girish kasaravalli
girish kasaravalli

kurmava

ಪ್ರಸಿದ್ಧ ಚಲನಚಿತ್ರನಿರ್ದೇಶಕ ಗಿರೀಶ್ ಕಾಸರವಳ್ಳಿಯವರ ಚಲನಚಿತ್ರಗಳ ಉತ್ಸವ ಜು. 25 (ನಾಳೆ) ರಿಂದ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನದಲ್ಲಿ ಆರಂಭಗೊಳ್ಳಲಿದೆ.

ಒಟ್ಟೂ ಐದು ದಿನಗಳ ಕಾಲ ನಡೆಯುವ ಚಿತ್ರೋತ್ಸವದಲ್ಲಿ ಅವರ ಚಲನಚಿತ್ರಗಳಾದ ಗುಲಾಬಿ ಟಾಕೀಸ್, ನಾಯಿ ನೆರಳು, ಕ್ರೌರ್ಯ,ತಾಯಿ ಸಾಹೇಬ, ಘಟಶ್ರಾಧ್ಧ, ತಬರನ ಕಥೆ, ದ್ವೀಪ, ಕನಸೆಂಬೋ ಕುದುರೆಯನ್ನೇರಿ, ಹಸೀನಾ ಹಾಗೂ ಕೂರ್ಮಾವತಾರ ಪ್ರದರ್ಶನಗೊಳ್ಳಲಿದೆ. ಇದರೊಂದಿಗೆ ಗಿರೀಶ್ ಕಾಸರವಳ್ಳಿಯವರ ಕುರಿತಾಗಿ ಕೆಎಸ್ ರಾಜಾರಾಂ ಅವರು ತೆಗೆದ ಛಾಯಾಚಿತ್ರಗಳ ಪ್ರದರ್ಶನವೂ ನಡೆಯಲಿದೆ.

ನಾಳೆ ಬೆಳಗ್ಗೆ 10. 30ಕ್ಕೆ ಭವನದ ಖಿಂಚ ಸಭಾಂಗಣದಲ್ಲಿ ಸಚಿವೆ ಉಮಾಶ್ರೀ ಅವರು ಚಿತ್ರೋತ್ಸವಕ್ಕೆ ಚಾಲನೆ ನೀಡುವರು. ಕಾರ್ಯಕ್ರಮದಲ್ಲಿ ಸಾಹಿತಿ ಡಾ. ಎಲ್ ಹನುಮಂತಯ್ಯ, ಹಿರಿಯ ಪತ್ರಕರ್ತರಾದ ಡಾ. ವಿಜಯಾ, ಗಂಗಾಧರ್  ಮೊದಲಿಯಾರ್, ನಟಿ ಮಾಳವಿಕಾ ಅವಿನಾಶ್ ಪಾಲ್ಗೊಳ್ಳುವರು. ನಂತರ 11. 30 ಕ್ಕೆ ಗುಲಾಬಿ ಟಾಕೀಸ್ ಪ್ರದರ್ಶನಗೊಳ್ಳಲಿದ್ದು, 1. 30 ಕ್ಕೆ ನಡೆಯುವ ಅದರ ಕುರಿತಾದ ಸಂವಾದದಲ್ಲಿ ಮನು ಬಳಿಗಾರ್ ಮತ್ತು ಗಿರೀಶ್ ಕಾಸರವಳ್ಳಿ ಭಾಗವಹಿಸುವರು.

ಮಧ್ಯಾಹ್ನ 3 ಕ್ಕೆ ನಾಯಿ ನೆರಳು, ಸಂಜೆ 6 ಕ್ಕೆ ಕ್ರೌರ್ಯ, ಜುಲೈ 26 ರ 1. 30 ಕ್ಕೆ ತಾಯಿ ಸಾಹೇಬ, ಸಂಜೆ 6 ಕ್ಕೆ ಘಟಶ್ರಾದ್ಧ, ಜುಲೈ 27 ರ ಮಧ್ಯಾಹ್ನ 3.30 ಕ್ಕೆ ತಬರನ ಕಥೆ, 6 ಕ್ಕೆ ದ್ವೀಪ, ಜುಲೈ 28 ರ 3. 30 ಕ್ಕೆ ಕನಸೆಂಬೋ ಕುದುರೆಯನ್ನೇರಿ, 6 ಕ್ಕೆ ಹಸೀನಾ ಹಾಗೂ ಜುಲೈ 29 ರಂದು ಮಧ್ಹಾಹ್ನ 3. 30 ಕ್ಕೆ ಕೂರ್ಮಾವತಾರ ಪ್ರದರ್ಶನಗೊಳ್ಳಲಿದೆ. ಈ ಚಿತ್ರಗಳ ಕುರಿತಾಗಿ ಪ್ರಾಸ್ತಾವಿಕ ನುಡಿಗಳನ್ನು ಉದ್ಯಮಿ ಎಸ್. ಷಡಕ್ಷರಿ, ಪತ್ರಕರ್ತ ಜೋಗಿ, ಸಿನೆ ಛಾಯಾಗ್ರಾಹಕ ಜಿ.ಎಸ್. ಭಾಸ್ಕರ್, ನಟ ಅವಿನಾಶ್, ಬರಹಗಾರ ಕೆ. ಪುಟ್ಟಸ್ವಾಮಿ, ನಿವೃತ್ತ ಅಧಿಕಾರಿ ಐಎಂ ವಿಠ್ಠಲಮೂರ್ತಿ, ಪತ್ರಕರ್ತ ಬಿಎಂ ಹನೀಫ್ ನಡೆಸಿಕೊಡುವರು.

ಜುಲೈ 26 ರ ಬೆಳಗ್ಗೆ 10. 30 ಕ್ಕೆ ಚಿತ್ರ ನಿರ್ದೇಶಕ ಬಿ ಸುರೇಶ್ ಅವರಿಂದ ಮಾಸ್ಟರ್ ಕ್ಲಾಸ್ ನಡೆಯಲಿದ್ದು, ಜುಲೈ 29 ರಂದು ಸಂಜೆ 5. 45 ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಪ್ರೊ. ಜಿ. ಕೆ. ಗೋವಿಂದರಾವ್ ಪಾಲ್ಗೊಳ್ಳುವರು. ಬಳಿಕ ಗಿರೀಶ್ ಕಾಸರವಳ್ಳಿಯವರು ನಿರ್ದೇಶಿಸಿದ ಖ್ಯಾತ ಚಿತ್ರ ನಿರ್ದೇಶಕ ಆಡೂರ್ ಗೋಪಾಲಕೃಷ್ಣನ್ ಅವರ ಕುರಿತಾದ ಸಾಕ್ಷ್ಯಚಿತ್ರ ಪ್ರದರ್ಶನಗೊಳ್ಳಲಿದೆ.

ಐದೂ ದಿನಗಳು ನಡೆಯುವ ವಿವಿಧ ಚಿತ್ರಗಳ ಕುರಿತಾದ ಚಿತ್ರ ಸಂವಾದದಲ್ಲಿ ವಿಮರ್ಶಕರಾದ ಪ್ರೊ. ಎನ್. ಮನುಚಕ್ರವರ್ತಿ, ಡಾ. ಎಂ.ಎಸ್ ಆಶಾದೇವಿ, ಪ್ರೊ. ಎಂ.ಎಚ್. ಕೃಷ್ಣಯ್ಯ, ಡಾ. ಎಚ್. ಎಸ್. ರಾಘವೇಂದ್ರ ರಾವ್, ಪ್ರೊ. ಸಿ. ಎನ್. ರಾಮಚಂದ್ರನ್, ಚಿತ್ರ ನಿರ್ದೇಶಕ ಪಿ. ಶೇಷಾದ್ರಿ ಪಾಲ್ಗೊಳ್ಳುವರು. ಭಾರತೀಯ ವಿದ್ಯಾಭವನದ ಬೆಂಗಳೂರಿನ ಶಾಖೆ ಈ ಚಿತ್ರೋತ್ಸವವನ್ನು ಆಯೋಜಿಸುತ್ತಿದೆ.