_MG_6330

ಸಾಂಗತ್ಯ ವರದಿ

ಪಣಜಿ : “ಹಿಂಸೆಯಿಂದ ಮತ್ತಷ್ಟು ಹಿಂಸೆ ಆರಂಭವಾಗುತ್ತದೆಯೇ ಹೊರತು ಬೇರೇನೂ ಅಲ್ಲ. ಅದು ಯಾವುದಕ್ಕೂ ಪರಿಹಾರವಿಲ್ಲ” ಎಂದು ಖ್ಯಾತ ಇರಾನಿ ಸಿನಿಮಾ ನಿರ್ದೇಶಕ ಮೊಹ್ಸಿನ್ ಮೊಕ್ಮಲ್ಬಫ್ ಅಭಿಪ್ರಾಯ ಪಟ್ಟಿದ್ದಾರೆ.

ಉದ್ಘಾಟನಾ ಚಿತ್ರ “ದಿ ಪ್ರಸಿಡೆಂಟ್” ಪ್ರದರ್ಶನದ ನಂತರ ಅದರ ನಿರ್ದೇಶನ ಮತ್ತು ನಿರ್ಮಾಣದ ಬಗ್ಗೆ ಪ್ರೇಕ್ಷಕರೊಂದಿಗೆ ಹಂಚಿಕೊಳ್ಳುತ್ತಾ ಮಾತನಾಡಿದ ಅವರು, “ನಾವು ಹೆಚ್ಚೆಚ್ಚು ಮನುಷ್ಯರಾಗಿ ವರ್ತಿಸಬೇಕಿದೆ” ಎಂದರು.

“ನನ್ನ ಈ ಚಿತ್ರ ಪ್ರಜಾಪ್ರಭುತ್ವದ ಅಗತ್ಯವನ್ನು ಪ್ರತಿಪಾದಿಸುತ್ತದೆ’ ಎಂದ ಅವರು, “ಹಿಂಸೆಯನ್ನು ಎಂದಾದರೂ, ಯಾರಾದರೂ ಕೊನೆಗೊಳಿಸಬೇಕು. ಇಲ್ಲವಾದರೆ ಅದರ ಅಧ್ಯಾಯವೇ ಮುಂದುವರೆಯುತ್ತದೆ’ ಎಂದು ಹೇಳಿದರು.

ಪ್ರಜಾಪ್ರಭುತ್ವದಲ್ಲೂ ದೋಷಗಳಿವೆಯಲ್ಲಾ ಎಂದು ಕೇಳಿದ ಪ್ರಶ್ನೆಗೆ, “ಹೌದು. ಇದೆ. ಒಪ್ಪಿಕೊಳ್ಳೋಣ. ಆದರೆ, ಅವುಗಳ ಹೊರತಾಗಿಯೂ ಒಂದು ಒಳ್ಳೆಯ ವ್ಯವಸ್ಥೆ. ಇಂಥ ಚಿತ್ರಗಳನ್ನು ನಾನು ನನ್ನ ದೇಶದಲ್ಲಿ ನಿರ್ಮಿಸುವ ಸ್ಥಿತಿಯಿಲ್ಲ. ನೀವು ಇರಾನಿನಲ್ಲಿ ಬದುಕಿ, ಆಗ ಪ್ರಜಾಪ್ರಭುತ್ವದ ಮೌಲ್ಯ ಅರಿಯುತ್ತದೆ’ ಎಂದರು.

ನಿಮ್ಮ “ದಿ ಪ್ರಸಿಡೆಂಟ್” ಚಿತ್ರ ಇರಾಕ್ ನ ಅಧ್ಯಕ್ಷ ಸದ್ದಾಂ ಹುಸೇನ್ ರನ್ನು ಹೋಲುತ್ತದೆಯೇ ಎಂಬ ಮತ್ತೊಂದು ಪ್ರಶ್ನೆಗೆ, “ಸ್ವಲ್ಪ ಹೋಲಬಹುದು. ಆದರೆ ಪೂರ್ತಿ ಅಲ್ಲ. ಎಲ್ಲ ಸರ್ವಾಧಿಕಾರಿಗಳನ್ನೂ ಮತ್ತು ಅವರ ಸರ್ವಾಧಿಕಾರಿತನವನ್ನು ಈ ಸಿನಿಮಾ ಹೇಳಬಹುದು” ಎಂದು ವಿವರಿಸಿದರು.

ಅವರ “ಸಲಾಮ್ ಎ ಸಿನಿಮಾ”, “ಗಬ್ಬೆ” ಮತ್ತಿತರ ಚಿತ್ರಗಳು “ಪುನರಾವಲೋಕನ” ವಿಭಾಗದಡಿ ಪ್ರದರ್ಶಿತವಾಗುತ್ತಿವೆ.

Advertisements