indian panorama
ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ಪನೋರಮಾದ ಜೂರಿ ಅರಿಬಮ್ ಸ್ಯಾಂ ಶರ್ಮ ಮಾತನಾಡಿದರು.

ಪಣಜಿ : ಪ್ರತಿ ಇಫಿ ಚಿತ್ರೋತ್ಸವದ ವಾತಾವರಣ ಮತ್ತು ಅವರು ಬಾಲಿವುಡ್ ಗೆ ಕೊಡುವ ಆದ್ಯತೆಗಳನ್ನು ಕಂಡು ಏಳುವ ಪ್ರಶ್ನೆಯೇ ಇಫಿ 2015 ರ ಓಪನ್ ಫೋರಂ ಉದ್ಘಾಟನೆ ಸಂದರ್ಭ ಚರ್ಚೆಗೆ ಬಂದಿತು.

ಯಾವಾಗಲೂ ಇಫಿ ಯ ಚಿತ್ರೋತ್ಸವದ ಉದ್ಘಾಟನಾ ಸಮಾರಂಭದಿಂದ ಹಿಡಿದು ಎಲ್ಲೆಡೆಯೂ ಬಾಲಿವುಡ್ ನಟರಿಗೆ ಹಾಕುವ ಮಣೆ ಕಂಡೇ ಇದು ಭಾರತೀಯ ಸಿನಿಮಾಕ್ಕೇ ಸಲ್ಲುತ್ತಿರುವ ಗೌರವವೋ ಅಥವಾ ಬಾಲಿವುಡ್ ಗೋ ಎನ್ನುವ ಪ್ರಶ್ನೆ ಏಳುತ್ತದೆ. ಅದರಂತೆ ಈ ಬಾರಿಯೂ ಉದ್ಘಾಟನೆಗೆ ಅನಿಲ್ ಕಪೂರ್ ರನ್ನು ಕಳಿಸಿದರು. ಅದು ಬಿಡಿ. ಇಫಿ  ಚಿತ್ರೋತ್ಸವದ ಸುತ್ತಲೆಲ್ಲಾ ಹಾಕಿರುವ ಪೋಸ್ಟರ್ ಗಳಲ್ಲೆಲ್ಲಾ ತುಂಬಿರುವುದು ಬರೀ ಬಾಲಿವುಡ್ ನಟರೇ. ರಜನೀಕಾಂತ್ ಒಬ್ಬರನ್ನು ಹೊರತುಪಡಿಸಿ ಬೇರಾವ ಭಾಷೆಯ ನಟರಿಗೂ ಅಲ್ಲಿ ಆದ್ಯತೆಯೇ ಇಲ್ಲ. 

ಅಂಥದ್ದರಲ್ಲಿ ಈ ವಾದಕ್ಕೆ ಪುಷ್ಟಿ ನೀಡುವಂತೆ ಓಪನ್ ಫೋರಂನ ಉದ್ಘಾಟನೆಯ ದಿನದಂದು ಚರ್ಚೆಗೆ ಇಟ್ಟ ಸಂಗತಿ ‘ರೀಜನಲ್ ಸಿನಿಮಾ : ಸ್ಮಾಲ್ ಬಟ್ ಬ್ಯೂಟಿಫುಲ್”. ಪ್ರಾದೇಶಿಕ ಸಿನಿಮಾ, ಚಿಕ್ಕದಾದರೂ ಸುಂದರ. ಈ ಮೂಲಕ ಇಫಿ ಬಾಲಿವುಡ್ ಗೆ ನೇರವಾಗಿಯೇ ಮಣೆ ಹಾಕಿತು.

ವಿಚಿತ್ರವೆಂದರೆ ರೀಜನಲ್ ಸಿನಿಮಾಗಳು ದೊಡ್ಡದೆಂದು ಹೇಳಬೇಕಾಗಿದ್ದ ಫೆಡರೇಷನ್ ಆಫ್ ಫಿಲ್ಮ್ ಸೊಸೈಟೀಸ್ ಆಫ್ ಇಂಡಿಯಾ(ಎಫ್ಎಫ್ ಎಸ್ ಐ), ಸಹ ಇದೇ ವಾದವನ್ನು ಒಪ್ಪಿಕೊಂಡಿದ್ದು ವಿಪರ್ಯಾಸವೆನಿಸಿತು. ಯಾಕೆಂದರೆ ಈ ಓಪನ್ ಫೋರಂನ ನಿರ್ವಹಣೆಯ ಹೊಣೆ ಹೊತ್ತಿರುವುದು ಇದೇ ಎಫ್ ಎಫ್ ಎಸ್ ಐ.

ಇದರ ಉದ್ಘಾಟನಾ ಸಮಾರಂಭದಲ್ಲಿ ಭಾರತೀಯ ಪನೋರಮಾ ವಿಭಾಗದ ತೀರ್ಪುಗಾರರ ಸಮಿತಿ ಅಧ್ಯಕ್ಷ ಮತ್ತು ಮಣಿಪುರದ ಚಿತ್ರ ನಿರ್ದೇಶಕ ಅರಿಬಂ ಸ್ಯಾಂ ಶರ್ಮ, “ನನಗೆ ಈ ದ್ವಂದ್ವವೇ ಅರ್ಥವಾಗುತ್ತಿಲ್ಲ. ಬೇರೆ ದೇಶಗಳಲ್ಲಿ ನಮ್ಮನ್ನು ಭಾರತೀಯ ಸಿನಿಮಾ ನಿರ್ದೇಶಕರೆಂದು ಗುರುತ್ತಿಸುತ್ತಾರೆ. ಬೇರೆ ಬೇರೆ ಸಿನಿಮಾ ಫೆಸ್ಟಿವಲ್ ಗಳಲ್ಲಿ ಹೋದಾಗ ನಮ್ಮನ್ನು ಕರೆಯುವುದು ಮತ್ತು ಗೌರವಿಸುವುದು ಭಾರತೀಯ ಸಿನಿಮಾ ನಿರ್ದೇಶಕರೆಂದು. ಆದರೆ, ಇಲ್ಲಿ-ಇಫಿಯಂಥ ಉತ್ಸವಗಳಲ್ಲಿ ನಮ್ಮನ್ನು ಪ್ರಾದೇಶಿಕ ಸಿನಿಮಾದ ನಿರ್ದೇಶಕನೆಂದು ಕರೆಯುತ್ತಾರೆ. ಯಾಕೆ ಈ ದ್ವಂದ್ವ ಮತ್ತು ಗೊಂದಲ. ಹಾಗಾದರೆ ಇಫಿ ಯಂಥ ಉತ್ಸವಗಳಲ್ಲಿ ಭಾರತೀಯ ಸಿನಿಮಾ ನಿರ್ದೇಶಕರೆಂದರೆ ಯಾರು?’ ಎಂದು ಪ್ರಶ್ನಿಸಿದರು.

ಅದೇ ಸಂದರ್ಭದಲ್ಲಿ ‘ಬಾಲಿವುಡ್ ನ ಭರಾಟೆಯಲ್ಲಿ ಭಾರತೀಯ ಸಿನಿಮಾಗಳನ್ನು ಬೆಳೆಸಲು (ಬೇರೆ ಬೇರೆ ಭಾಗಗಳಿಂದ ನಿರ್ಮಾಣವಾಗುತ್ತಿರುವ) ರಾಷ್ಟ್ರಮಟ್ಟದಲ್ಲಿ ಅಕಾಡೆಮಿಯಂಥ ಸಂಸ್ಥೆ ಬೇಕು. ಚಲನಚಿತ್ರೋತ್ಸವಗಳ ನಿರ್ದೇಶನಾಲಯ (ಡಿಎಫ್ ಎಫ್) ಹೇಗೆ ಉತ್ಸವಗಳನ್ನು ಬೆಳೆಸುತ್ತದೋ, ಹಾಗೆಯೇ ಎನ್ ಎಫ್ ಡಿಸಿ ಯಂಥ ಸಂಸ್ಥೆಗಳು ಬೇರೆ ಬೇರೆ ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ಭಾರತೀಯ ಸಿನಿಮಾಗಳನ್ನು ಪ್ರೋತ್ಸಾಹಿಸಬೇಕು. ಅದಕ್ಕೆ ಪೂರಕ ಸಹಕಾರ ಒದಗಿಸಬೇಕು’ ಎಂದು ಅಭಿಪ್ರಾಯಪಟ್ಟರು. ಸಭೆಯಲ್ಲೂ ಇದಕ್ಕೆ ಸಹಮತ ವ್ಯಕ್ತವಾಯಿತು. ಇಎಸ್ ಜಿ ಯ ದಾಮೋದರ ನಾಯಕ್ ಮತ್ತಿತರರು ಭಾಗವಹಿಸಿದ್ದರು.

Advertisements