_DSC2927_DSC2960

ಪಣಜಿ : ಶುಕ್ರವಾರ ವಿಶ್ವ ಪ್ರಸಿದ್ಧ ಚಿತ್ರೋತ್ಸವವಾದ “ಇಫಿ 2015” ಕ್ಕೆ ಚಾಲನೆ ದೊರೆಯಿತು. ತುಂಬಿದ ಸಿನಿಮಾ ಗೃಹಗಳಲ್ಲಿ ಏಕಕಾಲಕ್ಕೆ ಭಾರತೀಯ ಗಣಿತಜ್ಞ ಶ್ರೀನಿವಾಸ ರಾಮನುಜಂ ಕುರಿತ ‘ದಿ ಮ್ಯಾನ್ ವು ನ್ಯೂ ಇನ್ಫಿನಿಟಿ’ ಕುರಿತ ಚಲನಚಿತ್ರ ಪ್ರದರ್ಶನ ಕಂಡಿತು. (ಫೋಟೋ ಕೃಪೆ : ಹರಿ ಓಂ ಮೆಹ್ರಾ)

ಮೊದಲ ಬಾರಿಗೆ ಉದ್ಘಾಟನಾ ಚಿತ್ರವನ್ನು ಎಲ್ಲ ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಪ್ರದರ್ಶಿಸಲಾಯಿತು. ಇದುವರೆಗೆ ಉದ್ಘಾಟನಾ ಚಿತ್ರವನ್ನು ಕಲಾ ಅಕಾಡೆಮಿಯಲ್ಲಿ ಮಾತ್ರ ಪ್ರದರ್ಶಿಸಲಾಗುತ್ತಿತ್ತು.

ಡಾ. ಶ್ಯಾಂಪ್ರಸಾದ್ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ಸಿನಿ ಸಮೂಹದ ಮಧ್ಯೆ ನಡೆದ 46 ನೇ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭದಲ್ಲಿ ನೆನಪುಗಳದ್ದೇ ವೈಭವ. ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ತಮ್ಮ ಸಂಯೋಜನೆಯ ಗೀತೆ ಹಾಡಿದಾಗ ಸಭಿಕರು ಚಪ್ಪಾಳೆ ತಟ್ಟಿ ಖುಷಿಪಟ್ಟರೆ, “ಧಕ್ ಧಕ್ ಕರನೇ ಲಗಾ’ ಎಂದು ಅನಿಲ್ ಕಪೂರ್ ಕುಣಿದಾಗಲಂತೂ ಜನ ಹರ್ಷ ವ್ಯಕ್ತಪಡಿಸಿದರು.

ಗೋವಾದ ರಾಜ್ಯಪಾಲರಾದ ಮೃದುಲಾ ಸಿನ್ಹಾ ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು. ಕೇಂದ್ರ ಹಣಕಾಸು, ಕಾರ್ಪೋರೇಟ್ ವ್ಯವಹಾರ, ವಾರ್ತಾ ಮತ್ತು ಪ್ರಚಾರ ಖಾತೆ ಸಚಿವ ಅರುಣ್ ಜೇಟ್ಲಿ, ಕೇಂದ್ರ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್, ಗೋವಾದ ಮುಖ್ಯಮಂತ್ರಿ ಲಕ್ಷ್ಮೀಕಾಂತ ಪರ್ಸೇಕರ್, ಕೇಂದ್ರ ವಾರ್ತಾ ಮತ್ತು ಪ್ರಚಾರ ಖಾತೆ ರಾಜ್ಯ ಸಚಿವ ಕರ್ನಲ್ ರಾಜ್ಯವರ್ಧನ್ ರಾಥೋಡ್, ಇಲಾಖೆ ಕಾರ್ಯದರ್ಶಿ ಸುನಿಲ್ ಆರೋರಾ ಮತ್ತಿತರರು ಜತೆಗೂಡಿದರು.

“ಅನಿಲ್ ಕಪೂರ್ ಅವರನ್ನು ಜನ ಮಿಸ್ಟರ್ ಇಂಡಿಯಾವಾಗಿಯೇ ಇಂದಿಗೂ ಗುರುತಿಸುತ್ತಾರೆ. ಅದೇ ಸಿನಿಮಾದ ಶಕ್ತಿ’ ಎಂದದ್ದು ಶೇಖರ್ ಕಪೂರ್. ಇದೇ ನೆನಪಿನ ಅಲೆಯಲ್ಲಿ ತೇಲಿದ ಶತಮಾನೋತ್ಸವ ಪ್ರಶಸ್ತಿ ಪುರಸ್ಕೃ ಇಳಯರಾಜ, “ಈ ಕ್ಷಣವನ್ನು ನನ್ನದಾಗಿದ್ದಕ್ಕೆ ನಿಜಕ್ಕೂ ಕೃತಜ್ಞತೆಗಳು. ಭಾರತೀಯ ಸಮಾಜದಲ್ಲಿ ಹಿಂಸೆ, ಕ್ರೌರ್ಯ ಹೆಚ್ಚುತ್ತಿದೆ. ಇದನ್ನು ಹತ್ತಿಕ್ಕಲು ಸಂಗೀತವೊಂದೇ ಅಸ್ತ್ರ. ಈ ವೇದಿಕೆಯನ್ನೇ ಅವಕಾಶವಾಗಿಸಿಕೊಂಡು ಸರಕಾರವನ್ನು ವಿನಂತಿಸುತ್ತೇನೆ. ಎಲ್ಲ ಶಾಲೆ-ಕಾಲೇಜುಗಳಲ್ಲಿ ಸಂಗೀತ ಕಲಿಕೆ ಕಡ್ಡಾಯಗೊಳಿಸಿ. ಆಗಲಾದರೂ ಹಿಂಸೆ ಕಡಿಮೆಯಾದೀತು’  ಜಗತ್ತಿನಲ್ಲಿ ಶಾಂತಿ ನಿರ್ಮಿಸಬಹುದಾದ ಅಸ್ತ್ರ. ಸಂಗೀತವಿದ್ದಲ್ಲಿ ಹಿಂಸೆ ಇರದು. ಎಲ್ಲ ಶಾಲೆ-ಕಾಲೇಜುಗಳಲ್ಲಿ ಸಂಗೀತವನ್ನು ಕಡ್ಡಾಯಗೊಳಿಸಿ’ ಎಂದು ಮನವಿ ಮಾಡಿದರು. ಬಳಿಕ ತಮ್ಮ ಸಂಗೀತದ ಕೇವಲ ಆರೋಹಣ ಕ್ರಮದ ಮೂರೇ ಸ್ವರದಲ್ಲಿ ಸಂಯೋಜಿಸಿರುವ ಅತ್ಯಪರೂಪದ ಗೀತೆಯ ಸ್ವರ ನ್ನು ಹಾಡಿದರು.

ಬಳಿಕ ಇಳಯರಾಜರೊಂದಿಗಿನ ದಿನವನ್ನು ನೆನಪು ಮಾಡಿಕೊಂಡ ನಟ ಅನಿಲ್ ಕಪೂರ್ ಕೋಟ್‍ನ್ನು ಕಳಚಿ ಎಸೆದು, ರಾಮ್ ಲಖನ್ ಮತ್ತು ಬೇಟಾ ಸಿನಿಮಾದ ಗೀತೆಗಳಿಗೆ ಕುಣಿದರು. ಮಾಧುರಿ ದೀಕ್ಷಿತ್ ಬದಲಿಗೆ ನಟಿ ಅದಿತಿ ರಾವ್ ಹೈದರ್ ಹೆಜ್ಜೆ ಹಾಕಿದರು.

ಸಮಾರಂಭದಲ್ಲಿ ಎಲ್ಲ ತೀರ್ಪುಗಾರರನ್ನು ಗೌರವಿಸಲಾಯಿತು. ಗಾಯಕ ಅಂಶುಮಾನ್, ನಟಿ ಅದಿತಿ ರಾವ್ ಹೈದರ್ ನಿರೂಪಿಸಿದರು. ಏರೋಬಿಕ್, ಕಳರಿಪಯಟ್ಟು, ಜಾನಪದ ಅಂಶಗಳನ್ನು ಒಳಗೊಂಡು ಭಾರತೀಯ ಸಿನಿಮಾದ ಹಲವು ಗತಿಗಳನ್ನು ಗುರುತಿಸಲೆತ್ನಿಸಿದ ಖ್ಯಾತ ನೃತ್ಯ ಸಂಯೋಜಕ ಟೆರೆನ್ಸ್ ಲೂಯಿಸ್ ಮತ್ತು ತಂಡದವರ ನೃತ್ಯ ಆಕರ್ಷಿಸಿತು. ಒಂದು ಹಂತದಲ್ಲಿ ಎಂದಿನ ಫಿಲ್ಮ್ ಫೇರ್ ಪ್ರಶಸ್ತಿಗಳ ಕಾರ್ಯಕ್ರಮದಂತೆ ಗೋಚರಿಸಿತು. ಇಫಿ ಚಿತ್ರೋತ್ಸವದ ಗಂಭೀರತೆ ಇರಲಿಲ್ಲ ಎನಿಸಿದ್ದು ಸುಳ್ಳಲ್ಲ.

ಇಳಯರಾಜರಿಗೆ ಶತಮಾನೋತ್ಸವ ಪ್ರಶಸ್ತಿ ನೀಡಿ ಅರುಣ್ ಜೇಟ್ಲಿ ಮತ್ತು ಅನಿಲ್ ಕಪೂರ್ ಸಮ್ಮಾನಿಸಿದಾಗ ಸಭಿಕರೆಲ್ಲಾ ಎದ್ದು ನಿಂತು ಚಪ್ಪಾಳೆ ತಟ್ಟಿ ಅಭಿನಂದಿಸಿದರು. ಇದುವರೆಗಿನ ಎರಡೂ ಪ್ರಶಸ್ತಿಗಳು (ಕಳೆದ ವರ್ಷ ಇದನ್ನು ಪ್ರಾರಂಭಿಸಲಾಯಿತು. ಮೊದಲ ವರ್ಷ ನಟ ರಜನೀಕಾಂತರಿಗೆ ನೀಡಲಾಯಿತು) ದಕ್ಷಿಣ ಭಾರತಕ್ಕೆ ಸಂದಿದ್ದು ವಿಶೇಷ.
ಕೇಂದ್ರ ಪಬ್ಲಿಕೇಷನ್ ಡಿವಿಷನ್ ಪ್ರಕಟಿಸಿರುವ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕøತರ ಬಗೆಗಿನ ಬರಹಗಳ ಪುಸ್ತಕ “ದಿ ಲೆಜೆಂಡ್ಸ್ ಆಫ್ ಇಂಡಿಯನ್ ಸಿಲ್ವರ್ ಸ್ಕ್ರೀನ್” ನ್ನು ಅರುಣ್ ಜೇಟ್ಲಿ ಬಿಡುಗಡೆಗೊಳಿಸಿದರು. ನಟಿಯರಾದ ಸೋನಾಕ್ಷಿ ಸಿನ್ಹಾ, ದೇವಿಕಾ ಭಿಸೆ, ನಟ ಕಬೀರ್ ಖಾನ್ ಉಪಸ್ಥಿತರಿದ್ದರು.

 

ಚಿತ್ರೋತ್ಸವದಲ್ಲಿ ಕನ್ನಡ !
ಈ ಬಾರಿ ಕನ್ನಡ ಚಿತ್ರೋದ್ಯಮ ಚಿತ್ರೋತ್ಸವದಲ್ಲಿ ಭಾಗವಹಿಸಿಲ್ಲ. ಆದರೆ, ಈ ಚಿತ್ರೋತ್ಸವದಲ್ಲಿ ಕನ್ನಡ ನೆನಪಾಗದೇ ಉಳಿಯಲಿಲ್ಲ. ಅನಿಲ್ ಕಪೂರ್ ತಮ್ಮ ಚಿತ್ರ ಜೀವನವನ್ನು ಹೇಳುವಾಗ “ನಾನು ಕೆಲವು ಹಿಂದಿ ಸಿನಿಮಾ ಮಾಡಿದ್ದೆ, ಬೇಡಿಕೆ ಇರಲಿಲ್ಲ. ನಂತರ ತೆಲುಗಿನಲ್ಲಿ ಅಭಿನಯಿಸಿದೆ. ಬಳಿಕ ಕನ್ನಡದ ಪಲ್ಲವಿ ಅನುಪಲ್ಲವಿ ಯಲ್ಲಿ ನಾಯಕ ನಟನಾಗಿ ಅಭಿನಯಿಸಿದೆ. ಅಲ್ಲಿ ಇಳಯರಾಜರಂಥ ಮಹಾನ್ ಸಂಗೀತಗಾರರು ಸಿಕ್ಕರು. ಅದೆಂದಿಗೂ ಮರೆಯಲಾರೆ’ ಎಂದು ನೆನಪಿಸಿಕೊಂಡರು. ಆ ಮೂಲಕ ಕನ್ನಡ ಪ್ರಸ್ತಾಪವಾಗಿದ್ದು ಬಿಟ್ಟರೆ, ಬೇರೆಲ್ಲೂ, ಭಾರತೀಯ ಸಿನಿಮಾದ ಕೆಲವು ಸಂದರ್ಭಗಳ ದೃಶ್ಯಾವಳಿಯನ್ನು ತೋರಿಸುವಾಗಲೂ ಕನ್ನಡ ಕಾಣಲಿಲ್ಲ. ಗೋವಾದ ಮುಖ್ಯಮಂತ್ರಿ ಲಕ್ಷ್ಮೀಕಾಂತ ಪರ್ಸೇಕರ್ ತಮ್ಮ ಭಾಷಣದಲ್ಲಿ ಗಿರೀಶ್, ಕಾರ್ನಾಡ್ ಎಂದು ಉಲ್ಲೇಖಿಸಿ ಇಬ್ಬರ ಹೆಸರನ್ನೂ ಪ್ರಸ್ತಾಪಿಸಿದರು. ಇದಲ್ಲದೇ, ಎರಡು ಕನ್ನಡ ಚಿತ್ರ ಪ್ರದರ್ಶನಗೊಳ್ಳುತ್ತಿದೆ. ಸದ್ಯಕ್ಕೆ ಸಿಕ್ಕಿರುವ ಗೌರವ ಇಷ್ಟೇ.

ಶುಲ್ಕ ಏರಿಕೆ

ಇದುವರೆಗಿದ್ದ 300 ರೂ. ಪ್ರತಿನಿಧಿ ಶುಲ್ಕವನ್ನು ಈ ಬಾರಿ 1000 ರೂ. ಗೆ ಏರಿಸಿದೆ. ಹಾಗಾಗಿ ಪ್ರತಿನಿಧಿಗಳ ಸಂಖ್ಯೆಯೂ ಕಡಿಮೆಯಿತ್ತು. ಸಾಮಾನ್ಯವಾಗಿ ಸಿನಿಮಾಸಕ್ತರು, ಸಿನಿ ಪ್ರೇಮಿಗಳಿಗೋಸ್ಕರ ಕೈಗೊಳ್ಳುವ ಈ ವೇದಿಕೆಯಲ್ಲಿ ಒಮ್ಮಿಂದೊಮ್ಮೆಲೆ ಮೂರೂವರೆ ಪಟ್ಟು ದರ ಏರಿಸಿದ್ದಕ್ಕೆ ಸಾಕಷ್ಟು ಕಡೆ ಟೀಕೆ ವ್ಯಕ್ತವಾದವು. 

ಪ್ರತಿಭಟನೆ

ಎಫ್ ಟಿ ಐಐ ನ ಮೂರು ವಿದ್ಯಾರ್ಥಿಗಳು ಘೋಷಣೆ ಕೂಗಿದರು. ಬಳಿಕ ಪೊಲೀಸರು ಅವರನ್ನು ಕರೆದೊಯ್ದರು. ಉದ್ಘಾಟನಾ ಕಾರ್ಯಕ್ರಮಕ್ಕೆ ಕಳೆದ ಬಾರಿಯಷ್ಟು ಜನರಿರಲಿಲ್ಲ. ಅದಕ್ಕೆ ಹಲವು ಕಾರಣಗಳ ಹಿನ್ನೆಲೆಯಲ್ಲಿ ಚಿತ್ರೋದ್ಯಮದ ಹಲವು ವಿಭಾಗಗಳು ಈ ಉತ್ಸವದಲ್ಲಿ ಭಾಗವಹಿಸದಿರುವುದೂ ಒಂದು.