ಸಾಂಗತ್ಯದ 12 ನೇ ಶಿಬಿರ ಯಶಸ್ವಿಯಾಗಿ ಪೂರ್ಣಗೊಂಡಿತು.
ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಹಕಾರದಲ್ಲಿ ಫೆಬ್ರವರಿ 28 ಮತ್ತು ಮಾರ್ಚ್ 1 ರಂದು ಕುಪ್ಪಳಿಯಲ್ಲಿ ನಡೆದ ಶಿಬಿರದಲ್ಲಿ ರಾಜ್ಯದ ವಿವಿಧೆಡೆಯಿಂದ 50 ಕ್ಕೂ ಹೆಚ್ಚು ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದರು.
ಕನ್ನಡದ ‘ಹಜ್’, ‘ಚಿತ್ರಮಂದಿರದಲ್ಲಿ’, ಹಿಂದಿಯ ‘ಆಂಖೋನ್ ದೇಖಿ’, ‘ಶಿಪ್ ಆಫ್ ಥೀಸಿಯಸ್’, ‘ಪಥೇರ್ ಪಾಂಚಾಲಿ ಕುರಿತ ಡಾಕ್ಯುಮೆಂಟರಿ’ ಮತ್ತು ವಿದೇಶಿ ಭಾಷೆಯ ಚಿತ್ರಗಳು ಪ್ರದರ್ಶನಗೊಂಡವು.
ಈ ಪೈಕಿ ಹಿಂದಿಯ ರಜತ್ ಕಪೂರ್ ನಿರ್ದೇಶನದ ಆಂಖೋನ್ ದೇಖಿ ವಿಭಿನ್ನ ಅನುಭವ ನೀಡಿದರೆ, ಚಿತ್ರ ಮಂದಿರದಲ್ಲಿ ಚಿತ್ರವು ಪ್ರಯೋಗಾತ್ಮಕ ನೆಲೆಯಲ್ಲಿ ಚರ್ಚೆಗೀಡಾಯಿತು.ಹಜ್ ಚಿತ್ರದ ಬಗ್ಗೆಯೂ ಚರ್ಚೆಯಲ್ಲಿ ವಿಭಿನ್ನ ಅಭಿಪ್ರಾಯಗಳು ಕೇಳಿಬಂದವು. ವಿದೇಶಿ ಭಾಷೆಯ ಚಿತ್ರ ‘ಇಡಾ’ ಬಗ್ಗೆ ವ್ಯಾಪಕ ಚರ್ಚೆ ನಡೆಯಿತು.
ಮೊದಲ ದಿನದ ಚರ್ಚೆಯನ್ನು ‘ಚಿತ್ರಮಂದಿರದಲ್ಲಿ’ ಚಿತ್ರದ ನಿರ್ದೇಶಕ ವೆಂಕಟಾಚಲ ನಡೆಸಿಕೊಟ್ಟರೆ, ಎರಡನೇ ದಿನದ ಚರ್ಚೆಯನ್ನು ‘ತಲ್ಲಣ’ ಚಿತ್ರದ ನಿರ್ದೇಶಕ ಎನ್. ಸುದರ್ಶನ್ ನಿರ್ವಹಿಸಿಕೊಟ್ಟರು. “ಸಿನಿಮಾ ರೂಪುಗೊಳ್ಳುವುದು ಹೇಗೆ” ಕುರಿತು ಮಾಸ್ಟರ್ ಕ್ಲಾಸನ್ನೂ ಸಹ ನಡೆಸಿಕೊಟ್ಟರು.

‘ಹಜ್’ ಚಿತ್ರದ ನಿರ್ದೇಶಕ ನಿಖಿಲ್ ಮಂಜೂ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು. ಆದರೆ, ಹಿಂದಿನ ದಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭಕ್ಕೆ ಪಾಲ್ಗೊಂಡ ಹಿನ್ನೆಲೆಯಲ್ಲಿ ಅವರಿಗೆ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಅವರ ಅನುಪಸ್ಥಿತಿಯಲ್ಲಿ ಚಿತ್ರ ಪ್ರದರ್ಶನ ಮತ್ತು ಅದರ ಕುರಿತು ಚರ್ಚೆ ನಡೆಯಿತು.
ಸಾಂಗತ್ಯ ಟ್ರಸ್ಟಿನ ಅಧ್ಯಕ್ಷರಾದ ಪರಮೇಶ್ ಗುರುಸ್ವಾಮಿಯವರ ಎಲ್ಲದರ ಅಧ್ಯಕ್ಷತೆ ವಹಿಸಿದ್ದರು. ಚಿತ್ರೋತ್ಸವ-ಚಿತ್ರಶಿಬಿರದ ಉದ್ಘಾಟನೆಯನ್ನು ನೆರವೇರಿಸಿದ ಚಿತ್ರ ನಿರ್ದೇಶಕ ವೆಂಕಟಾಚಲ, ‘ಇಂಥ ಪ್ರಯತ್ನಗಳು ಸದಭಿರುಚಿಯ ಪ್ರೇಕ್ಷಕರನ್ನು ನಿರ್ಮಿಸಬಲ್ಲದು’ ಎಂದು ಹೇಳಿದರು.
‘ಪ್ರಯೋಗಾತ್ಮಕ ಚಿತ್ರಗಳ ವೀಕ್ಷಣೆಗೆ ವೀಕ್ಷಕರು ಬೇಕಾಗಿದ್ದಾರೆ. ವೀಕ್ಷಕರಿಲ್ಲದೇ ನಮ್ಮ ಪ್ರಯೋಗ ಯಶಸ್ವಿಯಾಗದು. ಹಾಗಾಗಿ ಅಂಥ ಪ್ರಬುದ್ಧ ಪ್ರೇಕ್ಷಕರನ್ನು ರೂಪಿಸುವ ಕೆಲಸವಾಗಬೇಕಿದೆ’ ಎಂದರಲ್ಲದೇ, ತಮ್ಮ ಚಿತ್ರ ‘ಚಿತ್ರ ಮಂದಿರದಲ್ಲಿ’ ಕುರಿತು ವಿವರಿಸಿದರು.

ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ಚಿತ್ರ ನಿರ್ದೇಶಕ ಎನ್. ಸುದರ್ಶನ್, “ಶಿಬಿರಾರ್ಥಿಗಳು ಚಳಿ ಬಿಟ್ಟು ಚರ್ಚೆಯಲ್ಲಿ ಭಾಗವಹಿಸಬೇಕು. ತಮಗನ್ನಿಸಿದ್ದನ್ನು ಹೇಳಿ, ಹಂಚಿಕೊಳ್ಳುವ ಮೂಲಕವೇ ನಾವು ಬೆಳೆಯಬಹುದು. ಈ ಶಿಬಿರಗಳು ಸಿನಿಮಾ ಓದಿಗೆ ಸಹಾಯಕವಾಗುತ್ತಿರುವುದರಿಂದ, ಇಲ್ಲೂ ಅಭಿಪ್ರಾಯ ಹಂಚಿಕೊಳ್ಳುವಲ್ಲಿ ಯೋಚನೆ ಮಾಡಬೇಕಾಗಿಲ್ಲ’ ಎಂದು ಅಭಿಪ್ರಾಯಪಟ್ಟರು.
ಬಳಿಕ ಎಲ್ಲ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು ಹಾಗೂ ಚಿತ್ರೋತ್ಸವಕ್ಕೆ ಚಿತ್ರಗಳನ್ನು ಒದಗಿಸಿದ ರಜತ್ ಕಪೂರ್, ಆನಂದ್ ಗಾಂಧಿ, ನಿಖಿಲ್ ಮಂಜೂ ಹಾಗೂ ವೆಂಕಟಾಚಲ ಅವರಿಗೆ ಧನ್ಯವಾದಗಳನ್ನು ಸಲ್ಲಿಸಲಾಯಿತು. ಚಿತ್ರದ ಚರ್ಚೆಗಳನ್ನು ಸಿಬಂತಿ ಪದ್ಮನಾಭ, ಅಕ್ಷತಾ, ಬಿಂದು ಮುಂತಾದವರು ನಿರ್ವಹಿಸಿದರು. ಶಿಬಿರದ ಬಗ್ಗೆ ಡಾ. ಬಾಬಾಬುಡೆನ್, ಮಿಥಿಲಾ ರೈ, ನಾಗೇಂದ್ರ ಪ್ರಸಾದ್, ಫಣಿರಾಜ್, ನವೀನ ಕುಮಾರಿ, ಜ್ಞಾನೇಶ್ವರ್, ಮಿತ್ರಾ ಮತ್ತಿತರರು ಅಭಿಪ್ರಾಯ ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಪರಮೇಶ್ ಗುರುಸ್ವಾಮಿಯವರು ತೆಗೆದ ಪಕ್ಷಿಗಳ ಕುರಿತು ಛಾಯಾಚಿತ್ರ ಪ್ರದರ್ಶನವನ್ನೂ ಏರ್ಪಡಿಸಲಾಗಿತ್ತು.
ಮುಂದಿನ (13 ನೇ) ಶಿಬಿರ ಆಗಸ್ಟ್ ಎರಡನೇ ಅಥವಾ ಮೂರನೇ ವಾರದಲ್ಲಿ ನಡೆಯಲಿದೆ.
ನಮಸ್ತೆ,
ಭಾನುವಾರ ‘ಶಿಪ್ ಆಫ್ ಥಿಸಿಯಸ್’ ಹಾಗು ಚಿತ್ರ ನಿರ್ಮಾಣದ ಕುರಿತು ನಡೆದ ಬಿಸಿಬಿಸಿ ಚರ್ಚೆಯ ಬಗ್ಗೆ ಶಿಬಿರಕ್ಕೆ ಬಂದವರು ತಮ್ಮ ಅನಿಸಿಕೆ, ವಿಚಾರಗಳನ್ನು ಹಂಚಿಕೊಂಡರೆ ಚೆನ್ನಿತ್ತು.
ಸುದರ್ಶನ್.
ಯೆಸ್ ಸಾರ್, ಎರಡು ಲೇಖನಗಳನ್ನು ಪ್ರಕಟಿಸುವೆವು.