿನಿಧಿಯಿಂದ

ಪಣಜಿ : ಒಂಬತ್ತು ದಿನಗಳ 47 ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (IಈಈI 2016) ಸೋಮವಾರ ವರ್ಣರಂಜಿತವಾಗಿ ಸಮಾರೋಪಗೊಂಡಿತು. ಅತ್ಯುತ್ತಮ ಚಿತ್ರವಾಗಿ ಇರಾನಿನ ‘ಡಾಟರ್’ ಆಯ್ಕೆಯಾಯಿತು.

ಇಡೀ ಉತ್ಸವದಲ್ಲಿ 80 ದೇಶಗಳ ಸುಮಾರು 300 ಚಲನಚಿತ್ರಗಳು ಪ್ರದರ್ಶಿತವಾಗಿದ್ದವು. ಸಮಾರೋಪ ಸಮಾರಂಭದಲ್ಲಿ ವಿವಿಧ ಪ್ರಶಸ್ತಿಗಳನ್ನು ವಿತರಿಸಲಾಯಿತು. ಕನ್ನಡ ಚಿತ್ರರಂಗಕ್ಕೆ ಬೇಸರದ ಸಂಗತಿಯೆಂದರೆ, ಯುನೆಸ್ಕೊ ಗಾಂಧಿ ಸ್ಮಾರಕ ಪ್ರಶಸ್ತಿ ಹಾಗೂ ಚೊಚ್ಚಲ ಚಿತ್ರದ ನಿರ್ದೇಶಕರ ಪ್ರಶಸ್ತಿ ಸ್ಪರ್ಧೆಯಲ್ಲಿ ಟಿ.ಎಸ್. ನಾಗಾಭರಣರ ‘ಅಲ್ಲಮ’ ಹಾಗೂ ಅನನ್ಯ ಕಾಸರವಳ್ಳಿಯವರ ‘ಹರಿಕಥಾ ಪ್ರಸಂಗ’ ಭಾಗವಹಿಸಿದ್ದವು. ಎರಡೂ ಪ್ರಶಸ್ತಿಗೆ ಆಯ್ಕೆಯಾಗುವಲ್ಲಿ ವಿಫಲವಾಗಿವೆ. ಇದಲ್ಲದೇ ಈ ಚಿತ್ರೋತ್ಸವದಲ್ಲಿ ಪವನ್ ಕುಮಾರ್ ರ ‘ಯೂ ಟರ್ನ್’ ಚಿತ್ರ ಪ್ರದರ್ಶನಗೊಂಡಿತ್ತು.

ವಿವಿಧ ಪ್ರಶಸ್ತಿ ಪ್ರದಾನ
ಮೂರು ಸ್ಪರ್ಧಾತ್ಮಕ ವಿಭಾಗದಲ್ಲಿ ಪ್ರಶಸ್ತಿಗೆ ಚಿತ್ರಗಳು ಆಯ್ಕೆಯಾದರೆ, ಉಳಿದ ಇತರೆ ಪ್ರಶಸ್ತಿಗಳನ್ನು ಅತ್ಯುತ್ತಮ ನಟ, ನಟಿ ಇತರೆ ವಿಭಾಗದಲ್ಲಿ ಅರ್ಹರಿಗೆ ವಿತರಿಸಿ ಗೌರವಿಸಲಾಯಿತು. ಗೋವಾದ ರಾಜ್ಯಪಾಲರಾದ ಮೃದುಲಾ ಸಿನ್ಹಾ, ಕೇಂದ್ರ ವಾರ್ತಾ ಮತ್ತು ಪ್ರಚಾರ ಖಾತೆ ರಾಜ್ಯ ಸಚಿವ ರಾಜ್ಯವರ್ಧನ್ ರಾಥೋಡ್, ಚಿತ್ರ ನಿರ್ದೇಶಕ ಎಸ್. ಎಸ್. ರಾಜಮೌಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅತ್ಯುತ್ತಮ ಚಿತ್ರವಾಗಿ ಡಾಟರ್ ಆಯ್ಕೆ
ಪ್ರತಿ ವರ್ಷ ನೀಡುವ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ರೇಜಾ ಮಿರ್ಕಾಮಿಯವರ ನಿರ್ದೇಶನದ ‘ಡಾಟರ್’ ಚಲನಚಿತ್ರ ಆಯ್ಕೆಯಾಯಿತು. 40 ಲಕ್ಷ ರೂ. ಮತ್ತು ಪ್ರಮಾಣಪತ್ರ, ಗೋಲ್ಡನ್ ಪೀಕಾಕ್ ಪಾರಿತೋಷಕವನ್ನು ನಿರ್ದೇಶಕರಿಗೆ ನೀಡಿ ಗೌರವಿಸಲಾಯಿತು.

ಅತ್ಯುತ್ತಮ ನಿರ್ದೇಶನಕ್ಕೆ ನೀಡಲಾಗುವ ಪ್ರಶಸ್ತಿ ‘ರೌಫ್’ ಚಿತ್ರ ನಿರ್ದೇಶಕರಾದ ಬರೀಸ್ ಕಾಯ ಹಾಗೂ ಸೋನರ್ ಕೇನರ್ ಅವರ ಪಾಲಾಯಿತು. 7.50 ಲಕ್ಷ ರೂ., ಪ್ರಮಾಣಪತ್ರ ಹಾಗೂ ಸಿಲ್ವರ್ ಪೀಕಾಕ್ ಪಾರಿತೋಷಕ ನೀಡಿ ಗೌರವಿಸಲಾಯಿತು.

ಅತ್ಯುತ್ತಮ ನಟ ಪ್ರಶಸ್ತಿ ‘ಡಾಟರ್’ ಚಿತ್ರದಲ್ಲಿನ ನಟನೆಗೆ ಫರ್ಹಾದ್ ಅಸ್ಲಾನಿ ಪಡೆದುಕೊಡರೆ, ಅತ್ಯುತ್ತಮ ನಟಿ ಪ್ರಶಸ್ತಿ ‘ಮೆಲ್ಲೊ ಮಡ್’ ಚಿತ್ರದ ಎಲಿನಾ ವಾಸ್ಕಾ ಅವರ ಪಾಲಾಯಿತು. ಈ ಪ್ರಶಸ್ತಿ 10 ಲಕ್ಷ ರೂ, ಪ್ರಮಾಣಪತ್ರ ಹಾಗೂ ಸಿಲ್ವರ್ ಪೀಕಾಕ್ ಪಾರಿತೋಷಕವನ್ನು ಒಳಗೊಂಡಿದೆ.

ವಿಶೇಷ ತೀರ್ಪುಗಾರರ ಪ್ರಶಸ್ತಿ
ಈ ಪ್ರಶಸ್ತಿಗೆ ದಕ್ಷಿಣ ಕೊರಿಯಾದ ಲೀ ಜೂನ್ ಇಕ್ ನಿರ್ದೇಶನದ ‘ದಿ ಥ್ರೋನ್’ ಚಿತ್ರ ಆಯ್ಕೆಯಾಯಿತು. ಹದಿನೈದು ಲಕ್ಷ ರೂ., ಪ್ರಮಾಣ ಪತ್ರ ಹಾಗೂ ಸಿಲ್ವರ್ ಪೀಕಾಕ್ ಪಾರಿತೋಷಕವನ್ನು ಒಳಗೊಂಡಿದೆ.

ಚೊಚ್ಚಲ ಚಿತ್ರ ಪ್ರಶಸ್ತಿ
ಚೊಚ್ಚಲ ಚಿತ್ರ ನಿರ್ದೇಶಕರ ಪ್ರಶಸ್ತಿ ಈ ಬಾರಿ ಚಿಲಿ ದೇಶದ ‘ರಾರಾ’ ಚಿತ್ರದ ನಿರ್ದೇಶಕಿ ಪೀಪಾ ಸಾನ್ ಮಾರ್ಟಿನ್ ಅವರಿಗೆ ಲಭಿಸಿತು. ಹತ್ತು ಲಕ್ಷ ರೂ, ಪ್ರಮಾಣ ಪತ್ರ ಹಾಗೂ ಸಿಲ್ವರ್ ಪೀಕಾಕ್ ಪಾರಿತೋಷಕವನ್ನು ಒಳಗೊಂಡಿದೆ.

ಯುನೆಸ್ಕೊ ಗಾಂಧಿ ಸ್ಮಾರಕ ಪ್ರಶಸ್ತಿ
ಶಾಂತಿ, ಸಹಬಾಳ್ವೆ ಹಾಗೂ ಅಹಿಂಸೆ ತತ್ವಗಳನ್ನು ಪ್ರತಿಪಾದಿಸುವ ಚಿತ್ರಗಳಿಗೆ ನೀಡಲಾಗುವ ಐಸಿಎಫ್ ಟಿ ಯುನೆಸ್ಕೋ ಗಾಂಧಿ ಸ್ಮಾರಕ ಪ್ರಶಸ್ತಿ ಟರ್ಕಿಯ ‘ಕೋಲ್ಡ್ ಆಫ್ ಕಲಂದರ್’ ಚಿತ್ರದ ಪಾಲಾಯಿತು. ಇದರ ನಿರ್ದೇಶಕ ಮುಸ್ತಾಫ ಕರಾ ಅವರಿಗೆ ಪ್ರಶಸ್ತಿ ವಿತರಿಸಿ ಗೌರವಿಸಲಾಯಿತು.