IMG_1731

ಕುಪ್ಪಳಿ :ಸಾಂಗತ್ಯದ ಹದಿನೈದನೇ ಶಿಬಿರ ಅತ್ಯಂತ ಯಶಸ್ವಿಯಾಗಿ ಪೂರ್ಣಗೊಂಡಿತು.

ಚಿತ್ರೋತ್ಸವದ ಉದ್ಘಾಟನಾ ಚಿತ್ರವಾಗಿ ಯೂ ಟರ್ನ್ ಬದಲು ಮೇಕಿಂಗ್ ಆಫ್ ಲೂಸಿಯಾವನ್ನು ಪ್ರದರ್ಶಿಸಲಾಯಿತು.

ಉತ್ಸವಕ್ಕೆ ಚಾಲನೆ ನೀಡಿದ ಚಿತ್ರ ನಿರ್ದೇಶಕ ಪವನ್ ಕುಮಾರ್, ಚಿತ್ರಗಳನ್ನು ನಾವು ನೋಡುವ ಮತ್ತು ಆಸ್ವಾದಿಸುವ ಪ್ರವೃತ್ತಿಯನ್ನು ರೂಢಿಸಿಕೊಳ್ಳಬೇಕು. ಆಗ ಒಳ್ಳೆ ಸಿನಿಮಾಗಳು ಬರಲು ಸಾಧ್ಯ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಾಂಗತ್ಯದ ವ್ಯವಸ್ಥಾಪಕ ಟ್ರಸ್ಟಿ ಪರಮೇಶ್ವರ ಗುರುಸ್ವಾಮಿ, ಸಾಂಗತ್ಯವು ಏಳು ವರ್ಷಗಳಿಂದ ಚಿತ್ರ ಶಿಬಿರವನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಸಾಂಗತ್ಯದ ಉದ್ದೇಶವೇ, ಸಿನಿಮಾ ಮಾಧ್ಯಮದ ಬಗ್ಗೆ ಅರಿವು ಮೂಡಿಸುವುದು. ಒಂದು ಮಾಧ್ಯಮದ ಬಗೆಗಿನ ಸ್ಪಷ್ಟ ಅರಿವು ಮಾತ್ರ ನಮಗೆ ಅದರ ಸಾಧ್ಯತೆಗಳನ್ನು ತಿಳಿಸಿಕೊಡಬಲ್ಲದು ಎಂದರು.

ಬಳಿಕ ಪ್ರದರ್ಶನಗೊಂಡ ಲೂಸಿಯಾ ಚಿತ್ರ ನಿರ್ಮಾಣದ ಬಗೆಗಿನ ಸಾಕ್ಷ್ಯಚಿತ್ರದ ಬಗ್ಗೆ ನಡೆದ ಸಂವಾದದಲ್ಲಿ ಪವನ್ ಕುಮಾರ್, ಎಲ್ಲರ ಪ್ರಶ್ನೆಗಳಿಗೆ ಉತ್ತರಿಸಿದರು. ಸಿನಿಮಾ ನಿರ್ಮಾಣ, ಚಿತ್ರ ಕಥಾ ರಚನೆ, ನಟರ ಆಯ್ಕೆ ಇತ್ಯಾದಿ ಕುರಿತ ಪ್ರಶ್ನೆಗಳನ್ನೂ ಶಿಬಿರಾರ್ಥಿಗಳು ಕೇಳಿದರು.

ಎರಡು ದಿನಗಳ ಉತ್ಸವದಲ್ಲಿ ಮಾಲ ಆಯೇ ವಿಚ್ಛಯ್ (ಮರಾಠಿ), ದಿ ಪ್ಯಾಸನ್ ಆಫ್ ಆಗಸ್ಟೈನ್ (ಫ್ರೆಂಚ್), ಮಾನ್ಯುಮೆಂಟ್ ಟು ಮೈಕೆಲ್ ಜಾಕ್ಸನ್ (ಸೆರ್ಬಿಯಾ), ದಿ ಮ್ಯಾನ್ ವೂ ನ್ಯೂ ಇನ್ಫಿನಿಟಿ (ಇಂಗ್ಲಿಷ್), ಮುಸ್ತಾಂಗ್ (ಟರ್ಕಿಶ್) ಹಾಗೂ ರೋಡ್ ಸೈಡ್ ಅಂಬಾನೀಸ್ (ತಮಿಳು ಕಿರುಚಿತ್ರ) ಪ್ರದರ್ಶನಗೊಂಡ ಇನ್ನಿತರ ಚಿತ್ರಗಳು.

ಬೆಳಗಾವಿ, ರಾಯಚೂರು, ಬೀದರ್, ಚಿತ್ರದುರ್ಗ, ಬೆಂಗಳೂರು, ಚಿಕ್ಕಮಗಳೂರು, ಕಡೂರು, ಶಿವಮೊಗ್ಗ, ತೀರ್ಥಹಳ್ಳಿ, ಕುಂದಾಪುರ, ಬೈಂದೂರು, ಮೂಡಬಿದಿರೆ, ಪುತ್ತೂರು, ಮಂಗಳೂರು, ಮೈಸೂರು ಸೇರಿದಂತೆ ವಿವಿಧ ಭಾಗಗಳ 50 ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಬಹುತೇಕ ಚಿತ್ರಗಳ ಪ್ರದರ್ಶನದ ನಂತರ ಸಂವಾದ ನಡೆಯಿತು.

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಹ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್, ‘ಸಾಂಗತ್ಯ ಸತತವಾಗಿ ಇಂಥ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದರಿಂದ ಸ್ಥಳೀಯವಾಗಿ ಅನುಕೂಲವಾಗುತ್ತಿದೆ’ ಎಂದು ಹೇಳಿದರು. ಬಳಿಕ ಎಲ್ಲ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಹಲವು ಶಿಬಿರಾರ್ಥಿಗಳು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

Advertisements