724_ss

ಪಣಜಿ : “ಚಿತ್ರ ಕಥೆ (ಸ್ಕ್ರೀನ್ ಪ್ಲೇ) ಎನ್ನೋದು ಒಂದು ಮನೆಗೆ ನೀಲನಕ್ಷೆಯಿದ್ದಂತೆ. ಆದರೆ ಬರಿದೇ ನೀಲನಕ್ಷೆಯಿಂದ ಏನೂ ಮಾಡಲಾಗದು. ಅದಕ್ಕೆ ಜೀವತುಂಬುವ ಕೆಲಸ ಅದರ ನಿರ್ಮಾಣಕಾರರ ಆಸಕ್ತಿಯನ್ನು ಅವಲಂಬಿಸಿದ್ದು”.

ಚಿತ್ರಕಥೆಯ ವಿಶೇಷತೆ ಮತ್ತು ಅಗತ್ಯತೆ ಕುರಿತು ಮಾಸ್ಟರ್ ಕ್ಲಾಸ್ ನ್ನು ನಡೆಸಿಕೊಟ್ಟ ಖ್ಯಾತ ಚಿತ್ರಕಥೆಗಾರ ಅತುಲ್ ತಿವಾರಿ, “ಚಿತ್ರಕಥೆ ಪ್ರತಿ ಸಿನಿಮಾಕ್ಕೂ ತೀರಾ ಅಗತ್ಯವಾದುದು. ಅದಕ್ಕೂ ನಿರ್ದಿಷ್ಟ ನಿಯಮಗಳಿವೆ. ಅವುಗಳನ್ನು ಪಾಲಿಸುತ್ತಲೇ ಪ್ರಯೋಗಶೀಲತೆಯಲ್ಲಿ ತೊಡಗಬೇಕು” ಎಂದು ಹೇಳಿದರು.

ಕಥೆ ಮತ್ತು ಕಾದಂಬರಿಗಳನ್ನು ಎಲ್ಲ ಓದುಗರು, ಆಸಕ್ತರಿಗೆಂದು ರಚಿಸಲಾಗುತ್ತದೆ. ಆದರೆ, ಚಿತ್ರಕಥೆ ಹಾಗಲ್ಲ. ಒಂದು ನಿರ್ದಿಷ್ಟ ತಂಡ ಹಾಗೂ ಕಲಾವಿದರಿಗೆಂದು ರೂಪಿಸಲಾಗುತ್ತದೆ. ಹಾಗಾಗಿ ಇವುಗಳ ನಡುವಿನ ಸೂಕ್ಷ್ಮ ಮತ್ತು ವ್ಯತ್ಯಾಸಗಳನ್ನೂ ಅರ್ಥ ಮಾಡಿಕೊಳ್ಳಬೇಕು ಎಂದರಲ್ಲದೇ, “ಅರಿಸ್ಟಾಟಲನ ಕಾಲದಿಂದಲೂ ನಾಟಕಕ್ಕೆ ಕುರಿತಂತೆ ನಿರ್ದಿಷ್ಟ ಸೂತ್ರ-ನಿಯಮಗಳನ್ನು ಮಾಡಲಾಗಿದೆ. ಅದು ಇವತ್ತಿಗೂ ಬದಲಾಗಿಲ್ಲ ಎಂದು ಅಭಿಪ್ರಾಯಪಟ್ಟರು.

ಪ್ರತಿಯೊಂದಕ್ಕೂ ನಿಯಮ ಮತ್ತು ತತ್ವಗಳೆಂದು ಇರುತ್ತವೆ. ಕಾಲ ಮತ್ತು ಪ್ರದೇಶಕ್ಕೆ ಅನುಗುಣವಾಗಿ ನಿಯಮಗಳಲ್ಲಿ ಕೆಲವೊಂದನ್ನು ಮಾರ್ಪಾಡುಗಳಾಗಬಹುದು. ಆದರೆ, ತತ್ತ್ವ ಎಂದಿಗೂ ಬದಲಾಗದು ಅಥವಾ ಮಾರ್ಪಾಡು ಮಾಡಲಾಗದು ಎಂದವರು ಅತುಲ್ ತಿವಾರಿ.

“ನಮ್ಮಲ್ಲಿ ಮಾತ್ರ ಚಿತ್ರಕಥೆ ಮತ್ತು ಸಂಭಾಷಣೆ ಎಂದು ಪ್ರತ್ಯೇಕ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಆದರೆ, ಹಾಲಿವುಡ್ಡಿನಲ್ಲಿ ಕಥೆ, ಸಂಭಾಷಣೆಗೆಂದು ಪ್ರಶಸ್ತಿ ನೀಡಲಾಗುವುದಿಲ್ಲ, ಅತ್ಯುತ್ತಮ ಚಿತ್ರಕಥೆಗೆಂದು ನೀಡಲಾಗುತ್ತದೆ ಎಂದು ಉಲ್ಲೇಖಿಸಿದ ಅವರು,ಎರಡು ಗಂಟೆಗಳ ಕಾಲ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳುವುದು ಸುಲಭದ ಕೆಲಸವಲ್ಲ ಎಂದರು.

ಅತುಲ್ ತಿವಾರಿ ಅವರು ಶ್ಯಾಂ ಬೆನಗಲ್ ಅವರ “ಸಂವಿಧಾನ್’ ಅಲ್ಲದೇ, ವಿಶ್ವರೂಪಂ, ದಶಾವತಾರಂ, ಮಿಷನ್ ಕಾಶ್ಮೀರ್ ಮತ್ತಿತರ ಚಿತ್ರಗಳಿಗೆ ಕೆಲಸ ಮಾಡಿದ್ದಾರೆ.

Advertisements