ಸೃಜನಶೀಲ ಕ್ಷೇತ್ರಗಳಲ್ಲಿ  ಏಕತಾನತೆ ಕಾಣಿಸಿಕೊಂಡಾಗ ಸಿದ್ಧಸೂತ್ರಗಳನ್ನು ಮುರಿಯಬೇಕು ಎಂಬ ಕೂಗು ಕೇಳುತ್ತಲೇ ಇರುತ್ತದೆ. ಸಿನಿಮಾ ಕ್ಷೇತ್ರಕ್ಕೂ ಇದು ಹೊಸದೇನಲ್ಲ.
ಪ್ರೀತಿಯ, ಮರಸುತ್ತುವ ಚಿತ್ರಗಳು, ಮಳೆ ಚಿತ್ರಗಳು, ಹೊಡೆದಾಟದ ಚಿತ್ರಗಳು ಎಂಬ ಶೀರ್ಷಿಕೆಯಡಿಯಲ್ಲಿ ಸಾಲು ಸಾಲು ಸಿನಿಮಾಗಳು ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುವಾಗ ವಿಭಿನ್ನ ಪ್ರಯತ್ನಗಳನ್ನು ಮಾಡುವ ನಿರ್ದೇಶಕರು ಸಹಜವಾಗಿ ಗುರುತಿಸಿಕೊಳ್ಳುತ್ತಾರೆ.

film still 2

ಸಿನಿಮಾ ಕ್ಷೇತ್ರದಲ್ಲಿ ಏಳುಬೀಳುಗಳು ತರ್ಕವನ್ನು ಮೀರಿಯೇ ಇರುವುದರಿಂದ ಇಂತಹ ವಿಭಿನ್ನತೆಗೆ ಕೈ ಹಾಕುವ ರಿಸ್ಕ್‌ ತೆಗೆದುಕೊಳ್ಳುವವರು ಕಡಿಮೆ. ಆದಾಗ್ಯೂ ಅಲ್ಲೊಬ್ಬ ಇಲ್ಲೊಬ್ಬರು ಎಂಬಂತೆ ನಿರ್ದೇಶಕರು, ನಿರ್ಮಾಪಕರು ಸಾಹಸ ಮಾಡುತ್ತಾರೆ. ಕೆಲವೊಮ್ಮೆ ಗೆಲುವು, ಕೆಲವೊಮ್ಮೆ ಸೋಲು. ಇಂತಹುದೇ ಪ್ರಯತ್ನವನ್ನು ಆಯ್ದುಕೊಂಡವರು ನಿರ್ದೇಶಕ ವಿ.ಚಲ.

ಇತ್ತೀಚೆಗೆ ಕುಪ್ಪಳಿಯಲ್ಲಿ ನಡೆದ ಸಾಂಗತ್ಯ ಚಿತ್ರೋತ್ಸವ-ಚಿತ್ರಶಿಬಿರದಲ್ಲಿ V. ಚಲ (ವೆಂಕಟಾಚಲ) ಅವರ ‘ಚಿತ್ರಮಂದಿರದಲ್ಲಿ..’ ಎಂಬ ಚಿತ್ರ ಪ್ರದರ್ಶನ ಕಂಡಿತು. ಪ್ರದರ್ಶನದ ಬಳಿಕ ನಡೆದ ಸಂವಾದದಲ್ಲಿ ಸಿದ್ಧಸೂತ್ರಗಳನ್ನು ಮುರಿಯುವ ಹುಮ್ಮಸ್ಸು, ಅದರ ಸಾಧಕ ಬಾಧಕಗಳ ಬಗ್ಗೆ ವಿವರವಾದ ಚರ್ಚೆ ನಡೆಯಿತು. ಸಾಮಾನ್ಯವಾಗಿ ಸಿನಿಮಾಗಳಲ್ಲಿ ನೆನಪುಗಳನ್ನು ಅಥವಾ ಫ್ಲ್ಯಾಶ್ ಬ್ಯಾಕ್‌ಗಳನ್ನು ಕಪ್ಪುಬಿಳುಪಿನಲ್ಲಿ ತೋರಿಸಿದರೆ, ಚಲ ಅವರು ನೆನಪುಗಳಿಗೆ ಬಣ್ಣ ತುಂಬಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಗೀಳು ಅಂಟಿಕೊಂಡ ಹುಡುಗನೊಬ್ಬನ ಕಥೆಯನ್ನು ಆಧರಿಸಿದ ಚಿತ್ರ ಮೂರು ಭಾಗಗಳಲ್ಲಿ ಮೂಡಿ ಬಂದಿದೆ.

‘ಸಿನಿಮಾ ಕ್ಷೇತ್ರದ ಆಸೆ ಬಿಟ್ಟು ದುಡಿಮೆ ಮಾಡು’ ಎನ್ನುವ ಅಪ್ಪ ಅಮ್ಮ, ಚಿತ್ರಮಂದಿರಕ್ಕೆ ತೆರಳಿ ಪರದೆಯ ಮೇಲೆ ತಾನು ಮಾಡಬೇಕು ಎಂದಿದ್ದ ಚಿತ್ರವನ್ನು ಕಾಲ್ಪನಿಕವಾಗಿ ನೋಡುವ ನಾಯಕ, ಚಿತ್ರದೊಳಗೊಂದು ಚಿತ್ರವನ್ನು ತೋರಿಸುವ ಹೊಸತನ, ಬಳಿಕ ವಾಸ್ತವವನ್ನು ಒಪ್ಪಿಕೊಳ್ಳುವ ನಾಯಕನ ಮನಸ್ಥಿತಿಯನ್ನು ‘ಚಿತ್ರಮಂದಿರದಲ್ಲಿ..’ ಕಾಣಬಹುದು. ಸಂವಾದ ಸಂದರ್ಭದಲ್ಲಿ ಹೊಸಪ್ರಯತ್ನದ ಬಗ್ಗೆ ಎಲ್ಲರೂ ಶ್ಲಾಘನೆ ವ್ಯಕ್ತಪಡಿಸಿದರು.

ನಾಯಕ–ನಾಯಕಿ ಪ್ರೀತಿಸುವ ದೃಶ್ಯಗಳನ್ನು ರಮ್ಯವಾಗಿ ಸೆರೆ ಹಿಡಿಯುವಲ್ಲಿ ಎದುರಾದ ಸವಾಲುಗಳು, ಸ್ವಾರಸ್ಯಕರ ಸಂಗತಿಗಳನ್ನು ಚಲ ಅವರು ಹಂಚಿಕೊಂಡರು. ‘ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಎಂದು ಬಯಸುವವರನ್ನು ಆರಂಭದಲ್ಲಿ ಎಷ್ಟು ಉಡಾಫೆಯಿಂದ ನೋಡಿಕೊಳ್ಳಲಾಗುತ್ತದೆ, ಈ ಕ್ಷೇತ್ರದಲ್ಲಿ ಗೆಲುವೇ ಎಲ್ಲವನ್ನೂ ನಿರ್ಧರಿಸುವ ಅಂಶವಾಗಿರುವುದರಿಂದ ಸೃಜನಶೀಲ ಪ್ರಯತ್ನಗಳಿಗೆ ಉಂಟಾಗಿರುವ ಆತಂಕಗಳನ್ನುನಿರ್ಲಕ್ಷಿಸುವಂತಿಲ್ಲ’ ಎಂದು ಚಲ ಅವರು ಮುಕ್ತವಾಗಿ ಮಾತನಾಡಿದರು.
ಚಿತ್ರನೋಡಿದ ಶಿಬಿರಾರ್ಥಿಗಳು ಕೂಡ ನಿರ್ದೇಶಕರ ಹೊಸತನದ ಅನ್ವೇಷಣೆಯ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಆದರೆ ಸಿದ್ಧಸೂತ್ರಗಳನ್ನು ಮುರಿಯುವ ಹುಮ್ಮಸ್ಸಿನಲ್ಲಿ ಚಿತ್ರದಲ್ಲಿ ಕಂಡುಬಂದ ಲೋಪಗಳನ್ನೂ, ಅಭಾಸಕಾರಿ ಸಂದರ್ಭಗಳನ್ನೂ ಉಲ್ಲೇಖಿಸಿದರು.

ಮುಖ್ಯವಾಗಿ ಚಿತ್ರದ ಶೀರ್ಷಿಕೆ ಆಯ್ಕೆಯ ದೃಶ್ಯಗಳು ತಪ್ಪು ಸಂದೇಶವ ನ್ನೇ ಕೊಡುವಂತಿದ್ದವು ಎಂಬುದೂ ವ್ಯಕ್ತವಾದ ಅಭಿಪ್ರಾಯವಾಗಿತ್ತು. ಮಧ್ಯಾಹ್ನ ನಂತರ ಪ್ರದರ್ಶನಗೊಂಡ ನಿಖಿಲ್ ಮಂಜೂ ಅವರ ಹಜ್‌ ಚಿತ್ರವನ್ನು ನೋಡಿದ ಶಿಬಿರಾರ್ಥಿಗಳು  ಅದನ್ನು ‘ಚಿತ್ರಮಂದಿರದಲ್ಲಿ..’ ಸಿನಿಮಾಕ್ಕೆ ಹೋಲಿಕೆ ಮಾಡತೊಡಗಿದ್ದು ಸಹಜ. ಹೆಚ್ಚಿನ ತಿರುವು, ಕಸರತ್ತುಗಳೇನೂ ಇಲ್ಲದೇ ನೇರವಾಗಿ ಪ್ರಸ್ತುತಗೊಂಡ ಹಜ್‌ ಚಿತ್ರ ಒಳ್ಳೆಯ ಚಿತ್ರವೆನ್ನುವುದರಲ್ಲಿ ಎರಡು ಮಾತಿಲ್ಲ. ಹಾಗಂತ ಅಲ್ಲಿ ಸಿದ್ಧಸೂತ್ರಗಳನ್ನು ಮುರಿಯುವ ಯಾವುದೇ ಆಗ್ರಹ ಕಾಣಿಸುವುದಿಲ್ಲ. ಕುಂದಾಪುರ ಕಡೆಯ ಕುದ್ರುಗಳ ನಡುವಿನ ಜೀವನ ಸೌಂದರ್ಯವನ್ನು ಕ್ಯಾಮೆರಾ ಯಶಸ್ವಿಯಾಗಿ ಸೆರೆ ಹಿಡಿದಿರುವುದೇ ಹಜ್‌ನ   ಪ್ರಧಾನ ಆಕರ್ಷಣೆ ಎಂದರೆ ತಪ್ಪಾಗದು.

ಚಿತ್ರದ ಬಹುತೇಕ ಭಾಗಗಳು ದೋಣಿಯ ಮೇಲೆಯೇ ಚಿತ್ರೀಕರಣಗೊಂಡಿದೆ. ಎರಡು ದೋಣಿಗಳು ಸಾಗುವ ದೃಶ್ಯವನ್ನೂ ಎಚ್ಚರದಿಂದ ಸೆರೆ ಹಿಡಿಯಲಾಗಿದ್ದು ಸಾಂಕೇತಿಕವಾಗಿದೆ. ಆದರೆ ಸಾಂಕೇತಿಕತೆ ಅಥವಾ ಅಂತರ್ಗತ ಅರ್ಥಗಳನ್ನು ಹುಡುಕುವುದಕ್ಕೆ ಚಿತ್ರದ ಸಂಭಾಷಣೆಗಳು ಮತ್ತು ಕಥೆ ಹೆಚ್ಚಿನ ಆಸ್ಪದವನ್ನು ಕೊಡುವುದಿಲ್ಲ. ಬಹಳ ಸರಳವಾಗಿ ಒಂದು ಜೀವದ ಜೀವನವನ್ನು ಹೇಳಿದ್ದಾರೆನ್ನಬಹುದು. ಮುಸ್ಲಿಂ ಸಮುದಾಯದ ಬಡಕುಟುಂಬವೊಂದು ಹಜ್‌ಗೆ ಹೋಗುವ ಕನಸು ಕಾಣುವ ಅದಕ್ಕಾಗಿ ತಯಾರಿಗಳನ್ನು ಮಾಡಿಕೊಳ್ಳುವ ಸಂದರ್ಭದಲ್ಲಿಯೇ ತಾಯಿಯಾದವಳು, ಹಜ್‌ ಮುಖ್ಯವೋ, ಮಗನ ಮದುವೆ ಮುಖ್ಯವೋ ಎಂದು ಗೊಂದಲಕ್ಕೆ ಬೀಳುತ್ತಾಳೆ. ಅಮ್ಮನಿಗೆ ಒಳಿತಾಗಬೇಕು ಎಂದು ಶ್ರಮಿಸುವ ಮಗ, ಮಗನಿಗೆ ಒಳಿತಾಗಬೇಕು ಎಂದು ಶ್ರಮಿಸುವ ಅಮ್ಮ…ಹೀಗೆ ಪ್ರೀತಿಯ ದೋಣಿಯೊಂದು ಸಾಗುವ ಕತೆಯಲ್ಲಿ ಪ್ರಾಮಾಣಿಕತೆ, ಮೋಸ, ಒಳಿತು, ಕೆಡುಕು ಎಂಬ ಅಂಶಗಳು
ಕಪ್ಪುಬಿಳುಪಿನಂತೆ ಸ್ಪಷ್ಟವಾಗಿ ಗೋಚರಿಸುತ್ತದೆ. ‘ಹೀಗೋ…ಹಾಗೋ..’ ಎಂಬ ಬದುಕಿನ ಜಿಜ್ಞಾಸೆಗಳತ್ತ ತೆರೆದುಕೊಳ್ಳುವ ಗೋಜಿಗೆ ನಿರ್ದೇಶಕರು ಹೋಗಿಲ್ಲ.

ಈ ಸುಂದರ ಚಿತ್ರದ ಬಗ್ಗೆ ಸಂವಾದದಲ್ಲಿ ಎದ್ದ ಏಕೈಕ ತಗಾದೆಯೆಂದರೆ ಸಂಭಾಷಣೆ. ನಿರಂತರತೆ ಇಲ್ಲದ ಸಂಭಾಷಣೆಯಿಂದ ಚಿತ್ರದಲ್ಲಿ ಪಾತ್ರಗಳನ್ನು ಮಾಡಿದ ಕಲಾವಿದರ ಪರಿಣಿತಿ ಕೂಡ ಕಾಣದಂತಾಗಿದೆ. ಕುಂದಾಪುರ ಕನ್ನಡ ಭಾಷೆಯನ್ನು ಕೇಳಿ ಆನಂದಿಸುವವರು ‘ಹಜ್‌’ ಚಿತ್ರದ ಸಂಭಾಷಣೆಯನ್ನು ಒಪ್ಪಿಕೊಳ್ಳುವುದು ಸಾಧ್ಯವೇ ಇಲ್ಲ ಎಂಬಂತಿದೆ.
ಹಿನ್ನೆಲೆ ಸಂಗೀತದ ಆಯ್ಕೆಯ ಬಗ್ಗೆ ಪ್ರಶಂಸೆ ವ್ಯಕ್ತವಾದರೂ ಅದು ಅಗಾಗ ಮೊಬೈಲ್‌ ರಿಂಗಣಿಸಿದಂತೆ ಆಯಿತೇ ವಿನಃ ಕಥೆಯ ಭಾವದೊಳಗೆ ಮಿಳಿತವಾಗಿ ಸೇರಿಕೊಳ್ಳಲಿಲ್ಲ ಎಂಬ ಆಕ್ಷೇಪ ವ್ಯಕ್ತವಾಯಿತು. ಆದರೆ ಹಸಿರು ಪ್ರಕೃತಿಯನ್ನು ಸೆರೆ ಹಿಡಿದ ಕ್ಯಾಮೆರಾ ಕೈ ಚಳಕಕ್ಕೆ ಶ್ಲಾಘನೆ ವ್ಯಕ್ತವಾಯಿತು.