biffes 2

ಬೆಂಗಳೂರು, ಜ. 28 : ಬೆಂಗಳೂರು 8 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಗುರುವಾರ ಭವ್ಯವಾದ ಚಾಲನೆ ನೀಡಲಾಯಿತು.

ಜನವರಿ 28 ರಿಂದ ಫೆಬ್ರವರಿ 5 ರವರೆಗೆ ನಡೆಯುವ ಉತ್ಸವಕ್ಕೆವಿಧಾನಸೌಧದ ಪೂರ್ವ ದ್ವಾರದಲ್ಲಿ ಸಿದ್ಧಪಡಿಸಲಾಗಿದ್ದ ವೇದಿಕೆಯಲ್ಲಿ ಖ್ಯಾತ ನಟಿ ಜಯಾ ಬಚ್ಚನ್ ಚಾಲನೆ ನೀಡಿದರು.

ಸುಮಾರು 9 ದಿನಗಳ ಕಾಲ ಮೈಸೂರು ಮತ್ತು ಬೆಂಗಳೂರಿನಲ್ಲಿ ನಡೆಯಲಿದ್ದು, ಸಮಾರೋಪ ಸಮಾರಂಭವು ಮೈಸೂರಿನಲ್ಲಿ ನಡೆಯಲಿದೆ. ಈ ಉತ್ಸವದಲ್ಲಿ 200 ಕ್ಕೂ ಹೆಚ್ಚು ಚಲನಚಿತ್ರಗಳು ಪ್ರದರ್ಶನಗೊಳ್ಳಲಿದೆ.

ವಿಶ್ವ ಸಿನಿಮಾ, ಏಷ್ಯನ್ ಸಿನಿಮಾ, ಚಿತ್ರಭಾರತಿ (ಭಾರತೀಯ ಸಿನಿಮಾ), ಕನ್ನಡ ಸಿನಿಮಾ, ಪುನಾರಾವಲೋಕನ, ಕಂಟ್ರಿ ಫೋಕಸ್, ಕ್ಲಾಸಿಕ್ಸ್, ಶ್ರದ್ಧಾಂಜಲಿ, ಅಂತಾರಾಷ್ಟ್ರೀಯ ವಿಮರ್ಶಕರ ಸಂಘದ ಪ್ರಶಸ್ತಿ ಪಡೆದ ಸಿನಿಮಾಗಳು, ನೆಟ್ ಪ್ಯಾಕ್ ಪ್ರಶಸ್ತಿ ಪುರಸ್ಕೃತ ಚಿತ್ರಗಳು ಹಾಗೂ ಜಾಗತಿಕ ತಾಪಮಾನ, ಬರ, ಅಭಿವ್ಯಕ್ತಿ ಸ್ವಾತಂತ್ರ್ಯ ಕುರಿತ ವಿಶೇಷ ಕಥಾವಸ್ತುವುಳ್ಳ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಚಲನಚಿತ್ರೋತ್ಸವದ ಪಟ್ಟಿ, ದಿನವಾರು ಚಿತ್ರಗಳ ಪಟ್ಟಿಗೆ ಇಲ್ಲಿ ಕ್ಲಿಕ್ ಮಾಡಿ. 

ಉತ್ಸವದ ಕಾರ್ಯಕಾರಿ ಕಲಾತ್ಮಕ ನಿರ್ದೇಶಕರಾಗಿ ವಿದ್ಯಾಶಂಕರ್ ಕಾರ್ಯ ನಿರ್ವಹಿಸುತ್ತಿದ್ದು, ಬೆಂಗಳೂರಿನ ಒರಿಯಾನ್ ಮಾಲ್ ನಲ್ಲಿ 11 ಸ್ಕ್ರೀನ್ ಗಳಲ್ಲಿ ಚಿತ್ರ ಪ್ರದರ್ಶಿತಗೊಂಡರೆ, ಮೈಸೂರಿನ ಮೈಸೂರು ಮಾಲ್ ನಲ್ಲಿ 4 ಸ್ಕ್ರೀನ್ ಗಳಲ್ಲಿ ಚಿತ್ರ ಬಿತ್ತರಗೊಳ್ಳಲಿದೆ. ನಟಿ ಜಯಮಾಲಾ ಈ ಉತ್ಸವದ ಕಲಾತ್ಮಕ ನಿರ್ದೇಶಕರು.

Biffes 1ಆವರ ಪಾಡಿಗೆ ಬಿಟ್ಟು ಬಿಡಿ

ಚಿತ್ರೋತ್ಸವಕ್ಕೆ ಚಾಲನೆ ನೀಡಿದ ಜಯಾ ಬಚ್ಚನ್, ಕಲಾವಿದರು ಸೃಜನಶೀಲರು. ಅವರ ಪಾಡಿಗೆ ಅವರನ್ನು ಬಿಟ್ಟು ಬಿಡಿ ಎಂದು ಮನವಿ ಮಾಡಿದರು. ನಂತರ ಬೆಂಗಳೂರಿನೊಂದಿಗಿನ ಹಳೆಯ ದಿನಗಳನ್ನು ನೆನಪಿಸಿಕೊಂಡರು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಸಮಾಜದ ಪ್ರಗತಿಯ ಹಿತದೃಷ್ಟಿಯಿಂದ ಅಶ್ಲೀಲತೆಯಿಲ್ಲದ ಸದಭಿರುಚಿಯ ಚಿತ್ರಗಳನ್ನು ನಿರ್ಮಿಸಬೇಕೆಂದು ಚಿತ್ರ ಸಮುದಾಯಕ್ಕೆ ಕರೆ ನೀಡಿದರು.

ಹಿಂದೆ ಇಷ್ಟೊಂದು ಆಧುನಿಕ ತಂತ್ರಜ್ಞಾನವಿರದಿದ್ದರೂ, ಪ್ರತಿಭೆಗೆ ಬರವಿರಲಿಲ್ಲ. ಜತೆಗೆ ಚಿತ್ರ ನಿರ್ಮಿಸುವುದೂ ಕಷ್ಟವಾಗಿತ್ತು. ಹಣದ ತೊಂದರೆ ಪ್ರತಿಯೊಬ್ಬರನ್ನೂ ಕಾಡುತ್ತಿತ್ತು. ಇಂಥ ಹೊತ್ತಿನಲ್ಲೂ ಚಿತ್ರ ನಿರ್ದೇಶಕರು, ನಿರ್ಮಾಪಕರು ಕಥಾವಸ್ತುವಿನ ಬಗ್ಗೆ ರಾಜಿ ಮಾಡಿಕೊಳ್ಳದೇ ಸಾಮಾಜಿಕ ಕಳಕಳಿಯ ಚಿತ್ರಗಳನ್ನು ಸಿದ್ಧಗೊಳಿಸಿದರು. ಅದು ನಮಗೆ ಮಾದರಿ ಎಂದು ಹೇಳಿದರು.

ಯುವ ನಿರ್ದೇಶಕ ರಾಮಿರೆಡ್ಡಿಯವರ ಚೊಚ್ಚಲ ಚಿತ್ರ ‘ತಿಥಿ” ಉದ್ಘಾಟನಾ ಚಿತ್ರವಾಗಿ ಪ್ರದರ್ಶನಗೊಂಡಿತು. ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಆವರು ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು.

ವಾರ್ತಾ ಸಚಿವ ಅರ್. ರೋಷನ್ ಬೇಗ್, ಸಚಿವರಾದ ಅಂಬರೀಷ್, ಡಾ. ಜಿ. ಪರಮೇಶ್ವರ್, ವಿಧಾನಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ, ನಟರಾದ ದಗ್ಗುಬಾಟಿ ವೆಂಕಟೇಶ್,  ಶ್ರೀನಾಥ್, ಶಿವರಾಜ್ ಕುಮಾರ್, ಸುಂದರ್ ರಾಜ್, ದೊಡ್ಡಣ್ಣ, ಶಿವರಾಂ, ಜೈ ಜಗದೀಶ್, ನಟಿಯರಾದ ಸಾಹುಕಾರ್ ಜಾನಕಿ, ತಾರಾ, ಭಾರತಿ ವಿಷ್ಣುವರ್ಧನ್, ಸುಮಲತಾ ಮತ್ತಿತರರು ಭಾಗವಹಿಸಿದ್ದರು. ಚಿತ್ರ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ಅಶೋಕ್ ಅಮೃತರಾಜ್, ಟಿ. ಎಸ್. ನಾಗಾಭರಣ, , ರಾಜ್ಯ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್. ವಿ. ರಾಜೇಂದ್ರ ಸಿಂಗ್ ಬಾಬು, ಮೇಯರ್ ಬಿ.ಎನ್. ಮಂಜುನಾಥ ರೆಡ್ಡಿ, ವಾರ್ತಾ ಇಲಾಖೆ ನಿರ್ದೇಶಕ ಆರ್. ವಿಶುಕಮಾರ್ ಭಾಗವಹಿಸಿದ್ದರು.