12

ಪಣಜಿ : ಈ ಬಾರಿಯ ಭಾರತೀಯ ಪನೋರಮಾದಲ್ಲಿ ಗುಣಮಟ್ಟವಿದ್ದರೂ ಹೆಚ್ಚು ಕನ್ನಡ ಸಿನಿಮಾಗಳನ್ನು ಆಯ್ಕೆ ಮಾಡದಿರುವ ಬಗ್ಗೆ ಚಿತ್ರ ನಿರ್ದೇಶಕ ಪಿ ಶೇಷಾದ್ರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

45 ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (IFFI)ದಲ್ಲಿ ಅವರ “ಡಿಸೆಂಬರ್ 1” ಚಿತ್ರ ಪ್ರದರ್ಶನವಾದ ಹಿನ್ನೆಲೆಯಲ್ಲಿ ಭಾಗವಹಿಸಿದ್ದ ಅವರು ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

“ನಾನು ತೀರ್ಪುಗಾರರ ತೀರ್ಪನ್ನು ಪ್ರಶ್ನಿಸುತ್ತಿಲ್ಲ. ಆದರೆ, ಆತಂಕ ಮತ್ತು ಅಚ್ಚರಿಯನ್ನು ವ್ಯಕ್ತಪಡಿಸುತ್ತಿದ್ದೇನೆ. ಈ ಬಾರಿ ನನ್ನ ಸಿನಿಮಾವೂ ಸೇರಿದಂತೆ ಕನ್ನಡದ 27 ಚಿತ್ರಗಳು ಭಾರತೀಯ ಪನೋರಮಾ ವಿಭಾಗದಡಿ ಆಯ್ಕೆಗೆ ಸಲ್ಲಿಸಲಾಗಿತ್ತು. ಆದರೆ, ಆಯ್ಕೆ ಪಟ್ಟಿ ಪ್ರಕಟವಾದಾಗ ನನ್ನ ಚಿತ್ರವೊಂದು ಬಿಟ್ಟರೆ ಬೇರಾವುದೂ ಆಯ್ಕೆಯಾಗಿರಲಿಲ್ಲ. ವಾಸ್ತವವಾಗಿ, 4-5 ಚಿತ್ರಗಳು ವಸ್ತು, ತಾಂತ್ರಿಕತೆ ಮತ್ತು ನಿರೂಪಣೆಯಲ್ಲಿ ಉತ್ತಮವಾಗಿದ್ದವು. ಆದರೂ ಅಯ್ಕೆಯಾಗದಿರುವುದು ಅಚ್ಚರಿ ಮೂಡಿಸಿದೆ’ ಎಂದರು.

ಸರಕಾರದ ಸಹಕಾರ ಅವಶ್ಯ

1970-80 ರಲ್ಲಿ ಕನ್ನಡ ಸಿನಿಮಾದ ಸುವರ್ಣ ಯುಗವೆನ್ನಬಹುದು. ನಂತರವೂ ಒಳ್ಳೆಯ ಸಿನಿಮಾಗಳು ಬರುತ್ತಿಲ್ಲವೆಂದಲ್ಲ, ಆದರೆ, ಸಾಕಷ್ಟು ಸಂಖ್ಯೆಯಲ್ಲಿ ಬರಬೇಕಿದೆ. ಅದಕ್ಕೆ ಸರಕಾರದ ಸಹಕಾರವೂ ಅವಶ್ಯ ಎಂದ ಅವರು, ಚಲನಚಿತ್ರ ಸಂಸ್ಕೃತಿಯನ್ನು ಸಬ್ಸಿಡಿ (ಸಹಾಯಧನ)ಯ ಮೂಲಕ ಪ್ರೋತ್ಸಾಹಿಸಿದ ಸರಕಾರದಲ್ಲಿ ಕರ್ನಾಟಕ ಮುಂದಿತ್ತು. ಪ್ರಸ್ತುತ 10 ಲಕ್ಷ ರೂ. ಸಬ್ಸಿಡಿ ನೀಡುತ್ತಿದ್ದು, ಹೆಚ್ಚಿಸಬೇಕಿದೆ. ನಮ್ಮ ನಂತರ ಸಬ್ಸಿಡಿ ಆರಂಭಿಸಿದ ಮಹಾರಾಷ್ಟ್ರ ಸರಕಾರ, ಇಂದು 40 ಲಕ್ಷ ರೂ. ಸಬ್ಸಿಡಿ ನೀಡುತ್ತಿದೆ ಎಂದು ವಿವರಿಸಿದರು.

ಮುಂದಿನ ದಿನಗಳಲ್ಲಿ ಅತ್ಯುತ್ತಮ ಚಿತ್ರಗಳು ಬರಲಿವೆ ಎಂದು ಆಶಾವಾದ ವ್ಯಕ್ತಪಡಿಸಿದ ಅವರು, ನಮ್ಮ ಚಿತ್ರಗಳ ಬಿಡುಗಡೆಗೆ ಸಿನಿಮಾ ಮಂದಿರಗಳನ್ನು ಪಡೆಯುವುದೇ ನಮ್ಮ ಮುಂದಿರುವ ದೊಡ್ಡ ಸವಾಲು. ಕೇವಲ 40-50 ಚಿತ್ರಮಂದಿರಗಳು ಉಳಿದಿದ್ದು, ಬಹುತೇಕ ಮಾಲ್ ಗಳಾಗಿ ಪರಿವರ್ತನೆಗೊಂಡಿವೆ. ಮಲ್ಪಿಪ್ಲೆಕ್ಸ್ ಗಳಲ್ಲೂ ಪ್ರೈಮ್ ಟೈಮ್ ಸಿಗುವುದಿಲ್ಲ. ಈ ಎಲ್ಲ ಸಮಸ್ಯೆಗಳ ನಿವಾರಣೆಗೂ ಸರಕಾರದ ಸಹಾಯಹಸ್ತ ಬೇಕಿದೆ ಎಂದು ಹೇಳಿದರು. ಡಿಸೆಂಬರ್ 1 ಚಿತ್ರದ ನಾಯಕಿ ನಿವೇದಿತಾ, ನಟ ಶಶಿಕುಮಾರ್ ಭಾಗವಹಿಸಿದ್ದರು.