ಗೋವಾ ಚಿತ್ರೋತ್ಸವದಲ್ಲಿ ಗುರುವಾರ ಪ್ರದರ್ಶನಗೊಂಡ ಹರಿಕಥಾ ಪ್ರಸಂಗ ಚಿತ್ರದ ಸಂದರ್ಭದಲ್ಲಿ ಸ್ಮರಣಿಕೆ ಸ್ವೀಕರಿಸಿದ ನಿರ್ದೇಶಕಿ ಅನನ್ಯ ಕಾಸರವಳ್ಳಿ, ಚಿತ್ರ ನಿರ್ಮಾಪಕ ಬಸಂತ್ ಕುಮಾರ್ ಪಾಟೀಲ್ ಮತ್ತು ಚಿತ್ರ ತಂಡ.
ಗೋವಾ ಚಿತ್ರೋತ್ಸವದಲ್ಲಿ ಗುರುವಾರ ಪ್ರದರ್ಶನಗೊಂಡ ಹರಿಕಥಾ ಪ್ರಸಂಗ ಚಿತ್ರದ ಸಂದರ್ಭದಲ್ಲಿ ಸ್ಮರಣಿಕೆ ಸ್ವೀಕರಿಸಿದ ನಿರ್ದೇಶಕಿ ಅನನ್ಯ ಕಾಸರವಳ್ಳಿ, ಚಿತ್ರ ನಿರ್ಮಾಪಕ ಬಸಂತ್ ಕುಮಾರ್ ಪಾಟೀಲ್ ಮತ್ತು ಚಿತ್ರ ತಂಡ.

ಪಣಜಿ : ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ(ಇಫಿ) ನಿಧಾನವಾಗಿ ಉತ್ಸಾಹ ಕಳೆದುಕೊಳ್ಳುತ್ತಿರುವಂತೆ ಭಾಸವಾಗುತ್ತಿದೆ.

ಈ ಬಾರಿ ಹಲವು ಕಾರಣಗಳಿಂದ ಕಳೆದ ಬಾರಿಗಿಂತ ಕಡಿಮೆ ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಹಿಂದಿನ ಬಾರಿಯೂ ಸುಮಾರು 7 ಸಾವಿರದಷ್ಟು ಪ್ರತಿನಿಧಿಗಳು ಎಂದು ಹೇಳಲಾಗಿತ್ತು. ಈ ಬಾರಿ ಆ ಸಂಖ್ಯೆ 5 ಸಾವಿರಕ್ಕಿಂತ ಹೆಚ್ಚು ಸಂಖ್ಯೆ ಕಾಣುತ್ತಿಲ್ಲ. ಆದರೆ ಉತ್ಸವ  ಸಮಿತಿಯವರು ಸುಮಾರು 7, 500 ಮಂದಿ ಭಾಗವಹಿಸಿದ್ದಾರೆ ಎಂದು ಹೇಳುತ್ತಿದ್ದಾರೆ. ಕೇಂದ್ರ ಸರಕಾರದ 500 ರೂ. ಹಾಗೂ 1000 ರೂ. ಗಳ ನೋಟುಗಳ ಹಿಂದೆಗೆದುಕೊಂಡಿರುವುದೂ ಸ್ವಲ್ಪ ಮಟ್ಟಿನ ಪರಿಣಾಮ ಬೀರಿದೆ. 2014 ರಲ್ಲಿ ಸುಮಾರು 11 ಸಾವಿರ ಮಂದಿ ನೋಂದಾಯಿಸಿದ್ದರು.

2014 ರಲ್ಲಿ ಗೋವಾವನ್ನು ಚಿತ್ರೋತ್ಸವಕ್ಕೆ ಕಾಯಂ ಕೇಂದ್ರವನ್ನಾಗಿ ಘೋಷಿಸಲಾಗಿತ್ತು. ತರುವಾಯ ಉತ್ಸವದ ಸಂಭ್ರಮವೇ ಕಡಿಮೆಯಾದಂತೆ ತೋರಿ ಬರುತ್ತಿದೆ. ಉತ್ಸವವು ದಿನೇ ದಿನೆ ನೌಕರಷಾಹಿಗೆ ಒಳಗೊಳ್ಳುತ್ತಿರುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ.

ಅತ್ಯುತ್ತಮ ಸಿನಿಮಾಗಳ ಆಯ್ಕೆ

ಸಂತೋಷದ ಸಂಗತಿಯೆಂದರೆ ಸಿನೆಮಾಗಳ ಆಯ್ಕೆಯಲ್ಲಿ ಕಳೆದ ವರ್ಷಕ್ಕಿಂತ ಉತ್ತಮವಾಗಿದೆ. ಹಲವಾರು ಒಳ್ಳೆ ಸಿನೆಮಾಗಳು ಈ ಬಾರಿ ಪ್ರದರ್ಶನಗೊಳ್ಳುತ್ತಿವೆ.

ಇದನ್ನು ಪುಷ್ಟೀಕರಿಸುವ ರಾಮ್ ಗೋಪಾಲ್, “ನಾನು ಪ್ರತಿವರ್ಷವೂ ಈ ಉತ್ಸವಕ್ಕೆ ಬರುತ್ತೇನೆ. ಕಳೆದ ವರ್ಷವೂ ಬಂದಿದ್ದೆ. ಆದರೆ ಸಿನೆಮಾಗಳ ಆಯ್ಕೆ ಗುಣಮಟ್ಟದ ಬಗ್ಗೆ ತಕರಾರಿತ್ತು. ಈ ಬಾರಿ ಅದು ನಿವಾರಣೆಗೊಂಡಿದೆ. ಹಲವು ಅತ್ಯುತ್ತಮ ಚಿತ್ರಗಳು ಇವೆ’ ಎನ್ನುತ್ತಾರೆ.

ಇದಕ್ಕೆ ದನಿಗೂಡಿಸುವ ಬೆಂಗಳೂರಿನ ರಘುರಾಮ್, ‘ಕಳೆದ ವರ್ಷ ದಿನಕ್ಕೆ ಮೂರು ಸಿನೆಮಾ ಆಯ್ಕೆ ಮಾಡಿಕೊಂಡರೆ ಎರಡು ಸಿನೆಮಾ ಚೆನ್ನಾಗಿರುತ್ತಿರಲಿಲ್ಲ. ಈ ಬಾರಿ ಅಷ್ಟೊಂದು ನಷ್ಟವಿಲ್ಲ. ಮೂರರಲ್ಲಿ ಎರಡು ಉತ್ತಮವಾಗಿದೆ’ ಎಂದು ಹೇಳುತ್ತಾರೆ.

ಕೇರಳದ ಪ್ರತಿಮಾ ಅವರೂ ಇದನ್ನು ಒಪ್ಪಿಕೊಂಡಿದ್ದು, ‘ಈ ಬಾರಿಯ ಆಯ್ಕೆ ಪರವಾಗಿಲ್ಲ. ವ್ಯವಸ್ಥೆಯಲ್ಲಿ ಇನ್ನಷ್ಟು ಶಿಸ್ತು ಬೇಕು’ ಎನ್ನುತ್ತಾರೆ.

ಸ್ವಾಗತಿಸುವವರಿಲ್ಲ !

ಉತ್ಸವದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದ್ದು, ಅಲ್ಲಿಗೆ ಬರುವ ಅತಿಥಿಗಳನ್ನು ನೋಡಿಕೊಳ್ಳುವವರೇ ಇಲ್ಲ ಎಂಬುದು ಕೇಳಿಬರುತ್ತಿರುವ ಆರೋಪ. ಸಾಕ್ಷ್ಯಚಿತ್ರ ನಿರ್ದೇಶಕ ಮತ್ತು ನಿರ್ಮಾಪಕರೊಬ್ಬರು ಈ ವಿಷಯವನ್ನು ಕಲಾ ಅಕಾಡೆಮಿ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸುತ್ತಾ, ‘ಫಿಲ್ಮ್ ಮೇಕರ್ ಗಳನ್ನು ಇಲ್ಲಿ ಸ್ವಾಗತಿಸುವವರೇ ಇಲ್ಲ. ಯಾರನ್ನು ಯಾವ ಮಾಹಿತಿ ಕೇಳಬೇಕೆಂದೂ ತಿಳಿಯುತ್ತಿಲ್ಲ’ ಎಂದಿದ್ದರು.

ಇದೇ ಪರಿಸ್ಥಿತಿ ಮಾಧ್ಯಮದವರಿಗೂ ಆಗಿದೆ. ಮಾಧ್ಯಮ ಕೇಂದ್ರವನ್ನು ಬೇರೆಡೆಗೆ ಸ್ಥಳಾಂತರಿಸಿದ್ದು,ಅಲ್ಲಿಯೂ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಿಲ್ಲ. ಅದರಲ್ಲೂ ಉದ್ಘಾಟನೆಯ ಆಮಂತ್ರಣ ಪತ್ರಿಕೆಗಳಿಗೆ ಗಂಟೆಗಟ್ಟಲೆ ಕಾಯಬೇಕಾಯಿತು ಎಂಬುದು ಕೆಲವರ ಆರೋಪ.

ರಿಕ್ಷಾಗಳಿಲ್ಲ

ಪ್ರತಿ ವರ್ಷವೂ ಐನಾಕ್ಸ್ ಸಂಕೀರ್ಣದಿಂದ ಕಲಾ ಅಕಾಡೆಮಿ ತೆರಳುವವರಿಗೆ ಉಚಿತ ರಿಕ್ಷಾ ಸೇವೆ ನೀಡಲಾಗುತ್ತಿತ್ತು. ಈ ಬಾರಿ ಉತ್ಸವ ಆರಂಭವಾಗಿ ನಾಲ್ಕುದಿನಗಳ ನಂತರ ಸೇವೆ ಅಸ್ತಿತ್ವಕ್ಕೆ ಬಂದಿದೆ. ಇದರಿಂದ ಮೊದಲು ನಾಲ್ಕು ದಿನ ಪ್ರತಿನಿಧಿಗಳು ಬಹಳ ಪ್ರಯಾಸ ಪಡಬೇಕಾಯಿತು.

“ಈ ವ್ಯವಸ್ಥೆ ತೀರಾ ಅಗತ್ಯವಿದೆ. ಯಾಕೆಂದರೆ, ಕೆಲವೊಮ್ಮೆ ಐನಾಕ್ಸ್ ನಲ್ಲಿನ ಚಿತ್ರ ಮುಗಿದು, ಕಲಾ ಅಕಾಡೆಮಿಯಲ್ಲಿನ ಚಿತ್ರ ಪ್ರಾರಂಭವಾಗುವ ಮಧ್ಯೆ ಕೇವಲ 15 ನಿಮಿಷ ಸಮಯವಿರುತ್ತದೆ. ಈ ಸಮಯದಲ್ಲಿ ನಾವು ಅಕಾಡೆಮಿಗೆ ನಡೆದು ಹೋಗಲಾಗದು. ಬಸ್ ಸಿಗದು. ಬಹಳ ಸಮಸ್ಯೆಯಾಗುತ್ತದೆ. ಹಾಗಾಗಿ ಪ್ರತಿ ವರ್ಷ ಈ ವ್ಯವಸ್ಥೆ ಇರಲಿ’ ಎನ್ನುತ್ತಾರೆ ಹೈದರಾಬಾದ್ ನ ರವಿ.