hawaa_hawaai

ಜಗತ್ತಿನ ಚೆಂದದ ಸಿನೆಮಾಗಳ ಬಗ್ಗೆ ಆಹಿರಿಯವರು ವಾರಕ್ಕೊಮ್ಮೆ ಬರೆಯುತ್ತಾರೆ. ಈ ವಾರದಿಂದ ಅವರ ಬರಹಗಳು ಆರಂಭ. ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ಅಮುಲ್ ಗುಪ್ತೆಯವರ ‘ಹವಾ ಹವಾಯಿ’ ಚಿತ್ರದ ಬಗ್ಗೆ ಬರೆದಿದ್ದಾರೆ. ಅಮುಲ್ ಗುಪ್ತೆ ಮಕ್ಕಳ ಸಿನೆಮಾಗಳ ಬಗ್ಗೆಯೇ ಮೋಹ ಹೊಂದಿರುವವರು. ತಾರೇ ಜಮೀನ್ ಪರ್ ಗೆ ಚಿತ್ರಕಥೆ ಬರೆದು ಮತ್ತಷ್ಟು ಸಿನೆಮಾಗಳನ್ನು ಮಾಡಿದವರು. ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ. ಆಹಿರಿಯವರು ಪತ್ರಿಕೋದ್ಯಮದಲ್ಲಿದ್ದು, ಈಗ ಊರಿನಲ್ಲಿ ಇದ್ದಾರೆ. ಸಿನೆಮಾ ನೋಡುವುದು ಅವರ ಹವ್ಯಾಸ.

“ನಾವೆಲ್ಲರೂ ಒಟ್ಟಿಗೇ ಸೇರಿ ಕಂಡ ಕನಸದು; ನನಸಾಗಬೇಕು”.

ಅಮೋಲ್ ಗುಪ್ತೆಯವರ ‘ಹವಾ ಹವಾಯಿ’ ಸಿನಿಮಾ ನಮ್ಮೊಳಗೆ ತೆರೆದುಕೊಳ್ಳುವುದೇ ಈ ಸಂಭಾಷಣೆಯಿಂದ. ಈ ವಾಕ್ಯವೂ ಬರುವುದು ಸಿನೆಮಾ ಮುಗಿಯಲಿಕ್ಕೆ ಇನ್ನೇನು ಅರ್ಧ ಗಂಟೆ ಇದೆ ಎನ್ನುವಾಗ. ಆದರೆ, ಪ್ರತಿಯೊಬ್ಬರೂ ಮುಕ್ಕಾಲು ಭಾಗ ಸಿನೆಮಾವನ್ನು ಆ ವಾಕ್ಯದ ನಂತರ ಪುನಾ ರಚಿಸಿಕೊಳ್ಳುತ್ತೇವೆ. ಮತ್ತೆ ಪ್ರತಿಯೊಂದಕ್ಕೂ ಸಂಬಂಧವನ್ನು ಕಲ್ಪಿಸುತ್ತಾ ಬರುತ್ತೇವೆ. ಅಲ್ಲಿಯವರೆಗೆ ಇದೂ ಒಂದು ಮಕ್ಕಳ ಸಿನೆಮಾ ಎಂಬ ಧಾಟಿಯಲ್ಲಿ ನೋಡುತ್ತೇವೆ.
ಈಗ ಪ್ರತಿಯೊಂದಕ್ಕೂ ಒಂದೊಂದು ಫಾರ್ಮುಲಾ ಬಂದಿದೆ. ಕೇವಲ ಜನಪ್ರಿಯ ಚಿತ್ರಗಳಿಗಷ್ಟೇ ಅಲ್ಲ. ಈ ಹಿಂದೆ ಎಲ್ಲ ವುಡ್ ಗಳ ಸಿನೆಮಾಗಳಿಗೂ ಫಾರ್ಮುಲಾ ಇತ್ತು. ಈಗ ನಿಧಾನವಾಗಿ ಪರ್ಯಾಯ ಸಿನೆಮಾ ಎನ್ನುವ ವರ್ಗಕ್ಕೂ ಫಾರ್ಮುಲಾಗಳು ಬಂದಿವೆ. ಆ ದೃಷ್ಟಿಯಲ್ಲಿ ನೋಡುವಾಗ ಇದಕ್ಕೆ ಕೆಲವು ಅಪವಾದಗಳು ಇವೆ.

ಇಡೀ ಸಿನೆಮಾವನ್ನು ಒಂದೇ ಪದದಲ್ಲಿ ಹೇಳುವುದಾದರೆ, ಬೇಸರದಿಂದ ಆಕಾಂಕ್ಷೆಯತ್ತ, ಮಹಾತ್ವಾಕಾಂಕ್ಷೆಯತ್ತ ಸಾಗುವ ಪಯಣ ಎಂದು ಹೇಳಿ ಮುಗಿಸಬಹುದು. ಹತ್ತಿ ಬೆಳೆಗಾರನೊಬ್ಬನ ಮಗ ಅರ್ಜುನ್ ಹರಿಶ್ಚಂದ್ರ ವಾಗ್ಮಾರೆ (ಪಾರ್ಥೋ ಗುಪ್ತೆ) ತನ್ನ ತಂದೆಯ ಮರಣದ ಹಿನ್ನೆಲೆಯಲ್ಲಿ ಕೆಲಸಕ್ಕೆ ಸೇರಬೇಕಾದ ಅನಿವಾರ್ಯತೆಗೆ ಸಿಲುಕುತ್ತಾನೆ. ಅದರಂತೆ ಆತ ಮುಂಬಯಿಯ ಒಂದು ಚಹಾ ಅಂಗಡಿಯವನಲ್ಲಿ ಕೆಲಸದಲ್ಲಿ ತೊಡಗುತ್ತಾನೆ. ಪಕ್ಕದಲ್ಲೇ ಒಂದು ಸ್ಕೇಟಿಂಗ್ ಗ್ರೌಂಡ್ ಇದ್ದು, ನಿತ್ಯವೂ ಸಂಜೆಯಾಗುವಷ್ಟರಲ್ಲಿ ನೂರಾರು ಮಂದಿ ಸಿರಿವಂತರ ಮಕ್ಕಳು ಅಲ್ಲಿ ಸ್ಕೇಟಿಂಗ್ ಕಲಿಯಲೆಂದು ಬರುತ್ತಿರುತ್ತಾರೆ. ಅವರಿಗೆ ಕಲಿಸಲೆಂದು ಬರುವ ಅನಿಕೇತನ್ (ಸಖೀಬ್ ಸಲೀಮ್) ಭಾರ್ಗವ್ ಬದುಕನ್ನು ಭಿನ್ನವಾಗಿ ಅನುಭವಿಸಬೇಕೆಂದು ಬಯಸುವವ. ಎಲ್ಲ ತರುಣರು ಯಾವುದಾದರೂ ಸಾಫ್ಟ್ ವೇರ್ ಕಂಪನಿ ನೌಕರಿ ಹಿಡಿದು ಅಮೆರಿಕಕ್ಕೆ ಹೋಗುವಾಗ ಈತ ಸ್ಕೇಟಿಂಗ್ ಎಂದು ಹಿಡಿದುಕೊಂಡು ಭಾರತದಲ್ಲೇ ಇರಬೇಕೆಂದು ಹಂಬಲಿಸುತ್ತಿರುವವ.

ಚಿತ್ರದ ಟ್ರೇಲರ್ ಗೆ ಇಲ್ಲಿ ಕ್ಲಿಕ್ ಮಾಡಿ ಹವಾ ಹವಾಯಿ -ಚಿತ್ರಗಳ ಕೃಪೆ : ಇಂಟರ್ ನೆಟ್

amole-gupte

ಅರ್ಜುನನ ಕನಸನ್ನು ಬೆಂಬಲಿಸುವ ಅವನ ಇತರೆ ಗೆಳೆಯರು ಹೇಗಾದರೂ ಮಾಡಿ ಒಂದು ಸ್ಕೇಟಿಂಗ್ ಉಪಕರಣಗಳನ್ನು ಕೊಡಿಸಿ, ಅವನನ್ನು ಸ್ಕೇಟಿಂಗ್ ಪಟುವನ್ನಾಗಿ ಮಾಡಬೇಕೆಂಬ ಕನಸನ್ನು ಕಾಣುತ್ತಾರೆ. ಅರ್ಜುನನಿಗೂ ಸ್ಕೇಟಿಂಗ್ ಕಲಿಯಬೇಕೆನಿಸುತ್ತದೆ. ಸಿಕ್ಕಾಪಟ್ಟೆ ಬೆಲೆಯ ಸ್ಕೇಟಿಂಗ್ ಉಪಕರಣವನ್ನು ತನ್ನ ಗ್ಯಾರೇಜ್ ನಲ್ಲಿ ಸಿಕ್ಕ ಗುಜರಿ ಅಂಶಗಳಿಂದ ಗೆಳೆಯರೇ ರೂಪಿಸಿಕೊಡುತ್ತಾರೆ. ಅದರ ಹೆಸರೇ ಹವಾ ಹವಾಯಿ. ಇದನ್ನು ಹಿಡಿದುಕೊಂಡು ಅನಿಕೇತ್ ಬಳಿ ಬರುವ ಅರ್ಜುನ್ ಮತ್ತು ಅವನ ಗೆಳೆಯರ ಉತ್ಸಾಹ ಕಂಡು ಕಲಿಸಲು ಒಪ್ಪುತ್ತಾನೆ. ಅದರಂತೆ ಚೆನ್ನಾಗಿ ಕಲಿಯುವ ಅರ್ಜುನ್ ಭರವಸೆ ಮೂಡಿಸುತ್ತಾನೆ. ಜಿಲ್ಲಾ ಮಟ್ಟದ ಸ್ಪರ್ಧೆಗೆ ಕಳುಹಿಸಬೇಕೆಂದುಕೊಳ್ಳುವಾಗ ಅವನು ಅನಾರೋಗ್ಯಕ್ಕೆ ಒಳಗಾಗುತ್ತಾನೆ. ಆಗ ಅನಿಕೇತ್, ಅರ್ಜುನನ ಬಡತನ, ಕಷ್ಟ, ಆಸಕ್ತಿ ಎಲ್ಲ ತಿಳಿದು ಮೂಕ ವಿಸ್ಮಯನಾಗುತ್ತಾನೆ. “ನಾನು ಇದುವರೆಗೆ ಎಲ್ಲರ ಜೀವನವನ್ನು ಬದಲಾಯಿಸುತ್ತೇನೆ ಎಂದುಕೊಂಡಿದ್ದೆ. ಆದರೆ ಅರ್ಜುನ್ ನನ್ನ ಜೀವನವನ್ನೇ ಬದಲಾಯಿಸಲು ಬಂದವ’ ಎಂದು ಅನಿಕೇತನ್ ತನ್ನ ದೃಷ್ಟಿಯನ್ನೇ ಬದಲಾಯಿಸಿಕೊಳ್ಳುತ್ತಾನೆ. ಪಾಸಿಟಿವ್ ವ್ಯಕ್ತಿತ್ವದ ಅವನು ಮತ್ತಷ್ಟು ಒಳ್ಳೆಯವನಾಗುತ್ತನೆ. ಕೊನೆಯಲ್ಲಿ ಅರ್ಜುನ್ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುತ್ತಾನೆ. ತನ್ನ ತಂದೆ ಸತ್ತು ಹೋದ ಸಂದರ್ಭದ ಸನ್ನಿವೇಶವನ್ನು ನೆನಪಿಸಿಕೊಂಡು ಪಂದ್ಯದಲ್ಲಿ ಗೆಲ್ಲುತ್ತಾನೆ. ಸದಾಶಯದ ಫೀಲಿಂಗ್ ನೊಂದಿಗೆ ಚಿತ್ರ ಕೊನೆಗೊಳ್ಳುತ್ತದೆ. ಅರ್ಜುನ್ ನ ತಂದೆಯಾಗಿ ಮಕರಂದ್ ದೇಶಪಾಂಡೆ ಮತ್ತು ತಾಯಿಯಾಗಿ ನೇಹಾ ಜೋಶಿ ನಟಿಸಿದ್ದಾರೆ. ನೇಹಾರ ಅಭಿನಯವೂ ಚೆನ್ನಾಗಿದೆ. ಅವನ ಗೆಳೆಯರಾದ ಅಶ್ಫಕ್ ಬಿಸ್ಮಿಲ್ಲಾ ಖಾನ್, ಸಲ್ಮಾನ್ ಚೋಟೆ ಖಾನ್, ಮಾಮನ್ ಮೆಮೊನ್ ಹಾಗೂ ತಿರುಪತಿ ಕುಸ್ನಪೆಲ್ಲಿ ಚೆನ್ನಾಗಿ ಅಭಿನಯಿಸಿದ್ದಾರೆ. ಅದರಲ್ಲೂ ಗ್ಯಾರೇಜ್ ಹುಡುಗನ ಪಾತ್ರದಲ್ಲಿನ ಅಶ್ಫಕ್ ನ ನಟನೆ ಹೆಚ್ಚು ಆತ್ಮವಿಶ್ವಾಸದ್ದು. ಚಿತ್ರದ ಉತ್ಸಾಹವನ್ನು ಸತತವಾಗಿ ಕಾಯ್ದುಕೊಳ್ಳುವ ಹಿನ್ನೆಲೆ ಸಂಗೀತ ನಿಜಕ್ಕೂ ಆಪ್ತತೆಯನ್ನು ಹೆಚ್ಚಿಸಿದೆ.

ಚಿತ್ರದ ನಿರ್ದೇಶಕ ಅಮೋಲ್ ಗುಪ್ತೆ ಮಕ್ಕಳ ಸಿನೆಮಾಗಳನ್ನು ಹೆಣೆಯುವಲ್ಲಿ ಬಹಳ ಹೆಸರುವಾಸಿಯಾದವರು. ಮಕ್ಕಳ ಕೋಮಲ ಭಾವನೆಗಳನ್ನು ಪದರ ಪದರವಾಗಿ ಹೇಳುತ್ತಾ, ಪ್ರೇಕ್ಷಕನನ್ನು ಸಿನೆಮಾದ ಆವರಣದೊಳಗೆ ತೆಗೆದುಕೊಳ್ಳುವ ಶಕ್ತಿ ಇದೆ. ಹಾಗಾಗಿ ಈ ಸಿನೆಮಾವೂ ಲಯ ಬಿಟ್ಟು ಪಕ್ಕದಲ್ಲೆಲ್ಲೂ ಹರಿದಾಡುವುದಿಲ್ಲ. ಆರಂಭವಾಗುವುದು ದೀಪದ ಬೆಳಕಿನಲ್ಲಿ ಕುಳಿತ ಮಗ ಮತ್ತು ಅಪ್ಪನ ಪ್ರಾರ್ಥನೆಯೊಂದಿಗೆ. ದೇವರಿಗೆ ಹಚ್ಚಿಟ್ಟ ಹಣತೆಯ ಬೆಳಕು ಒಂದು ಬಗೆಯ ಸುವರ್ಣ ಬಣ್ಣದ ಹುಚ್ಚನ್ನು ಹಿಡಿಸುತ್ತದೆ. ಸಾಮಾನ್ಯವಾಗಿ ಮಹಾತ್ವಾಕಾಂಕ್ಷೆಯನ್ನು ಹೇಳಲಿಚ್ಛಿಸಲು ಗೋಲ್ಡ್ ಫಿಶ್, ಸುವರ್ಣ ಬಣ್ಣದ ಆವರಣವನ್ನು ಬಳಸುವ ಕ್ರಮವಿದೆ. ಜತೆಗೆ ಒಟ್ಟೂ ಚಿತ್ರದ ಸ್ವಬಾವವನ್ನು ಕಂಡಾಗ ಮಕ್ಕಳಿಗೆ ಪ್ರೇರಣೆಯಾದೀತು.

hawaa-hawai

ಅಮೋಲ್ ತಾರೇ ಜಮೀನ್ ಪರ್ ನ ಚಿತ್ರಕಥೆಯ ಮೂಲಕ ಜನಪ್ರಿಯರಾದವರು. ಸ್ಟ್ಯಾನ್ಲಿ ಕೇ ಡಬ್ಬಾ ಚಿತ್ರಗಳನ್ನು ನಿರ್ದೇಶಿಸಿದವರು.
ಪಾತ್ರಗಳನ್ನು ಹೊಸ ಪೀಳಿಗೆಗೆ ಮಾದರಿಯಾಗಿ ಚಿತ್ರಿಸುತ್ತಲೇ, ವರ್ತಮಾನವನ್ನೂ ಪರಸ್ಪರ ಮುಖಾಮುಖಿಗೊಳಿಸಿ ಕೊನೆಗೊಂದು ಆದರ್ಶದ ಮುಕ್ತಾಯವನ್ನು ಕೊಡಲು ಬಯಸುತ್ತಾರೆ. ಈ ಪಯಣ ಹತಾಶೆ ಅಥವಾ ಬೇಸರ ಅಥವಾ ದುಃಖದಿಂದ ಖುಷಿಯತ್ತ, ಸದಾಶಯದತ್ತ, ಆಕಾಂಕ್ಷೆಯತ್ತ ಪಯಣಿಸುವುದು ಅಮೋಲ್ ರ ಮನದಾಳ. ಹಾಗಾಗಿ ಅವರ ಎಲ್ಲ ಸಿನೆಮಾಗಳಲ್ಲೂ ಒಂದು ಭಾವನೆಯ ಪಯಣವಿದ್ದೇ ಇರುತ್ತದೆ.

ಅಮೋಲ್ ರ ಕುಸುರಿತನ ಇಷ್ಟವಾಗುವುದು ಅವರ ಸೂಕ್ಷ್ಮತೆಯಲ್ಲಿ ಮತ್ತು ಕಥೆಯನ್ನು ಹೆಣೆಯುವ ನವಿರುತನದಲ್ಲಿ. ಎಲ್ಲೂ ಸಹ ಸಂದೇಶವೆಂಬ ಭಾರದ ಪೆಟ್ಟಿಗೆಯನ್ನು ಹೊರಿಸುತ್ತಿದ್ದೇನೆ ಎಂಬ ಬುದ್ಧಿಪೂರ್ವಕ ಪ್ರಯತ್ನವಾಗಲೀ ಅಥವಾ ಪ್ರೇಕ್ಷಕರಿಗೂ ನಿರ್ದೇಶಕ ಬುದ್ಧಿವಾದ ಹೇಳುತ್ತಿದ್ದೇನೆಂಬ ಭಾವ ಮೂಡುವಂತ ರೀತಿಯಲ್ಲಿ ಕಥೆ ಹೇಳುವುದಿಲ್ಲ. ಅದು ತಾರೇ ಜಮೀನ್ ಪರ್ ನಿಂದ ಹಿಡಿದು ಎಲ್ಲ ಸಿನೆಮಾಗಳಲ್ಲೂ ಎದ್ದು ಕಾಣುವಂಥದ್ದು.
ಅಮೋಲ್ ತಮ್ಮ ಎಲ್ಲ ಮಕ್ಕಳ ಕೇಂದ್ರಿತ ಸಿನೆಮಾಗಳಲ್ಲಿ ಭವಿಷ್ಯದ ಮಕ್ಕಳನ್ನು ಸೃಷ್ಟಿಸುವ ಪ್ರಯತ್ನವನ್ನು ಮಾಡುತ್ತಾರೆ. ನಗರದ ಎಲ್ಲ ಅಪಸವ್ಯಗಳ ನಡುವೆ, ಇರುವ ಧನಾತ್ಮಕ ನೆಲೆಯನ್ನು ದುಡಿಸಿಕೊಂಡು ಪ್ರತಿಭೆಯಾಗಿ ಹೊರ ಹೊಮ್ಮಲು ಅವಕಾಶವಿದ್ದೇ ಇರುತ್ತದೆ ಎಂಬ ಆತ್ಮವಿಶ್ವಾಸವನ್ನು ತುಂಬುವ ಪ್ರಯತ್ನ ಮಾಡುತ್ತಾರೆ. ಅದು ತಾರೇ ಜಮೀನ್ ಪರ್, ಸ್ಟ್ಯಾನ್ಲಿ ಕೇ ಡಬ್ಬಾ ಹಾಗೂ ಈ ಸಿನೆಮಾದಲ್ಲಿ ಅಭಿವ್ಯಕ್ತಗೊಂಡಿದೆ.

ಪಾತ್ರ ಸೃಜನೆಯಲ್ಲ ಕೆಲವೊಂದು ಕಡೆ ಸಣ್ಣ ಸಣ್ಣ ತಪ್ಪುಗಳೆನಿಸಿದರೂ ಇಡೀ ಸಿನೆಮಾವನ್ನು ಅನುಭವಿಸುವುದಕ್ಕೆ ಎಲ್ಲೂ ಧಕ್ಕೆಯಾಗದು. ಆಕಾಂಕ್ಷೆಯೊಂದಿಗೆ ಸುಖಾಂತಗೊಳಿಸಿರುವುದು ನಿಜದ ಬದುಕಿನಲ್ಲಿ ಸಾಧ್ಯವೇ? ಅನಗತ್ಯ ವೈಭವೀಕರಣವಲ್ಲವೇ? ಎಂಬ ಪ್ರಶ್ನೆಗಳು ಉದ್ಭವಿಸಬಹುದಾದರೂ, ಸಿನೆಮಾ ವಾಸ್ತವದಿಂದ ಮತ್ತೊಂದು ನೆಲೆಗೆ ಕೊಂಡೊಯ್ಯುವ ಪ್ರಯತ್ನವೆಂದಾಗಲೀ, ಮಕ್ಕಳು ಇದರಿಂದ ಸ್ಫೂರ್ತಿ ಪಡೆಯಬೇಕೆಂಬ ನೆಲೆಯಿಂದ ಇಂಥದೊಂದು ಸಾಧ್ಯತೆಯನ್ನು ಗಮನಿಸಿದ್ದೇನೆ ಎಂದು ಹೇಳುವ ಅವಕಾಶ ನಿರ್ದೇಶಕರಿಗೆ ಚಿತ್ರ ಕಲ್ಪಿಸುತ್ತದೆ.