ಪಣಜಿ : ಕನ್ನಡದ ಯೂ ಟರ್ನ್, ಹರಿಕಥಾ ಪ್ರಸಂಗ ಹಾಗೂ ಅಲ್ಲಮ ಸೇರಿದಂತೆ 26 ಭಾರತೀಯ ಭಾಷೆಯ ಚಲನಚಿತ್ರಗಳು ಈ ಬಾರಿಯ ಗೋವಾ ಚಿತ್ರೋತ್ಸವದಲ್ಲಿ ಭಾರತೀಯ ಪನೋರಮಾ ವಿಭಾಗದಲ್ಲಿ ಪ್ರದರ್ಶನಗೊಳ್ಳಲಿವೆ.
ಮಲಯಾಳಂನ ಜಿ ಪ್ರಭಾ ನಿರ್ದೇಶಿಸಿರುವ ‘ಇಷ್ಟಿ’ ಚಲನಚಿತ್ರವು ಪನೋರಮಾದ ಕಥಾ ವಿಭಾಗದ ಉದ್ಘಾಟನಾ ಚಿತ್ರವಾಗಿದ್ದರೆ, ಬೋಬೊ ಕೆ ಎಚ್ ನಿರ್ದೇಶನದ ಮಣಿಪುರಿ ಭಾಷೆಯ ‘ಇಮಾ ಸಬಿತ್ರಿ’ ಕಥೇತರ ವಿಭಾಗದ ಉದ್ಘಾಟನ ಚಿತ್ರವಾಗಿದೆ. ಕಥೇತರ ವಿಭಾಗದಲ್ಲಿ ಒಟ್ಟು 21 ಚಿತ್ರಗಳು ಪ್ರದರ್ಶನವಾಗಲಿವೆ.
ಪವನ್ ಕುಮಾರ್ ನಿರ್ದೇಶನದ ಯೂ ಟರ್ನ್, ಅನನ್ಯ ಕಾಸರವಳ್ಳಿಯವರ ‘ಹರಿಕಥಾ ಪ್ರಸಂಗ’ ಹಾಗೂ ಟಿ.ಎಸ್. ನಾಗಾಭರಣರ ‘ಅಲ್ಲಮ’ ಚಲನಚಿತ್ರಗಳು ಪ್ರದರ್ಶನಗೊಳ್ಳಲಿದ್ದು, ಈ ಬಾರಿ ಶತಮಾನೋತ್ಸವ ಪ್ರಶಸ್ತಿ ಚೊಚ್ಚಲ ಚಿತ್ರದ ನಿರ್ದೇಶಕರಿಗೆ ನೀಡುತ್ತಿರುವ ಹಿನ್ನೆಲೆಯಲ್ಲಿ ಇತರೆ 7 ಚಿತ್ರಗಳೊಂದಿಗೆ ಹರಿಕಥಾ ಪ್ರಸಂಗವೂ ಸ್ಪರ್ಧಿಸಲಿದೆ.
ಉಳಿದಂತೆ ಬಂಗಾಳಿ-4, ಮರಾಠಿ-4, ಹಿಂದಿ-4, ಮಲಯಾಳಂ-3, ತಮಿಳು-1, ಕೊಂಕಣಿ-1, ಅಸ್ಸಾಮಿ-1, ಖಾಸಿ-1, ತೆಲುಗು-1, ಮಣಿಪುರಿ-1, ಸಂಸ್ಕøತ-1, ಇಂಗ್ಲಿಷ್-1 ಚಲನಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ. ಕಥೇತರ ವಿಭಾಗದಲ್ಲಿ ಬಂಗಾಳಿ, ಮಲಯಾಳಂ, ಕರ್ಬಿ (ಅಸ್ಸಾಂ), ಇಂಗ್ಲಿಷ್, ಹಿಂದಿ, ಮರಾಠಿ,ಮಣಿಪುರಿ, ಹರ್ಯಾಣಿ, ಗುಜರಾತಿ ಭಾಷೆಯ ಸಾಕ್ಷ್ಯಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ.