ಸಾಂಗತ್ಯ ಪ್ರತಿನಿಧಿಯಿಂದ
ಪಣಜಿ, ನ. 20 : ಚಿತ್ರರಂಗಕ್ಕೆ ಹೊಸ ಕನಸುಗಳನ್ನು ಹೆಣೆಯುವ ನೆಲೆಯಲ್ಲಿ 47 ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (IಈಈI) ಭವ್ಯವಾಗಿ ರವಿವಾರ ಪ್ರಾರಂಭಗೊಂಡಿತು.
ನವೆಂಬರ್ 28 ರವರೆಗೆ ನಡೆಯುವ ಉತ್ಸವದಲ್ಲಿ 90 ದೇಶಗಳ ಸುಮಾರು 300 ಸಿನೆಮಾಗಳು ಪ್ರದರ್ಶನಗೊಳ್ಳಲಿವೆ. ಉತ್ಸವಕ್ಕೆ ಕೇಂದ್ರ ಸಚಿವ ಎಂ. ವೆಂಕಯ್ಯ ನಾಯ್ಡು ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಸಿನೆಮಾ ರಂಗದಲ್ಲಿ ಶ್ರೇಷ್ಠ ಸಾಧನೆ ಮಾಡಿದವರಿಗೆ ನೀಡಲಾಗುವ ಶತಮಾನೋತ್ಸವ ಪ್ರಶಸ್ತಿಯನ್ನು ಹಿರಿಯ ಗಾಯಕ ಡಾ. ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ನೀಡಿ ಗೌರವಿಸಲಾಯಿತು. ಜೀವಿತಾವಧಿ ಸಾಧನೆಗೆ ನೀಡಲಾಗುವ ಪ್ರಶಸ್ತಿಯನ್ನು ಕೊರಿಯಾ ನಿರ್ದೇಶಕ ಕ್ವಾನ್ ಟೇಕ್ ಅವರಿಗೆ ನೀಡಲಾಯಿತು.
ಬಳಿಕ ಮಾತನಾಡಿದ ಸಚಿವ ಎಂ. ವೆಂಕಯ್ಯ ನಾಯ್ಡು, ಸಿನೆಮಾ ವಾಸ್ತವವನ್ನು ಬಿಂಬಿಸುವಂತಿರಬೇಕು. ಅತ್ಯಂತ ಪರಿಣಾಮಕಾರಿ ಮತ್ತು ಪ್ರಭಾವಿ ಮಾಧ್ಯಮವಾದ ಚಲನಚಿತ್ರದ ಮೂಲಕ ಮೌಲ್ಯಗಳನ್ನು ಬಿತ್ತುವಂತಾಗಬೇಕು ಎಂದು ಹೇಳಿದರು. ಪ್ರಶಸ್ತಿ ಸ್ವೀಕರಿಸಿದ ಡಾ. ಎಸ್. ಪಿ. ಬಾಲಸುಬ್ರಹ್ಮಣ್ಯಂ ಮಾತನಾಡಿ, “ನನ್ನ ಅಮ್ಮ ಮತ್ತು ಭಾರತೀಯ ಯೋಧರಿಗೆ ಈ ಪ್ರಶಸ್ತಿಯನ್ನು ಅರ್ಪಿಸುತ್ತೇನೆ’ ಎಂದು ಹೇಳಿದರು.
ಗೋವಾ ರಾಜ್ಯಪಾಲರಾದ ಮೃದುಲಾ ಸಿನ್ಹಾ, ಕೇಂದ್ರ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್, ಗೋವಾ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರ್ಸೇಕರ್, ಕೊರಿಯಾ ರಾಯಭಾರಿ ಚೋ ಹ್ಯೂಂ, ವಾರ್ತಾ ಮತ್ತು ಪ್ರಚಾರ ಕಾರ್ಯದರ್ಶಿ ಅಜಯ್ ಮಿತ್ತಲ್ ಹಾಗೂ ರಮೇಶ್ ಸಿಪ್ಪಿ ಅವರು ಭಾಗವಹಿಸಿದ್ದರು. ಉತ್ಸವದ ಆರಂಭಿಕ ಚಿತ್ರವಾಗಿ ಪೋಲಿಶ್ ಭಾಷೆಯ ನಿರ್ದೇಶಕ ಆಂಡ್ರೆಜಾ ವಡ್ಜಾ ಅವರ ಅಫ್ಟರ್ ಇಮೇಜ್ ಎಂಬ ಸಿನೆಮಾವನ್ನುಪ್ರದರ್ಶಿಸಲಾಯಿತು.
ಪವನ್ ಕುಮಾರ್ ರ ಯೂ ಟರ್ನ್, ಅನನ್ಯ ಕಾಸರವಳ್ಳಿಯವರ ಹರಿಕಥಾ ಪ್ರಸಂಗ, ಟಿ.ಎಸ್. ನಾಗಾಭರಣರ ಅಲ್ಲಮ ಸಿನೆಮಾಗಳು ಸೇರಿದಂತೆ 26 ಸಿನೆಮಾಗಳು ಭಾರತೀಯ ಪನೋರಮಾ ವಿಭಾಗದಡಿ ಪ್ರದರ್ಶನಗೊಳ್ಳಲಿವೆ.