ಅತ್ಯುತ್ತಮ ಚಿತ್ರ ನಿರ್ದೇಶಕ, ಅತ್ಯುತ್ತಮ ನಟ-ನಟಿ, ವಿಶೇಷ ತೀರ್ಪುಗಾರರ ಪ್ರಶಸ್ತಿ ಪುರಸ್ಕೃತರ ಗ್ರೂಪ್ ಫೋಟೋ.
ಅತ್ಯುತ್ತಮ ಚಿತ್ರ ನಿರ್ದೇಶಕ, ಅತ್ಯುತ್ತಮ ನಟ-ನಟಿ, ವಿಶೇಷ ತೀರ್ಪುಗಾರರ ಪ್ರಶಸ್ತಿ ಪುರಸ್ಕೃತರ ಗ್ರೂಪ್ ಫೋಟೋ.

ಪಣಜಿ : ಹತ್ತು ದಿನಗಳ ಭಾರತೀಯ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ (IFFI) ವರ್ಣರಂಜಿತವಾಗಿ ಸಂಪನ್ನಗೊಂಡಿದ್ದು, ಪ್ರತಿಷ್ಠಿತ ಗೋಲ್ಟನ್ ಪೀಕಾಕ್ ಪ್ರಶಸ್ತಿಯನ್ನು ರಷ್ಯಾದ ಸಿನಿಮಾ “ಲೆವಿಥಾನ್” ಗೆದ್ದುಕೊಂಡಿದೆ.

ಅದರ ನಿರ್ದೇಶಕ Andrey Zvyagintsev ಅವರಿಗೆ ಗೋವಾದ ರಾಜ್ಯಪಾಲರಾದ ಮೃದುಲಾ ಸಿನ್ಹಾ ಮತ್ತು ಹಿರಿಯ ನಟಿ ವಹೀದಾ ರೆಹಮಾನ್ ಪ್ರಶಸ್ತಿ ಪ್ರದಾನ ಮಾಡಿದರು.

ಇದಲ್ಲದೇ, ಅತ್ಯುತ್ತಮ ನಿರ್ದೇಶನ ಪ್ರಶಸ್ತಿ ಇಸ್ರೇಲಿ ಸಿನಿಮಾ “ದಿ ಕಿಂಡರ್ ಗಾರ್ಟನ್ ಟೀಚರ್” ನ ನಿರ್ದೇಶಕ Nadav Lapid ರ ಪಾಲಾಯಿತು. ಅತ್ಯುತ್ತಮ ನಟ ಮತ್ತು ನಟಿ ಪ್ರಶಸ್ತಿ ಅನುಕ್ರಮವಾಗಿ ತಲಾ ಇಬ್ಬರ ಪಾಲಾಯಿತು. ಅತ್ಯುತ್ತಮ ನಟ ಪ್ರಶಸ್ತಿಗೆ ಲೆವಿಥಾನ್ ಸಿನಿಮಾದ Alexey Serebryakov ಮತ್ತು ಬಂಗಾಳಿ ಭಾಷೆಯ ಚೋಟೋಬೇರ್ ಚೋಬಿ ಚಿತ್ರದ ದುಲಾರ್ ಸರಕಾರ್ ಪಡೆದರೆ, ಅತ್ಯುತ್ತಮ ನಟಿ ಪ್ರಶಸ್ತಿಯು “ದಿ ಕಿಂಡರ್ ಗಾರ್ಟನ್ ಟೀಚರ್’ನಲ್ಲಿ ನಟಿಸಿದ Sarit Larry ಮತ್ತು ಕ್ಯೂಬಾದ ಚಿತ್ರ “ಬಿಹೇವಿಯರ್” ನಲ್ಲಿ ನಟಿಸಿದ Alina Rodriguez ದಕ್ಕಿಸಿಕೊಂಡರು.

ಮರಾಠಿ ಭಾಷೆಯ “ಏಕ್ ಹಜಾರಚಿ ನೋಟ್” ಸಿನಿಮಾ ವಿಶೇಷ ತೀರ್ಪುಗಾರರ ಪ್ರಶಸ್ತಿ ಮತ್ತು ಶತಮಾನೋತ್ಸವ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇದರ ಚಿತ್ರ ನಿರ್ದೇಶಕ ಶ್ರೀ ಹರಿ ಸಾತೆ ಅವರಿಗೆ ಪ್ರಶಸ್ತಿ ನೀಡಲಾಯಿತು.

ಜೀವಮಾನ ಸಾಧನೆ ಪ್ರಶಸ್ತಿಯನ್ನು ಹಿರಯ ನಿರ್ದೇಶಕರಿಗೆ ನೀಡಲಾಗುತ್ತಿದ್ದು, ಈ ಬಾರಿ ಚೀನಿ-ಹಾಂಕಾಂಗ್ ಸಿನಿಮಾ ನಿರ್ದೇಶಕ ವಾಂಗ್ ಕರ್-ವಾಯ್ ಅವರಿಗೆ ಪ್ರದಾನ ಮಾಡಲಾಯಿತು. ಅವರ ಸಿನಿಮಾ “ ದಿ ಗ್ರ್ಯಾಂಡ್ ಮಾಸ್ಟರ್” ಉತ್ಸವದ ಸಮಾರೋಪ ಚಿತ್ರವಾಗಿ ಪ್ರದರ್ಶನಗೊಂಡಿತು.

ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ವಾಂಗ್ ಕರ್-ವಾಯ್, “ಇದೊಂದು ಅತ್ಯಂತ ಸಂತಸದ ಗಳಿಗೆ. ಈ ಮೂಲಕ ಚೀನಿ ಸಿನಿಮಾ ಪರಂಪರೆಯನ್ನು ಗೌರವಿಸಿದಂತಾಗಿದೆ’ ಎಂದು ಕೃತಜ್ಞತೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ವಾರ್ತಾ ಮತ್ತು ಪ್ರಚಾರ ಖಾತೆ ರಾಜ್ಯ ಸಚಿವ ರಾಜ್ಯವರ್ಧನ್ ರಾಥೋಡ್, “ಭಾರತೀಯ ಚಲನಚಿತ್ರಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಒದಗಿಸಲು ಸರಕಾರ ಎಲ್ಲ ಪ್ರಯತ್ನ ನಡೆಸಲಿದೆ. ಭಾರತೀಯ ಚಲನಚಿತ್ರಗಳನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪ್ರದರ್ಶಿಸುವ ಹಾಗೂ ವಿದೇಶಿ ಚಿತ್ರ ನಿರ್ಮಾಪಕರೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವ ಮೂಲಕ ಈ ಉದ್ದೇಶವನ್ನು ಸಾಧಿಸಲಾಗುವುದು’ ಎಂದು ಹೇಳಿದರು.

ಇದಕ್ಕೆ ಮುನ್ನ ಗೋವಾದ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರ್ಸೇಕರ್ ಮಾತನಾಡಿ, ಈ ಬಾರಿ 13 ಸಾವಿರಕ್ಕಿಂತಲೂ ಹೆಚ್ಚು ಮಂದಿ ಪ್ರತಿನಿಧಿಗಳು ಉತ್ಸವಕ್ಕೆ ನೋಂದಾಯಿಸಿದ್ದಾರೆ. ಇದೊಂದು ಒಳ್ಳೆಯ ಬೆಳವಣಿಗೆ. ಸಿನಿಮಾಸಕ್ತರಿಗೆ ಇನ್ನಷ್ಟು ಹೆಚ್ಚಿನ ಸೌಲಭ್ಯ ಕಲ್ಪಿಸಲು ಸರಕಾರ ಪ್ರಯತ್ನಿಸಲಿದೆ’ ಎಂದು ಹೇಳಿದರು.

ಈಶಾನ್ಯ ರಾಜ್ಯಗಳ ವಿವಿಧ ನೃತ್ಯ ತಂಡಗಳು ತಮ್ಮ ಪ್ರಾದೇಶಿಕ ಸೊಗಡಿನ ನೃತ್ಯಗಳನ್ನು ಪ್ರದರ್ಶಿಸಿ ಹೊಸ ಕಳೆ ತುಂಬಿದರು. ಕಾರ್ಯಕ್ರಮದಲ್ಲಿ ಖ್ಯಾತ ನಟರಾದ ನಾನಾ ಪಾಟೇಕರ್, ಜಾಕಿ ಶ್ರಾಫ್, ಬೋಜಪುರಿ ಭಾಷೆಯ ನಟ ರವಿ ಕಿಷನ್ ಹಾಗೂ ಮಲಯಾಳಂ ಭಾಷೆಯ ನಟ ಜಯರಾಂ ಮತ್ತಿತರರು ಭಾಗವಹಿಸಿದ್ದರು.