IMG_6468

ಪಣಜಿ : “ಸಿನಿಮಾವೊಂದೇ ನಮ್ಮನ್ನು ಪ್ರಭಾವಿಸುವುದಿಲ್ಲ. ಬಾಲ್ಯದಲ್ಲಿನ ಹಲವು ಸಂಗತಿಗಳಿಂದ ಹಿಡಿದು ಎಲ್ಲವೂ ನಮ್ಮನ್ನು ಪ್ರಭಾವಿಸುವುದುಂಟು. ಕಲಾಕಾರ ಅದೆಲ್ಲವನ್ನೂ ಬಳಸಿಕೊಂಡು ತನ್ನ ಅರಿವಿನ ಮಾಧ್ಯಮದಲ್ಲಿ ನೀಡಲು ಪ್ರಯತ್ನಿಸುತ್ತಾನೆ” ಎಂದವರು ಮರಾಠಿಯ ಖ್ಯಾತ ನಿರ್ದೇಶಕ ಪರೇಶ್ ಮೊಕಾಶಿ.

ಅವರ ಹೊಸ ಸಿನಿಮಾ “ಎಲಿಜಬೆತ್ ಏಕಾದಶಿ” ಚಿತ್ರವು ಶುಕ್ರವಾರ ಭಾರತೀಯ ಪನೋರಮಾ ವಿಭಾಗದ ಉದ್ಘಾಟನಾ ಚಲನಚಿತ್ರವಾಗಿ (ಕಥಾ ವಿಭಾಗ) ಪ್ರದರ್ಶಿತವಾಗಿತ್ತು. ಈ ಸಂಬಂಧ ಶನಿವಾರ ಮಾಧ್ಯಮ ಕೇಂದ್ರದಲ್ಲಿನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

“ಬರಿದೇ ಸಿನಿಮಾಗಳನ್ನು ನೋಡಿ ಸಿನಿಮಾ ರೂಪಿಸಲಾಗುವುದಿಲ್ಲ. ಸೃಜನಶೀಲತೆಯ ರೂಪದಲ್ಲಿ ನಮ್ಮೆಲ್ಲಾ ಅನುಭವಗಳು ಹೊರ ಬರಬಹುದು’ ಎಂದ ಅವರು, “ಸಿನಿಮಾ ಮಾಡುವಾಗಲಷ್ಟೇ ಸಂಬಂಧಪಟ್ಟ ನಿರ್ದೇಶಕನ ಅಥವಾ ಸಿನಿಮಾಕರ್ತನ ಚಿತ್ರವಾಗಿರುತ್ತದೆ. ಆದರೆ, ಒಮ್ಮೆ ಪೂರ್ಣಗೊಂಡು ಪ್ರದರ್ಶನಗೊಂಡ ಬಳಿಕ ಅದು ಎಲ್ಲರ ಸಿನಿಮಾವಾಗಿ ಮಾರ್ಪಟ್ಟಿರುತ್ತದೆ. ಎಲ್ಲರೂ ತಮಗೆ ಬೇಕಾದಂತೆ ವ್ಯಾಖ್ಯಾನಿಸಿಕೊಳ್ಳಬಹುದು” ಎಂದು ಅಭಿಪ್ರಾಯಪಟ್ಟರು ಅವರು.

ಇರಾನ್ ಚಿತ್ರ ನಿರ್ದೇಶಕ ಮಜಿದಿ ಮಜಿದ್ ರ ಚಿತ್ರಗಳ ಪ್ರೇರಣೆ ಈ ಚಿತ್ರದ ಮೇಲೆ ಇದೆಯೇ ಎಂದು ಕೇಳಿದ ಪ್ರಶ್ನೆಗೆ, “ಇಲ್ಲ, ಹಾಗೇನೂ ಇಲ್ಲ. ಅದಕ್ಕಿಂತಲೂ ಮೊದಲು ಬೈಸಿಕಲ್ ಥೀವ್ಸ್ ನಿಂದ ಪ್ರಾರಂಭಿಸಿ ಬಹಳಷ್ಟು ಚಿತ್ರಗಳನ್ನು ನೋಡಿದ್ದೆ. ರಂಗಭೂಮಿಯಲ್ಲೂ ತೊಡಗಿಕೊಂಡಿದ್ದೆ. ಇದರೊಂದಿಗೆ ನನ್ನದೇ ಬಾಲ್ಯದ ಅನುಭವಗಳಿದ್ದವು, ನನ್ನ ಪತ್ನಿ ಪಂಡರಾಪುರದವರು. ಅವರ ಅನುಭವಗಳೂ ಇದ್ದವು. ಹೀಗೇ ಒಂದು ನಿರ್ದಿಷ್ಟ ಚಿತ್ರ ಅಥವಾ ಫಿಲ್ಮ್ ಎಂದು ಇರದು” ಎಂದರು.

ಮರಾಠಿಯಲ್ಲಿ ಒಳ್ಳೆ ಬೆಳೆ  !

ಚಿತ್ರದ ನಿರ್ಮಾಪಕ ನಿತಿನ್ ಕೇಣಿ ಪ್ರಶ್ನೆಯೊಂದಕ್ಕೆ ಉತ್ತರಿಸಿ, “ಮರಾಠಿ ಭಾಷೆಯಲ್ಲಿ ಈಗ ಅತ್ಯುತ್ತಮ ಚಿತ್ರಗಳು ಬರುತ್ತಿವೆ. ಈ ಹಿಂದೆ ಭಾರತೀಯ ಪನೋರಮಾ ವಿಭಾಗದಡಿ ಮರಾಠಿ ಚಿತ್ರಗಳೇ ಇರದ ದಿನಗಳಿದ್ದವು. ಮಲಯಾಳಂನ ಚಿತ್ರಗಳೇ ತುಂಬಿರುತ್ತಿದ್ದವು. ಮಲಯಾಳಿಯ ಆಡೂರು ಗೋಪಾಲಕೃಷ್ಣನ್, ಅರವಿಂದನ್, ಷಾಜಿ ಕರುಣ್, ಕನ್ನಡದ ಗಿರೀಶ್ ಕಾಸರವಳ್ಳಿ ಹಾಗೂ ಬಂಗಾಳಿ ಭಾಷೆಯ ಕೆಲವು ಚಿತ್ರಗಳಿರುತ್ತಿದ್ದವು. ಈಗ ಕಾಲ ಬದಲಾಗಿದೆ. ಮರಾಠಿ ಭಾಷೆಯ ಚಿತ್ರಗಳು ಎಲ್ಲರ ಗಮನಸೆಳೆಯುವಂತಾಗಿದೆ. ಇದಕ್ಕೆ ಹೊಸ ನಿರ್ದೇಶಕರು ಹೊಸ ಕಥಾವಸ್ತು ಮತ್ತು ಕೌಶಲ್ಯದಿಂದ ಚಿತ್ರ ರೂಪಿಸುತ್ತಿರುವುದೇ ಕಾರಣ” ಎಂದು ಹೇಳಿದರು.

 ಇದು ಚಿತ್ರವಲ್ಲ, ಪಯಣ !

ತಮ್ಮ ತಂದೆ ಸಿನೆ ಛಾಯಾಗ್ರಾಹಕ ಹಾಗೂ ನಿರ್ದೇಶಕ ಸುಖದೇವ್ ಅವರ ಕುರಿತ ಸಾಕ್ಷ್ಯಚಿತ್ರದ ಕುರಿತು ಅಭಿಪ್ರಾಯ ಹಂಚಿಕೊಂಡ ನಿರ್ದೇಶಕಿ ಶಬನಂ ಸುಖದೇವ್, “ಇದು ಕೇವಲ ಒಂದು ಸಾಕ್ಷ್ಯಚಿತ್ರವಲ್ಲ. ನನ್ನ ತಂದೆಯನ್ನು ಅರಿತುಕೊಳ್ಳುವತ್ತ ನಡೆಸಿದ ಪಯಣ” ಎಂದು ವ್ಯಾಖ್ಯಾನಿಸಿದರು.

“ಈ ಚಿತ್ರದ ಮೂಲಕ ನನ್ನ ತಂದೆಯನ್ನು ಮತ್ತಷ್ಟು ಸ್ಪಷ್ಟ ಮತ್ತು ನಿಖರವಾಗಿ ಅರ್ಥಮಾಡಿಕೊಂಡಿದ್ದೇನೆ. ಈಗ ನಿಜವಾಗಲೂ ಅವರ ಬಗ್ಗೆ ಗೌರವ ಮೂಡಿದೆ. ಒಬ್ಬ ಚಿತ್ರ ನಿರ್ದೇಶಕನ ಹಿಂದಿನ ಮನುಷ್ಯನನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದೇನೆ’ ಎಂದು ಖುಷಿ ವ್ಯಕ್ತಪಡಿಸಿದರು.

“ನನ್ನ ತಂದೆಯ ಬಗ್ಗೆ ಹಿಂದೆ ಅಗೌರವವಿತ್ತು ಎನ್ನುವುದಕ್ಕಿಂತ ಅಪರಿಚಿತನಾಗಿದ್ದೆ. ನಾನು ಸಣ್ಣವಳಿದ್ದಾಗ ಅವರ ನಡವಳಿಕೆಗಳು ಕೋಪ, ಸಿಟ್ಟು, ಅಪರಿಚಿತತೆಯ ಭಾವನೆಯನ್ನು ಮೂಡಿಸಿದ್ದವು. ಆದರೆ, ಆಗ ಕಾರಣ ಹುಡುಕುವಷ್ಟು ಸಾಮರ್ಥ್ಯವಿರಲಿಲ್ಲ. ಈಗ ಈ ಚಿತ್ರದಿಂದ ಅದು ಸಾಧ್ಯವಾಗಿದೆ” ಎಂದು ಹೇಳಿದರು. ಫಿಲ್ಮ್ ಡಿವಿಷನ್ ನ ಅಧಿಕಾರಿ ಕೊಂಡು ಮತ್ತಿತರರು ಇದ್ದರು.

 

Advertisements