
ಪಣಜಿ : ಮಂಗಳವಾರ ಚಿತ್ರೋತ್ಸವದಲ್ಲಿ ಸಿಕ್ಕಾಪಟ್ಟೆ ಚಟುವಟಿಕೆಗಳ ದಿನ. ಮಾಸ್ಟರ್ ಕ್ಲಾಸ್ ಗಳು, ಚಿತ್ರಗಳು, ಓಪನ್ ಫೋರಂ, ಎಲ್ಲ ಥಿಯೇಟರ್ ಗಳ ಎದುರೂ ಜನರ ಸಾಲು, ನಾನಾ ಪಾಟೇಕರ್ ಆಗಮಿಸಿದ್ದು, ವಿವಿಧ ನಿರ್ದೇಶಕರ ಪತ್ರಿಕಾಗೋಷ್ಠಿಗಳು ಇತ್ಯಾದಿ ಒಟ್ಟೂ ಚಿತ್ರೋತ್ಸವಕ್ಕೆ ಇನ್ನು 5 ದಿನ ಇರುವಾಗ ರಂಗೇರುತ್ತಿದೆ.
“ಕ್ರಾಂತಿವೀರ್” ಮತ್ತು “ಪ್ರಹಾರ್” ಚಿತ್ರಗಳಲ್ಲಿನ ಡೈಲಾಗ್ ಡಿಲಿವರಿ (ಸಂಭಾಷಣೆ) ಮತ್ತು ನಟನೆಯಿಂದ ಖ್ಯಾತರಾಗಿದ್ದ ನಾನಾ ಪಾಟೇಕರ್ ಮಂಗಳವಾರ ಚಿತ್ರೋತ್ಸವದಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು.
ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, “ಮರ್ಯಾದಾ ಹತ್ಯೆ ಮತ್ತು ಜಾತೀಯತೆ ಇನ್ನೂ ನಮ್ಮನ್ನು ಕಾಡುತ್ತಿದೆ. ಇದು ಕೊನೆಗಾಣಬೇಕೆಂಬುದು ಎಲ್ಲರ ಧ್ಯೇಯವಾಗಬೇಕು. ಅಂಥ ಒಳ್ಳೆಯ ದಿನ ಬಂದೇ ಬರುತ್ತದೆ. ಅಲ್ಲಿಯವರೆಗೆ ಕಾಯಬೇಕು” ಎಂದು ಆಶಾವಾದ ವ್ಯಕ್ತಪಡಿಸಿದರು.
ತಮ್ಮ ನಟನೆಯ ಮರಾಠಿ ಚಿತ್ರ “ಡಾ. ಪ್ರಕಾಶ್ ಆಮ್ಟೆ-ದಿ ರಿಯಲ್ ಹೀರೋ”, ಒಂದು ಒಳ್ಳೆಯ ಚಿತ್ರ. ಪ್ರಕಾಶ್ ಆಮ್ಟೆ ದಂಪತಿಗಳ ಸಮಾಜ ಸೇವೆಯನ್ನು ಜನರಿಗೆ ತಿಳಿಸುವ ಸಲುವಾಗಿಯೇ ಇದನ್ನು ರೂಪಿಸಿದ್ದೇವೆ. ಜನರಿಗೆ ಒಳ್ಳೆಯ ಕೆಲಸವೂ ನಡೆಯುತ್ತಿದೆ ಎಂಬುದೂ ತಿಳಿಯಬೇಕು. ಆಗ ಮಾತ್ರ ಆಶಾವಾದ ಮೂಡಲು ಸಾಧ್ಯ ಎಂದರು. ಚಿತ್ರ ನಿರ್ಮಾಪಕರಾದ ನಿಖಿಲ್ ಸಾಣೆ, ನಟಿ ಸೋನಾಲಿ ಕುಲಕರ್ಣಿ, ನಿರ್ದೇಶಕಿ ಸಮೃದ್ಧಿ ಪೋರೆ ಭಾಗವಹಿಸಿದ್ದರು.
ಇದಲ್ಲದೇ, ಕಲಾ ಅಕಾಡೆಮಿಯ ಬ್ಲ್ಯಾಕ್ ಬಾಕ್ಸ್ ನಲ್ಲಿ ಇಂಡಿಯನ್ ಡಾಕ್ಯುಮೆಂಟರಿ ಪ್ರೊಡ್ಯೂಷರ್ಸ್ ಅಸೋಸಿಯೇಷನ್ ವತಿಯಿಂದ ಏರ್ಪಡಿಸಲಾಗಿರುವ ಡಿಜಿಟಲ್ ಕ್ಯಾಮೆರಾ ಟೆಕ್ನಾಲಜಿ ಕುರಿತ ಕಾರ್ಯಾಗಾರದಲ್ಲಿ ಸಾಕ್ಷ್ಯಚಿತ್ರ ನಿರ್ದೇಶಕ ನಂದನ್ ಸಕ್ಸೇನಾ ಮಾತನಾಡಿದರು. ಹಾಗೆಯೇ ಮಾಸ್ಟರ್ ಕ್ಲಾಸ್ ನಲ್ಲಿ ಅಸ್ಸಾಂನ ಚಿತ್ರ ನಿರ್ದೇಶಕ ಜಹ್ನು ಬರುವಾ, “ಕಡಿಮೆ ವೆಚ್ಚದಲ್ಲಿ ಚಿತ್ರಗಳ ನಿರ್ಮಾಣ” ಕುರಿತು ಅಭಿಪ್ರಾಯ ಹಂಚಿಕೊಂಡರು.
‘ಓಪನ್ ಫೋರಂ’ ನಲ್ಲಿ ಚಿತ್ರ ನಿರ್ದೇಶಕರಾದ ಷಾಜಿ ಕರುಣ್, ಇಸ್ರೇಲಿನ ಡಾನ್ ವೋಲ್ಮನ್, ಮೆಕ್ಸಿಕಾದ ಇಸ್ರಾಲ್ ಕೆಡನ್ಸ್, ಕೆನಡಾದ ಆನಂದ್ ರಮಯ್ಯ ಮತ್ತಿತರರು, ಅಂತಾರಾಷ್ಟ್ರೀಯ ಸಹ ನಿರ್ಮಾಣದಲ್ಲಿ ಚಿತ್ರ ನಿರ್ಮಿಸುವುದರ ಕುರಿತು ಚರ್ಚಿಸಿದರು. ಒಟ್ಟೂ ವ್ಯಕ್ತವಾದ ಅಭಿಪ್ರಾಯವೆಂದರೆ, “ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಹ ನಿರ್ಮಾಣ ಕೈಗೊಳ್ಳುವ ಕನಸು ಮತ್ತು ಯೋಚನೆ ಬಹಳ ಆಕರ್ಷಕವಾದದ್ದೇ. ಆದರೆ ಸಮಸ್ಯೆಗಳೂ ಸಾಕಷ್ಟಿವೆ. ಅವುಗಳ ಬಗೆಹರಿಸುವತ್ತ ಗಮನಹರಿಸಬೇಕು’ ಎಂಬುದು.
ಸಾಕಾಗದು
ದಿನೇ ದಿನೇ ಬೆಳೆಯುತ್ತಿರುವ ಗೋವಾ ಚಿತ್ರೋತ್ಸವಕ್ಕೆ ಮತ್ತಷ್ಟು ಸ್ಥಳಾವಕಾಶ ಬೇಕು. ಯಾವುದಕ್ಕೆಂದರೆ ಸಿನಿಮಾ ನೋಡಲು ಸ್ಕ್ರೀನ್ ಗಳು ಹೆಚ್ಚಾಗಬೇಕು.
ಚಿತ್ರೋತ್ಸವ ನಿರ್ದೇಶಕ ಶಂಕರ್ ಮೋಹನ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿ 13, 700 ಮಂದಿ ಪ್ರತಿನಿಧಿಗಳು ನೋಂದಾಯಿಸಿದ್ದಾರೆ. ಆದರೆ, ನಮಗೆ 2, 500 ಮಂದಿಯ ಚಿತ್ರ ವೀಕ್ಷಣೆಗಷ್ಟೇ ಸದ್ಯ ಅವಕಾಶವಿದೆ. ಮುಂದಿನ ದಿನಗಳಲ್ಲಿ ಕನಿಷ್ಠ 5 ಸಾವಿರ ಮಂದಿಗಾದರೂ ಸ್ಥಳಾವಕಾಶ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡಿಕೊಡಬೇಕಿದೆ’ ಎಂದರು.