Uppi-2-movie-01
– ಪ್ರದ್ಯುಮ್ನ ನರಹಳ್ಳಿ
‘Expectation is injurious to health’ ಅಂದರೆ ನಿರೀಕ್ಷೆ ಆರೋಗ್ಯಕ್ಕೆ ಹಾನಿಕರ ಎಂಬ ಸಂದೇಶದೊಂದಿಗೆ ಜನರನ್ನು ತಲುಪಿರುವ ಉಪ್ಪಿ2 ಎಲ್ಲರ ನಿರೀಕ್ಷೆಗೂ ಮೀರಿ ನಿಲ್ಲುತ್ತದೆ. ಬೇರೆ ರೀತಿಯ ಸಿನಿಮಾ ಇರಬಹುದು ಎಂದು ತಿಳಿದಿದ್ದರೂ, ಹೀಗೂ ಸಿನಿಮಾ ಮಾಡಬಹುದೇ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತದೆ.
ಇತ್ತೀಚೆಗೆ Crowd Funded ಚಿತ್ರಗಳು ಸಾಕಷ್ಟು ಸದ್ದು ಮಾಡುತ್ತಿದ್ದರೆ, ಉಪ್ಪಿ2 Crowd Scripted ಸಿನಿಮಾ ಎನ್ನಬಹುದು. ಕೆಲವರಿಗೆ ಏನೂ ಅರ್ಥವಾಗದೇ, ಟಿಕೆಟ್ ದುಡ್ಡು ವ್ಯರ್ಥವಾಯಿತು ಎಂದು ಕೋಪಗೊಂಡರೆ, ಇನ್ನು ಕೆಲವರು ಏನೇನೋ ಅರ್ಥವಾಯಿತು ಎಂದು ಉಲ್ಲಾಸಪಡುತ್ತಾರೆ. ಹೀಗೆ ಪ್ರತಿಯೊಬ್ಬರಿಗೂ ಅವರದ್ದೇ ರೀತಿಯಲ್ಲಿ ಅರ್ಥವಾಗುವ, ಅರ್ಥವಾಗದ ಸಿನಿಮಾ ಉಪ್ಪಿ2.
ಉಪೇಂದ್ರ ಸಿನಿಮಾದ ನಾನು ನಂತರ ಉಪ್ಪಿ2ನ ನೀನು ಎಷ್ಟು ವೈವಿಧ್ಯ, ವಿಚಿತ್ರ ಎಂದು ತೆರೆಯ ಮೇಲೆ ಎನ್ನುವುದಕ್ಕಿಂತ ತಲೆಯ ಒಳಗೆ ನೋಡಿಕೊಳ್ಳಬಹುದು. ಕಥೆ ಇದ್ದರೂ ಇಲ್ಲದಂತೆ, ಇಲ್ಲದಂತೆಯೂ ಇರುವಂತೆ ಭಾಸವಾಗುತ್ತದೆ.
ಉಪ್ಪಿ ತಮ್ಮ ಫಿಲಾಸಫಿಯನ್ನು ತಮ್ಮದೇ ಶೈಲಿಯಲ್ಲಿ ವಿವರಿಸುತ್ತ, ಯೋಚನೆ ಮಾಡಬೇಡಿ ಎಂದು ಹೇಳುತ್ತಲೆ ಯೋಚನೆ ಮಾಡುವಂತೆ ಮಾಡುತ್ತಾರೆ. ಉಪ್ಪಿ ಅಭಿಮಾನಿಗಳಿಗೆ ಇಷ್ಟವಾಗಬಹುದಾದ ಅನೇಕ ಸಂಗತಿಗಳು ನಿರೀಕ್ಷೆಯಂತೆ ಇವೆ. ಉಪ್ಪಿ ವೃತ್ತಿ ಜೀವನದ ಎಲ್ಲಾ ಸಿನಿಮಾಗಳ ಒಂದು ಕಿರುನೋಟ, ಅಭಿಮಾನಿಗಳ ಶಿಳ್ಳೆಗೆ ಕಾರಣವಾಗುತ್ತದೆ. ಉಪೇಂದ್ರರ ಬರವಣಿಗೆ, ಯೋಚನಾ ಲಹರಿಯನ್ನು ತಿಳಿಯುವುದಕ್ಕಾದರೂ, ಉಪ್ಪಿ2 ಸಿನಿಮಾವನ್ನು ಒಮ್ಮೆಯಾದರೂ ನೋಡಲೇಬೇಕು.
ಉಪೇಂದ್ಚಿರ ಚಿತ್ರವು ಒಂದು ಗಂಭೀರ ಸಂದೇಶ ನೀಡುವುದರ ಜೊತೆಗೆ, ಪಡ್ಡೆ ಹುಡುಗರಿಗೆ ಇಷ್ಟವಾಗುವ ಎಲ್ಲಾ ಮಸಾಲೆಗಳ ಜೊತೆಯಲ್ಲಿ ಬಡಿಸಿದ್ದರಿಂದ ಸಾಕಷ್ಟು ಇಷ್ಟವಾಗಿತ್ತು. ಆದರೆ ಉಪ್ಪಿ2, ಸಂದೇಶಕ್ಕೆ ಒತ್ತು ನೀಡಿದಷ್ಟು ಮಸಾಲೆಯ ಮೇಲೆ ನೀಡದಿರುವುದು ಅನಿರೀಕ್ಷಿತ.
ಚಿತ್ರವು ತಾಂತ್ರಿಕವಾಗಿ ಇನ್ನೂ ಉತ್ತಮವಾಗಿರಬಹುದಿತ್ತು. ಹಾಡುಗಳು ಕೇಳುವುದಕ್ಕಿಂತ ಹೆಚ್ಚು ನೋಡಲು ಮುದ ನೀಡುತ್ತವೆ. ನಾಯಕಿ ಕ್ರಿಸ್ಟೀನಾ ಎಲ್ಲರ ಗಮನ ಸೆಳೆಯುತ್ತಾರೆ.
ಹಾಲಿವುಡ್ಡಿನ ಕ್ರಿಸ್ಟಫರ್ ನೋಲನ್ ಅವರ ಚಿತ್ರಗಳನ್ನು ನೋಡಿ ಮೆಚ್ಚಿಕೊಳ್ಳುವವರಿಗೆ ಉಪ್ಪಿ2 ಸಿನಿಮಾವನ್ನು ಅರ್ಥಮಾಡಿಕೊಳ್ಳುವುದು ಒಂದು ಸವಾಲೆನಿಸುತ್ತದೆ. ಉಪೇಂದ್ರ ಕನ್ನಡದವರು, ಹಾಗೂ ಉಪ್ಪಿ2 ಕನ್ನಡದ ಸಿನಿಮಾ ಎಂದು ಹೆಮ್ಮೆಪಡಬಹುದಾದ ಅಪರೂಪದ ಚಿತ್ರವಾಗಿ ಹೊರಬರುತ್ತದೆ. ಆದುದರಿಂದ, ನಾನು ಉಪ್ಪಿ2 ನೋಡಿದರೆ, ನೀನು ನೋಡಿದಂತಲ್ಲ!! ಸಿನಿಪ್ರಿಯರು ಖಂಡಿತವಾಗಿಯೂ ಒಮ್ಮೆಯಾದರೂ ನೋಡಿ ಅನುಭವಿಸಲೇಬೇಕಾದ ಸಿನಿಮಾ ಉಪ್ಪಿ2!!