
ಪಣಜಿ : ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ “ಮಾಸ್ಟರ್ ಕ್ಲಾಸ್’ ಗಳನ್ನು ಹಮ್ಮಿಕೊಳ್ಳುವುದು ಸಿನಿಮಾ ತಜ್ಞರೊಂದಿಗೆ ಸಿನಿಮಾ ಪ್ರೇಮಿಗಳು ಅಭಿಪ್ರಾಯ ಹಂಚಿಕೊಳ್ಳಲು. ಈ ಮೂಲಕ ಸಿನಿಮಾ ಬಗೆಗಿನ ಜ್ಞಾನವನ್ನು ವಿಸ್ತರಿಸಿಕೊಳ್ಳಲು.
ಬಹಳ ವಿಚಿತ್ರವೆಂದರೆ ಸೋಮವಾರ ಇಂಥ ಅವಕಾಶ ಸರಕಾರವನ್ನು ಟೀಕಿಸುವುದಕ್ಕಷ್ಟೇ ಸೀಮಿತವಾಯಿತು. ಇಲ್ಲಿ ಸರಕಾರವನ್ನು ಟೀಕಿಸಬಾರದೆಂದಲ್ಲ, ಅದಕ್ಕೆ ಬಹಳಷ್ಟು ಅವಕಾಶಗಳಿವೆ. ಪತ್ರಿಕಾಗೋಷ್ಠಿ ಇದ್ದೇ ಇರುತ್ತದೆ ಅವುಗಳಿಗೆ.
ಖ್ಯಾತ ಬಾಲಿವುಡ್ ನಿರ್ದೇಶಕ ಸುಭಾಷ್ ಘಾಯ್, ಒಂದಿಷ್ಟು ಒಳ್ಳೆಯ ಹಾಗೂ ಹೆಚ್ಚು ಫಾರ್ಮುಲಾ ಚಿತ್ರಗಳನ್ನೇ ನಿರ್ದೇಶಿಸಿರುವ ಅವರು, ಹಿಗ್ಗಾಮುಗ್ಗಾ ಸರಕಾರವನ್ನುತರಾಟೆಗೆ ತೆಗೆದುಕೊಂಡರು. ಒಂದಷ್ಟು ಅಂಶಗಳು ಸತ್ಯಕ್ಕೆ ಹತ್ತಿರವೆನಿಸಿದರೂ, ಅವಕಾಶವನ್ನು ದುರುಪಯೋಗ ಮಾಡಿಕೊಂಡದ್ದಕ್ಕೆ ಸ್ವಲ್ಪ ಸಿನಿಮಾಸಕ್ತರು ಬೇಸರ ವ್ಯಕ್ತಪಡಿಸಿದರು.
“ಫ್ರೆಂಚ್ ಮತ್ತಿತರ ಭಾಷೆ-ದೇಶಗಳಲ್ಲಿ ಬರುತ್ತಿರುವಂತೆ ಒಳ್ಳೆಯ ಸಿನಿಮಾಗಳು ನಮ್ಮಲ್ಲೂ ಬಾರದಿರಲು ಸರಕಾರದ ದೂರದೃಷ್ಟಿಯ ಕೊರತೆಯೇ ಕಾರಣ. ಸರಕಾರದ ಅನಾಸಕ್ತಿ ಹಾಗೂ ನೌಕರಷಾಹಿ (ಕೆಂಪುಪಟ್ಟಿ) ಸಿನಿಮಾ ಸಂಸ್ಕೃತಿಗೆ ಸಮಸ್ಯೆಯಾಗಿವೆ’ ಎಂದರಲ್ಲದೇ, “ಸಾಮಾನ್ಯವಾಗಿ ಸಿನಿಮಾ ಇನ್ ಸ್ಟಿಟ್ಯೂಟ್ ಆರಂಭಿಸುವ ಸಂಬಂಧ ಯಾವುದೇ ರಾಜ್ಯಕ್ಕೆ ಹೋದರೂ, ಸಂಬಂಧಪಟ್ಟ ಸಂಸ್ಕೃತಿ ಸಚಿವರನ್ನು ಸಂಪರ್ಕಿಸಲು ಸೂಚಿಸಲಾಗುತ್ತದೆ. ಬಹುತೇಕ ಯಾರಿಗೆ ಆಸಕ್ತಿ ಇರುವುದಿಲ್ಲವೋ, ಯಾವ ಉಪಯೋಗಕ್ಕೂ ಬಾರದವರಿಗೆ ಈ ಖಾತೆ ವಹಿಸಲಾಗಿರುತ್ತದೆ. ಹಾಗಾಗಿ ಸಿನಿಮಾ ಸಂಸ್ಕೃತಿ ದೂರದೃಷ್ಟಿಯ ಕೊರತೆಯಿಂದ ಬಳಲುತ್ತದೆ’. ಎಂದು ಟೀಕಿಸಿದರು.
“ನಮ್ಮ ಸರಕಾರದ ಮಂದಿಗೆ ಶಾರೂಕ್ ಖಾನ್ ಮತ್ತು ಕತ್ರಿನಾ ಕೈಫ್ ಇದ್ದರೆ ಅದಷ್ಟೇ ಸಿನಿಮಾ. ಕೆಲವು ನಿರ್ದಿಷ್ಟ ರಾಜ್ಯದ ನೃತ್ಯ ಮತ್ತು ನೃತ್ಯಗಾರರಿದ್ದರೆ ಸಾಕು. ಅದನ್ನೇ ಭಾರತೀಯ ಸಿನಿಮಾವೆಂದು ಪಾಶ್ಚಾತ್ಯ ದೇಶಗಳಲ್ಲಿ ಬಿಂಬಿಸಲಾಗುತ್ತಿದೆ. ಹಾಗಾಗಿ ಸಿನಿಮಾ ನಿರ್ದೇಶಕರು ವಿದೇಶಿ ಭಾಷೆಗಳ ಅಥವಾ ರಿಮೇಕ್ ಸರಕಿಗೆ ಮೊರೆ ಹೋಗುತ್ತಿದ್ದಾರೆ’ ಎಂದು ಆಪಾದಿಸಿದರು.
ಟಾಕಥಾನ್ !
ಸಿನಿಮಾ ಪ್ರಿಯರು ತಮ್ಮ ಪ್ರಶ್ನೆಗಳು, ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಇಫಿ (IFFI) ಹೊಸ ವೇದಿಕೆಯನ್ನು ಸೋಮವಾರದಿಂದ ಪ್ರಾರಂಭಿಸಿದೆ. Talkathon @ IFFI ಎಂಬುದು ಅದು. ಪ್ರತಿದಿನ ಸಂಜೆ 4 ರಿಂದ 5 ಗಂಟೆಯವರೆಗೆ ಫೇಸ್ಬುಕ್ ಮತ್ತು ಟ್ವಿಟ್ಟರ್ ಅಕೌಂಟ್ ಗಳಿಂದ #IFFI2014 ಮೂಲಕ ಪ್ರಶ್ನೆಗಳನ್ನು ಸಿನಿಮಾ ಪ್ರಿಯರು ಕೇಳಬಹುದು. ಇಡೀ ಕಾರ್ಯಕ್ರಮ ಯೂಟ್ಯೂಬ್ ಚಾನೆಲ್(ಕೇಂದ್ರ ವಾರ್ತಾ ಮತ್ತು ಪ್ರಚಾರ ಇಲಾಖೆಯ ಖಾತೆ) ನಲ್ಲೂ ಪ್ರಸಾರವಾಗಲಿದೆ.