ಚಿತ್ರ ಸಂವಾದದಲ್ಲಿ ಬಿ. ಸುರೇಶ್ ಪಾಲ್ಗೊಂಡು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು
ಚಿತ್ರ ಸಂವಾದದಲ್ಲಿ ಬಿ. ಸುರೇಶ್ ಪಾಲ್ಗೊಂಡು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು

ಕುಪ್ಪಳಿ : ಒಂದು ಸಿನಿಮಾವನ್ನು ವೀಕ್ಷಿಸುತ್ತಲೇ ಅದು ತಲುಪಬಹುದಾದ ನೆಲೆಗಳನ್ನು ಅರ್ಥೈಸಿಕೊಳ್ಳುವ ಪ್ರಯತ್ನ ಸದಾ ನಡೆಸಬೇಕು ಎಂಬುದು ಚಿತ್ರ ನಿರ್ದೇಶಕ ಬಿ. ಸುರೇಶರ ಅಭಿಪ್ರಾಯ.

ಸಾಂಗತ್ಯದ 14 ನೇ ಚಿತ್ರ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ಅವರು, ಚಿತ್ರವನ್ನು ವೀಕ್ಷಿಸುವ ಮತ್ತು ಓದುವ ಬಗೆಯ ಕುರಿತು ವಿವರಿಸಿದರು.

ಪ್ರತಿ ಚಿತ್ರದ ನಂತರವೂ ನಡೆಯುತ್ತಿದ್ದ ಸಂವಾದದಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸಿದ ಅವರು, ‘ಗಿರೀಶ್ ಕಾಸರವಳ್ಳಿಯವರ ಕನಸೆಂಬೋ ಕುದುರೆಯನ್ನೇರಿ ಚಿತ್ರ ಕನ್ನಡದಲ್ಲಿ ನಡೆದ ಅತ್ಯಂತ ವಿಶಿಷ್ಟ ಪ್ರಯೋಗ.  ನಿರೂಪಣಾ ತಂತ್ರವಲ್ಲದೇ, ಹಲವು ಸಂಗತಿಗಳಲ್ಲಿ ಈ ಚಿತ್ರ ವಿಭಿನ್ನ’ ಎಂದರು.

ಕನಸೆಂಬೋ ಕುದುರೆಯನ್ನೇರಿ ಚಿತ್ರದ ಕುರಿತ ಚರ್ಚೆಯ ಸಂದರ್ಭದಲ್ಲಿ ಶಿಬಿರಾರ್ಥಿಗಳ ಹಲವು ಅಭಿಪ್ರಾಯಗಳಿಗೆ ಧ್ವನಿಗೂಡಿಸುತ್ತಲೇ, ಚಿತ್ರವು ಹೇಳಲು ಪ್ರಯತ್ನಿಸಿರುವ ವಿವಿಧ ನೆಲೆಗಳನ್ನು ವಿವರಿಸಿದರು.

ಒಂದು ಚಿತ್ರವನ್ನು ನೋಡುವ ಬಗೆಯನ್ನು ಮೊದಲು ರೂಢಿಸಿಕೊಂಡರೆ, ಹಲವು ಸಮಸ್ಯೆಗಳು ಬಗೆಹರಿದಾವು. ಹಾಗಾಗಿ ಸಿನಿಮಾವನ್ನು ನೋಡಿ ಚರ್ಚಿಸುವ ಪರಂಪರೆ ಇನ್ನಷ್ಟು ಬೆಳೆಯಬೇಕು ಎಂದು ಆಶಿಸಿದರು.

ಸಮಾರೋಪಕ್ಕೆ ಮುನ್ನ ಎಸ್. ದಿವಾಕರ್ ಮಾತನಾಡಿದರು. ಪರಮೇಶ್ ಗುರುಸ್ವಾಮಿ ಉಪಸ್ಥಿತರಿದ್ದರು.
ಸಮಾರೋಪಕ್ಕೆ ಮುನ್ನ ಎಸ್. ದಿವಾಕರ್ ಮಾತನಾಡಿದರು. ಪರಮೇಶ್ ಗುರುಸ್ವಾಮಿ ಉಪಸ್ಥಿತರಿದ್ದರು.

ಚಿತ್ರದೊಳಗಿನ ಜಗತ್ತು

ಸಮಾರೋಪದಲ್ಲಿ ಭಾಗವಹಿಸಿದ್ದ ಕಥೆಗಾರ ಎಸ್. ದಿವಾಕರ್ ಮಾತನಾಡಿ, ನಾವು ಕೇವಲ ಮನರಂಜನೆಗೆಂದಷ್ಟೇ ಸಿನಿಮಾ ನೋಡದೇ ಮನರಂಜನೆ ಅದರ ಒಂದು ಭಾಗವೆಂದಷ್ಟೇ ಪರಿಗಣಿಸಬೇಕು ಎಂದವರು ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ಕಥೆಗಾರ ಎಸ್. ದಿವಾಕರ್.

ಯಾವುದೇ ಹೊರೆಯನ್ನು ಇಟ್ಟುಕೊಳ್ಳದೇ ಮುಕ್ತವಾಗಿ ಮೊದಲು ಸಿನಿಮಾ ನೋಡಬೇಕು. ನಂತರ ಅದರ ಬಗ್ಗೆ ಚರ್ಚಿಸುವುದು ಸೂಕ್ತ. ಆಗ ಮಾತ್ರ ಅದರೊಳಗಿನ ಜಗತ್ತು ಕಾಣಲು ಸಾಧ್ಯವೆಂದರಲ್ಲದೆ, ಸಾಹಿತ್ಯ ಮತ್ತು ಚಿತ್ರವೆರಡೂ ವಿಭಿನ್ನ ಮಾಧ್ಯಮಗಳು. ಒಂದನ್ನೊಂದು ಹೋಲಿಕೆ ಮಾಡುವುದೇ ಸಮಂಜಸವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಟ್ರಸ್ಟಿನ ಅಧ್ಯಕ್ಷರಾದ ಪರಮೇಶ್ ಗುರುಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಹಕಾರದಲ್ಲಿ ಕುಪ್ಪಳಿಯಲ್ಲಿ ಮಾರ್ಚ್ 19-20 ರಂದು ಸಾಂಗತ್ಯವು ತನ್ನ 14 ನೇ ಶಿಬಿರವನ್ನು ಆಯೋಜಿಸಲಾಗಿತ್ತು. ಶಿಬಿರದಲ್ಲಿ ಪ್ರದರ್ಶಿಸಲಾದ ಚಿತ್ರಗಳ ಕುರಿತು ಸಂವಾದ ನಡೆಯಿತು.

ಉತ್ತಮ ಚರ್ಚೆ

ಬಂಗಾಳಿ ಚಿತ್ರ “ಬೇಲ್ ಶೀಶ್’ ಚಿತ್ರದ ಬಗ್ಗೆ ಒಂದಷ್ಟು ಕಾವೇರಿದ ಚರ್ಚೆ ನಡೆಯಿತಲ್ಲದೇ, ಒಂದು ಚಿತ್ರ ಹೇಳುವುದೆಲ್ಲವನ್ನೂ ಹೇಳಿಬಿಟ್ಟರೆ ತೀರಾ ವಾಚ್ಯ ವೆನಿಸುತ್ತದೆ. ಆಗ ಪ್ರೇಕ್ಷಕನಿಗೆ ಯೋಚಿಸುವುದಕ್ಕೆ ಏನೂ ಇರುವುದಿಲ್ಲ ಎಂದು ಕಥೆಗಾರ್ತಿ ಜಯಶ್ರೀ ಕಾಸರವಳ್ಳಿಯವರು ಅಭಿಪ್ರಾಯಪಟ್ಟರು. ಒಂದು ಸಿನಿಮಾವು ಪ್ರೇಕ್ಷನನ್ನೂ ಪಾಲ್ಗೊಳ್ಳಲು ಒಂದಷ್ಟು ಸ್ಪೇಸ್ ಇಟ್ಟಿರಬೇಕು. ಆಗ ಮಾತ್ರ ಪ್ರೇಕ್ಷಕ ಸಿನಿಮಾ ವೀಕ್ಷಣೆ ನಂತರವೂ ಆ ಒಳಗೊಳ್ಳುವ ಪ್ರಕ್ರಿಯೆಯ ಭಾಗವಾಗಿರುತ್ತಾನೆ ಎಂಬುದು ಅವರ ಅಭಿಪ್ರಾಯವಾಗಿತ್ತು. ಉಳಿದ ಶಿಬಿರಾರ್ಥಿಗಳೂ ಈ ಚರ್ಚೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಸಮಾರೋಪದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.