ಪಣಜಿ : ಇನ್ನು ಕೆಲವೇ ಗಂಟೆಗಳಲ್ಲಿ ಚಿತ್ರ ಮಯೂರಿ ಗರಿಬಿಚ್ಚಿ ಕುಣಿಯಲಿದೆ.
ಗೋವಾದ ರಾಜಧಾನಿ ಪಣಜಿಯಲ್ಲಿ ಇಂದಿನಿಂದ ಪ್ರಾರಂಭವಾಗಲಿರುವ 46 ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವ 2015 ಕ್ಕೆ ಬಹುತೇಕ ಸಿದ್ಧತೆ ಮುಗಿದಿದೆ.
ಈ ಬಾರಿಯ ಚಿತ್ರೋತ್ಸವ ಪ್ರಾರಂಭವಾಗುವುದು ಗಣಿತಜ್ಞ ಶ್ರೀನಿವಾಸ ರಾಮಾನುಜಂರ ಕುರಿತಾದ ‘ದಿ ಮ್ಯಾನ್ ವು ನ್ಯೂ ಇನ್ಫಿನಿಟಿ’ ಚಿತ್ರದಿಂದ. ಮ್ಯಾತ್ಯೂ ಬ್ರೌನ್ ನಿರ್ದೇಶಿಸಿದ ಚಿತ್ರದಲ್ಲಿ ದೇವ್ ಪಟೇಲ್ ಮತ್ತು ದೇವಿಕಾ ಭಿಸೆ ಪ್ರಧಾನ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಸಂಜೆ 4 ಕ್ಕೆ ಡಾ. ಶ್ಯಾಂಪ್ರಸಾದ್ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ಚಿತ್ರೋತ್ಸವದ ಉದ್ಘಾಟನಾ ಸಮಾರಂಭ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಖ್ಯಾತ ನಟ ಅನಿಲ್ ಕಪೂರ್, ಕೇಂದ್ರ ಸಚಿವರಾದ ಅರುಣ್ ಜೇಟ್ಲಿ, ರಾಜ್ಯವರ್ಧನ್ ರಾಥೋಡ್, ಗೋವಾದ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರ್ಸೇಕರ್ ಮತ್ತಿತರರು ಭಾಗವಹಿಸುವರು.
ಈ ಬಾರಿಯ ವಿಶೇಷ
- ಶ್ರೀನಿವಾಸ ರಾಮಾನುಜಂರ ಕುರಿತಾದ ‘ದಿ ಮ್ಯಾನ್ ವು ನ್ಯೂ ಇನ್ಫಿನಿಟಿ’ ಚಿತ್ರ ಉತ್ಸವದ ಉದ್ಘಾಟನಾ ಚಿತ್ರ ಮ್ಯಾಥ್ಯೂ ಬ್ರೌನ್ ನಿರ್ದೇಶನದ ಈ ಚಿತ್ರದಲ್ಲಿ ಸ್ಲಂ ಡಾಗ್ ಮಿಲಿನೇರ್ ನ ದೇವ್ ಪಟೇಲ್ ಮತ್ತು ಭಾರತೀಯ-ಅಮೆರಿಕನ್ ಹಾಲಿವುಡ್ ನಟಿ ದೇವಿಕಾ ಭಿಸೆ ನಟಿಸಿದ್ದಾರೆ.
- ಭಾರತೀಯ ಪನೋರಮಾ ವಿಭಾಗದ ಉದ್ಘಾಟನಾ ಚಿತ್ರ ವಿಶ್ವದ ಮೂರನೇ ಸಂಸ್ಕೃತ ಚಿತ್ರ ಪ್ರಿಯ ಮಾನಸಂ. ನಿರ್ದೇಶನ : ವಿವೇಕ್ ಮಂಕರ. ಕಥೇತರ ವಿಭಾಗದಲ್ಲಿ ಗೂಂಗಾ ಪೈಲ್ವಾನ್ ಉದ್ಘಾಟನಾ ಚಿತ್ರ.
- ಈ ಬಾರಿ ಪ್ರದರ್ಶಿತಗೊಳ್ಳುತ್ತಿರುವುದು ಎರಡು ಕನ್ನಡ ಚಿತ್ರಗಳು. ಒಂದು-ಬಿಎಸ್ ಲಿಂಗದೇವರು ಅವರ ‘ನಾನು ಅವನಲ್ಲ, ಅವಳು’ ನ. 27 ರಂದು ಪ್ರದರ್ಶನಗೊಳ್ಳುತ್ತಿದೆ. ಬಿ.ಎಸ್. ಲಿಂಗದೇವರು ಮತ್ತು ತಂಡದವರು ಚಿತ್ರೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
- ಮತ್ತೊಂದು-ಮಹಿಳಾ ಚಿತ್ರ ನಿರ್ದೇಶಕಿಯರ ಚಿತ್ರಗಳ ಪೈಕಿ ಪ್ರೇಮಾ ಕಾರಂತ ನಿರ್ದೇಶನದ ಫಣಿಯಮ್ಮ ನ. 25 ರಂದು ಪ್ರದರ್ಶಿತವಾಗುತ್ತಿದೆ.
- ಕಳಸಾ ಬಂಡೂರಿ ಯೋಜನೆಗೆ ಗೋವಾದ ಅಸಹಕಾರವನ್ನು ಪ್ರತಿಭಟಿಸಿ ಕನ್ನಡ ಚಿತ್ರೋದ್ಯಮ ಈ ಚಿತ್ರೋತ್ಸವವನ್ನು ಬಹಿಷ್ಕರಿಸಿದೆ. ಭಾರತೀಯ ಚಿತ್ರರಂಗ ಒಕ್ಕೂಟ ಸಹ ತನಗೆ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲವೆಂದು ಪ್ರತಿಭಟಿಸಿ ಇದರಲ್ಲಿ ಭಾಗವಹಿಸುತ್ತಿಲ್ಲ.
- ಇಫಿ ಮಾಹಿತಿ ಪ್ರಕಾರ ಬುಧವಾರ ಸಂಜೆವರೆಗೆ ಸುಮಾರು 7 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಹೆಸರು ನೋಂದಾಯಿಸಿದ್ದಾರೆ.
- ಒಟ್ಟು 89 ದೇಶಗಳ 187 ವಿಶ್ವದ ವಿವಿಧ ಭಾಷೆಗಳ ಚಿತ್ರಗಳು. ಅಂತಾರಾಷ್ಟ್ರೀಯ ಸಿನಿಮಾ ಸ್ಪರ್ಧಾ ವಿಭಾಗದಲ್ಲಿ 15 ಸಿನಿಮಾಗಳು, ಭಾರತೀಯ ಪನೋರಮಾ ವಿಭಾಗದಡಿ ಕಥಾ ವಿಭಾಗದಡಿ 26 ಮತ್ತು ಕಥೇತರ ವಿಭಾಗದಡಿ 21 ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಇದರೊಂದಿಗೆ ಪುನಾರವಲೋಕನ, ಫಸ್ಟ್ ಕಟ್, ಈಶಾನ್ಯ ಭಾರತ ಸಿನಿಮಾ, ರೀಸ್ಟೋರ್ಡ್ ಕ್ಲಾಸಿಕ್ಸ್ ಹೀಗೆ ಹಲವು ವಿಭಾಗದಡಿ ಸಿನಿಮಾಗಳು ಪ್ರೇಕ್ಷಕರನ್ನು ರಂಜಿಸಲು ಸಿದ್ಧವಿವೆ.
- ಅರ್ಜೇಂಟೈನಾ ದೇಶದ ವಿಶೇಷ ಮೆಚ್ದುಗೆ ಗಳಿಸಿದ ಚಿತ್ರ ಪ್ಯಾಬ್ಲೊ ಟ್ರಪೇರೊ ನಿರ್ದೇಶನದ ದಿ ಕ್ಲಾನ್ ಸಮಾರೋಪ ಚಿತ್ರ. ಮಧ್ಯಾವಧಿ ಚಿತ್ರವಾಗಿ ಟಾಮ್ ಹೂಪರ್ ನಿರ್ದೇಶನದ ದಿ ಡ್ಯಾನಿಶ್ ಗರ್ಲ್ ಪ್ರದರ್ಶನಗೊಳ್ಳಲಿದೆ.
- ಗಮನ ಸೆಳೆದಿರುವ ರಾಷ್ಟ್ರ (ಕಂಟ್ರಿ ಇನ್ ಫೋಕಸ್ ವಿಭಾಗ) ದಡಿ ಸ್ಪೇನ್ ನ ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ.
- ಅಂತಾರಾಷ್ಟ್ರೀಯ ಸ್ಪರ್ಧಾ ವಿಭಾಗದಲ್ಲಿ ಅರ್ಜೇಂಟೈನಾ, ಬೆಲ್ಜಿಯಂ, ಬೊಲಿವಿಯ, ಕೊಲಂಬಿಯಾ, ಫ್ರಾನ್ಸ್, ಜರ್ಮನಿ, ಐಸಲ್ಯಾಂಡ್ ಸೇರಿದಂತೆ 15 ದೇಶದ ಚಿತ್ರಗಳಿವೆ. ಭಾರತದ ಎರಡು ಚಿತ್ರಗಳು ಈ ವಿಭಾಗದಲ್ಲಿ ಸ್ಪರ್ಧಿಸಿವೆ.
- ನಿತ್ಯದ ಷೋಗಳನ್ನೂ ಈ ಬಾರಿ ಹೆಚ್ಚಿಸಲಾಗಿದೆ. ಹಾಗಾಗಿ ಕೆಲವು ಚಿತ್ರಗಳು ಮೊದಲ ವಾರದಲ್ಲೇ ಪುನರಾವರ್ತನೆಯಾಗುವುದರಿಂದ ರಸಿಕರಿಗೆ ನೋಡಲು ಅವಕಾಶವಿದೆ.
- ಈ ಬಾರಿ ಮತ್ತೊಂದು ವಿಶೇಷ ‘ಸಂವಾದ’. ಖ್ಯಾತ ನಿರ್ದೇಶಕರಾದ ಶ್ಯಾಂ ಬೆನಗಲ್, ಕೌಶಿಕ್ ಗಂಗೂಲಿ, ವೇಟ್ರಿಮಾರನ್, ಪ್ರಿಯದರ್ಶನ್ ಮುಂತಾದವರು ಭಾಗವಹಿಸುತ್ತಿದ್ದಾರೆ.
- ಮಾಸ್ಟರ್ ಕ್ಲಾಸಸ್ ನಲ್ಲಿ ಈ ಬಾರಿ ಹೆಚ್ಚು ಪಾಶ್ಚಾತ್ಯ ತಜ್ಞರು ಭಾಗವಹಿಸುತ್ತಿದ್ದಾರೆ. ನ. 22 ರಿಂದ 29 ರವರೆಗೆ ನಡೆಯುವ ಮಾಸ್ಟರ್ ಕ್ಲಾಸಸ್ ನಲ್ಲಿ ಸೌಂಡ್ ಡಿಸೈನರ್ ಮಾಕ್ ಮಾಂಗಿನಿ (ನ.22), ಮಿಲ್ಟ್ ಶೆಟರ್ (ನ.23), ರೊಸಾಲಿ ವರ್ದಾ (ನ.24), ನ್ಯಾನ್ಸಿ ಬಿಷಪ್ (ನ.25), ಪಂಕಜ್ ಕಪೂರ್-ವಿಶಾಲ್ ಭಾರದ್ವಾಜ್ (ನ. 27), ಹಂಫ್ರಿ ದಿಕ್ಸನ್ (ನ.28) ಹಾಗೂ ಸಾಬು ಸಿರಿಲ್ (ನ.29)
- ಭಾರತೀಯ ಪನೋರಮಾ ವಿಭಾಗಕ್ಕೆ 384 ಪ್ರವೇಶಗಳು ಬಂದಿದ್ದವು. ಈ ಪೈಕಿ 238 (ಕಥಾ) ರಲ್ಲಿ 26 ಹಾಗೂ 146 (ಕಥೇತರ) ರಲ್ಲಿ 21 ಆಯ್ಕೆಯಾದವು. ನೂರು ದೇಶಗಳಿಂದ 790 ಚಿತ್ರಗಳು ಬಂದಿದ್ವು. ಈ ಪೈಕಿ 89 ದೇಶಗಳ 187 ಸಿನಿಮಾಗಳು ಆಯ್ಕೆಯಾಗಿವೆ.
- ಸಮಾರೋಪ ಸಮಾರಂಭದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಎ. ಆರ್ ರೆಹಮಾನ್ ಪಾಲ್ಗೊಳ್ಳುತ್ತಿದ್ದಾರೆ.
ಸಿನಿಪ್ರಿಯರಿಗೆ ಹಬ್ಬ !