ಭಾರತೀಯ ಪನೋರಮಾ ವಿಭಾಗದ ತೀರ್ಪುಗಾರರಾದ ಪತ್ರಕರ್ತ ಎಂ ಕೆ ಭಾಸ್ಕರ ರಾವ್ ಆವರನ್ನು ಕೇಂದ್ರ ವಾರ್ತಾ ಮತ್ತು ಪ್ರಚಾರ ಖಾತೆ ರಾಜ್ಯ ಸಚಿವ ಕ. ರಾಜ್ಯವರ್ಧನ್ ರಾಥೋಡ್ ಗೌರವಿಸಿದರು.
ಭಾರತೀಯ ಪನೋರಮಾ ವಿಭಾಗದ ತೀರ್ಪುಗಾರರಾದ ಪತ್ರಕರ್ತ ಎಂ ಕೆ ಭಾಸ್ಕರ ರಾವ್ ಆವರನ್ನು ಕೇಂದ್ರ ವಾರ್ತಾ ಮತ್ತು ಪ್ರಚಾರ ಖಾತೆ ರಾಜ್ಯ ಸಚಿವ ಕ. ರಾಜ್ಯವರ್ಧನ್ ರಾಥೋಡ್ ಗೌರವಿಸಿದರು.
ಭಾರತೀಯ ಪನೋರಮಾ ವಿಭಾಗದ ಉದ್ಘಾಟನೆ ಸಂದರ್ಭ ತೀರ್ಪುಗಾರರ ಜತೆ ಸಚಿವರು.
ಭಾರತೀಯ ಪನೋರಮಾ ವಿಭಾಗದ ಉದ್ಘಾಟನೆ ಸಂದರ್ಭ ತೀರ್ಪುಗಾರರ ಜತೆ ಸಚಿವರು.
ಗೂಂಗಾ ಪೈಲ್ವಾನ್ ಚಿತ್ರದ ನಿರ್ದೇಶಕರಾದ ವಿವೇಕ್ ಚೌಧರಿ, ಪ್ರತೀಕ್ ಗುಪ್ತಾ, ಮಿತ್ ಜಾನಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಗೂಂಗಾ ಪೈಲ್ವಾನ್ ಚಿತ್ರದ ನಿರ್ದೇಶಕರಾದ ವಿವೇಕ್ ಚೌಧರಿ, ಪ್ರತೀಕ್ ಗುಪ್ತಾ, ಮಿತ್ ಜಾನಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಭಾರತೀಯ ಪನೋರಮಾದ ಉದ್ಘಾಟನಾ ಚಿತ್ರ ಪ್ರಿಯ ಮಾನಸಂನ ತಂಡದೊಂದಿಗೆ ಸಚಿವರು.
ಭಾರತೀಯ ಪನೋರಮಾದ ಉದ್ಘಾಟನಾ ಚಿತ್ರ ಪ್ರಿಯ ಮಾನಸಂನ ತಂಡದೊಂದಿಗೆ ಸಚಿವರು.
ಭಜರಂಗಿ ಬಾಯಿಜಾನ್ ನಿರ್ದೇಶಕ ಕಬೀರ್ ಖಾನ್ ರೆಡ್ ಕಾರ್ಪೆಟ್ ನಲ್ಲಿ
ಭಜರಂಗಿ ಬಾಯಿಜಾನ್ ನಿರ್ದೇಶಕ ಕಬೀರ್ ಖಾನ್ ರೆಡ್ ಕಾರ್ಪೆಟ್ ನಲ್ಲಿ

ಸಾಂಗತ್ಯ ಪ್ರತಿನಿಧಿಯಿಂದ

ಪಣಜಿ : ಇದು ನೆಗೆಟಿವ್ ರಿಪೋರ್ಟಿಂಗ್ ಅಂದುಕೊಳ್ಳಬೇಡಿ. ವಾಸ್ತವ.

ನಾಲ್ಕು ವರ್ಷಗಳಿಂದ ಗೋವಾ ಚಿತ್ರೋತ್ಸವವನ್ನು ವರದಿ ಮಾಡುತ್ತಿರುವ ಸಾಂಗತ್ಯದ ಪ್ರತಿನಿಧಿಗಳಿಗೆ ಕಂಡು ಬಂದ ಚಿತ್ರಣ.  46 ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (IFFI 2015) ಪ್ರಾರಂಭವಾಗಿ ಎರಡು ದಿನವಾದರೂ ಜನಗಳನ್ನೇ ಸೆಳೆಯುತ್ತಿಲ್ಲ.

ಕಳೆದ ನಾಲ್ಕು ವರ್ಷಕ್ಕೆ ಹೋಲಿಸಿದರೆ ಈ ವರ್ಷ ಚಿತ್ರೋತ್ಸವದ ಅಂಗಳದಲ್ಲಿ ರಂಗೇ ತೋರುತ್ತಿಲ್ಲ. ವ್ಯವಸ್ಥೆಯ ಸಮಸ್ಯೆಗಳೇ ಢಾಳಾಗಿ ತೋರುತ್ತಿದೆಯೇ ಹೊರತು ಉತ್ಸವದ ವಾತಾವರಣವೇ ಕಂಡು ಬರುತ್ತಿಲ್ಲ.

ನಾಲ್ಕು ವರ್ಷಗಳಲ್ಲಿ ಪ್ರತಿ ವರ್ಷ ಪ್ರತಿನಿಧಿಗಳ ಸಂಖ್ಯೆಯಲ್ಲಿ ಏರಿಕೆ ಕಂಡಬರುತ್ತಿತ್ತು. ಅದನ್ನು ಪುಷ್ಟೀಕರಿಸುವಂತೆ ಇಫಿ 2014 ರಲ್ಲಿ 12 ಸಾವಿರದಷ್ಟು ಪ್ರತಿನಿಧಿಗಳು ಭಾಗವಹಿಸಿದ್ದರು. ಜತೆಗೆ ಶನಿವಾರ, ಭಾನುವಾರವಂತೂ ದಿನದ ಟಿಕೆಟ್ (ಪ್ರತಿನಿಧಿ) ಪಡೆಯುವ ಕೌಂಟರ್ ಗಳಲ್ಲಿ ಜನರು ಕಿಕ್ಕಿರಿದು ತುಂಬಿರುತ್ತಿದ್ದರು. ಆದರೆ, ಇಂದು ಭಾನುವಾರ. ಸ್ಥಳೀಯರ ಪಾಲ್ಗೊಳ್ಳುವಿಕೆಯೂ ಹೆಚ್ಚಿರಬೇಕು. ವಾತಾವರಣ ಸಂಪೂರ್ಣ ವಿರುದ್ಧ. ಯಾವುದೇ ಕೌಂಟರ್ ಗಳಲ್ಲೂ ಜನರೇ ಇಲ್ಲ.

ನಿನ್ನೆಯ ಪೋಸ್ಟ್ ಮಾರ್ಟಂ

ಭಾರತೀಯ ಪನೋರಮಾ (ಕಥಾ-ಕಥೇತರ) ವಿಭಾಗ ಶನಿವಾರದಿಂದ ಪ್ರಾರಂಭವಾಯಿತು. ಪನೋರಮಾದ ಉದ್ಘಾಟನಾ ಚಿತ್ರ (ಕಥೇತರ ವಿಭಾಗ) ಗೂಂಗಾ  ಪೈಲ್ವಾನ್ ಚೆನ್ನಾಗಿತ್ತು. ಪ್ಯಾರಾ ಒಲಿಂಪಿಕ್ಸ್ ಕ್ರೀಡಾಳುಗಳಿಗೆ ಸಲ್ಲಬೇಕಾದ ಗೌರವದ ಬಗ್ಗೆ ಗಮನ ಸೆಳೆಯಿತು. ಆದರೆ, ಕಥಾ ವಿಭಾಗದ ಉದ್ಘಾಟನಾ ಚಿತ್ರ ಸಂಸ್ಕೃತದ ‘ಪ್ರಿಯಮಾನಸಂ” ಗೆ ಜನರು ಇದದ್ದೇ ಕಡಿಮೆ. ಮಲಯಾಳಂ ಉಚ್ಛಾರಣೆಯ ಸಂಸ್ಕೃತ ಸಿನಿಮಾವಾಗಿದ್ದರಿಂದ ಸಂವಹನದ ಸಮಸ್ಯೆಯೂ ಬಹಳಷ್ಟು ಮಂದಿಗೆ ಎದುರಾಯಿತು.

ಪನೋರಮಾ ವಿಭಾಗದ ಉದ್ಘಾಟನೆ ನಿಗದಿತ ಸಮಯಕ್ಕಿಂತ 45 ನಿಮಿಷ ತಡವಾಗಿ ಪ್ರಾರಂಭವಾಯಿತು. ಕ್ರೀಡಾಳು ಮತ್ತು ಸೇನೆ ಅಧಿಕಾರಿಯಾಗಿದ್ದರೂ ಕೇಂದ್ರ ವಾರ್ತಾ ಮತ್ತು ಪ್ರಚಾರ ಖಾತೆ ರಾಜ್ಯ ಸಚಿವ ರಾಜ್ಯವರ್ಧನ್ ರಾಥೋಡ್ ಸಮಯ ಶಿಸ್ತು ಪಾಲಿಸುವಲ್ಲಿ ವಿಫಲರಾದರು. ನಂತರ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಭಾರತೀಯ ಪನೋರಮಾ ವಿಭಾಗದ ತೀರ್ಪುಗಾರರಾದ ಕನ್ನಡದ ಎಂಕೆ ಭಾಸ್ಕರರಾವ್ ಮತ್ತು ಪಂಚಾಕ್ಷರಿ ಒಳಗೊಂಡಂತೆ ಎಲ್ಲರನ್ನೂ ಗೌರವಿಸಲಾಯಿತು. ಬಳಿಕ ಉದ್ಘಾಟನಾ ಚಿತ್ರಗಳಾದ ಗೂಂಗಾ ಪೈಲ್ವಾನ್ ನ ನಿರ್ದೇಶಕರಾದ ವಿವೇಕ್ ಚೌಧರಿ, ಪ್ರತೀಕ್ ಗುಪ್ತಾ, ಮಿತ್ ಜಾನಿಯವರನ್ನೂ ಸನ್ಮಾನಿಸಲಾಯಿತು.

ಉಳಿದಂತೆ ಕಲಾ ಅಕಾಡೆಮಿಯಲ್ಲಿ ಕಂಟ್ರಿ ಫೋಕಸ್ ನಡಿ ಸ್ಪೇನ್ ನ ‘ಇಸ್ಲಾ ಬೊನಿಟ’ ಕೌಟುಂಬಿಕ ಸಂಬಂಧಗಳ ಬಗೆಗಿನ ಚಿತ್ರವಾಗಿತ್ತು. ಆ ಮೂಲಕ ಸ್ಪೇನ್ ಚಿತ್ರಗಳ ವಿಭಾಗ ಪ್ರಾರಂಭವಾಗಿದ್ದು, ಸುಮಾರು 10 ಕ್ಕೂ ಹೆಚ್ಚು ಚಿತ್ರಗಳು ಪ್ರದರ್ಶನಗೊಳ್ಳಲಿವೆ.

ನಿನ್ನೆಯೂ ಹಲವು ಶೋಗಳಿಗೆ ಜನರೇ ಇರಲಿಲ್ಲ. ಸಾಮಾನ್ಯವಾಗಿ ಕಳೆದ ಉತ್ಸವದಲ್ಲಿ ಮೊದಲ ಆರು ದಿನಗಳಲ್ಲೂ ಬಹುತೇಕ ಥಿಯೇಟರುಗಳು ತುಂಬಿ ತುಳುಕುತ್ತಿದ್ದವು. ಎಷ್ಟೋ ಸಿನಿಮಾಗಳಿಗೆ ಟಿಕೆಟ್ ಸಹ ಸಿಕ್ಕಿರಲಿಲ್ಲ. ಪ್ರತಿ ಶೋಗಳಿಗೂ ಟಿಕೆಟ್ ಇಲ್ಲದೇ ಥಿಯೇಟರುಗಳ ಮುಂದೆ ಅವಕಾಶಕ್ಕಾಗಿ ಕಾಯುತ್ತಿದ್ದವರು ಬಹಳಷ್ಟು ಮಂದಿ ಇದ್ದರು. ಈ ಬಾರಿ ಅಂಥ ಯಾವುದೇ ದೃಶ್ಯಗಳಿರಲಿಲ್ಲ.

ಉದ್ಯಮದ ಬಹಿಷ್ಕಾರವೊಂದೇ ಕಾರಣವಲ್ಲ

ಜನ ಆಸಕ್ತಿ ಕಳೆದುಕೊಳ್ಳಲು ಚಿತ್ರೋದ್ಯಮಗಳ ಬಹಿಷ್ಕಾರವಷ್ಟೇ ಕಾರಣವಲ್ಲ. ಭಾರತೀಯ ಚಲನಚಿತ್ರ ಒಕ್ಕೂಟ (FFI), ದಕ್ಷಿಣ ಭಾರತೀಯ ಚಲನಚಿತ್ರ ವಾಣಿಜ್ಯ ಮಂಡಳಿ (SIFCC), ಇಂಡಿಯನ್ ಮೋಷನ್ ಪಿಕ್ಚರ್ಸ್ ಅಸೋಸಿಯೇಷನ್ (ಇನ್ಫಾ) ಸಂಘಟನೆಗಳು ಈ ಚಿತ್ರೋತ್ಸವವನ್ನು ಬಹಿಷ್ಕರಿಸಿದ್ದವು. ಕಳಸಾ ಬಂಡೂರಿ ಮತ್ತು ಗೋವಾ ಕನ್ನಡಿಗರ ಮೇಲಿನ ಗೋವಾ ಸರಕಾರದ ಧೋರಣೆಯನ್ನು ಖಂಡಿಸಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೂ ಬಹಿಷ್ಕರಿಸಿತ್ತು. ಆದರೆ, ಸಾಮಾನ್ಯವಾಗಿ ಇವುಗಳಿಂದ ಬರುವವರು ಚಿತ್ರ ನಿರ್ಮಾಪಕರು, ನಿರ್ದೇಶಕರು.

ಆದರೆ, ಪ್ರತಿನಿಧಿಗಳ ಶುಲ್ಕವನ್ನೂ 300 ರೂ. ಗಳಿಂದ 1000 ರೂ. ಗಳಿಗೆ ಏರಿಸಿರುವುದು ಹಾಗೂ ನ. 20 ರ ನಂತರ ನೋಂದಣಿ ಮಾಡಿಕೊಳ್ಳುವವರಿಗೆ 500 ರೂ. ಶುಲ್ಕ ವಿಧಿಸಿರುವುದೂ ಸಹ ಆಸಕ್ತರ ಸಂಖ್ಯೆ ಕಡಿಮೆಯಾಗಲು ಕಾರಣ.