ಪತ್ರಿಕಾಗೋಷ್ಠಿಯಲ್ಲಿ ರಾಜೇಂದ್ರಸಿಂಗ್ (ಬಾಬು), ಎನ್. ವಿದ್ಯಾಶಂಕರ್, ಎನ್. ಆರ್. ವಿಶುಕುಮಾರ್, ಜಗನ್ನಾಥ್ ಪ್ರಕಾಶ್ ಉತ್ಸವದ ಕುರಿತ ಪುಸ್ತಕ (ಕೆಟಲಾಗ್) ನ್ನು ಬಿಡುಗಡೆಗೊಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜೇಂದ್ರಸಿಂಗ್ (ಬಾಬು), ಎನ್. ವಿದ್ಯಾಶಂಕರ್, ಎನ್. ಆರ್. ವಿಶುಕುಮಾರ್, ಜಗನ್ನಾಥ್ ಪ್ರಕಾಶ್ ಉತ್ಸವದ ಕುರಿತ ಪುಸ್ತಕ (ಕೆಟಲಾಗ್) ನ್ನು ಬಿಡುಗಡೆಗೊಳಿಸಿದರು.

ಬೆಂಗಳೂರು : ಡಿಸೆಂಬರ್ 4 ರಿಂದ 11 ರವರೆಗೆ ನಡೆಯುವ 7 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಅಂತಿಮ ಸಿದ್ಧತೆ ನಡೆದಿದೆ. ಇದುವರೆಗೆ 2 ಸಾವಿರದಷ್ಟು ಮಂದಿ ನೋಂದಣಿಯಾಗಿದ್ದಾರೆ.

ಈ ಬಾರಿ ಚಲನಚಿತ್ರೋತ್ಸವದ ಉದ್ಘಾಟನಾ ಚಿತ್ರವಾಗಿ ಹಂಗೇರಿಯ “ದಿ ಅಂಬಾಸಡರ್ ಟು ಬೆರ್ನ್” ಸಿನಿಮಾ ಪ್ರದರ್ಶಿತಗೊಳ್ಳುತ್ತಿದ್ದು, ಸಮಾರೋಪ ಚಿತ್ರವಾಗಿ ರಷ್ಯಾದ “ಟೆಸ್ಟ್” ಪ್ರದರ್ಶನಗೊಳ್ಳಲಿದೆ.

ಬಿ. ಸುರೇಶ್ ನಿರ್ದೇಶನದ “ದೇವರ ನಾಡಲ್ಲಿ” ಮತ್ತು ದಯಾಳ್ ಪದ್ಮನಾಭನ್ ಅವರ ನಿರ್ದೇಶನದ “ಹಗ್ಗದ ಕೊನೆ” ಚಲನಚಿತ್ರಗಳ ಪ್ರೀಮಿಯರ್ ಷೋ ಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ಆದರೆ ಹಗ್ಗದ ಕೊನೆ ಸೆನ್ಸಾರ್ ಮುಗಿದಿದ್ದು, ದೇವರ ನಾಡಲ್ಲಿ ಚಿತ್ರ ಡಿ. 4 ರಂದು ಸೆನ್ಸಾರ್ ಗೊಳ್ಳುವ ಸಾಧ್ಯತೆಯಿದೆ.

ಡಿಸೆಂಬರ್ 5 ರಿಂದ 11 ರವರೆಗೆ 11 ಸ್ಕ್ರೀನ್ ಗಳಲ್ಲಿ ಒಟ್ಟು 44 ದೇಶಗಳ 170 ಚಲನಚಿತ್ರಗಳು Fun ಸಿನಿಮಾ, sigma ಮಾಲ್, ಕನ್ನಿಂಗ್ಹ್ಯಾಮ್ ರಸ್ತೆಯಲ್ಲಿ 3, ಲಿಡೋ ಐನಾಕ್ಸ್, ಹಲಸೂರಿನಲ್ಲಿ 4, ಸುಲೋಚನಾ, ವಾರ್ತಾ ಇಲಾಖೆ, ಇನ್ ಫೆಂಟ್ರಿ ರಸ್ತೆಯಲ್ಲಿ 1, ಬಾದಾಮಿ ಹೌಸ್ ನಲ್ಲಿ 1, ಚಾಮುಂಡೇಶ್ವರಿ ಸ್ಟುಡಿಯೋ ಸಭಾಂಗಣ, ಕನ್ನಿಂಗ್ ಹ್ಯಾಂ ರಸ್ತೆಯಲ್ಲಿ 1 ಹಾಗೂ ಸಾರ್ವಜನಿಕರಿಗಾಗಿ ಸ್ವಾತಂತ್ರ್ಯ ಉದ್ಯಾನದಲ್ಲಿ 1 ಸ್ಕ್ರೀನ್ ನಲ್ಲಿ ಪ್ರದರ್ಶನಗೊಳ್ಳಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿತ್ರೋತ್ಸವವನ್ನು ಡಿಸೆಂಬರ್ 4 ರ ಸಂಜೆ 5.30 ಗಂಟೆಗೆ ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಉದ್ಘಾಟಿಸುವರು. ಖ್ಯಾತ ಸಿನಿಮಾ ನಿರ್ದೇಶಕ ಗೋವಿಂದ ನಿಹಲಾನಿ, ಸುಭಾಷ್ ಘಾಯ್, ನಟಿ ಸುಹಾಸಿನಿ ಮಣಿರತ್ನಂ, ನಟ ಯಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಒಟ್ಟು 44 ದೇಶಗಳ 170 ಚಿತ್ರಗಳ ಪೈಕಿ ವಿಶ್ವದ ಸಿನಿಮಾ ವಿಭಾಗದಡಿ 62, ಏಷ್ಯನ್ ಸಿನಿಮಾ ಸ್ಪರ್ಧೆಯಡಿ 9, ಭಾರತೀಯ ಚಿತ್ರರಂಗದಡಿ 10, ಕನ್ನಡ ಸಿನಿಮಾದಡಿ 10, ಕನ್ನಡ-ಭಾರತೀಯ ವಿಶೇಷ ಪ್ರದರ್ಶನಗಳು- ವಿಭಾಗದಲ್ಲಿ 9, ವಿಶೇಷ ವಿಭಾಗಗಡಿ 11, ಸಿನಿಮಾ ವಿಶೇಷ ವಿಭಾಗದಡಿ-ಫ್ರೆಂಚ್ ಕ್ಲಾಸಿಕ್ಸ್- 6, ಡಾ ಯು. ಆರ್ ಅನಂತಮೂರ್ತಿ ಶ್ರದ್ಧಾಂಜಲಿ ವಿಶೇಷದಡಿ 5, ಕೊರಿಯಾ-ನೆದರ್ ಲ್ಯಾಂಡ್ ದೇಶ ವಿಶೇಷ-13, ಲೈಂಗಿಕ ಹಿಂಸೆ ಚಿತ್ರಗಳ ವಿಭಾಗದಡಿ 6, ವಿಮರ್ಶಕರ ಆಯ್ಕೆಯಡಿ 5, ಏಷ್ಯನ್ ಸ್ಪರ್ಧಾ ವಿಜೇತ ವಿಭಾಗದಡಿ 6, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ವಿಭಾಗದಡಿ ವಿ ಕೆ ಮೂರ್ತಿ ಶ್ರದ್ಧಾಂಜಲಿಯಡಿ 5, ನೆನಪಿನ ಮಾಲೆಯಡಿ ಸಿಆರ್ ಸಿಂಹ, ಕೆ ಎಂ ಶಂಕರಪ್ಪ, ಬಾಲು ಮಹೇಂದ್ರ, ಅಲನ್ ರೆನೆಯರ 4, ಶತಮಾನದ ನೆನಪು ವಿಭಾಗದಡಿ ಹೊನ್ನಪ್ಪ ಭಾಗವತರ್-1, ಹುಣಸೂರು ಕೃಷ್ಣಮೂರ್ತಿ -1 ಹಾಗೂ ಸಾರ್ವಜನಿಕ ಪ್ರದರ್ಶನಕ್ಕೆ 6 ಹಾಸ್ಯ ಚಿತ್ರಗಳು ಪ್ರದರ್ಶನಗೊಳ್ಳಲಿವೆ.

“ಇದುವರೆಗೆ 2 ಸಾವಿರ ಮಂದಿ ನೋಂದಣಿ ಮಾಡಿಕೊಂಡಿದ್ದು, ಇನ್ನಷ್ಟು ಮಂದಿ ನೊಂದಣಿಯಾಗುವ ನಿರೀಕ್ಷೆಯಿದೆ” ಎಂದು ಉತ್ಸವದ ನಿರ್ದೇಶಕ ಎನ್. ವಿದ್ಯಾಶಂಕರ್ ತಿಳಿಸಿದ್ದಾರೆ.

ಮಂಗಳವಾರ ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್ (ಬಾಬು), ಉತ್ಸವದ ನಿರ್ದೇಶಕ ಎನ್. ವಿದ್ಯಾಶಂಕರ್, ವಾರ್ತಾ ಇಲಾಖೆ ನಿರ್ದೇಶಕ ಎನ್. ಆರ್. ವಿಶುಕುಮಾರ್ ಅವರು ಉತ್ಸವದ ವಿವರಗಳುಳ್ಳ ಪುಸ್ತಕ (ಕೆಟಲಾಗ್) ಬಿಡುಗಡೆಗೊಳಿಸಿದರು. ಅಕಾಡೆಮಿ ರಿಜಿಸ್ಟ್ರಾರ್ ಜಗನ್ನಾಥ್ ಪ್ರಕಾಶ್ ಭಾಗವಹಿಸಿದ್ದರು. ಮಾಹಿತಿಗೆ 080-22222355 ಸಂಪರ್ಕಿಸಬಹುದು.