ಪತ್ರಿಕಾಗೋಷ್ಠಿಯಲ್ಲಿ ಕಬೀರ್ ಖಾನ್, ವಿನೋದ್ ಮಂಕರ್ ಭಾಗವಹಿಸಿದ್ದರು.
ಪತ್ರಿಕಾಗೋಷ್ಠಿಯಲ್ಲಿ ಕಬೀರ್ ಖಾನ್, ವಿನೋದ್ ಮಂಕರ್ ಭಾಗವಹಿಸಿದ್ದರು.

ಸಾಂಗತ್ಯ ಪ್ರತಿನಿದಿಯಿಂದ

ಪಣಜಿ : ‘ಸ್ಟಾರ್ ನಟರು ತಮ್ಮ ಇಮೇಜ್ ಗಳ ಬಗ್ಗೆ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಕಥೆ ಜನರನ್ನು ತಲುಪುವ ಸಾಧ್ಯತೆ ಹೆಚ್ಚಿರುತ್ತದೆ’ ಎಂಬುದು ಹಿಂದಿ ಚಿತ್ರ ನಿರ್ದೇಶಕ ಕಬೀರ್ ಖಾನ್ ಅವರ ಅಭಿಪ್ರಾಯ.

ಗೋವಾ ಚಿತ್ರೋತ್ಸವದಲ್ಲಿ ಭಾಗವಹಿಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆವರು, ‘ಭಜರಂಗಿ ಭಾಯಿಜಾನ್ ನಲ್ಲಿ ಸಲ್ಮಾನ್ ಖಾನ್ ತಮ್ಮ ಸ್ಟಾರ್ ಗಿರಿಯಿಂದ ಹೊರಬಂದು ನಟಿಸಿದ್ದಾರೆ. ಅದಕ್ಕೆ ನಿರ್ದೇಶಕನಾದ ನಾನು ಆ ರೀತಿ ನಟಿಸುವಂತೆ ನಿರ್ದೇಶಿಸಿದ್ದೇನೆ ಅಥವಾ ಸ್ಟಾರ್ ಗಿರಿಯಲ್ಲಿ ಮೆರೆಯದೆ ನಿಯಂತ್ರಿಸಿದ್ದೇನೆ ಎಂಬ ಮಾತುಗಳು ಹಾಗೂ ಪ್ರಶ್ನೆಗಳು ಕೇಳಿಬರುತ್ತಿವೆ. ವಾಸ್ತವವಾಗಿ ಅಂಥದ್ದೇನೂ ಇಲ್ಲ. ಸಲ್ಮಾನ್ ಖಾನ್ ಈ ಕಥೆಯನ್ನು ಕೇಳಿದ ನಂತರ ಅವರೇ ಖುದ್ದಾಗಿ ತಮ್ಮ ಎಂದಿನ ನಟನೆಯಲ್ಲಿ ಕೆಲವನ್ನು ತ್ಯಜಿಸಲು ನಿರ್ಧರಿಸಿದರು. ಜತೆಗೆ ಈ ಕಥೆಗೆ ಪೂರಕವಾಗಿ ಯಾವ ರೀತಿ ಬೇಕೋ ಅದನ್ನು ಪೂರೈಸಿದರು’ ಎಂದರು.

‘ಇದು ಒಬ್ವ ಸ್ಟಾರ್ ನಟನ ತೀರ್ಮಾನ. ನಾವು ಅಂಥ ತೀರ್ಮಾನದ ಪರಿಣಾಮವನ್ನು ಗುರುತಿಸಬೇಕು. ಸಲ್ಮಾನ್ ಖಾನ್ ತಮ್ಮ ಇಮೇಜ್ ನಿಂದ ಹೊರಬಂದು, ಕಥೆಗೆ ಪೂರಕವಾಗಿ ನಟಿಸಿದ್ದರಿಂದ ಆ ಚಿತ್ರ ತಲುಪಿಸಬೇಕಾಗಿದ್ದ ಸಂದೇಶ ಬಹು ಜನರನ್ನು ತಲುಪಿತು. ಒಟ್ಟೂ ಉದ್ದೇಶ ಈಡೇರಿತು. ಇದು ಮಹತ್ವವಾದುದು’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಭಾರತೀಯ ಪನೋರಮಾದ ಉದ್ಘಾಟನಾ ಚಿತ್ರ ‘ಪ್ರಿಯ ಮಾನಸ’ ದ ನಿರ್ದೇಶಕ ಡಾ. ವಿನೋದ್ ಮಂಕರ, ಸಂಸ್ಕೃತ ಭಾಷೆಗೆ ಪ್ರಚಾರ ನೀಡುವ ಸಲುವಾಗಿ ನನ್ನ ಚಿತ್ರವನ್ನು ಸಂಸ್ಕೃತದಲ್ಲಿ ಮಾಡಿದ್ದೇನೆ. ಒಳ್ಳೆಯ ಪ್ರೋತ್ಸಾಹ ಸಿಕ್ಕಿದೆ ಎಂದರು.

ರಾಜ್ ಕಹಾನಿ ಚಿತ್ರ ನಿರ್ದೇಶಕ ಸೃಜಿತ್ ಮುಖರ್ಜಿ, ತಮ್ಮ ಸಿನಿಮಾದ ಬಗ್ಗೆ ವಿವರಿಸಿದರು. ಗಡಿಯಲ್ಲಿ ನಡೆಯುತ್ತಿರುವ ಸಂಗತಿಗಳ ಬಗ್ಗೆ ಬೆಳಕು ಚೆಲ್ಲುತ್ತಲೇ ಅಲ್ಲಿನ ಜನರ ಪಾಡನ್ನು ವಿವರಿಸುವುದು ನನ್ನ ಉದ್ದೇಶ ಎಂದರು.